ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾರು ಚಾಲಕರಿಗೂ ತನಿಖೆ ಭೀತಿ

Mainashree
Updated On : 2 Dec 2013, 12:05 pm

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದಿಂದ ಬಂಧಿತರಾಗಿರುವವರ ತನಿಖೆ ಆಯಿತು. ಈಗ ಬಂಧಿತರ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕುವಲ್ಲಿ ಬಂಧಿತರ ವಾಹನ ಚಾಲಕರ ತನಿಖೆಯೂ ಆರಂಭವಾಗಿದೆ.
ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನ, ಅವರ ಒಳ-ಹೊರ ಕುರಿತು ಸಹಜವಾಗಿ ಅವರ ಕಾರು ಚಾಲಕರಿಗೆ ಹೆಚ್ಚು ಮಾಹಿತಿ ಇರುತ್ತದೆ. ಆದ್ದರಿಂದ ಸಿಬಿಐ ಅಧಿಕಾರಿಗಳು ಇದೀಗ ಈ ಕೆಲಸಕ್ಕೆ ಮುಂದಾಗಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದಿಂದ ಬಂಧಿತರಾಗಿರುವ ಹಾಗೂ ತನಿಖೆಗೆ ಒಳಪಡಿಸುವ ಸಾಗಾಣಿಕೆದಾರರ, ಗಣಿ ಮಾಲೀಕರ, ರಫ್ತುದಾರರ ಕಾರು ಚಾಲಕರನ್ನು 2-3 ದಿನಗಳಿಂದ ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸಿಬಿಐ ಹೊಸ ದಾರಿ
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ನಡೆಸುತ್ತಿರುವ ತನಿಖೆ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಕೇವಲ ಗಣಿ ಮಾಲೀಕರು, ಅದಿರು ಸಾಗಾಣಿಕೆದಾರರು ಹಾಗೂ ರಫ್ತುದಾರರನ್ನು, ಅವರ ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದರೂ, ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ಸಿಬಿಐ ಅಧಿಕಾರಿಗಳು ದಿನದಿಂದ ದಿನಕ್ಕೆ ಹೊಸ ದಾರಿ ಹುಡುಕುತ್ತಿದ್ದಾರೆ. ಈ ಹಿಂದೆ ನಕಲಿ ಪರ್ಮಿಟ್ ಸೃಷ್ಟಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಕೆಲವು ಮುದ್ರಣ ಅಂಗಡಿಯವರಿಗೂ ನೋಟಿಸ್ ಜಾರಿ ಮಾಡಿ, ವಿಚಾರಣೆ ನಡೆಸಿದ್ದರು. ನಕಲಿ ಪರ್ಮಿಟ್ ಪ್ರತಿಗಳನ್ನು ಯಾರು, ಯಾರಿಂದ ಮುದ್ರಿಸಿದ್ದರು ಎಂಬ ಮಾಹಿತಿ ಕಲೆ ಹಾಕಿದ್ದರು.

ತನಿಖೆ ಚುರುಕು
ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಹಾಗೂ ಅಕ್ರಮ ಅದಿರು ರಫ್ತು ಮಾಡಿರುವ 22 ಕಂಪನಿಗಳ ತನಿಖೆಯನ್ನು ಸಿಬಿಐ ಆರ್ಥಿಕ ಅಪರಾಧ ದಳ ನಡೆಸುತಿದೆ. ತನಿಖೆಯನ್ನು ದಿನದಿಂದ ದಿನಕ್ಕೆ ಚುರುಕುಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿಬಿಐ ವಿಚಾರಣೆ ವ್ಯಾಪ್ತಿಗೆ ಯಾರ್ಯಾರು ಒಳಪಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಿಬಿಐ ಅಧಿಕಾರಿಗಳು ಪ್ರಕರಣಗಳ ಮಾಹಿತಿಗಳ ಮೂಲಗಳನ್ನು ಸೂಕ್ಷ್ಮತೆಯಿಂದ ಗಮನಿಸಿ ಅವರನ್ನು ವಿಚಾರಣೆಗೆ ಒಳಪಡಿಸಿ, ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಏನೆ ಆದರೂ ಗಣಿ ಮಾಲೀಕರಿಗೆ, ಟ್ರೇಡರ್ಸ್‌ಗೆ, ರಫ್ತುದಾರರಿಗೆ, ಸಹಾಯಕರಿಗೆ ತನಿಖೆ ಮಾತ್ರ ತಪ್ಪಿದ್ದಲ್ಲ.

ಆತಂಕ ತಂದ ಚಾಲಕರ ವಿಚಾರಣೆ
ಗಣಿ ಉದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಗಣಿ ಮಾಲೀಕರಿಗೆ, ಸಾಗಾಣಿಕೆದಾರರಿಗೆ, ರಫ್ತುದಾರರಿಗೆ ಕೈಗೊಂದು ಕಾಲಿಗೊಂದು ಆಳುಗಳಿದ್ದರು. ಅಲ್ಲದೆ ಹೊಸ ಹೊಸ ಐಷಾರಾಮಿ ಕಾರುಗಳನ್ನು ಬಳಸುತ್ತಿದ್ದರು. ಹೀಗಾಗಿ ಇಬ್ಬಿಬ್ಬರು ಕಾರು ಚಾಲಕರನ್ನೂ ಇಟ್ಟುಕೊಳ್ಳುವಷ್ಟು ಶಕ್ತರಾಗಿದ್ದರು. ಅವರನ್ನು ವಿಚಾರಣೆಗೊಳಪಡಿಸುವ ಮೂಲಕ ಮತ್ತಷ್ಟು ಮಾಹಿತಿ ಪಡೆಯಲು ಸಿಬಿಐ ಮುಂದಾಗಿದೆ. ಆಸ್ಕರ್‌ಖಾನ್ ಚಾಲಕ, ಎಸ್‌ಬಿ ಲಾಜಿಸ್ಟಿಕ್ ಕಂಪನಿ ಕಾರುಗಳ ಚಾಲಕರು ಸೇರಿದಂತೆ ಪ್ರತಿದಿನ ವಿವಿಧ ಗಣಿ ಮಾಲೀಕರ ಹಾಗೂ ಟ್ರೇಡರ್‌ಗಳ ಕಾರು ಚಾಲಕರನ್ನು ಈಗಾಗಲೇ ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದ್ದಾರೆ. ಈ ಬೆಳವಣಿಗೆ ಆರೋಪಿತ ಗಣಿ ಮಾಲೀಕರು ಹಾಗೂ ಟ್ರೇಡರ್‌ಗಳಲ್ಲಿ ಆತಂಕ ಮೂಡಿಸಿದೆ. ಕಾರಿನಲ್ಲಿ ಪ್ರಯಾಣ ಮಾಡುವಾಗ ಅದಿರು ವ್ಯವಹಾರ ಕುರಿತು ಯಾರ ಜತೆ ಚರ್ಚಿಸುತ್ತಿದ್ದರು ಎಂಬ ಮಾಹಿತಿ ಚಾಲಕರಿಂದ ಹೊರಬಿದ್ದರೆ ಸಿಬಿಐ ಅಧಿಕಾರಿಗಳಿಗೆ ಅನುಕೂಲವಾಗಲಿದೆ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement