ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯಾಸೀನ್ ಬಂಧನಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಇಂಟರ್ನೆಟ್ ಕೆಫೆ ಜಾಲಾಡಿದ್ದ ಎನ್‌ಐಎ!

Vishwanath S
Updated On : 31 Aug 2013, 11:20 am

ಹುಬ್ಬಳ್ಳಿ: ಉಗ್ರ ಯಾಸೀನ್ ಭಟ್ಕಳ್ ನೇಪಾಳದ ಗಡಿಯಲ್ಲಿ ಬಂಧನಕ್ಕೊಳಗಾಗುವ ಒಂದು ದಿನ ಮುಂಚೆ ಹುಬ್ಬಳ್ಳಿಗೆ ಹೈದರಾಬಾದ್‌ನಿಂದ ಬಂದಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೂವರು ಅಧಿಕಾರಿಗಳ ತಂಡ ಇಂಟರ್ನೆಟ್ ಕೆಫೆಯೊಂದರಲ್ಲಿ ತನಿಖೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆ.28ರಂದು ಹುಬ್ಬಳ್ಳಿಗೆ ಬಂದಿದ್ದ ಎನ್‌ಐಎ ಅಧಿಕಾರಿಗಳ ತಂಡ ಇಲ್ಲಿಯ ಮಂಗಳವಾರಪೇಟದಲ್ಲಿರುವ 'ದಿ ಗೇಮ್ ಝೋನ್‌' ಎಂಬ ಇಂಟರ್ನೆಟ್ ಕೆಫೆಯನ್ನು ಜಾಲಾಡಿದೆ. ಎರಡು ದಿನಗಳವರೆಗೆ ಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟಿದ್ದ ಈ ತಂಡ, ಕಂಪ್ಯೂಟರ್‌ನ ಮದರ್‌ಬೋರ್ಡ್ ಸಹಿತ ವಿವಿಧ ದಾಖಲೆಗಳನ್ನೂ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಗಿ ಹೇಳಲಾಗುತ್ತಿದೆ.
ಯಾಸೀನ್‌ನನ್ನು ಬಂಧಿಸುವ ಒಂದು ದಿನ ಮುಂಚೆಯೇ ಎನ್‌ಐಎ ಅಧಿಕಾರಿಗಳು ಹುಬ್ಬಳ್ಳಿಯ ಇಂಟರ್‌ರ್ನೆಟ್ ಕೆಫೆಯಲ್ಲಿ ತನಿಖೆ ನಡೆಸಿದ್ದರಿಂದ ಯಾಸೀನ್ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಅಧಿಕಾರಿಗಳ ತಂಡ ಯಾಸೀನ್‌ಗೇ ಸಂಬಂಧಿಸಿದಂತೆ ತನಿಖೆ ನಡೆಸಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಮಹಾನಗರ ಪೊಲೀಸರಿಗೂ ಎನ್‌ಐಎ ಅಧಿಕಾರಿಗಳ ತಂಡ ಯಾವುದೇ ಸುಳಿವು ನೀಡಿಲ್ಲ.  ಈ ಕುರಿತು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿರುವ ಎಸಿಪಿ ಜಿ.ಎಂ. ದೇಸೂರ, ಹೈದರಾಬಾದ್‌ನಿಂದ ಎನ್‌ಐಎ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ಬಂದಿದ್ದು, ಇಂಟರ್ನೆಟ್ ಕೆಫೆಯಲ್ಲಿ ತನಿಖೆಯನ್ನೂ ನಡೆಸಿತ್ತು. ಆದರೆ ಈ ತನಿಖೆ ಯಾವುದಕ್ಕೆ ಸಂಬಂಧಿಸಿದ್ದೆಂಬುದು ತಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ನಂಟು ಹೊಂದಿದ್ದ ಐವರು ಶಂಕಿತ ಉಗ್ರರನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದರು. ಅವರಲ್ಲಿ ಒಬ್ಬ ಶಂಕಿತ ಉಗ್ರ ಗೇಮ್‌ಝೋನ್ ಇಂಟರ್ನೆಟ್ ಕೆಫೆ ಮೂಲಕ ಕೆಲವು ವಿವರಗಳನ್ನು ಇ-ಮೇಲ್ ಮೂಲಕ ಕಳುಹಿಸಿದ್ದ. ಈ ಇ-ಮೇಲ್ ಜಾಡು ಹಿಡಿದು ಎನ್‌ಐಎ ಅಧಿಕಾರಿಗಳ ತಂಡ ನಗರದಲ್ಲಿ ತನಿಖೆ ನಡೆಸಿರುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement