ಗ್ಯಾಸ್ ಪೈಪ್ಲೈನ್ ಲೋಕಾರ್ಪಣೆ
ರಾಜ್ಯದ ಪಾಲಿಗೆ ಅಭಿವೃದ್ಧಿ ಬಾಗಿಲು ತೆರೆಯುವ ಸಾವಿರ ಕಿ.ಮೀ. ಉದ್ದದ ದಾಭೋಲ್- ಬೆಂಗಳೂರು ಗ್ಯಾಸ್ ಪೈಪ್ಲೈನ್ ...
ನವದೆಹಲಿ: ರಾಜ್ಯದ ಪಾಲಿಗೆ ಅಭಿವೃದ್ಧಿ ಬಾಗಿಲು ತೆರೆಯುವ ಸಾವಿರ ಕಿ.ಮೀ. ಉದ್ದದ ದಾಭೋಲ್- ಬೆಂಗಳೂರು ಗ್ಯಾಸ್ ಪೈಪ್ಲೈನ್ ಅನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಮಂಗಳವಾರ ಔಪಚಾರಿಕವಾಗಿ ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಸುಮಾರು 4,500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಗ್ಯಾಸ್ ಪೈಲ್ಲೈನ್ 16 ಎಂಎಂಎಸ್ಸಿಎಂಡಿ (ನಿತ್ಯ ದಶ ಲಕ್ಷ ಘನ ಅಡಿ) ಸಾಮರ್ಥ್ಯ ಹೊಂದಿದೆ. ಕಳೆದ ಫೆಬ್ರವರಿಯಲ್ಲಿ ಈ ಅನಿಲ ಮಾರ್ಗ ಅನೌಪಚಾರಿಕವಾಗಿ ಕಾರ್ಯಾರಂಭವಾಗಿತ್ತು.
ಬಿಡದಿಯಲ್ಲಿ ನಿರ್ಮಿಸುತ್ತಿರುವ ಅನಿಲಾಧಾರಿತ 700 ಮೆಗಾವ್ಯಾಟ್ ವಿದ್ಯುತ್ ಸ್ಥಾವರಕ್ಕೆ ಅನಿಲ ಪಡಿಯಲು ಕೆಪಿಟಿಸಿಎಲ್ ಈಗಾಗಲೇ ಗೇಲ್ ಜತೆ ಒಪ್ಪಂದ ಮಾಡಿಕೊಂಡಿದೆ. ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯದ ಪಾಲಿಗೆ ಈ ಯೋಜನೆ ಅತಿ ಮಹತ್ವದ್ದು. 16 ಎಂಎಂಎಸ್ಸಿಎಂಡಿ ಅನಿಲದಿಂದ 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಜತೆಗೆ ಗ್ರಾಹಕರ ಮನೆ ಮನೆಗೆ ಪೈಲ್ ಮೂಲಕ ಅಡುಗೆ ಅನಿಲ ಒದಗಿಸುವ ಯೋಜನೆಯೂ ಇದರಿಂದ ಸಾಕಾರಗೊಳ್ಳಲಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ 8ನೇ ಏಷ್ಯಾ ಅನಿಲ ಪಾಲುದಾರಿಕೆ ಸಮ್ಮೇಳನದಲ್ಲಿ ಪ್ರಧಾನಿ ಅವರು ಈ ಮಹಾತ್ವಾಕಾಂಕ್ಷಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಗೇಲ್ ಸಾಧನೆಯನ್ನು ಬಣ್ಣಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ, 'ಭಾರತ ಸೇರಿದಂತೆ ಉದಯಿಸುತ್ತಿರುವ ಆರ್ಥಿಕ ದೇಶಗಳು ಅನಿಲ ಬಳಕೆಯಲ್ಲಿ ಎರಡಂಕಿ ಅಭಿವೃದ್ಧಿಯನ್ನು ದಾಖಲಿಸುತ್ತಿವೆ. ಅಭಿವೃದ್ಧಿ ಹೊಂದಿದ ದೇಶಗಳ ಅನಿಲ ಬಳಕೆ ಶೇ.5ರಷ್ಟಿದೆ.
ಕೇಂದ್ರ ಸರ್ಕಾರ ಅನಿಲ ಈಗ 15000 ಕಿ.ಮೀ. ಉದ್ದ ಇರುವ ಅನಿಲ ಪೈಪ್ಲೈನ್ ಅನ್ನು 2030ರ ವೇಳೆಗೆ 30,000 ಕಿ.ಮೀ.ಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದರು.
1000 ಕಿ.ಮೀ. ಉದ್ದದ ದಾಭೋಲ್ - ಬೆಂಗಳೂರು ಗ್ಯಾಸ್ ಪೈಪ್ಲೈನ್ ರಾಜ್ಯದ ಹತ್ತು ಜಿಲ್ಲೆಗಳನ್ನು ಹಾದು ಹೋಗುತ್ತದೆ.
ಯಾವ ಜಿಲ್ಲೆಗಳಲ್ಲಿ?
ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯನ್ನು ಹಾದು ಹೋಗಿದೆ. ಈ ಎಲ್ಲ ಜಿಲ್ಲೆಗಳಿಗೂ ಬರುವ ದಿನಗಳಲ್ಲಿ ಅನಿಲ ಪೂರೈಕೆ ಸರಾಗವಾಗಲಿದೆ.
ಮನೆ ಮನೆಗೆ ಅನಿಲ
ಗ್ರಾಹಕರ ಮನೆ ಮನೆಗೆ ಪೈಪ್ ಮೂಲಕ ಅಡುಗೆ ಅನಿಲ ಒದಗಿಸಲು ಈಗಾಗಲೇ ಕರ್ನಾಟಕ ಕೈಗಾರಿಕಾ ಹೂಡಿಕೆ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ಮತ್ತು ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಜಂಟಿ ಸಹಭಾಗಿತ್ವದಲ್ಲಿ ವಿತರಣಾ ಕಂಪನಿಯನ್ನು ರಚಿಸಿವೆ. 100 ಕೋಟಿ ಪ್ರಾರಂಭಿಕ ಹೂಡಿಕೆಯ ಈ ಕಂಪನಿಯಲ್ಲಿ ಕೆಎಸ್ಐಐಡಿಸಿ ಶೇ.24ರಷ್ಟು ಗೇಲ್ ಶೇ.26ರಷ್ಟು ಹೂಡಿಕೆ ಮಾಡಿದ್ದರೆ, ಉಳಿದ ಹೂಡಿಕೆ ಖಾಸಗಿ ಕಂಪನಿಗಳದ್ದು. ಆರಂಭದಲ್ಲಿ ಬೆಂಗಳೂರಿನಲ್ಲಿ ಅನಿಲ ಒದಗಿಸಲಾಗುತ್ತದೆ. ನಂತರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲಾಗುತ್ತದೆ.