ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಸ್ಫೋಟ

ಬನಶಂಕರಿ ದೇವಾಸ್ಥಾನದ ಬಳಿಯ ಕಾವೇರಿನಗರದಲ್ಲಿನ ಮಾದುರ್ಗಾ ಪರಮೇಶ್ವರಿ ದೇಗುಲದಲ್ಲಿ ಭಾನುವಾರ ರಾತ್ರಿ 9ಗಂಟೆಯ...

Rashmi Kasaragodu
Updated On : 2 Dec 2013, 12:08 pm

ಬೆಂಗಳೂರು: ಬನಶಂಕರಿ ದೇವಾಸ್ಥಾನದ ಬಳಿಯ ಕಾವೇರಿನಗರದಲ್ಲಿನ ಮಾದುರ್ಗಾ ಪರಮೇಶ್ವರಿ ದೇಗುಲದಲ್ಲಿ ಭಾನುವಾರ ರಾತ್ರಿ 9ಗಂಟೆಯ ಸುಮಾರಿಗೆ ಗರ್ಭಗುಡಿ ಒಳಗಡೆ ನಿಗೂಢ ಸ್ಫೋಟವಾಗಿದೆ.
ಗರ್ಭಗುಡಿಯಲ್ಲಿ ಶೇಖರಣೆಯಾಗಿದ್ದ ಅಗರಬತ್ತಿ ಹಾಗೂ ಕರ್ಪೂರ ರಾಶಿ ಮೇಲೆ ದೀಪ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಗರ್ಭಗುಡಿಯ ತುಂಬಾ ಹೊಗೆ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಉತ್ಪತ್ತಿಯಾದ ಮಿಥೇನ್‌ನಿಂದ ಸ್ಫೋಟ ಸಂಭವಿಸಿದೆ.
ಈ ಸ್ಫೋಟದಿಂದಾಗಿ ಗರ್ಭಗುಡಿಯ ಬಾಗಿಲು ಮುರಿದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಗರ್ಭಗುಡಿಯಲ್ಲಿದ್ದ ಮೂರ್ತಿಗೆ ಯಾವುದೇ ಹಾನಿ ಉಂಟಾಗಿಲ್ಲ. ಯಾವ ರೀತಿ ಸ್ಫೋಟ ಸಂಭವಿಸಿತು, ಈ ಸ್ಫೋಟಕ್ಕೆ ಕಾರಣ ಏನು ಎಂಬ ಸಂಪೂರ್ಣ ವಿವರಗಳು ಲಭ್ಯವಾಗಿಲ್ಲ.
ಸ್ಥಳೀಯ ಜನರ ಪ್ರಕಾರ, ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಯಲ್ಲಿ ದುರ್ಗಾ ಪರಮೇಶ್ವರಿ ದೇಗುಲದ ಗರ್ಭಗುಡಿಯಲ್ಲಿ ಸ್ಫೋಟವಾದ ಶಬ್ದ ಕೇಳಿಸಿತು.
ಜನರೆಲ್ಲ ದೇವಸ್ಥಾನದ ಮುಂದೆ ಜಮಾಯಿಸಿದರು. ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದ್ದು ಎಲ್ಲರ ಗಮನಕ್ಕೆ ಬಂದಿದೆ. ಸ್ಫೋಟದ ಬಗ್ಗೆ ಒಬ್ಬೊಬ್ಬರು ಒಂದು ರೀತಿಯ ಕಾರಣಗಳು ಹೇಳುತ್ತಿದ್ದರು. ದೇವಸ್ಥಾನದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನಜಂಗುಳಿ ದೇವಸ್ಥಾನದ ಒಳಗೆ ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದಾರೆ.              
ಪೊಲೀಸರ ಪ್ರಕಾರ, ಸಂಜೆ 7ರ ಸುಮಾರಿಗೆ ದೇವಸ್ಥಾನದ ಅರ್ಚಕರು ದೀಪ ಹಚ್ಚಿಟ್ಟು ಗರ್ಭಗುಡಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಭಕ್ತಾದಿಗಳು ನೀಡಿದ್ದ ಈ ಅಗರಬತ್ತಿ ಹಾಗೂ ಕರ್ಪೂರವನ್ನು  ದೀಪದ ಕೆಳಗೇ ರಾಶಿಯಾಗಿ ಶೇಖರಿಸಲಾಗಿತ್ತು. ದೀಪ ಈ ಶೇಖರಣೆ ಮೇಲೆ ಬಿದ್ದಿದೆ.  ಗರ್ಭಗುಡಿಯಲ್ಲಿ ಗಾಳಿ ಸಂಚರಿಸಲು ಅವಕಾಶ ಇಲ್ಲ. ಹೀಗಾಗಿ,  ದಟ್ಟ ಹೊಗೆ ಆವರಿಸಿದ್ದರಿಂದ ಬಾಗಿಲು ಸಿಡಿದಿದೆ. ಸಂಪೂರ್ಣ ತನಿಖೆ ನಡೆದ ನಂತರವೇ ಕಾರಣ ಹೊರಬೀಳಲಿದೆ ಎಂದು ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಔರಾದ್ಕಾರ್, ವರಿಷ್ಠ ಅಧಿಕಾರಿಗಳಾದ ಕಮಲ್ ಪಂಥ್, ರೇವಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

40 ವರ್ಷದ ಇತಿಹಾಸ: ಕಾವೇರಿನಗರದಲ್ಲಿರುವ ಮಾ ದುರ್ಗಾ ಪರಮೇಶ್ವರಿ  ದೇವಸ್ಥಾನಕ್ಕೆ 40 ವರ್ಷಗಳ ಇತಿಹಾಸವಿದೆ. 2 ವರ್ಷಗಳ ಹಿಂದಷ್ಟೇ ನವೀಕರಣ ಮಾಡಲಾಗಿತ್ತು. ಸ್ಫೋಟ ಸಪ್ಪಳ ಕೇಳಿಸಿದ ಪೊಲೀಸರಿಗೆ ತಿಳಿಸಿದೆವು ಎಂದು ಸ್ಥಳೀಯ ವೆಂಕಟೇಶ್ ವಿವರಿಸಿದರು.

ಗರ್ಭಗುಡಿಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ಬಾಂಬ್ ಸ್ಫೋಟವಾದಾಗ ಸಾಮಾನ್ಯವಾಗಿ ಭೂಮಿಯಲ್ಲಿ ಗುಂಡಿಯಾಗುತ್ತದೆ. ಇಲ್ಲಿ ಆ ರೀತಿ ಲಕ್ಷಣಗಳು ಕಂಡುಬಂದಿಲ್ಲ. ಪ್ರಾಥಮಿಕ ತನಿಖೆಯಂತೆ ಮಿಥೇನ್‌ನಿಂದ ಉಂಟಾದ ಸ್ಫೋಟ ಇದಾಗಿದೆ.
- ಔರಾದ್ಕಾರ್  ನಗರ ಪೊಲೀಸ್ ಆಯುಕ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement