ಜಯಾ ಕ್ಯಾತೆಗೆ ಕ್ಯಾರೆ ಅನ್ನದ ಅಗ್ರಕೋರ್ಟ್
ಕರ್ನಾಟಕ ಸಮೃದ್ಧವಾಗಿ ಕಾವೇರಿ ನೀರು ಹರಿಸಿದ್ದರೂ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರ್ಕಾರ..
ನವದೆಹಲಿ: ಕರ್ನಾಟಕ ಸಮೃದ್ಧವಾಗಿ ಕಾವೇರಿ ನೀರು ಹರಿಸಿದ್ದರೂ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ತುರ್ತಾಗಿ ತನ್ನ ಅರ್ಜಿ ವಿಚಾರಣೆ ನಡೆಸಬೇಕೆಂಬ ಆ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ.
ಕರ್ನಾಟಕ ಮೇಕೆದಾಟು ಬಳಿ ನಿರ್ಮಿಸಲುದ್ದೇಶಿಸಿರುವ ಜಲ ವಿದ್ಯುತ್ ಯೋಜನೆಗೆ ತಡೆಯೊಡ್ಡುವಂತೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿಲ್ಲ. ಬದಲಿಗೆ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ವಿನಾಕಾರಣ ಆತಂಕ ಬಿಡುವಂತೆ ತಿಳಿಸಿರುವ ಸುಪ್ರೀಂ ಸಣ್ಣ ಪುಟ್ಟ ವಿಷಯಗಳಿಗೆ ತಕರಾರು ತೆಗೆಯುವ ಪ್ರವೃತ್ತಿ ಸಲ್ಲದು ಎಂದಿದೆ. ತಕ್ಷಣವೇ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವ ಅಗತ್ಯವೇನೂ ಇಲ್ಲ. ಅರ್ಜಿಯನ್ನು ಜನವರಿ ತಿಂಗಳಲ್ಲಿ ಕಾವೇರಿ ನ್ಯಾಯಾಧಿಕರಣದ ತೀರ್ಪು ಕುರಿತು ನದಿ ಪಾತ್ರದ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ಜತೆಗೆ ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಈಗಾಗಲೇ ತಾತ್ಕಾಲಿಕವಾಗಿ ಕಾವೇರಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ಸಮಿತಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದನ್ನು ಗಮನಿಸಲು ನಾವಿದ್ದೇವೆ ಎಂದೂ ನ್ಯಾಯಪೀಠ ಹೇಳಿದೆ. ಇದೇ ವೇಳೆ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ತಮಿಳುನಾಡು ಅರ್ಜಿಗೆ ತನ್ನ ಸ್ಪಷ್ಟನೆ ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ತಬ್ಬಿಬ್ಬಾದ ತಮಿಳುನಾಡು ಪರ ವಕೀಲ
ನೀವು ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿ ಮಾಡಬೇಡಿ ಎಂದು ತಮಿಳುನಾಡು ವಕೀಲರಿಗೆ ತಾಕೀತು ಮಾಡಿದ ನ್ಯಾಯಪೀಠವು, ನೀವು ರಾಜ್ಯ ಸರ್ಕಾರವಾಗಿ ಅರ್ಜಿ ಸಲ್ಲಿಸುತ್ತೀರಿ ಎಂಬ ಜವಾಬ್ದಾರಿ ಇರಲಿ ಎಂದು ಎಚ್ಚರಿಸಿತು. ಕರ್ನಾಟಕವು ನಿಮ್ಮ ಪಾಲಿನ ನೀರನ್ನು ಈಗಾಗಲೇ ನಿಮಗೆ ನೀಡಿದೆ. ಅಗತ್ಯವಿದ್ದಾಗ ನೀರು ಬಿಡುವುದಾಗಿಯೂ ಒಪ್ಪಿದೆ. ಆದರೂ ನೀವು ಕರ್ನಾಟಕ ಹೆಚ್ಚುವರಿಯಾಗಿ ನೀರು ಸಂಗ್ರಹಿಸಿಟ್ಟುಕೊಂಡಿದೆ ಎಂದು ತಕರಾರು ತೆಗೆಯುತ್ತೀರಿ. ಹೆಚ್ಚಿನ ನೀರು ಸಂಗ್ರಹಿಸಿಟ್ಟುಕೊಳ್ಳಬಾರದು ಎಂದು ಯಾವುದಾದರೂ ಆದೇಶವಿದೆಯೇ ಎಂದು ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರು ಕೇಳಿದ ಪ್ರಶ್ನೆಗಳಿಂದ ತಮಿಳುನಾಡು ವಕೀಲರು ಉತ್ತರಿಸಲಾಗದೆ ತಬ್ಬಿಬ್ಬಾದರು.
ನ್ಯಾಯಮೂರ್ತಿಗಳು ಹೇಳಿದ್ದೇನು?
ತ್ವರಿತವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ತಮಿಳುನಾಡು ಕೋರಿಕೆಯನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಅರ್ಜಿಯನ್ನು ಕಾವೇರಿ ನ್ಯಾಯಾಧಿಕರಣದ ತೀರ್ಪಿಗೆ ಸಂಬಂಧಿಸಿದ ಅರ್ಜಿಗಳ ಜತೆಗೆ ವಿಚಾರಣೆ ನಡೆಸಬಹುದು.
ಕರ್ನಾಟಕ ಮೇಕೆದಾಟು ಬಳಿ ಸ್ಥಾಪಿಸಲುದ್ದೇಶಿಸಿರುವ ಜಲ ವಿದ್ಯುತ್ ಯೋಜನೆ ಕುರಿತು ಆತಂಕ ಪಡುವ ಅಗತ್ಯ ಇಲ್ಲ. ಕರ್ನಾಟಕ ಸರ್ಕಾರ ಅವರ ವ್ಯಾಪ್ತಿಯಲ್ಲಿ ಏನೇ ಯೋಜನೆ ಕೈಗೆತ್ತಿಕೊಂಡರೂ ನೀವು ವಿನಾಕಾರಣ ಆತಂಕಗೊಳ್ಳುತ್ತೀರಿ. ಅರ್ಜಿ ಹಿಡಿದು ಬರುತ್ತೀರಿ. ಇವೆಲ್ಲವೂ ನೀರಾವರಿ ಯೋಜನೆಗಳು. ಅನುಷ್ಠಾನಕ್ಕೆ ಸಾಕಷ್ಟು ಕಾಲಾವಕಾಶ ಬೇಕು.
ಈ ಬಾರಿ ಮುಂಗಾರು ಅತ್ಯುತ್ತಮವಾಗಿದೆ. ನೀರಿಗೆ ಎಲ್ಲೂ ಕೊರತೆಯಾಗಿಲ್ಲ. ಈ ಹಿಂದೆ ಅಲ್ಲಿ ಬರ ಪರಿಸ್ಥಿತಿ ಇತ್ತು ಮತ್ತು ಅದರಿಂದ ಬೆಳೆ ನಷ್ಟವಾಗಿತ್ತೆಂಬುದು ಅರಿವಿದೆ. ಮೇಕೆದಾಟು ಯೋಜನೆ ಅನುಷ್ಠಾನ ಮಾಡಿದರೆ ನೀರು ಹಂಚಿಕೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮ್ಮ ತಪ್ಪು ಕಲ್ಪನೆ, ಅನಗತ್ಯ ಆತಂಕ ಎಂದೂ ನ್ಯಾಯಪೀಠ ಬಣ್ಣಿಸಿತು.
- ಕನ್ನಡಪ್ರಭ ಪ್ರತಿನಿಧಿಯಿಂದ