ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾಲ ನೀಡಲು ಯೋಗ್ಯತೆ ಇಲ್ಲದ ಸರ್ಕಾರ, ಮನ್ನಾ ಎಲ್ಲಿಂದ ಮಾಡುತ್ತೆ?: ಡೀವಿ

Mainashree
Updated On : 4 Dec 2013, 12:12 pm

ಸುವರ್ಣ ವಿಧಾನ ಪರಿಷತ್ತು: ಹೊಸ ಸಾಲ ನೀಡುವ ಸಾಮರ್ಥ್ಯವೇ ಇಲ್ಲವೆಂದ ಮೇಲೆ ಮನ್ನಾ ಮಾಡುವ ಯೋಗ್ಯತೆ ಎಲ್ಲಿಂದ ಬರುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸದನದಲ್ಲಿ ಮಂಗಳವಾರ ರೈತರ ಸಾಲ ಮನ್ನಾ ಮತ್ತು ಅದರ ಮರು ಪಾವತಿ ವಿಷಯ ಕುರಿತು ಆಡಳಿತ, ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದವೇ ನಡೆಯಿತು. ಚರ್ಚೆ ಸಂದರ್ಭದಲ್ಲಿ ಸದಾನಂದಗೌಡರು ಆಡಿದ ಮಾತು ಆಡಳಿತ ಪಕ್ಷದವರನ್ನು ಕೆರಳಿಸಿ ಮಾತಿನ ಚಕಮಕಿ ಕಾರಣವಾಯಿತು.
ಸಭಾನಾಯಕ ಎಸ್.ಆರ್. ಪಾಟೀಲ ಮಾತನಾಡಿ, ನೀವು (ಬಿಜೆಪಿ) ಮಾಡಿದ ಸಾಲ ಮನ್ನಾದ ಬಾಕಿ ಹಣವನ್ನು ನಾವು ಸಹಕಾರ ಬ್ಯಾಂಕು, ಸಂಘಗಳಿಗೆ ಮರುಪಾವತಿ ಮಾಡುತ್ತಿದ್ದೇವೆ. ನೀವು ಮಾಡದೇ ಇರುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಪ್ರತ್ಯುತ್ತರ ನೀಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿ, ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಿತ್ತು. ಆದರೆ ಪ್ರಸಕ್ತ ಸರ್ಕಾರ ಮನ್ನಾ ಮಾಡಿದ ಹಣವನ್ನು ಸಹಕಾರಿ ಸಂಸ್ಥೆ ಹಾಗೂ ಬ್ಯಾಂಕುಗಳಿಗೆ ಮರುಪಾವತಿ  ಮಾಡುತ್ತಿಲ್ಲ. ಇದರಿಂದ ಬ್ಯಾಂಕುಗಳು ರೈತರಿಗೆ ಹೊಸ ಸಾಲ ನೀಡುತ್ತಿಲ್ಲ ಎಂದರು.
ಸಹಕಾರ ಸಚಿವ ಮಹದೇವ ಪ್ರಸಾದ್ ನೀಡಿದ ಉತ್ತರ ಪ್ರತಿಪಕ್ಷಗಳಿಗೆ ಸಮಾಧಾನ ತರಲಿಲ್ಲ. ಸಾಲ ಮನ್ನಾದ ಬಾಕಿ 1485 ಕೋಟಿ ಇತ್ತು. ಅದರಲ್ಲಿ 1033 ಕೋಟಿ ಬಿಡುಗಡೆ ಮಾಡಲಾಗಿದೆ. ಸಹಕಾರಿ ಇಲಾಖೆ ವರದಿ ಬಂದ ಬಳಿಕ ಉಳಿದ ಹಣ ಬಿಡುಗಡೆ ಮಾಡಲಾಗುತ್ತದೆ. ಹಳೆ ಸಾಲ ಬಾಕಿ ಇರುವುದರಿಂದ ಹೊಸ ಸಾಲ ನೀಡಬಾರದೆಂಬ ನಿಯಮವೇನೂ ಇಲ್ಲ. ಹೊಸ ಸಾಲ ನೀಡುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಸ್ಪಷ್ಟೀಕರಣ ನೀಡಿದರು.
ಮಧ್ಯಪ್ರವೇಶಿಸಿದ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ, ಸಾಲ ಮನ್ನಾ ಮಾಡಿ ಬ್ಯಾಂಕುಗಳು ದಿವಾಳಿ ಆಗುವಂತೆ  ಮಾಡಿದ್ದೀರಿ. ಹಣ ಮರುಪಾವತಿ ಆಗದೇ ಬ್ಯಾಂಕುಗಳು ಸಂಕಷ್ಟದಲ್ಲಿವೆ. ಸಾಲ ಮನ್ನಾದ ಹಣವನ್ನು ಬ್ಯಾಂಕುಗಳಿಗೆ ನೀಡಬೇಕು. ಸರ್ಕಾರವೇ ಒಂದು ಸಾರಿ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು.
ಇನ್ನು ಮುಂದೆ ಸರ್ಕಾರವೇ ರೈತರಿಗೆ ಸಾಲ ನೀಡಬೇಕು. ಅಂದಾಗ ಮನ್ನಾ ಮಾಡುವುದಕ್ಕೆ ಸುಲಭವಾಗುತ್ತದೆ ಎಂದರು.

ವಿಫಲ ಕೊಳವೆ ಬಾವಿ ಸಾಲ ಮನ್ನಾ
ರಾಜ್ಯದಲ್ಲಿ 2006ರಿಂದ ಇಲ್ಲಿಯವರೆಗೂ ವಿಫಲವಾಗಿರುವ ತೆರೆದ ಕೊಳವೆ ಬಾವಿಗಳ ಮೇಲಿನ ಸಾಲ ಮನ್ನಾಗೆ ಸರ್ಕಾರ ತೀರ್ಮಾನಿಸಿದೆ ಎಂದು ಮಹದೇವಪ್ರಸಾದ ಹೇಳಿದರು. ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದನ್ನು ಮುಖ್ಯಮಂತ್ರಿಗಳೇ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.
ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಿತ್ತು. ಆದರೆ ಪ್ರಸಕ್ತ ಸರ್ಕಾರ ಮನ್ನಾ ಮಾಡಿದ ಹಣವನ್ನು ಸಹಕಾರಿ ಸಂಸ್ಥೆ ಹಾಗೂ ಬ್ಯಾಂಕುಗಳಿಗೆ ಮರುಪಾವತಿ  ಮಾಡುತ್ತಿಲ್ಲ.

ರಘು ಆಚಾರ್ಯ ಕೇಳಿದ ಪ್ರಶ್ನೆಗೆ ಸಿಡಿಯಲ್ಲಿ ಉತ್ತರ!
ಸದಸ್ಯ ರಘು ಆಚಾರ್ಯ ಅವರು ರಸ್ತೆಗಳ ಅಭಿವೃದ್ಧಿ ಮತ್ತು ಕಾಮಗಾರಿ ಕುರಿತು ವಿವರ ಕೇಳಿದ್ದರು. ಇದಕ್ಕೆ  ಲೋಕೋಪಯೋಗಿ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು 1200 ಪುಟಗಳ ಉತ್ತರವನ್ನು ಸಿಡಿ ಮೂಲಕ ಕೊಟ್ಟಿದ್ದಾರೆ. ಇಷ್ಟೊಂದು ದೊಡ್ಡ ಉತ್ತರವನ್ನು ಉಳಿದೆಲ್ಲಾ ಸದಸ್ಯರಿಗೂ ನೀಡುವುದು ಕಷ್ಟ. ಹೀಗಾಗಿ ಪ್ರಶ್ನೆ ಕೇಳಿದ ಸದಸ್ಯರಿಗೆ ಸಿಡಿ ಮೂಲಕ ಉತ್ತರ ನೀಡಲಾಗಿದೆ ಎಂದು ಸಚಿವರು ವಿವರಣೆ ನೀಡಿದರು. ಹಿರಿಯ ಸದಸ್ಯ ಎಂ.ಸಿ. ನಾಣಯ್ಯ ಅವರು, ಇನ್ನು ಮುಂದೆ ಸಿಡಿ ಮೂಲಕ ಉತ್ತರ ನೀಡುವುದೇ ಒಳ್ಳೆಯದು ಎಂದರು. ಕೆಲವು ಸದಸ್ಯರು ಜೊತೆಗೆ ಲ್ಯಾಪ್‌ಟಾಪ್ ಕೂಡಾ ನೀಡಿ ಎಂದು ಆಗ್ರಹಿಸಿದರು.

- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement