ಸದನದಲ್ಲಿ ಸಿಎಂ 'ಕಾಸ್'ಬಾತ್!
ಸುವರ್ಣ ವಿಧಾನಸಭೆ: ತೆರಿಗೆ ಸಂಗ್ರಹಣೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಅಂಕಿ-ಸಂಖ್ಯೆ ಮೂಲಕ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಆರೋಪಗಳು ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡಿದ್ದಾರೆ.
ಪೂರಕ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಗಣಿ ಹಾಗೂ ಮೋಟಾರು ವಾಹನ ತೆರಿಗೆ ಸಂಗ್ರಹಣೆಯನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಸರ್ಕಾರದ ತೆರಿಗೆ ಸಂಗ್ರಹಣೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗಿಂತ ಹೆಚ್ಚಿದೆ. ಆರ್ಥಿಕ ಶಿಸ್ತು ವ್ಯಾಪ್ತಿಯಲ್ಲೇ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರತಿಪಕ್ಷಗಳು ಮಾಡುವ ಟೀಕೆ ರಾಜಕೀಯ ಪ್ರೇರಿತ ಎಂದು ಹೇಳಿದರು. ರಾಜ್ಯದ ಹೆಚ್ಚಿನ ಗಣಿಗಳು ಮುಚ್ಚಿ ಹೋಗಿವೆ. ಇವುಗಳಿಂದ ರಾಜಧನ ವಸೂಲಿ ಕಷ್ಟ. ಹೀಗಾಗಿ ಈ ಮೂಲದಿಂದ 350 ಕೋಟಿ ಸಂಗ್ರಹಣೆ ಕಡಿಮೆಯಾಗಲಿದೆ. ಅದೇ ರೀತಿ ಆರ್ಥಿಕ ಹಿಂಜರಿತದ ಫಲವಾಗಿ ಹೊಸ ವಾಹನಗಳ ಖರೀದಿಯಾಗುತ್ತಿಲ್ಲ. ಹೀಗಾಗಿ ನೋಂದಣಿ ಮತ್ತು ಜೀವಿತಾವಧಿ ತೆರಿಗೆ ಸಂಗ್ರಹಣೆಯಾಗುತ್ತಿಲ್ಲ. ಹೀಗಾಗಿ ಈ ಕ್ಷೇತ್ರದಿಂದ 320 ಕೋಟಿ ಕಡಿಮೆ ತೆರಿಗೆ ಸಂಗ್ರಹಣೆಯಾಗಲಿದ್ದು, ರಾಜ್ಯದ ಒಟ್ಟಾರೆ ತೆರಿಗೆ ಸಂಗ್ರಹಣೆ ಬೆಳವಣಿಗೆ ಅಕ್ಟೋಬರ್ ಅಂತ್ಯಕ್ಕೆ ಶೇ.11.5ರಷ್ಟಿದೆ ಎಂದರು.
ಇಷ್ಟಾಗಿಯೂ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹಣೆ ಗುರಿ ತಲುಪಲಿದೆ. ಕೇಂದ್ರ ತೆರಿಗೆಯನ್ನು ಸೇರಿಸಿ ಈ ವರ್ಷ 98321 ಕೋಟಿ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ 46724 ಕೋಟಿ ಸಂಗ್ರಹವಾಗಿದೆ. ಈ ವಿಭಾಗದಲ್ಲಿ ಶೇ.48ರಷ್ಟು ಸಂಗ್ರಹವಾಗಿದ್ದು, ಶೇ.11ರಷ್ಟು ಬೆಳವಣಿಗೆ ಇದೆ. ರಾಜ್ಯ ವಾಣಿಜ್ಯ ತೆರಿಗೆ ಸಂಗ್ರಹ ಗುರಿ 37740 ಕೋಟಿ ಇದ್ದು 20334 ಸಂಗ್ರಹವಾಗಿದ್ದು, ಶೇ.13ರಷ್ಟು ಬೆಳವಣಿಗೆ ಕಂಡು ಬಂದಿದೆ. ಇದು ಕಳೆದ ಅವಧಿಗಿಂತ ಜಾಸ್ತಿ ಇದೆ ಎಂದರು.
