ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿದ ವಿದ್ಯಾರ್ಥಿನಿ
ಸೋಮವಾರಪೇಟೆ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮುಳುಗುತ್ತಿದ್ದ ಬಾಲಕನನ್ನು 8ನೇ ತರಗತಿ ವಿದ್ಯಾರ್ಥಿನಿ ರಕ್ಷಿಸಿ ಸಾಹಸ ಮೆರೆದಿದ್ದಾಳೆ. ಇಲ್ಲಿನ ಸ.ಹಿ.ಮಾ.ಪ್ರಾ. ಶಾಲೆಯ 3ನೇ ತರಗತಿ ವಿದ್ಯಾರ್ಥಿ ರೋಹಿತ್ ಬದುಕುಳಿದ ಬಾಲಕ. ಈತನನ್ನು ಬದುಕಿಸಿದ ಧೀರ ಬಾಲಕಿ ಇದೇ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೆ.ಎಂ. ಶಾಂತಿ. ಭಾನುವಾರ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ರೋಹಿತ್ ಬಿಳಿಕಿಕೊಪ್ಪದ ತನ್ನ ಮನೆಯಿಂದ ಕಿಬ್ಬೆಟ್ಟದಲ್ಲಿರುವ ಅಜ್ಜಿ ಮನೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಗ್ರಾಮದ ಕೆರೆಯೊಂದರ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದ. ಈ ಕೆರೆಯ ಸಮೀಪವೇ ಇದ್ದ ಮನೆಯೊಂದರ ಜಗಲಿಯಲ್ಲಿ ಶಾಂತಿ ಓದುತ್ತ ಕುಳಿತಿದ್ದಳು. ಅಪಾಯದ ಮುನ್ಸೂಚನೆ ಅರಿತ ಬಾಲಕಿ, ತಕ್ಷಣ ಕೆರೆ ಬಳಿ ಬಂದು ಬಾಲಕನ ಕೈಗೆ ಉದ್ದನೆಯ ಬಡಿಗೆ ನೀಡಿ ಆತನನ್ನು ದಡಕ್ಕೆ ತರುವ ಸಾಹಸ ಮಾಡಿ ಯಶಸ್ವಿಯಾದಳು. ನಂತರ ಬಾಲಕ ನೀರಿನಲ್ಲಿ ಮುಳುಗಿದಾಗ ಕುಡಿದಿದ್ದ ನೀರನ್ನು ದೇಹದಿಂದ ಹೊರತೆಗೆಯುವ ಕಾರ್ಯವನ್ನೂ ಮಾಡಿದಳು. 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಶಾಂತಿ, 'ನಾನು ಗೊರೂರಿನಲ್ಲಿ ನಡೆದ ಅಡ್ವೆಂಚರ್ ಶಿಬಿರದಲ್ಲಿ ಈಜು ಕಲಿತಿದ್ದೆ. ನೀರಿನಲ್ಲಿ ಮುಳುಗುವ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಬಗ್ಗೆ ನನಗೆ ತಿಳಿದಿತ್ತು. ಆ ಶಿಬಿರದ ಕಲಿಕೆಯಿಂದಾಗಿ ನನಗೆ ಒಬ್ಬ ಬಾಲಕನನ್ನು ರಕ್ಷಿಸಿದ ಹೆಮ್ಮೆ ಇದೆ' ಎಂದಳು. ಬಾಲಕನ ಪೋಷಕರು ಶಾಂತಿಯನ್ನು ಅಭಿನಂದಿಸಿದ್ದಾರೆ. ಶಾಲಾ ಪದವೀಧರ ಮುಖ್ಯೋಪಾಧ್ಯಾಯ ಎಂ.ಡಿ. ದೇವರಾಜಯ್ಯ ಮತ್ತು ಸಹ ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.