ಕೃಷ್ಣೆಗಾಗಿ ಕಾನೂನು ಹೋರಾಟ
ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ...
-ಕಾನೂನು ತಂಡ ಮತ್ತು ತಾಂತ್ರಿಕ ತಂಡದ ಪರಿಶೀಲನಾ ವರದಿ ಕೈ ಸೇರಿದ ತಕ್ಷಣವೇ ನಾರಿಮನ್ ಅವರ ನೇತೃತ್ವದಲ್ಲಿ ಉಭಯ ಸದನಗಳ ಮುಖಂಡರ ಸಭೆ ಕರೆದು ತೀರ್ಪಿನ ಲಾಭ-ನಷ್ಟಗಳು, ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ತೀರ್ಮಾನ...
ಸುವರ್ಣ ವಿಧಾನಸಭೆ: ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಹಿರಿಯ ವಕೀಲ ನಾರಿಮನ್ ಅವರ ಸಮ್ಮುಖದಲ್ಲಿ ಉಭಯ ಸದನಗಳ ಮುಖಂಡರು ಮತ್ತು ತಜ್ಞರ ಸಭೆ ಕರೆಯಲು ತೀರ್ಮಾನಿಸಿದೆ. ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಕುರಿತು ಕಾನೂನು ಮತ್ತು ತಾಂತ್ರಿಕ ತಂಡಗಳು ಪರಿಶೀಲನೆ ನಡೆಸುತ್ತಿವೆ. ಈ ಪರಿಶೀಲನಾ ವರದಿ ಬಂದ ತಕ್ಷಣವೇ ಕಾನೂನು ತಂಡ ಮತ್ತು ತಜ್ಞರ ಉಪಸ್ಥಿತಿಯಲ್ಲಿ ಉಭಯ ಸದನಗಳ ಮುಖಂಡರ ಸಭೆ ಕರೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ಅಂತಿಮ ಆದೇಶ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಕಾಮಗಾರಿಗಳ ಕುರಿತು ನಿಯಮ 69ರಡಿ ನಡೆದ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಸಚಿವರು, ತೀರ್ಪಿನಲ್ಲಿ ಕೆಲವು ಸೂಕ್ಷ್ಮ ಅಂಶಗಳಿದ್ದು, ಈ ಕುರಿತು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಆದರೆ, ರಾಜ್ಯದ ಹಿತದೃಷ್ಟಿಯಿಂದ ಅದನ್ನು ಸದನದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಕಾನೂನು ತಂಡ ಮತ್ತು ತಾಂತ್ರಿಕ ತಂಡದ ಪರಿಶೀಲನಾ ವರದಿ ಕೈ ಸೇರಿದ ತಕ್ಷಣವೇ ನಾರಿಮನ್ ಅವರ ನೇತೃತ್ವದಲ್ಲಿ ಉಭಯ ಸದನಗಳ ಮುಖಂಡರ ಸಭೆ ಕರೆದು ತೀರ್ಪಿನ ಲಾಭ-ನಷ್ಟಗಳು, ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಸಲಹೆ ಪಡೆದು ಕ್ರಮ: ನ್ಯಾಯಾಧಿಕರಣದ ತೀರ್ಪಿನ ಕುರಿತು ಸರ್ಕಾರ ಕೇಳಿದ್ದ ಸ್ಪಷ್ಟೀಕರಣ ಇತ್ಯರ್ಥಪಡಿಸುವ ಸಂದರ್ಭದಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿದ ನೀರಿನ ಪ್ರಮಾಣದಲ್ಲಿ 4 ಟಿಎಂಸಿ ನೀರು ಕಡಿಮೆ ಮಾಡಿದೆ. ಈ ಕೊರತೆ ಸರಿದೂಗಿಸುವ ಕುರಿತು ತಾಂತ್ರಿಕ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷ್ಣಾ ನ್ಯಾಯಾಧಿಕರಣದ ಅಂತಿಮ ಆದೇಶದನ್ವಯ ರಾಜ್ಯಕ್ಕೆ ಲಭ್ಯವಾಗುವ ನೀರನ್ನು ಬಳಸಿಕೊಳ್ಳಲು ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ಖರ್ಚು ಮಾಡಿ ಐದು ವರ್ಷಗಳಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಕಾಮಗಾರಿಗೆ ನಿಗದಿಗಿಂತ ಹೆಚ್ಚಿನ ಮೊತ್ತ ಬೇಕಾದಲ್ಲಿ ಅದನ್ನು ಒದಗಿಸಲೂ ಸರ್ಕಾರ ಬದ್ಧವಾಗಿದೆ ಎಂದರು.
