ರಾತ್ರಿ ಟೆಂಡರ್ ಹಗರಣ ರೂವಾರಿ ಚಿಕ್ಕರಾಯಪ್ಪ ವಿರುದ್ಧ ಶಿಸ್ತು ಕ್ರಮ
ಬೆಳಗಾವಿ: ವಿವಿಧ ಪ್ರಕರಣಗಳಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರದ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಟಿ.ಎನ್. ಚಿಕ್ಕರಾಯಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿ ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಚಿಕ್ಕರಾಯಪ್ಪ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
2010ರಲ್ಲಿ ಬಿಬಿಎಂಪಿ ಕಚೇರಿಯಲ್ಲಿ ರಾತ್ರೋರಾತ್ರಿ ಟೆಂಡರ್ ಕರೆದು 3,200 ಕೋಟಿ ಹಗರಣ ನಡೆಸಿರುವುದು, ಹಗರಣ ಹೊರಬಿದ್ದ ಬಳಿಕ ಕಡತಗಳಿಗೆ ಅನುಮಾನಾಸ್ಪದವಾಗಿ ಬೆಂಕಿ ಬಿದ್ದು ನಾಶವಾಗಿರುವುದು, ಬನ್ನೇರುಘಟ್ಟ ರಸ್ತೆ ಬಳಿ ಡಿಎಲ್‌ಎಫ್ ಕಂಪನಿ ನಿರ್ಮಿಸುತ್ತಿರುವ ವಸತಿ ಸಮುಚ್ಛಯದ ಮುಂಭಾಗದ 60 ಅಡಿ ರಸ್ತೆಯನ್ನು 80 ಅಡಿಗೆ ವಿಸ್ತರಿಸಲು ನಿಯಮಬಾಹಿರವಾಗಿ ಅನುಮತಿ ನೀಡಿ ಕಿಕ್‌ಬ್ಯಾಕ್ ಪಡೆದ ಆರೋಪ ಚಿಕ್ಕರಾಯಪ್ಪ ವಿರುದ್ಧ ದಾಖಲಾಗಿದೆ.
ಇದಲ್ಲದೆ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯಲ್ಲಿ ಜಪಾನ್ ನೆರವಿನ ಅರಣ್ಯೀಕರಣ ಯೋಜನೆಯಲ್ಲಿ ಸುಮಾರು 19 ಕೋಟಿ ಅವ್ಯವಹಾರ, ಬೋಗಸ್ ದಾಖಲೆ ಸೃಷ್ಟಿಸಿದ ಆರೋಪ, ಟೆಂಡರ್ ನಿಯಮ ಉಲ್ಲಂಘನೆ, ಮೈಸೂರು ಜಿಪಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕುಡಿಯುವ ನೀರಿನ ಪೈಪ್ ಅಳವಡಿಕೆಯಲ್ಲಿ ಹಣದ ದುರ್ಬಳಕೆ, ಬಿಡಿಎನಲ್ಲಿ ಮೆಂಬರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕ್ರೆಡಿಟ್ ಲೈನ್ ಮತ್ತು ಬ್ಯಾಂಕ್ ಗ್ಯಾರಂಟಿ ತಿದ್ದಿ ಗುತ್ತಿಗೆದಾರ ಸಿ.ಜಿ. ಚಂದ್ರಪ್ಪ ಅವರಿಗೆ ಎಚ್‌ಬಿಆರ್ ಬಡಾವಣೆ 1ನೇ ಹಂತದಲ್ಲಿ ಕೆಲಸ ಕೊಟ್ಟಿರುವುದು, ಬಾಣಸವಾಡಿ ಹೀರಾ ನಂದಾನಿ ರಿಯಲ್ ಎಸ್ಟೇಟ್ ಕಂಪನಿಗೆ ಅಕ್ರಮವಾಗಿ ರಸ್ತೆ ವಿಸ್ತರಣೆ ಮಾಡಿಕೊಟ್ಟಿರುವುದು ಸೇರಿದಂತೆ ಹಲವು ಆರೋಪಗಳು ಚಿಕ್ಕರಾಯಪ್ಪ ಅವರ ಮೇಲಿವೆ. ಅದರಂತೆ ಚಿಕ್ಕರಾಯಪ್ಪ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಜ್ಞಾಪನಾ ಪತ್ರ ಬರೆಯಲಾಗಿತ್ತು. ಆದರೂ ಅವರನ್ನು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
ಚಿಕ್ಕರಾಯಪ್ಪ ಅವರನ್ನು ಲೋ ಕೋಪಯೋಗಿ ಇಲಾಖೆ ಕಾರ್ಯ ದರ್ಶಿ ಹುದ್ದೆಗೆ ನೇಮಕ ಮಾಡಿರುವ ಕುರಿತು ಇಲಾಖೆ ಸಚಿವ ಡಾ.ಮಹದೇವಪ್ಪ ಅವರನ್ನು ಪ್ರಶ್ನಿಸಿದಾಗ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಚಿಕ್ಕರಾಯಪ್ಪ ವಿರುದ್ಧ ಏನೇನು ಆರೋಪಗಳಿವೆ ಎಂಬುದೇ ನನಗೆ ಗೊತ್ತಿಲ್ಲ ಎಂದು ಜಾರಿಕೊಂಡಿದ್ದಾರೆ.