ರಾಷ್ಟ್ರೀಯ ಉದ್ಯಾನವನಗಳಿಗೇ ಕಳ್ಳರ ಕಾಟ
ಬೆಂಗಳೂರು: ಕನ್ನಡದ ಸೂಪರ್ ಹಿಟ್ ಚಿತ್ರ 'ಗಂಧದಗುಡಿ'ಯಲ್ಲಿ ಅರಣ್ಯಧಿಕಾರಿಯ ಸವಾಲನ್ನು ಹೀರೋ ಡಾ. ರಾಜ್ಕುಮಾರ್ ಸ್ವೀಕರಿಸಿ, ಕಾಡೊಳಗೆ ಕಾಡುಗಳ್ಳರ ವಿರುದ್ಧ ಹೋರಾಡ್ತಾರೆ. ಗಂಧದಗುಡಿಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡುತ್ತಾರೆ. ಇದೆಲ್ಲಾ ನಡೆಯೋದು ಸಿನಿಮಾ ಪರದೆ ಮೇಲಷ್ಟೇ.
ವಾಸ್ತವದಲ್ಲಿ... ದುಷ್ಟರ ಅಟ್ಟಹಾಸ ನಿಂತಿಲ್ಲ. ನಮ್ಮ 'ಗಂಧದಗುಡಿ'ಯಲ್ಲಿ ಪ್ರಾಣಿಗಳ ಕಗ್ಗೊಲೆ ಕಡಿಮೆಯಾಗಿಲ್ಲ. ನಾಗರಹೊಳೆ ಹಾಗೂ ಬಂಡೀಪುರದೊಳಗೆ ನಿರಂತರವಾಗಿ ಕಾಡು ಲೂಟಿಯಾಗುತ್ತಿದೆ. ಇಂಥಾ ಒಂದು ಗಂಭೀರ ದೂರು ಕವರ್ಸ್ಟೋರಿ ತಂಡಕ್ಕೆ ಕೊಟ್ಟದ್ದು ಪರಿಸರ ಪ್ರೇಮಿಗಳು. ಈ ದೂರಿನ ಜಾಡು ಹಿಡಿದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಗೆ ಹೊರಟಿತು ನಮ್ಮ ತಂಡ.
ರಾಷ್ಟ್ರೀಯ ಉದ್ಯಾನದಲ್ಲೇ ಲೂಟಿ: ಸಾವಿರಾರು ಜೀವರಾಶಿಗಳ ತವರು ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾವನವನದಲ್ಲಿ ಇದೆಲ್ಲ ನಡೀತಿರೋದು ದುರಂತ.
ಲೂಟಿ ಹೊಡೆಯುವವರನ್ನು ಹಿಡಿದು ಕೊಟ್ರೂ ಅರಣ್ಯ ಇಲಾಖೆ, ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಪ್ರಕರಣವನ್ನೂ ದಾಖಲಿಸುತ್ತಿಲ್ಲ ಅನ್ನೋ ದೂರು ಸ್ಥಳೀಯರದ್ದು. ಇದಕ್ಕೆ ಸಾಕ್ಷಿಯನ್ನೂ ಸ್ಥಳೀಯರು ಕೊಡ್ತಾರೆ.
ಕವರ್ಸ್ಟೋರಿ ತಂಡ ಹೊರಟಿತು ನಡು ರಾತ್ರಿಯ ಬೇಟೆಗೆ. ಸುಮಾರು ನಲವತ್ತು ಕಿ.ಮೀ. ದೋಣಿಯಲ್ಲಿ ಸಾಗಿದೆವು. ರಾತ್ರಿಯಿಡೀ ಕಾದೆವು. ಆದರೆ ಮೊದಲ ರಾತ್ರಿ ನಮ್ಮ ಬೇಟೆ ಬರಲೇ ಇಲ್ಲ, ಬರಿಗೈಯಲ್ಲಿ ವಾಪಾಸಾದೆವು.
ಮರಳಿ ಯತ್ನ: ಎಷ್ಟೇ ಕಷ್ಟ ಆಗ್ಲಿ, ಕಳ್ಳಾಟವನ್ನ ನಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲೇ ಬೇಕು ಅಂತ ಮರುದಿನ ರಾತ್ರಿ ಮತ್ತೆ ಕಬಿನಿ ಯಾತ್ರೆ ಪ್ರಾರಂಭಿಸಿದೆವು. ಕಣ್ಣಲ್ಲಿ ಕಣ್ಣಿಟ್ಟು ಕಳ್ಳರಿಗಾಗಿ ಕಾದೆವು.
ನಡು ರಾತ್ರಿಯ ಬೇಟೆ: ರಾತ್ರಿ ಸುಮಾರು ಒಂದು ಅಥವಾ ಎರಡು ಗಂಟೆ. ಅರಣ್ಯ ಪ್ರದೇಶದ ಹಾದಿಯಲ್ಲಿ ಎರಡು ತೆಪ್ಪಗಳು ಮಬ್ಬು ಮಬ್ಬಾಗಿ ಕಾಣಿಸಿದವು. ನಾವು ಅತ್ತ ಕಡೆ ನಮ್ಮ ಟಾರ್ಚ್ ಹಾಕಿದೆವು. ಆದ್ರೆ ಅವರು ಅದಕ್ಕೆ ಒಂದಿಷ್ಟು ವಿಚಲಿತರಾಗದೆ ತಮ್ಮ ದಾರಿಯಲ್ಲಿ ಸಾಗಿದರು. ಅವರ ಬೆನ್ನಟ್ಟಿ ಹೊರಟೆವು. ಹೀಗೆ ಸಾಗುತ್ತಿದ್ದಾಗ ನಡು ನೀರಿನಲ್ಲಿ ನಮ್ಮ ಬೋಟ್ ಕೈಕೊಟ್ಟಿತು. ಈ ವೇಳೆ ನಾವು ವಲಯ ಅರಣ್ಯಧಿಕಾರಿ ಸತೀಶ್ ಅವರಿಗೆ ಫೋನ್ ಮಾಡಿದರೂ, ಪ್ರಯೋಜನವಾಗಲಿಲ್ಲ.
