ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜ್ಞಾನ ಆಯೋಗಕ್ಕೆ ಮುಂದುವರಿಕೆ ಯೋಗ

Mainashree
Updated On : 4 Dec 2013, 12:13 pm

ಬೆಂಗಳೂರು: ಕರ್ನಾಟಕ ಜ್ಞಾನ ಆಯೋಗ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹಿರಿಯ ವಿಜ್ಞಾನಿ ಕೆ.ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿಯೇ ಆಯೋಗ ಕಾರ್ಯನಿರ್ವಹಿಸಲಿದೆ.
ಆಯೋಗದ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೇ, ಈಗಿರುವ ಆಯೋಗದ ಅವಧಿ ವಿಸ್ತರಿಸಲು ಉದ್ದೇಶಿಸಿದೆ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಸಲ್ಲಿಸಿರುವ ವರದಿ ಶಿಫಾರಸುಗಳಲ್ಲಿ ಶೇ.70ರಷ್ಟು ಜಾರಿಗೆ ಬಾರದಿರುವುದು ಆಯೋಗದ ಅಸ್ತಿತ್ವದ ಬಗೆಗೆ ಪ್ರಶ್ನೆ ಉದ್ಭವಿಸಿದೆ. 2012ರ ಜನವರಿ 21ರಂದು ಜ್ಞಾನ ಆಯೋಗವು ರಾಜ್ಯ ಸರ್ಕಾರಕ್ಕೆ 89 ಶಿಫಾರಸುಳ್ಳ ಅಂತಿಮ ವರದಿ ನೀಡಿತ್ತು.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗವನ್ನು  ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇಮಿಸಿದ್ದರು. ಸುಮಾರು ನಾಲ್ಕೂವರೆ ವರ್ಷಗಳ ಅಧ್ಯಯನ ಬಳಿಕ ಉನ್ನತ ಶಿಕ್ಷಣ ಹಾಗೂ ಸಮುದಾಯ ಆಧರಿತ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುರಿತಂತೆ ನಾಲ್ಕು ಹಂತದಲ್ಲಿ ಕರ್ನಾಟಕ ಜ್ಞಾನ ಆಯೋಗ ವರದಿ ನೀಡಿತ್ತು.
ಉನ್ನತ ಶಿಕ್ಷಣದ ಅಭಿವೃದ್ಧಿಗೆ ಜ್ಞಾನ ಆಯೋಗದ ಸಲಹೆ ಮುಖ್ಯವಾಗಿದೆ ಎನ್ನುವ ಉದ್ದೇಶದಿಂದ ಆಯೋಗವನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆ.ಕಸ್ತೂರಿ ರಂಗನ್ ಅವರನ್ನು ಅಧ್ಯಕ್ಷರಾಗಿ ಹಾಗೂ ಎಂ.ಕೆ.ಶ್ರೀಧರ್ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆಯೋಗ ರಾಜಕೀಯ ಹೊರತಾಗಿದೆ. ಮುಂದುವರಿಕೆ ಬಗ್ಗೆ ನನಗೂ ಮಾಹಿತಿ ಬಂದಿದೆ. ಇದೊಂದು ಉತ್ತಮ ನಡೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಎಂ.ಕೆ.ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.
ರುಸಾ ಹಾಗೂ ಕೌಶಲ್ಯ ಅಭಿವೃದ್ಧಿಗೆ ಒತ್ತು: ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ(ರುಸಾ) ಹಾಗೂ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿ ಹೆಚ್ಚಿನ ಒತ್ತು ನೀಡುವಂತೆ ಆಯೋಗವನ್ನು ಸರ್ಕಾರ ಕೋರಿದೆ. ರುಸಾ ಯೋಜನೆಯಡಿ ಇನ್ನೆಂಟು ವರ್ಷ ರಾಜ್ಯಕ್ಕೆ 10 ಸಾವಿರ ಕೋಟಿಗೂ ಅಧಿಕ ಅನುದಾನ ಬರಲಿದೆ. ಆಯೋಗದ ಸಲಹೆ ಆಧರಿಸಿ ಉನ್ನತ ಶಿಕ್ಷಣ ಅಭಿವೃದ್ಧಿಗೆ ಆಲೋಚಿಸಲಾಗಿದೆ.
ಇದಲ್ಲದೇ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದಂತೆ ಕೌಶಲ್ಯ ಅಭಿವೃದ್ಧಿ ದೊಡ್ಡ ಸವಾಲಾಗಿದೆ. ಈ ಹಿಂದಿನ ವರದಿಯಲ್ಲಿಯೇ ಆಯೋಗ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿ ವಿಸ್ತೃತ ವರದಿ ನೀಡಿತ್ತು. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆಯೋಗದ ಸಲಹೆ ಕೇಳಲಾಗುತ್ತಿದೆ.

ಹಿಂದಿನ ಶಿಫಾರಸುಗಳ ಕತೆಯೇನು?
ಜ್ಞಾನ ಆಯೋಗ ಶಿಕ್ಷಣ ಅಭಿವೃದ್ಧಿಗೆ ನೀಡಿದ್ದ 89 ಶಿಫಾರಸಲ್ಲಿ ಕೇವಲ 27 ಜಾರಿಗೆ ಬಂದಿವೆ ಅಥವಾ ಕಾರ್ಯೋನ್ಮುಖದಲ್ಲಿದೆ. ಉಳಿದ ಶಿಫಾರಸುಗಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಿಲ್ಲ. ವರದಿ ಸ್ವೀಕರಿಸಿದ್ದ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಯೋಗದ ಶಿಫಾರಸು ಮುಂದಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಬಹುತೇಕ ಶಿಫಾರಸು ಶೆಟ್ಟರ್ ಮರೆತಿದ್ದರು. ಆ ಬಳಿಕ ಸಿದ್ದರಾಮಯ್ಯ ಬಜೆಟ್ ಕೂಡ ಇದನ್ನು ಮರೆತಿದೆ. ಇವುಗಳಲ್ಲಿ ಕೆಲವು ರಾಜ್ಯ ಸರ್ಕಾರ ನೀಡಬೇಕಿರುವ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ್ದರೆ, ಬಹುತೇಕ ಶಿಫಾರಸು ಗುಣಮಟ್ಟ ಅಭಿವೃದ್ಧಿಗೆ ಸಂಬಂಧಿಸಿವೆ. ವಿಚಿತ್ರವೆಂದರೆ ಈ ಬಗ್ಗೆ ವಿಶ್ವವಿದ್ಯಾಲಯಗಳು ತಲೆಕೆಡಿಸಿಕೊಂಡಿಲ್ಲ. ಪದವಿ ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ಕಡ್ಡಾಯಗೊಳಿಸಬೇಕು, ಕೋರ್ಸ್‌ಗಳ ರೂಪ ಬದಲಿಸಬೇಕು ಹಾಗೂ ವಿಶ್ವವಿದ್ಯಾಲಯಗಳ ಸರಹದ್ದು ನಿಯಮ ಬದಲಿಸಿ ಮುಕ್ತಗೊಳಿಸಬೇಕು ಎಂಬ ಪ್ರಮುಖ ಶಿಫಾರಸು ನೀಡಲಾಗಿತ್ತು. ಇಂತಹ 60ಕ್ಕೂ ಅಧಿಕ ಶಿಫಾರಸು ಹಾಗೆಯೇ ಉಳಿದಿವೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement