ಸಿಲಿಂಡರ್ ಸಬ್ಸಿಡಿ: ಪಾವತಿಯಲ್ಲಿ ಗಡಿಬಿಡಿ
ಕ.ಪ್ರ.ವಾರ್ತೆ, ಮೈಸೂರು, ಆ. 30-
ಆಧಾರ್ ಕಾರ್ಡ್ ಮೂಲಕ ಅಡುಗೆ ಅನಿಲ ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಯೋಜನೆ ಕೇಂದ್ರದ ಯೋಜನೆ ಹಾದಿ ತಪ್ಪುತ್ತಿದೆ.
ಮೈಸೂರು ಹಾಗೂ ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಯೋಜನೆಯಲ್ಲಿ ಒಬ್ಬರ ಖಾತೆಯ ಹಣ ಇನ್ನೊಬ್ಬರ ಖಾತೆ ಜಮಾ ಆಗುತ್ತಿದ್ದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಒಬ್ಬರಿಗೇ ಎರಡೆರಡು ಬಾರಿ ಹಣ ಜಮಾ ಆಗಿದ್ದರಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗುತ್ತಿದೆ.
ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಗೌರಮ್ಮ ಎಂಬವರು ಪ್ರಸಾದ್ ಗ್ಯಾಸ್ ಏಜೆನ್ಸಿಯ ಗ್ರಾಹಕರು. ಇವರ ಗ್ರಾಹಕ ಸಂಖ್ಯೆ 16755. ಗ್ಯಾಸ್ ಸಿಲಿಂಡರ್ನ್ನು ಜು.8ರಂದು ಪಡೆದು 839 ನೀಡಿದ್ದಾರೆ. ಇವರು ತಮ್ಮ ಆಧಾರ್ ಸಂಖ್ಯೆಯನ್ನು ಎಸ್ಬಿಎಂನಲ್ಲಿನ ಖಾತೆಗೆ ಜೋಡಿಸಿದ್ದಾರೆ. ಆದರೆ ಈವರೆಗೂ ಇವರಿಗೆ ಸಬ್ಸಿಡಿ ಹಣ ಪಾವತಿಯಾಗಿಲ್ಲ.
ಗ್ರಾಹಕರಿಗೆ ಎರಡು ದಿನದೊಳಗೆ ಸಬ್ಸಿಡಿ ಹಣ ಖಾತೆಗೆ ಜಮಾ ಆಗುವುದು ಸಹಜ. 2 ತಿಂಗಳಾಗುತ್ತಾ ಬಂದಿದ್ದರೂ ಸಬ್ಸಿಡಿ ಬಾರದ ಹಿನ್ನೆಲೆಯಲ್ಲಿ ಗೌರಮ್ಮ ಅವರು ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಅವರು ಗ್ಯಾಸ್ ಏಜೆನ್ಸಿಯವರನ್ನು ಭೇಟಿಯಾಗಿ ಎಂದಿದ್ದಾರೆ. ಗ್ಯಾಸ್ ಏಜೆನ್ಸಿಯಲ್ಲಿ ವಿಚಾರಿಸಿದಾಗ ತಮ್ಮ ಖಾತೆಗೆ ಬರಬೇಕಾದ ಸಬ್ಸಿಡಿ ಹಣ ಸಿದ್ದಪ್ಪ ಎಂಬವರ ಖಾತೆಗೆ ಈಗಾಗಲೇ ಜಮಾ ಆಗಿದೆ ಎಂಬುದು ಪತ್ತೆಯಾಗಿದೆ.
