ಎಚ್ಕೆ ಸಮಯಪ್ರಜ್ಞೆಯಿಂದ ಕೃಷ್ಣಾ 'ಜಲ ಭಾಗ್ಯ' ಹೆಚ್ಗೆ
ಬೆಂಗಳೂರು: ರಾಜ್ಯಕ್ಕಾಗುವ ಅನ್ಯಾಯವನ್ನು ರಾಜಕಾರಣಿಯೊಬ್ಬರು ಸಕಾಲದಲ್ಲಿ ಕೈಗೆತ್ತಿಕೊಂಡು, ಎಲ್ಲ ರೀತಿಯಲ್ಲೂ ಹೋರಾಟ ಮಾಡಲು ಮುಂದಾದರೆ ವಿಜಯ ಸಾಧ್ಯ ಎಂಬುದಕ್ಕೆ ಆಲಮಟ್ಟಿ ವಿಷಯದಲ್ಲಿ ರಾಜ್ಯಕ್ಕೆ ಈಗ ಸಿಕ್ಕಿರುವ ಜಯವೇ ಸಾಕ್ಷಿ.
ಕೃಷ್ಣಾ ಜಲವಿವಾದ ನ್ಯಾಯಾಧಿಕರಣ 2010ರ ಡಿಸೆಂಬರ್ 30ರಂದು ನೀಡಿದ ಐ-ತೀರ್ಪು ರಾಜ್ಯದ ಪಾಲಿಗೆ ಅತ್ಯಂತ ಮಹತ್ವ. ಅದೇ ರಾಜ್ಯಕ್ಕೆ ಸಿಕ್ಕ ಅತಿ ದೊಡ್ಡ ಜಯ. ರಾಜ್ಯಕ್ಕೆ ಅತಿ ಹೆಚ್ಚು ನೀರು ಎಲ್ಲ ಸಿಕ್ಕಿತು ಎಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸೇರಿ ಅಂದು ಸಚಿವ ಸಂಪುಟದ ಸಹೋದ್ಯೋಗಿಗಳೂ ಬೀಗಿದ್ದರು.
ಆದರೆ, ಅಂದು ನೀಡಲಾಗಿದ್ದ ತೀರ್ಪು ರಾಜ್ಯಕ್ಕೆ ಮಾರಕ ಎಂದು ಅಂಕಿ-ಅಂಶದ ಜತೆಗೆ ವಿವರವಾಗಿ ಸರ್ಕಾರ ಹಾಗೂ ರಾಜ್ಯದ ಜನತೆ ಮುಂದೆ ಬಿಡಿಸಿಟ್ಟದ್ದು ಎಚ್.ಕೆ. ಪಾಟೀಲ್.
ನ್ಯಾ. ಬ್ರಿಜೇಶ್ಕುಮಾರ್ ನೇತೃತ್ವದ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ 2010ರಲ್ಲಿ ನೀಡಿದ್ದ ತೀರ್ಪು ರಾಜ್ಯಕ್ಕೆ ಮಾರಕವಾಗಿತ್ತು. 1969ರ ಏಪ್ರಿಲ್ 10ರಂದು ಸ್ಥಾಪಿಸಲಾಗಿದ್ದ ನ್ಯಾಯಮಂಡಳಿಯ ಅಂದರೆ ಬಚಾವತ್ ತೀರ್ಪಿಗಿಂತಲೂ ನ್ಯಾಯಾಧಿಕರಣ ನೀಡಿದ ತೀರ್ಪಿನಿಂದ ರಾಜ್ಯಕ್ಕೆ ಹೆಚ್ಚು ಅನ್ಯಾಯವಾಗುತ್ತಿತ್ತು. ಸಿಕ್ಕಿದ್ದೇ ಗೆಲುವು ಎಂದು ಬೀಗುತ್ತಿದ್ದ ಅಂದಿನ ಸರ್ಕಾರದ ಕಣ್ಣು ತೆರೆಸಿದವರು ಮಾಜಿ ಜಲಸಂಪನ್ಮೂಲ ಖಾತೆ ಸಚಿವ ಎಚ್.ಕೆ. ಪಾಟೀಲ್. ಬಚಾವತ್ ನ್ಯಾಯಾಧಿಕರಣ ಹಾಗೂ ನ್ಯಾ. ಬ್ರಿಜೇಶ್ಕುಮಾರ್ ನೇತೃತ್ವದ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ನೀಡಿದ ತೀರ್ಪುಗಳನ್ನು ತುಲನೆ ಮಾಡಿ ವಿವರವಾದ ವರದಿಯನ್ನು ನೀಡಿದ್ದರು.
ಕೃಷ್ಣಾ ಕಣಿವೆ ಪ್ರದೇಶದಲ್ಲಿ ಕರ್ನಾಟಕ ಪ್ರದೇಶ ಶೇ.43.8ರಷ್ಟಿದ್ದರೂ 911 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿತ್ತು. ಅಂದರೆ ಶೇ.35ರಷ್ಟು ಮಾತ್ರ. ಇನ್ನು ಆಂಧ್ರಪ್ರದೇಶದಲ್ಲಿ ಕೃಷ್ಣ ಕೊಳ್ಳದ ಪ್ರದೇಶ ಶೇ.29ರಷ್ಟಿದ್ದರೂ 1001 ಟಿಎಂಸಿ ಅಂದರೆ ಶೇ.38.82ರಷ್ಟು ಹಂಚಿಕೆಯಾಗಿತ್ತು. ಮಹಾರಾಷ್ಟದ ಪ್ರದೇಶ ಶೇ.26.8ರಷ್ಟಿದ್ದರೂ 666 ಟಿಎಂಸಿ ಅಂದರೆ ಶೇ.25.83 ನೀರು ಹಂಚಿಕೆಯಾಗಿತ್ತು. ಅಲ್ಲದೆ, ಹೆಚ್ಚಿನ ನೀರಿನ ಪ್ರಮಾಣದಲ್ಲಿ 448 ಟಿಎಂಸಿಯಲ್ಲಿ ಬಚಾವತ್ ತೀರ್ಪಿನಂತೆ ಕರ್ನಾಟಕ 224 ಟಿಎಂಸಿ ನೀರಿನ ಪಾಲು ಹೊಂದಿತ್ತು. ಈ ಐ-ತೀರ್ಪಿನಿಂದ ಈ ಪಾಲು 177 ಟಿಎಂಸಿಗೆ ಇಳಿದಿತ್ತು. ಹೀಗಾಗಿ ಕರ್ನಾಟಕ ಪಾಲಿನ ನೀರಿನಲ್ಲಿ ಎ ಸ್ಕೀಂ ಯೋಜನೆಗಳಿಗೇ ನೀರು ಕೊರತೆಯಾಗುತ್ತಿತ್ತು. ಇನ್ನು ಬಿ ಸ್ಕೀಂ ಯೋಜನೆಗಳು ನೀರಿಲ್ಲದಂತಾಗುತ್ತಿದ್ದವು.
ಈ ಎಲ್ಲ ನ್ಯೂನ್ಯತೆ ಹಾಗೂ ಅನ್ಯಾಯ ರಾಜ್ಯದ ಪಾಲಿಗಾಗುತ್ತಿದ್ದರೂ, ರಾಜ್ಯಕ್ಕೆ ಸಿಕ್ಕ ಜಯ, ಸರ್ಕಾರಕ್ಕಾದ ವಿಜಯ ಎಂದು ಅಂದು ಸರ್ಕಾರ ನಡೆಸುತ್ತಿದ್ದ ಬಿಜೆಪಿಯವರು ಪೇಡಾ ಹಂಚಿ ಸಂತಸಪಟ್ಟಿದ್ದರು. ಆದರೆ, ಈ ಎಲ್ಲ ಅಂಶಗಳನ್ನು ಸವಿವರವಾಗಿ ಮಾಧ್ಯಮದ ಮೂಲಕ ಸರ್ಕಾರದ ಗಮನಕ್ಕೆ ಎಚ್.ಕೆ. ಪಾಟೀಲ್ ತಂದರು. ಇದಕ್ಕಾಗಿ ಹೋರಾಟ ಆರಂಭಿಸಿದರು.
ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಬಿ.ಎಸ್. ಯಡಿಯೂರಪ್ಪನವರ ಅಂದಿನ ಸರ್ಕಾರ, ಎಚ್.ಕೆ. ಪಾಟೀಲರನ್ನೇ ಕರೆಯಿಸಿ ಮೇಲ್ಮನವಿಯಲ್ಲಿ ಯಾವ ರೀತಿ ಸ್ಪಷ್ಟನೆ ಕೇಳಬೇಕು ಎಂಬ ಸಲಹೆ ಪಡೆಯಿತು. ಆಲಮಟ್ಟಿ ಅಣೆಕಟ್ಟೆ ಎತ್ತರ ಸೇರಿ 2 ಅಂಶಗಳ ಬಗ್ಗೆ ಮೇಲ್ಮನವಿ ಸಲ್ಲಿಸಲಾಯಿತು. ಈ ಪ್ರತಿಫಲವಾಗಿ ಇದೀಗ ರಾಜ್ಯದ ಪಾಲಿಗೆ ಹೆಚ್ಚುವರಿ ನೀರಿನ ಪ್ರಮಾಣದಲ್ಲಿ 177 ಟಿಎಂಸಿ ಜತೆಗೆ 111 ಟಿಎಂಸಿ ನೀರು ಹೆಚ್ಚುವರಿಯಾಗಿ ಬಂದಿದೆ. ಅಲ್ಲದೆ, ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519.60ರಿಂದ 524.256 ಮೀಟರ್ ಹೆಚ್ಚಿಸಲು ಪ್ರಾಥಮಿಕ ಹಂತದಿಂದ ನಡೆಸಬೇಕಾದ ಪ್ರಕ್ರಿಯೆಗೂ ತಡೆಯಾಗಿದೆ. ಒಂದೆರಡು ಟಿಎಂಸಿ ನೀರಿಗೆ ಹೊಡೆದಾಡುವಂತಹ ಪರಿಸ್ಥಿತಿಯಲ್ಲಿ 111 ಟಿಎಂಸಿ ನೀರು ರಾಜ್ಯಪಾಲಿಗೆ ದಕ್ಕಿರುವುದು ಹೋರಾಟಕ್ಕೆ ಸಂದ ಜಯವೇ.
ಕೃಷ್ಣಾ ನ್ಯಾಯಾಧಿಕರಣ ಐ-ತೀರ್ಪು ತಮಗೆ ಸಿಕ್ಕ ಜಯ ಎಂದು ಸರ್ಕಾರ ಹೇಳಿದ್ದನ್ನೇ ಒಪ್ಪಿಕೊಂಡು ಸುಮ್ಮನಾಗಿದ್ದರೆ ಈ ಜಯ ಸಾಧ್ಯವಾಗತ್ತಿರಲಿಲ್ಲ. ರಾಜಕಾರಣಿಯೊಬ್ಬರು ಸಕಾಲದಲ್ಲಿ ಕೈಗೊಳ್ಳುವ ಹೋರಾಟ ಹಾಗೂ ಅದರ ಸ್ವರೂಪ ಎಂತಹ ಒಳಿತನ್ನು ರಾಜ್ಯಕ್ಕೆ ಮಾಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ.
ರಾಜ್ಯಕ್ಕೆ ಅಂದು ನೀಡಲಾಗಿದ್ದ ತೀರ್ಪು ಅತ್ಯಂತ ಅನ್ಯಾಯದ್ದಾಗಿತ್ತು. ಈ ಬಗ್ಗೆ ಸರ್ಕಾರದ ಗಮನಸೆಳೆಯಬೇಕೆಂದು ನಾನು ಪ್ರಯತ್ನಪಟ್ಟೆ. ಆ ಸಂದರ್ಭದಲ್ಲಿ ನಾನು ನೀಡಿದ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನನ್ನೂ ನ್ಯಾಯವಾದಿ ನಾರಿಮನ್ ಅವರ ಬಳಿಗೆ ಕರೆದೊಯ್ದರು. ನಮಗೆ ಬೇಕಿರುವ ಸ್ಪಷ್ಟತೆ 12 ಅಂಶಗಳನ್ನು ಮೇಲ್ಮನಮನಿ ಅರ್ಜಿ ಸಿದ್ಧಪಡಿಸಿದೆವು. ಅಂದು ಆ ಹೋರಾಟ ಮಾಡಿದ್ದಕ್ಕೆ ಇಂದು ರಾಜ್ಯದ ಪಾಲಿಗೆ 111 ಟಿಎಂಸಿ ನೀರು ಲಭ್ಯವಾಗಿದೆ. ಈಗ ಬಂದಿರುವ ತೀರ್ಪಿನಲ್ಲಿ 4ಟಿಎಂಸಿ ನೀರು ಹರಿಸಬೇಕು ಎಂಬುದು ಸೇರಿದಂತೆ ನಾಲ್ಕು ಮಾರಕ ಅಂಶಗಳಿದ್ದು ಅದರ ಬಗ್ಗೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಸರ್ಕಾರದಲ್ಲಿ ತೀರ್ಮಾನಿಸುತ್ತೇವೆ.
- ಎಚ್.ಕೆ. ಪಾಟೀಲ್,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