ಕರ್ನಾಟಕ ಮುಂದು: ಈ ಎರಡು ವಿಭಾಗದಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಶೇ.7, ಕೇರಳದಲ್ಲಿ ಶೇ.12, ಆಂಧ್ರಪ್ರದೇಶದಲ್ಲಿ ಶೇ.6, ತಮಿಳುನಾಡಿನಲ್ಲಿ ಶೇ.4ರಷ್ಟು ಬೆಳವಣಿಗೆಯಾಗಿದೆ. ಆದರೆ ಕರ್ನಾಟಕ ದಕ್ಷಿಣದ ಎಲ್ಲ ರಾಜ್ಯಗಳಿಗಿಂತ ತೆರಿಗೆ ಸಂಗ್ರಹಣೆಯಲ್ಲಿ ಮುಂದಿದೆ. ಅಬಕಾರಿ ಕ್ಷೇತ್ರದಿಂದ 12650 ಕೋಟಿ ತೆರಿಗೆ ನಿರೀಕ್ಷೆ ಹೊಂದಿದ್ದು, 7240 ಕೋಟಿ ವಸೂಲಿಯಾಗಿದ್ದು ಶೇ.16ರಷ್ಟು ಪ್ರಗತಿಯಾಗಿದೆ. ಮೋಟಾರು ವಾಹನ ತೆರಿಗೆಯಲ್ಲಿ ಶೇ.3ರಷ್ಟು ಪ್ರಗತಿ ಇದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 2285 ಕೋಟಿ ಬಾಕಿ ನೀಡಬೇಕಿತ್ತು. ಈ ಪೈಕಿ 1774 ಕೋಟಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಯಡಿಯೂರಪ್ಪನವರು ಇನ್ನು ಮುಂದೆ ಸರ್ಕಾರದ ವಿರುದ್ಧ ಆರೋಪ ಮಾಡುವ ಸಂದರ್ಭದಲ್ಲಿ ಇದೆಲ್ಲವನ್ನೂ ಹೇಳಬೇಕು ಎಂದು ವ್ಯಂಗ್ಯವಾಡಿದರು.
ಪಂಚಾಯತ್ರಾಜ್ ಇಲಾಖೆಗೆ ಸಂಬಂಧಿಸಿದಂತೆ ಶೇ.72, ನೀರಾವರಿ ಶೇ.52, ಇಂಧನ ಶೇ.64, ಗ್ರಾಮೀಣಾಭಿವೃದ್ಧಿ ಶೇ.63, ರಸ್ತೆ ಶೇ.42, ಅನ್ನಭಾಗ್ಯ ಶೇ.56, ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ.44, ಸಾಮಾಜಿಕ ಭದ್ರತೆ ಯೋಜನೆ ಶೇ.54, ಗ್ರಾಮೀಣ ನೀರಾವರಿ ಶೇ.48, ಆಶ್ರಯ ಶೇ.100, ಸಾಲಮನ್ನಾ ಶೇ.77ರಷ್ಟು ಹಣ ಬಿಡುಗಡೆಯಾಗಿದೆ ಎಂದು ವಿವರಿಸಿದರು. ಅದೇ ರೀತಿ ಅಕ್ಟೋಬರ್ ಅಂತ್ಯದ ವೇಳೆಗೆ 10.5 ಲಕ್ಷ ರೈತರಿಗೆ 4300 ಕೋಟಿ ಅಲ್ಪಾವಧಿ ಸಾಲ ನೀಡಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 8 ಲಕ್ಷ ರೈತರಿಗೆ 3200 ಕೋಟಿ ಮಾತ್ರ ಮಂಜೂರು ಮಾಡಲಾಗಿತ್ತು. ಹೀಗಾಗಿ ಅಭಿವೃದ್ಧಿ ಕಾರ್ಯದಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಸುವರ್ಣ ಗ್ರಾಮ ರದ್ದಿಲ್ಲ: ಸುವರ್ಣ ಗ್ರಾಮ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ಈ ಯೋಜನೆಗೆ ಸಂಬಂಧಿಸಿದ ಹಳೆ ಬಾಕಿ 100 ಕೋಟಿ ಪೂರಕ ಅಂದಾಜಿನಲ್ಲಿ ಬಿಡುಗಡೆ ಮಾಡಲಾಗಿದೆ. ಮುಂದಿನ ಅವಧಿಯಲ್ಲಿ ಈ ಯೋಜನೆಗೆ ಹೊಸದಾಗಿ ಹಣ ನಿಗದಿ ಮಾಡಲಾಗುವುದು. ಜತೆಗೆ 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯನ್ನೂ ಕೈ ಬಿಡುವುದಿಲ್ಲ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರ ಜತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅದೇ ರೀತಿ ರಾಜ್ಯದ ರೇಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚೆ ನಡೆಸಿದ್ದೇನೆ. 50-50 ಅನುಪಾತದ ಆಧಾರದ ಮೇಲೆ ರೇಲ್ವೆ ಯೋಜನೆಗೆ ಅಗತ್ಯವಾದ ರಾಜ್ಯದ ಪಾಲಿನ ಹಣ ಎಷ್ಟೇ ಆದರೂ ಅದನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಪೂರಕ ಬಜೆಟ್ಗೆ ಸರ್ವಾನುಮತದಿಂದ ಅಂಗೀಕಾರ ದೊರೆಯಿತು.
- ರಾಘವೇಂದ್ರ ಭಟ್
rythmraghu@gmail.com