ಕ್ರಾಂತಿಯ ಜತೆಗೆ ಶಾಂತಿಯ ದೀಪ ಹಿಡಿದು ನಡೆದ ಕರಿಯರ ನಾಯಕ
ಆಫ್ರಿಕಾದಲ್ಲಿ ವರ್ಣಭೇದ ನೀತಿಗೆ ಕೊನೆ ಹಾಡಿದ ಕಪ್ಪು ವರ್ಣೀಯರ ಆರಾಧ್ಯದೈವ ನೆಲ್ಸನ್ ಮಂಡೇಲಾ ಬದುಕಿದ್ದ್ದೇ ಹೀಗೆ...
I can rest only for a moment, for with freedom come responsibi-lities, and I dare not linger, for my long walk is not yet ended."
- Nelson Mandela
ಆಫ್ರಿಕಾದಲ್ಲಿ ವರ್ಣಭೇದ ನೀತಿಗೆ ಕೊನೆ ಹಾಡಿದ ಕಪ್ಪು ವರ್ಣೀಯರ ಆರಾಧ್ಯದೈವ ನೆಲ್ಸನ್ ಮಂಡೇಲಾ ಬದುಕಿದ್ದ್ದೇ ಹೀಗೆ. 20ರ ಹರೆಯದಲ್ಲೇ ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಅವರದು ಹೋರಾಟದ ಹಾದಿ. ನೆಲದ ಮಕ್ಕಳಿಗೆ ಆಗುತ್ತಿದ್ದ ತಾರತಮ್ಯ, ಅನ್ಯಾಯದ ವಿರುದ್ಧ ಸೆಟೆದು ನಿಂತಿದ್ದ ಅವರು ಶಾಂತಿ ಹಾಗೂ ಕ್ರಾಂತಿಗೀತೆಯನ್ನು ಜತೆಯಾಗಿ ಮೊಳಗಿಸಿದವರು.
ಹುಟ್ಟಿದ್ದು ಟ್ರಾನ್ಸ್ಕಿ ಎಂಬ ಪುಟ್ಟ ಗ್ರಾಮದಲ್ಲಿ. ಮಂಡೇಲಾ ಅವರದು ರಾಜಮನೆತನದೊಂದಿಗೆ ಸಂಬಂಧ ಹೊಂದಿದ್ದ ಕುಟುಂಬ. ತಂದೆ ಥೆಂಬು ರಾಜ ಕುಟುಂಬದ ಸಲಹೆಗಾರರಾಗಿದ್ದವರು. ಆದರೆ, ಮಂಡೇಲಾ 9 ವರ್ಷದವರಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಥೆಂಬು ಜನಾಂಗದ ಉಸ್ತುವಾರಿ ಮುಖ್ಯಸ್ಥ ಜೊನ್ಗಿಂತಬ ದಲಿಂದೈಬೊ ಅವರ ದತ್ತು ಮಗನಂತೆ ಬದುಕಿದರು. ಜೊನ್ಗಿಂತಬ ಒತ್ತಾಸೆಯಂತೆ ಮಂಡೇಲಾ ಉತ್ತಮ ಶಿಕ್ಷಣವನ್ನೂ ಪಡೆದರು.