ಕೊನೆಗೆ ಎಂಜಿನ್ ಸರಿಪಡಿಸಿ ನಾವೇ ಕಾಡ್ಗಳ್ಳರ ಬೆನ್ನಟ್ಟಿದೆವು. ಇನ್ನೇನು ಆ ತೆಪ್ಪದ ಸಮೀಪಿಸುತ್ತಿದ್ದಂತೆ ಅವರಲ್ಲಿ ಶಸ್ತ್ರಾಸ್ತ್ರ ಇರೋದು ಗೊತ್ತಾಯ್ತು. ಹಾಗಾಗಿ ದೂರದಲ್ಲೇ ಅವರನ್ನ ಬೆದರಿಸಿದೆವು.
ಅಷ್ಟೊತ್ತಿಗೆ ಅವರು ಆ ಕಡೆ ದಡ ಮುಟ್ಟಿದ್ರು. ತೆಪ್ಪದೊಳಗಿನ ವಸ್ತುಗಳನ್ನ ಹಿಡಿದುಕೊಂಡು ಊರೊಳಗೆ ಓಡಿದ್ರು. ಅವರು ಎಲ್ಲಿಗೆ ಹೋದ್ರು ಅಂತ ನೋಡಲು ದೋಣಿಯಿಂದ ಇಳಿದು ಒಂದಿಷ್ಟು ದೂರ ಹೋದೆವು. ನಮ್ಮ ಬಳಿ ಶಸ್ತ್ರಾಸ್ತ್ರಗಳಿಲಿಲ್ಲದ ಕಾರಣ ವಾಪಾಸಾಗಬೇಕಾಯಿತು.
ಇಷ್ಟಾದ್ರೂ ಅರಣ್ಯ ಸಿಬ್ಬಂದಿ ಮಾತ್ರ ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಈ ಬಗ್ಗೆ ಕೇಳಿದಾಗ ನಾಗರಹೊಳೆ ವಲಯ ಅರಣ್ಯಾಧಿಕಾರಿ ಹೇಳಿದ್ದು...
'ಇದು ನಮ್ಮೊಬ್ಬರಿಂದ ಆಗೋ ಕೆಲಸ ಅಲ್ಲ, ಬಂಡೀಪುರದವರೂ ಸಹಕರಿಸಬೇಕು. ನಮ್ಮ ಕಾಡಲ್ಲಿ ಶೇಕಡಾ 95ರಷ್ಟು ಕಳ್ಳಸಾಗಣೆ ಕಡಿಮೆಯಾಗಿದೆ. ಅದೆಷ್ಟೋ ಬಾರಿ ಇವರು ಅರಣ್ಯ ಸಿಬ್ಬಂದಿ, ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆದರೂ ನಮ್ಮ ಇಲಾಖೆ ಮೌನವಾಗಿದೆ'
ಪೌರುಷ ತೋರಿಸಿ: ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಇಂಥಾ ಅಕ್ರಮ ನಡೆಯುತ್ತಿದೆ ಅಂದರೆ, ಇನ್ನುಳಿದ ಅರಣ್ಯಗಳ ಪಾಡೇನು? ಅರಣ್ಯ ಸಚಿವರೇ ಸದನದಲ್ಲಿ ತೋರೋ ಪೌರುಷ, ಅಬ್ಬರವನ್ನ ಸ್ವಲ್ಪ ಇಲ್ಲೂ ತೋರಿಸಿ. ಈ ಕಾಡ್ಗಳ್ಳರ ಹೆಡೆಮುರಿ ಕಟ್ಟಿ. ಆಗ ಈ 'ಗಂಧದಗುಡಿ'ಯಲ್ಲಿ ಮತ್ತೆ ನೆಮ್ಮದಿ ನೆಲೆಸಬಹುದು.
- ಕಣ್ಣಿಗೆ ಕಂಡ ಶಸ್ತ್ರಾಧಾರಿ ಕಾಡ್ಗಳ್ಳರ ತಂಡ ಕೈಗೆ ಸಿಗದ ಹೋದರು..
- ಕಷ್ಟದಲ್ಲಿ ಅರಣ್ಯಾಧಿಕಾರಿಗಳಿಗೋ ಫೋನಾಯಿಸಿದರೂ ಪ್ರಯೋಜನವಾಗಲಿಲ್ಲ
- ಸಿಎಂ ತವರು ಜಿಲ್ಲೆಯಲ್ಲೇ ಕಾಡ್ಗಳ್ಳರ ಅಟ್ಟಹಾಸ, ಉಳಿದ ಕಾಡುಗಳ ಕತೆಯೇನು?
- ವಿಜಯಲಕ್ಷ್ಮಿ ಶಿಬರೂರು