ಯೋಜನೆಗಳಿಗೆ ಚುರುಕು: ಕೃಷ್ಣಾ ಮೇಲ್ದಂಡೆ ಯೋಜನೆ 3ರಡಿ ಲಭ್ಯವಾಗುವ 130.90 ಟಿಎಂಸಿ ನೀರು ಬಳಸಿಕೊಳ್ಳಲು 17,207 ಕೋಟಿ ವೆಚ್ಚದಲ್ಲಿ 9 ಉಪಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಈ ಹಿಂದೆಯೇ ತಾತ್ವಿಕ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಈ ಯೋಜನೆಗಳ ಪೈಕಿ ಈಗಾಗಲೇ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ಯೋಜನೆಗಳಿಗೆ ಮತ್ತೊಮ್ಮೆ ಅನುಮೋದನೆ ಪಡೆಯುವ ಅಗತ್ಯವಿಲ್ಲ. ಅನುಮೋದನೆಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಯೋಜನೆ ಮುಂದುವರಿಸಬಹುದು ಎಂದು ನ್ಯಾಯಾಧಿಕರಣ ಹೇಳಿದೆ. ಹೀಗಾಗಿ ಈ ಎಲ್ಲಾ 9 ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
12ರಂದು ಸಿಎಂ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಸಭೆ
ಕೃಷ್ಣಾ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ರಾಜ್ಯಕ್ಕೆ ಲಭ್ಯವಾಗುವ ನೀರು ಬಳಸಿಕೊಳ್ಳಬೇಕಾದರೆ ಸುಮಾರು 1.20 ಲಕ್ಷ ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಸಾಕಷ್ಟು ಹಳ್ಳಿಗಳನ್ನು ಸ್ಥಳಾಂತರಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ನೇಮಿಸಲಾಗಿದೆ. ಜಲಸಂಪನ್ಮೂಲ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಕಾನೂನು, ಲೋಕೋಪಯೋಗಿ, ಆರೋಗ್ಯ ಹಾಗೂ ಪೌರಾಡಳಿತ ಇಲಾಖೆ ಸಚಿವರು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಡಿ.12ರಂದು ಸಭೆ ಸೇರಿ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಿದೆ. ಇದಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರಡಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ನೀರಾವರಿ ಸಾಮರ್ಥ್ಯ ಕಲ್ಪಿಸಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕ್ರಿಯಾ ಯೋಜನಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
1627 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ
ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್ಗೆ ಹೆಚ್ಚಿಸಲು ಒಪ್ಪಿಗೆ ಸಿಕ್ಕಿರುವುದರಿಂದ ಅಣೆಕಟ್ಟೆ ಹಿನ್ನೀರಿನಿಂದ ಮುಳುಗುವ ಪ್ರದೇಶಗಳಾವುವು ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಹೀಗಾಗಿ ಇವರನ್ನು ಬೇರೆಡೆ ಸ್ಥಳಾಂತರಗೊಳಿಸಿ ಪುನರ್ವಸತಿ ಕಲ್ಪಿಸಲು 1627 ಎಕರೆ ಪ್ರದೇಶಕ್ಕೆ ಈಗಾಗಲೇ 4(1)ರಡಿ ಅಧಿಸೂಚನೆ ಹೊರಡಿಸಲು ತೀರ್ಮಾನಿಸಿದ್ದು, ಗೆಜೆಟ್ ಪ್ರಕಟಣೆ ಹೊರಡಿಸಲಾಗುವುದು. ಇದಕ್ಕೆ ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರನ್ನು ನೇಮಿಸಲಾಗಿದೆ. ಅದೇ ರೀತಿ ಸದರಿ ಕಚೇರಿಗೆ ಮಹಾ ವ್ಯವಸ್ಥಾಪಕರು, ಮುಖ್ಯ ಎಂಜಿನಿಯರ್ ಮತ್ತು ಭೂಸ್ವಾಧೀನಾಧಿಕಾರಿಗಳನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು.
- ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ
- 12ರಂದು ಸಿಎಂ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಸಭೆ
- ಸದನದಲ್ಲಿ ವಿವರಣೆ ನೀಡಿದ ಸಚಿವ ಎಂ.ಬಿ. ಪಾಟೀಲ್
- 130.90 ಟಿಎಂಸಿ ನೀರು ಬಳಸಿಕೊಳ್ಳಲು 17,207 ಕೋಟಿ ವೆಚ್ಚದಲ್ಲಿ 9 ಉಪಯೋಜನೆ
- 5 ವರ್ಷಗಳಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ಖರ್ಚು ಮಾಡಿ ಎಲ್ಲಾ ಯೋಜನೆಗಳನ್ನು ಪೂರ್ಣ
- ಪುನರ್ವಸತಿ ಕಲ್ಪಿಸಲು 1627 ಎಕರೆ ಪ್ರದೇಶಕ್ಕೆ ಈಗಾಗಲೇ 4(1)ರಡಿ ಅಧಿಸೂಚನೆ
- ಕಾಮಗಾರಿಗೆ ನಿಗದಿಗಿಂತ ಹೆಚ್ಚಿನ ಮೊತ್ತ ಬೇಕಾದಲ್ಲಿ ಸರ್ಕಾರ ಒದಗಿಸುತ್ತದೆ