ಆದರೆ, ಸಂಪ್ರದಾಯವಾದಿಯಾಗಿದ್ದ ಜೊನ್ಗಿಂತಬ 1943ರಲ್ಲಿ ಅಂದರೆ 23ನೇ ವಯಸ್ಸಿನಲ್ಲಿ ಮಂಡೇಲಾರಿಗೆ ಸಂಪ್ರದಾಯಬದ್ಧ ಮದುವೆ ಮಾಡಲು ಮುಂದಾದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಂಡೇಲಾ ಜೊಹಾನ್ಸ್ಬರ್ಗ್ಗೆ ಓಡಿ ಹೋಗಿದ್ದರು. ಎರಡು ವರ್ಷ ಅಲ್ಲಿ ಇಲ್ಲಿ ಕೆಲಸ ಮಾಡಿದ ಅವರು ಬಳಿಕ ಕಾನೂನು ಪದವಿಗಾಗಿ ವಿಟ್ಸ್ವಾಟರ್ಯಾಂಡ್ ವಿವಿ ಸೇರಿದರು. ಮಂಡೇಲಾ ಅವರೊಳಗೆ ಅವಿತು ಕೂತಿದ್ದ ಹೋರಾಟಗಾರ ಹೊರಬಂದದ್ದೇ ಇಲ್ಲಿ. ವಿವಿಯಲ್ಲಿ ಉದಾರವಾದಿ, ಸಂಪ್ರದಾಯವಾದಿ ಮತ್ತು ಆಫ್ರಿಕನ್ವಾದಿ ಚಿಂತನೆಗಳಿಗೆ ಮಂಡೆಲಾ ತೆರೆದುಕೊಂಡರು. ಇದು ಅವರಲ್ಲಿ ರಾಜಕೀಯ ಸೇರುವ ಒತ್ತಾಸೆ ಬೆಳೆಸಿತು. ಇದೇ ವರ್ಷ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್ಎಸ್) ಸೇರಿದರು. ಬಳಿಕ ಎಎನ್ಸಿ ಯೂತ್ ಘಟಕ ಕಟ್ಟಿದರು.
ಕರಿಯರ ಪರ ಹೋರಾಟ
ಮಂಡೇಲಾ ಕರಿಯರ ನಾಯಕನಾಗಿ ಬೆಳೆದದ್ದು 1950 ಮತ್ತು 60ರ ದಶಕದಲ್ಲಿ. ಕಾನೂನು ಶಿಕ್ಷಣಪಡೆದ ಬಳಿಕ ಮಂಡೇಲಾ 1952ರಲ್ಲಿ ಜೊಹಾರ್ನ್ಬರ್ಗ್ನಲ್ಲಿ ಗೆಳೆಯ ಒಲಿವರ್ ಥಾಂಬೋ ಜತೆ ಕಾನೂನು ಸಂಸ್ಥೆ ತೆರೆದರು. ಇದರ ಮೂಲಕ ಕರಿಯರಿಗೆ ಕಾನೂನು ನೆರವು ನೀಡಲು ಆರಂಭಿಸಿದರು. ಶಾಂತಿಯುತ ಹೋರಾಟವೊಂದರಿಂದ ಏನೂ ಸಾಧ್ಯವಿಲ್ಲ ಎನ್ನುವ ಭಾವನೆ ಬೆಳೆದಾಗ ಸಶಸ್ತ್ರ ಹೋರಾಟಕ್ಕಾಗಿ ಎಎನ್ಸಿಯ ಸಶಸ್ತ್ರಪಡೆ ಎಂ.ಕೆಯನ್ನು ಕಟ್ಟುವ ಹಿಂದೆಯೂ ಮಂಡೇಲಾ ಕೆಲಸ ಮಾಡಿದ್ದರು. 1963ರಲ್ಲಿ ವಿಧ್ವಂಸಕ ಕೃತ್ಯ ಹಾಗೂ ರಾಜಕೀಯ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಬೇಕಾಯಿತು. ಬಳಿಕ ಮಂಡೇಲಾರನ್ನು ರೊಬ್ಬೆನ್ ದ್ವೀಪದಲ್ಲಿರುವ ಜೈಲಿಗೆ ತಳ್ಳಲಾಯಿತು.
