ಗುಲ್ಬರ್ಗ 'ಹೈ' ಪೀಠ ಲೋಕಾರ್ಪಣೆ
ಗುಲ್ಬರ್ಗ: ಐದು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಆರಂಭವಾಗಿದ್ದ ಹೈಕೋರ್ಟ್ ಸಂಚಾರಿ ಪೀಠ ಶನಿವಾರ ಕಾಯಂ ಪೀಠವಾಗಿ ಲೋಕಾರ್ಪಣೆಯಾಯಿತು. ಈ ಮೂಲಕ ಹೈ-ಕ ಜನತೆಯ ಬಹುದಿನಗಳ ಕನಸು ನನಸಾಗಿದಂತಾಗಿದೆ.
ಗುಲ್ಬರ್ಗ- ಅಫಜಲ್ಪೂರ ರಸ್ತೆಯಲ್ಲಿ 60 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಹೈಕೋರ್ಟ್ ಪೀಠದ ಅಂಗಳದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ. ಗೋಪಾಲಗೌಡ ದೀಪ ಬೆಳಗಿಸುವ ಮೂಲಕ ಗುಲ್ಬರ್ಗ ಹೈಕೋರ್ಟ್ ಕಾಯಂ ಪೀಠವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ನ್ಯಾಯಮೂರ್ತಿ ವಿ. ಗೋಪಾಲಗೌಡ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಒಂದಾಗಿ ಜನಪರ ಕೆಲಸಗಳಿಗೆ ಮುಂದಾಗಬೇಕಿದೆ. ನ್ಯಾಯಾಂಗ ಕಾರ್ಯವೈಖರಿಯ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಟೀಕಾಕಾರರು ಗಂಭೀರವಾಗಿರಬೇಕು. ಟೀಕೆಗೆಂದೇ ಟೀಕಿಸದೇ ವಿಷಯ ಸಂಗ್ರಹಿಸಲಿ. ವಿನಾಕಾರಣ ಟೀಕೆಗಳನ್ನು ಜನರೇ ವಿರೋಧಿಸುತ್ತಾರೆ. ರೈತರು, ಮಹಿಳೆಯರು, ಕಾರ್ಮಿಕರು, ಶೋಷಿತರು, ದೀನ- ದಲಿತರಿಗೆ ನ್ಯಾಯ ನೀಡುವ ಕೆಲಸವಾಗಲಿ. ಶೋಷಣೆ ನಿಲ್ಲಿಸುವಲ್ಲಿ ನ್ಯಾಯಾಂಗ ಸೇರಿದಂತೆ ಎಲ್ಲರೂ ರಚನಾತ್ಮಕವಾಗಿ ತೊಡಗದೇ ಹೋದಲ್ಲಿ 900 ವರ್ಷಗಳ ಹಿಂದೆ ಈ ನೆಲದಲ್ಲಿ ನಡೆದ ಬಸವಣ್ಣ ಸಾರಥ್ಯದ ಸಾಮಾಜಿಕ ಕ್ರಾಂತಿ ಮತ್ತೆ ನಡೆದೀತು ಎಂದು ಎಚ್ಚರಿಸಿದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮಾತನಾಡಿ, 5 ವರ್ಷಗಳಷ್ಟು ಹಳೆಯ 800 ಪ್ರಕರಣಗಳೊಂದಿಗೆ ಗುಲ್ಬರ್ಗ ಪೀಠದ ಮುಂದೆ 16 ಸಾವಿರ ಕೇಸ್ ಇವೆ. ಇವುಗಳನ್ನೆಲ್ಲ ಇಂತಿಷ್ಟು ವರ್ಷ ಅಂತಲ್ಲ. ಕೆಲವೇ ತಿಂಗಳಲ್ಲಿ ವಿಲೇವಾರಿ ಮಾಡುವ ಕೆಲಸವಾಗಬೇಕಿದೆ. ಪ್ರಕರಣ ಹೈಕೋರ್ಟ್ ಮುಂದೆ ಬಂದಾಕ್ಷಣ 2 ವರ್ಷದೊಳಗೆ ತೀರ್ಪು ಹೊರಬೀಳುವಂತಾದಲ್ಲಿ ನ್ಯಾಯದಾನ ವ್ಯವಸ್ಥೆ ಕ್ರಿಯಾಶೀಲ ಎಂದು ಜನ ಮೆಚ್ಚುತ್ತಾರೆ ಎಂದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಹೆಣ್ಣು ಮಕ್ಕಳ ಮಾನ- ಪ್ರಾಣ ರಕ್ಷಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಕಾನೂನುಗಳು ಕೇವಲ ಪುಸ್ತಕಗಳಲ್ಲಿರದೆ ಆಚರಣೆಯಲ್ಲಿ ಬರಬೇಕು. ಆ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಈಗಾಗಲೇ ಇರುವ ಮಹಿಳೆಯರನ್ನು ಜಾಹೀರಾತುಗಳಲ್ಲಿ ಅಸಹ್ಯಕರವಾಗಿ ಬಿಂಸುವುದನ್ನು ನಿಷೇಧಿಸಿರುವ ಕಾನೂನು ಅಕ್ಷರಶಃ ಜಾರಿಗೆ ತರಬೇಕಾಗಿದೆ ಎಂದರು. ಹೈಕೋರ್ಟ್ ನ್ಯಾಯಾಧೀಶರಾದ ಎನ್.ಕೆ ಪಾಟೀಲ್, ಡಾ. ಭಕ್ತವತ್ಸಲ, ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರಂಸಿಂಗ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮುನಿಯಪ್ಪ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಕಾಂತರಾಜು ಸೇರಿದಂತೆ ಇತರರು ಇದ್ದರು.