ಇದರಿಂದ ಗೊಂದಲಕ್ಕೊಳಗಾದ ಗೌರಮ್ಮ ಅವರು ಪ್ರಮಾದ ಸರಿಪಡಿಸುವಂತೆ ವಿನಂತಿಸಿದಾಗ ಇದು ನಮ್ಮಿಂದ ಸಾಧ್ಯವಿಲ್ಲ, ಭಾರತ್ ಗ್ಯಾಸ್ನ ವಿಭಾಗೀಯ ಮುಖ್ಯಸ್ಥರನ್ನು ಕೇಳಬೇಕೆಂಬ ಉತ್ತರ ಸಿಕ್ಕಿದೆ. ಅವರನ್ನು ವಿಚಾರಿಸಿದರೆ ಗ್ಯಾಸ್ ಏಜೆನ್ಸಿಯವರು ತಪ್ಪಾಗಿ ಆಧಾರ್ ಸಂಖ್ಯೆ ನಮೂದಿಸಿರುವ ಕಾರಣ ಈ ಆಚಾತುರ್ಯ ನಡೆದಿದೆ. ಎಷ್ಟು ತಿಂಗಳಾದರೂ ಹಣ ಖಾತೆಗೆ ಜಮಾ ಆಗಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನೊಬ್ಬರಿಗೆ ಡಬಲ್ ಪೇಮೆಂಟ್: ಇದು ಒಂದು ಕಥೆಯಾದರೆ, ಹೆಬ್ಬಾಳಿನ ವಿ. ವೆಂಕಟೇಶ್ ಎಂಬವರದು ಇನ್ನೊಂದು ಕಥೆ. ವೆಂಕಟೇಶ್ ಇಲ್ಲಿನ ಅಮರದೀಪ್ ಗ್ಯಾಸ್ ಏಜೆನ್ಸಿ ಗ್ರಾಹಕರು. ಎಸ್ಬಿಐನಲ್ಲಿನ ತಮ್ಮ ಖಾತೆಗೆ ಆಧಾರ್ ಸಂಖ್ಯೆ ಜೋಡಿಸಿಕೊಂಡಿದ್ದಾರೆ. ಜು.2ರಂದು ಹಾಗೂ ಜು.9ರಂದು ಕ್ರಮವಾಗಿ ಇವರ ಖಾತೆಗೆ 435 ಹಾಗೂ 415 ಜಮಾ ಆಗಿದೆ. ಒಂದೇ ಸಿಲಿಂಡರ್ಗೆ ಎರಡು ಬಾರಿ ಸಬ್ಸಿಡಿ ನೀಡಿರುವುದು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾರದೋ ಸಬ್ಸಿಡಿ ಹಣ ತಮ್ಮ ಖಾತೆಗೆ ಬಂದಿರಬಹುದು ಎಂಬ ಅನುಮಾನದಿಂದ ಗ್ಯಾಸ್ ಏಜೆನ್ಸಿಗೆ ಸಂಪರ್ಕಿಸಲು ಯತ್ನಿಸಿದರೆ ದೂರವಾಣಿಗೆ ಸ್ಪಂದಿಸುತ್ತಿಲ್ಲ.
ತುಮಕೂರಲ್ಲೂ ಯಡವಟ್ಟು: ತುಮಕೂರಿನಲ್ಲಿ ನೇರ ನಗದು ಯೋಜನೆಗೆ ಆಧಾರ್ ಕಾರ್ಡ್ ಸಮಸ್ಯೆಯೇ ದೊಡ್ಡದಾಗಿದೆ. 3 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಸಿದವರಿಗೆ ಇದುವರೆಗೂ ಕಾರ್ಡ್ ಬಂದಿಲ್ಲ. ಅಲ್ಲದೇ ಬ್ಯಾಂಕುಗಳಲ್ಲೂ ಅಕೌಂಟ್ನ್ನು ಅಷ್ಟು ಸುಲಭವಾಗಿ ಮಾಡಿಕೊಡುತ್ತಿಲ್ಲ. ಹೀಗಾಗಿ ನೇರ ನಗದು ಯೋಜನೆಗೆ ಭಾರಿ ಹಿನ್ನಡೆಯಾಗುತ್ತಿದೆ.
ತಪ್ಪದ ತೊಂದರೆ
ಹಲವಾರು ಗೊಂದಲದ ಪ್ರಕರಣಗಳಿಂದಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ದಿನ ನಿತ್ಯ ಅಲೆಯುವಂತಾಗಿದೆ. ಅಲ್ಲದೆ, ಕಳೆದ ತಿಂಗಳು ಸಬ್ಸಿಡಿ ಸೇರಿದಂತೆ 839 ಅನ್ನು ಪಡೆದಿದ್ದ ಏಜೆನ್ಸಿಯವರು ಈ ತಿಂಗಳು 882 ಪಡೆಯುತ್ತಿದ್ದು, ಇದು ಸಹ ಹಲವು ಗ್ರಾಹಕರಿಗೆ ಸಂಶಯ ಮೂಡಿಸಿದೆ. ಯಾರೋ ಮಾಡಿದ ತಪ್ಪಿಗೆ ಮತ್ತ್ಯಾರೋ ತೊಂದರೆ ಅನುಭವಿಸುತ್ತಿದ್ದಾರೆ.
- ಮಾ. ವೆಂಕಟೇಶ್