ಹತ್ಯೆಗೆ ಸಂಚು
ಜೈಲಿನೊಳಗಿದ್ದರೂ ಇಡೀ ಆಫ್ರಿಕಾವನ್ನು ಆವರಿಸುತ್ತಿದ್ದ ಮಂಡೇಲಾರ ಪ್ರಭಾವದಿಂದ ಆತಂಕಗೊಂಡಿದ್ದ ಸರ್ಕಾರ 1981ರಲ್ಲಿ ಅವರ ಹತ್ಯೆಗೆ ಸಂಚನ್ನೂ ರೂಪಿಸಿತ್ತು. ಆದರೆ, ಅದೃಷ್ಟವಶಾತ್ ಸರ್ಕಾರದ ಈ ಯೋಜನೆ ಫಲಿಸಲಿಲ್ಲ. ದಕ್ಷಿಣ ಆಫ್ರಿಕಾದ ಗುಪ್ತಚರ ವಿಭಾಗದ ಮುಖ್ಯಸ್ಥ ಗೋರ್ಡನ್ ವಿಂಟರ್ ಅವರು ಮಂಡೇಲಾ ಜೈಲಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಷಡ್ಯಂತ್ರ ರೂಪಿಸಿದ್ದರು. ಈ ವೇಳೆ ಅವರನ್ನು ಗುಂಡಿಟ್ಟು ಕೊಲ್ಲುವುದು ಯೋಜನೆಯಾಗಿತ್ತು. ಆದರೆ, ಇದನ್ನು ಬ್ರಿಟನ್ ಗುಪ್ತಚರ ದಳಗಳು ವಿಫಲಗೊಳಿಸಿದವು. ಈ ವೇಳೆ ನೆಲ್ಸನ್ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಹೆಚ್ಚಿತು.
ಆಫ್ರಿಕಾ ಸರ್ಕಾರ 1982ರಲ್ಲಿ ಮಂಡೇಲಾ ಹಾಗೂ ಇತರೆ ಎಎನ್ಸಿ ನಾಯಕರನ್ನು ಪೊಲ್ಸ್ಮೂರ್ ಜೈಲಿಗೆ ವರ್ಗಾಯಿಸಿತು. 1985ರಲ್ಲಿ ಅಧ್ಯಕ್ಷ ಪಿ.ಡಬ್ಲ್ಯು ಬೋಥಾ ಅವರು ಮಂಡೇಲಾ ಬಿಡುಗಡೆ ಪ್ರಸ್ತಾಪ ಮುಂದಿಟ್ಟರು. ಇದಕ್ಕೆ ಪ್ರತಿಯಾಗಿ ಸಶಸ್ತ್ರ ಹೋರಾಟಕ್ಕೆ ನೀಡಿದ್ದ ಬೆಂಬಲ ಕೈಬಿಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ, ಕೈದಿಗಳು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದಾದ ಬಳಿಕ ಸರ್ಕಾರ ಹಾಗೂ ಮಂಡೇಲಾ ನಡುವೆ ಅನೇಕ ಸುತ್ತಿನ ಮಾತುಕತೆ ನಡೆಯಿತು. ಆದರೆ, ಅದ್ಯಾವುದೂ ಫಲ ಕೊಡಲಿಲ್ಲ. ಬೋಥಾ ಬಳಿಕ ಅಧ್ಯಕ್ಷರಾದ ಫ್ರೆಡರಿಕ್ ವಿಲಿಯಂ ಡಿ ಕ್ಲರ್ಕ್ ವಿಶ್ವಾದ್ಯಂತ ಹೆಚ್ಚುತ್ತಿದ್ದ ಒತ್ತಡವನ್ನು ಮನಗಂಡ ಕ್ಲರ್ಕ್ ಅವರು ಫೆ.11, 1990ರಂದು ಮಂಡೇಲಾರನ್ನು ಜೈಲಿನಿಂದ ಬಿಡುಗಡೆ ಮಾಡಿದರು.
ಕೊನೆಗೂ ಸಿಕ್ಕಿತು ಸ್ವಾತಂತ್ರ್ಯ
ಇದಾದ ಬಳಿಕ ದೀರ್ಘ ಮಾತುಕತೆ ಬಳಿಕ ಏ.27, 1994ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ರೀತಿಯ ಚುನಾವಣೆ ನಡೆಯಿತು. ಕರಿಯರಿಗೂ ಮತದಾನದ ಹಕ್ಕು ಸಿಕ್ಕಿತು. ಮೊದಲ ಕರಿಯ ಅಧ್ಯಕ್ಷರಾಗಿ ಮಂಡೇಲಾ ಆಯ್ಕೆಯಾದರು.