ಲೋಕಸಭೆಗೆ ಕೈ ಸಂಭಾವ್ಯ ಪಟ್ಟಿ ಸಿದ್ಧ!
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್...
ಕನ್ನಡಪ್ರಭ ವಾರ್ತೆ, ಬೆಳಗಾವಿ, ಡಿ.3-
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಲೋಕಸಭಾ ಕ್ಷೇತ್ರ ನಿರಾಶ್ರಿತರ ತಾಣವಾಗಬಾರದು ಎಂದು ಕೆಪಿಸಿಸಿಗೆ ಸೂಚನೆ ನೀಡಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಜತೆಗಿನ ಸಮಾಲೋಚನೆ ನಂತರ ಎಐಸಿಸಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ಕಳುಹಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಡಿ.15ರಂದು ಬೆಂಗಳೂರಿಗೆ ಬರಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಈ ಪಟ್ಟಿಗೆ ಅಂತಿಮ ಸ್ವರೂಪ ನೀಡಲಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಹಾಲಿ ಸಂಸದರೆಲ್ಲರಿಗೂ ಮತ್ತೆ ಟಿಕೆಟ್ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಕೋಲಾರ, ಬೀದರ್ ಹಾಗೂ ಮಂಡ್ಯದಲ್ಲಿ ಬೇರೆ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರೂ ಕೆಪಿಸಿಸಿ ಆ ಆಕಾಂಕ್ಷಿಗಳಿಗೆ ಮನ್ನಣೆ ನೀಡಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಎಚ್. ವಿಶ್ವನಾಥ್, ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ, ಜಯಪ್ರಕಾಶ್ ಹೆಗಡೆ, ರಮ್ಯಾ, ಧ್ರುವನಾರಾಯಣ ಹಾಗೂ ಡಿ.ಕೆ. ಸುರೇಶ್ ಅವರನ್ನು ಮತ್ತೆ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಆಧಾರ್ ಯೋಜನೆ ಮುಖ್ಯಸ್ಥ ನಂದನ್ ನಿಲೇಕಣಿ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತಗೊಂಡಿದೆ.
ಈ ಪಟ್ಟಿಯನ್ನು ಹೊರತುಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಬಣದಿಂದ ಬೇರೆ ಬೇರೆ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಡಿ.15ರಂದು ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಐಸಿಸಿ ಮೂಲಗಳು ತಿಳಿಸಿವೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಉತ್ತರ ಕನ್ನಡ: ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಸಚಿವ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ, ಮಾರ್ಗರೇಟ್ ಆಳ್ವ ಪುತ್ರ ನಿವೇದಿತ ಆಳ್ವ ರೇಸ್‌ನಲ್ಲಿದ್ದಾರೆ.
ಬೆಂಗಳೂರು ಕೇಂದ್ರ: ಮಾಜಿ ಸಂಸದರಾದ ಜಾಫರ್ ಷರೀಪ್, ಎಚ್.ಟಿ. ಸಾಂಗ್ಲಿಯಾನ್, ಪ್ರೇಮಾ ಕಾರ್ಯಪ್ಪ.
ಬೆಂಗಳೂರು ಉತ್ತರ: ಎಸ್.ಎಂ. ಕೃಷ್ಣ ಅವರ ಸಂಬಂಧಿ ರಮೇಶ್.ಬಿ. ಗೌಡ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್.
ತುಮಕೂರು: ಮಾಜಿ ಶಾಸಕ ಮುದ್ದಹನುಮೇಗೌಡ, ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಮಲ್ಲಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫಿ ಅಹ್ಮದ್.
ಚಿತ್ರದುರ್ಗ (ಮೀಸಲು): 2009ರ ಲೋಕಸಭಾ ಅಭ್ಯರ್ಥಿ ಬಿ. ತಿಪ್ಪೇಸ್ವಾಮಿ, ಮಾಜಿ ಸಂಸದ ಎಚ್. ಹನುಮಂತಪ್ಪ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವಾರಾಂ, ನೇರಳಗುಂಟೆ ರಾಮಪ್ಪ.
ದಕ್ಷಿಣ ಕನ್ನಡ: ಜನಾರ್ದನ ಪೂಜಾರಿ.
ಹಾಸನ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಆನಂದ್, ಮಾಜಿ ಸಚಿವ ಬಿ. ಶಿವರಾಂ ಹಾಗೂ ಅರಕಲಗೂಡು ಶಾಸಕ ಎ. ಮಂಜು.
ಶಿವಮೊಗ್ಗ: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮಾಜಿ ಸಚಿವ ಕುಮಾರ ಬಂಗಾರಪ್ಪ.
ದಾವಣಗೆರೆ: ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್.
ಧಾರವಾಡ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಮಂಜುನಾಥ್ ಕುನ್ನೂರು, ಅರುಣ್ ಚರಂತಿಮಠ.
ಹಾವೇರಿ: ವಿಧಾನ ಪರಿಷತ್ ಮಾಜಿ ಸದಸ್ಯ ಸಲೀಂ ಅಹ್ಮದ್, ಮಾಜಿ ಸಂಸದ ಐ.ಜಿ. ಸನದಿ ಅಥವಾ ಅವರ ಪುತ್ರ ಜಾಕೀರ್ ಸನದಿ.
ಬಳ್ಳಾರಿ (ಎಸ್‌ಟಿ ಮೀಸಲು): ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ಕೆಪಿಸಿಸಿ ಪರಿಶಿಷ್ಟ ವರ್ಗಗಳ ಘಟಕದ ಮಾಜಿ ಅಧ್ಯಕ್ಷ ಟಿ.ಆರ್. ರಾಮಪ್ಪ.
ಕೊಪ್ಪಳ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಹಿಟ್ನಾಳ್, ಮಾಜಿ ಶಾಸಕ ಎಚ್.ಆರ್. ಸಾಯಿನಾಥ್ ಹಾಗೂ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ.
ರಾಯಚೂರು (ಎಸ್‌ಟಿ ಮೀಸಲು): ಮಾಜಿ ಸಚಿವ ರಾಜಾ ವೆಂಕಟಪ್ಪ ನಾಯಕ್, ಟಿ.ಆರ್.ರಾಮಪ್ಪ.
ಬಿಜಾಪುರ(ಎಸ್‌ಸಿ): ಪ್ರಕಾಶ್ ರಾಠೋಡ್, ಅರ್ಜುನ್ ರಾಠೋಡ್.
ಬಾಗಲಕೋಟೆ: ಮಾಜಿ ಸಂಸದ ಆರ್.ಎಸ್. ಪಾಟೀಲ್, ಸಚಿವ ಎಸ್.ಆರ್.ಪಾಟೀಲರ ಪುತ್ರ ರಾಜೇಂದ್ರ ಪಾಟೀಲ್, ಮಾಜಿ ಶಾಸಕ ಅಜಯಕುಮಾರ್ ಸರನಾಯಕ್.
ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ವೀರಕುಮಾರ್ ಪಾಟೀಲ್.
ಚಿಕ್ಕೋಡಿ: ಪ್ರದೀಪ್‌ಕುಮಾರ ಕಣಗಲಿ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ಯಾಮ್ ಘಾಟಗೆ.
- ರಾಘವೇಂದ್ರ ಭಟ್