ಮಂತ್ರಿಗಳು ಶಾಸಕರನ್ನು, ಶಾಸಕರು ಮಂತ್ರಿಗಳನ್ನು ನಿಂದಿಸುವಲ್ಲೇ ನಿರತ
ಆಡಳಿತಾತ್ಮಕ ನಿರ್ಣಯ ಹಾಗೂ ಶಾಸನ ನಿರೂಪಣೆಯ ಪ್ರಾಥಮಿಕ ವೇದಿಕೆಯಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇತ್ತೀಚೆಗೆ...
ಸುವರ್ಣ ವಿಧಾನಸೌಧ: ಆಡಳಿತಾತ್ಮಕ ನಿರ್ಣಯ ಹಾಗೂ ಶಾಸನ ನಿರೂಪಣೆಯ ಪ್ರಾಥಮಿಕ ವೇದಿಕೆಯಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇತ್ತೀಚೆಗೆ ದೂರು-ದುಮ್ಮಾನಗಳ ನೋಂದಣಿ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ.
ಹೌದು. ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾದ ನಂತರ ಆಡಳಿತಾರೂಢ ಕಾಂಗ್ರೆಸ್ ಮೂರು ಬಾರಿ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದೆ. ಈ ಮೂರು ಸಭೆಯಲ್ಲೂ ಕೇವಲ ಶಾಸಕರ ಕುಂದುಕೊರತೆ, ಮಂತ್ರಿಗಳ ನಿಂದನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪದ ಗುಟುರು ಬಿಟ್ಟರೆ, ಆಡಳಿತಾತ್ಮಕ ವಿಚಾರಗಳ ಬಗ್ಗೆ ಎಳ್ಳಷ್ಟೂ ಚರ್ಚೆಯಾಗುತ್ತಿಲ್ಲ.
ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳು ಅಧಿವೇಶನ ವೇಳೆ ಒಮ್ಮೆಯಾದರೂ ಶಾಸಕಾಂಗ ಪಕ್ಷದ ಸಭೆ ನಡೆಸಿ ತಮ್ಮ ಪಕ್ಷ ಕಲಾಪ ಕಾರ್ಯದಲ್ಲಿ ಅನುಸರಿಸಬೇಕಾದ ನಡೆಯ ಬಗ್ಗೆ ಶಾಸಕಾಂಗ ಪಕ್ಷದ ನಾಯಕನ ಅಧ್ಯಕ್ಷತೆಯಲ್ಲಿ ಚರ್ಚಿಸಿ, ರಣತಂತ್ರ ರೂಪಿಸುತ್ತಾರೆ. ಅದರಲ್ಲಿಯೂ ಆಡಳಿತ ಪಕ್ಷದವರ ಮೇಲೆ ಹೆಚ್ಚು ಜವಾಬ್ದಾರಿ ಇರುವುದರಿಂದ ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಡಳಿತಾತ್ಮಕ ವಿಚಾರಗಳು ಹಾಗೂ ಸರ್ಕಾರದ ನೀತಿ ನಡಾವಳಿ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಕಾಂಗ್ರೆಸ್ ಶಾಸಕಾಂಗ ಸಭೆ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ.
ಇಂದಿನ ಸಭೆಯಲ್ಲಿ ನಡೆದಿದ್ದೇನು?
ಇನ್ನು ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆಯುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಎಐಸಿಸಿಯಿಂದಲೂ ಸಲಹೆ ಬಂದಿದೆ. ಜತೆಗೆ ಸರ್ಕಾರ ಮತ್ತು ಶಾಸಕರ ನಡುವೆ ವೃದ್ಧಿಯಾಗುತ್ತಿರುವ ಅಂತರ ಕಡಿಮೆ ಮಾಡುವುದಕ್ಕೆ ಹಾಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳುವುದಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಸಭೆ ಬಳಿಕ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸುದ್ದಿಗಾರರರಿಗೆ ಈ ವಿಷಯ ತಿಳಿಸಿದ್ದಾರೆ.
ಹೌದು, ನೀವೇಲ್ಲ ಏನ್ಮಾಡ್ತಾ ಇದ್ದೀರಿ
ಇಷ್ಟು ದಿನ ಶಾಸಕರ ಕೆಂಗಣ್ಣಿಗೆ ಮಾತ್ರ ಗುರಿಯಾಗಿದ್ದ ಸಚಿವರ ಮೇಲೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಚಾಟಿ ಬೀಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹೌದು, ನೀವೆಲ್ಲ ಏನ್ ಮಾಡ್ತಾ ಇದ್ದೀರಿ. ವಾರದಲ್ಲಿ ಮೂರು ದಿನ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವಂತೆ ಸೂಚನೆ ನೀಡಿದ್ದರೂ ಕ್ಷೇತ್ರದಲ್ಲಿ ಇದ್ದೆ ಎಂದು ಸಬೂಬು ನೀಡುತ್ತೀರಿ. ಇದು ಸರಿಯಲ್ಲ. ನಿಮ್ಮಲ್ಲಿ ಎಷ್ಟು ಜನರು ಪ್ರತಿ ತಿಂಗಳೂ ತಪ್ಪದೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಆಲಿಸಿದ್ದೀರಿ. ನಿಮ್ಮ ಬಗ್ಗೆ ಕೆಪಿಸಿಸಿ ಹೈಕಮಾಂಡ್ಗೆ ವರದಿ ನೀಡುತ್ತದೆ. ನಾನು ಕೆಪಿಸಿಸಿಗೆ ಮಾಹಿತಿ ನೀಡಬೇಕಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ನಾನು ಹೈಕಮಾಂಡ್ಗೆ ವರದಿ ನೀಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಶಾಸಕರಿಗೆ ಮಾಹಿತಿ ಇರಲ್ಲ!
ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಕಾಂಗ್ರೆಸ್ ಶಾಸಕರೊಬ್ಬರ ಪ್ರಕಾರ, ಹಿಂದೆ ಶಾಸಕಾಂಗ ಸಭೆಗೆ ವಿಶೇಷ ಗೌರವವಿತ್ತು. ಸರ್ಕಾರದ ಆಡಳಿತಾತ್ಮಕ ನಿರ್ಧಾರದಲ್ಲಿ, ನೀತಿ ನಿರೂಪಣೆಯಲ್ಲಿ ಶಾಸಕರನ್ನು ಒಳಗೂಡಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಸಭೆ ಮಾದರಿಯಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಸರ್ಕಾರ ಸದನದಲ್ಲಿ ಮಂಡಿಸುವ ಎಷ್ಟೋ ವಿಧೇಯಕಗಳು ಶಾಸಕರಿಗೆ ಗೊತ್ತೆ ಇರುವುದಿಲ್ಲ. ಹೀಗಾಗಿ ಈ ಬಗ್ಗೆ ಸಿದ್ಧರಾಗಿ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಬಾರಿ ಮಂಡನೆಯಾದ ಯಾವ ವಿಧೇಯಕಗಳ ಬಗ್ಗೆಯೂ ಶಾಸಕರಿಗೆ ಪೂರ್ವಭಾವಿ ಮಾಹಿತಿ ಇರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಇಂಥ ವಿಚಾರಗಳು ಚರ್ಚೆಯಾಗಬೇಕೆ ವಿನಃ ಸಮಸ್ಯೆಗಳ ಪಟ್ಟಿ ಬಿಡುಗಡೆಯಾಗಬಾರದು ಎಂದು ಅಭಿಪ್ರಾಯಪಟ್ಟರು.
ಮೂಗರ್ಜಿ ಬರೆದವರನ್ನು ಪತ್ತೆ ಹಚ್ಚಿರಿ
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ 40 ಶಾಸಕರು ಹೈಕಮಾಂಡ್ಗೆ ಮೂಗರ್ಜಿ ಬರೆದಿದ್ದಾರೆ ಎಂಬ ವಿಚಾರದ ಬಗ್ಗೆ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ ಖುದ್ದು ಸಿದ್ದರಾಮಯ್ಯನವರೂ ಭಾಗಿಯಾಗಿದ್ದು ಮತ್ತೊಂದು ವಿಶೇಷ. ಪತ್ರ ಬರೆದ ಶಾಸಕರು ಯಾರು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಪದೇ ಪದೇ ಮಾಧ್ಯಮಗಳಲ್ಲಿ ಇಂತಹ ವಿಚಾರ ಪ್ರಸ್ತಾಪವಾಗುತ್ತಿದೆ. ಹೀಗಾಗಿ ಇದರ ಸೃಷ್ಟಿಕರ್ತರು ಯಾರು ಎಂಬುದನ್ನು ಕಂಡುಹಿಡಿಯಬೇಕು. ಅಥವಾ ಇದು ಕೇವಲ ಮಾಧ್ಯಮ ಸೃಷ್ಟಿಯೇ ಎಂಬುದನ್ನು ಪತ್ತೆ ಮಾಡಬೇಕು.
3 ತಿಂಗಳಿಗೊಮ್ಮೆ ಕೆಡಿಪಿ ಸಭೆ
ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅದೇ ರೀತಿ ಪ್ರತಿ ತಿಂಗಳಿಗೊಮ್ಮೆ ಸಚಿವರು ತಮ್ಮ ಜಿಲ್ಲೆಯಲ್ಲಿ ಶಾಸಕರ ಜತೆ ಸಭೆ ನಡೆಸಬೇಕು. ಇದರಿಂದ ಅಂತರ ಕಡಿಮೆಯಾಗುತ್ತದೆ ಎಂಬ ಸಲಹೆಯನ್ನು ನೀಡಲಾಗಿದೆ.
ಇಮೇಜ್ ಚಿಂತೆ
ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಇನ್ನೂ ಇಮೇಜ್ ಬೆಳೆದಿಲ್ಲ. ಎಲ್ಲ ಇಲಾಖೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೂ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಹೀಗಾಗಿ ಇದರ ವಿರುದ್ಧ ಶಾಸಕರು ಧ್ವನಿ ಎತ್ತಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಇಮೇಜ್ ಅಪಲೊಡ್ ಆಗಬೇಕು ಎಂದು ಖುದ್ದು ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ.
- ರಾಘವೇಂದ್ರ ಭಟ್