ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಕಲಿ ಹೆಸರಿನಲ್ಲಿ ಅಸಲಿ ನೋಟಿಗೂ ಕುತ್ತು!

Mainashree
Updated On : 6 Dec 2013, 10:18 am

ಗದಗ: ರಾಜ್ಯಾದ್ಯಂತ ಖೋಟಾ ನೋಟುಗಳು ಸಾರ್ವಜನಿಕರನ್ನು ಜೀವ ಹಿಂಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಖೋಟಾ ನೋಟು ಪತ್ತೆ ಮಾಡಲು ಹೋಗಿ ಅಸಲಿ ನೋಟುಗಳನ್ನೇ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಳು ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಬ್ಯಾಂಕ್‌ಗಳನ್ನು ಹೊರತುಪಡಿಸಿ ರಾಜ್ಯದಲ್ಲಿಯೇ ನಿತ್ಯ ಅತ್ಯಂತ ಹೆಚ್ಚಿನ ಹಣದ ವಹಿವಾಟು ನಡೆಸುತ್ತಿರುವುದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ. ಹೀಗಾಗಿ ಖೋಟಾ ನೋಟುಗಳನ್ನು ಚಲಾವಣೆ ಮಾಡುವವರು ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಪ್ರಮುಖವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರಿಂದ ತುಂಬಿದ ಬಸ್‌ಗಳಲ್ಲಿ ಪ್ರಯಾಣಿಕರಂತೆ ಬಂದು, ಟಿಕೆಟ್ ಪಡೆಯಲು ನಕಲಿ ನೋಟುಗಳನ್ನು ನೀಡಿ ಚಲಾವಣೆ ಮಾಡುತ್ತಿದ್ದಾರೆ. ಇದರಿಂದ ನಿರ್ವಾಹಕರು ನಷ್ಟ ಅನುಭವಿಸುವಂತಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಸಂಸ್ಥೆ ಯಾವುದೇ ಕ್ರಮಕೈಗೊಳ್ಳದೆ, ಅದರ ಹೊಣೆಯನ್ನು ನಿರ್ವಾಹಕರ ಮೇಲೆ ಹೊರಿಸಿ ಕೈ ತೊಳೆದುಕೊಂಡಿದೆ.
ಅಸಲಿ ನೋಟು ಹಾಳು: ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೌಖಿಕ ಕಟ್ಟಾದೇಶವನ್ನು ಹೊರಡಿಸಿದೆ. ಸಂಜೆ ತಮ್ಮ ನೌಕರಿ ಮುಗಿಸಿ ಹಣವನ್ನು ಸಂಸ್ಥೆಗೆ ಭರಿಸುವ ಸಂದರ್ಭದಲ್ಲಿ 500 ಹಾಗೂ 1000 ಮುಖಬೆಲೆಯ ನೋಟುಗಳ ಮೇಲೆ ಕೆಲಸ ನಿರ್ವಹಿಸಿದ ನಿರ್ವಾಹಕರ ನಂಬರ್ ಬರೆದುಕೊಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದಾಗಿ ಪ್ರತಿದಿನವೂ ನಿರ್ವಾಹಕರು ತಮ್ಮ ಬಳಿ ಬರುವ ಎಲ್ಲ ನೋಟಿನ ಮೇಲೆಯೂ ತಮ್ಮ ನಂಬರ್‌ಗಳನ್ನು ಬರೆಯುವುದರಿಂದ ಅಸಲಿ ನೋಟುಗಳು ಹಾಳಾಗುತ್ತಿವೆ.
ಆದೇಶ ಉಲ್ಲಂಘನೆ: ಆರ್‌ಬಿಐನ ವಿನಂತಿ ಮೇರೆಗೆ ಸುಪ್ರೀಂ ಕೋರ್ಟ್ ನೋಟಿನ ಮೇಲೆ ಬರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಬ್ಯಾಂಕ್ ಅಧಿಕಾರಿಗಳು ಅವಶ್ಯವಿದ್ದರೆ ನೋಟಿನ ಮೇಲೆ ಪೆನ್ಸಿಲ್‌ನಿಂದ ಬರೆಯಬೇಕು ಎಂದು ಸೂಚಿಸಿದೆ. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದ್ದಾರೆ.
ಖೋಟಾ ನೋಟು ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಮ್ಮ ಹಿರಿಯ ಅಧಿಕಾರಿಗಳೇ ನೀವು ಹಣವನ್ನು ಭರಿಸುವ ಸಂದರ್ಭದಲ್ಲಿ ನೋಟಿನ ಮೇಲೆ ನಿಮ್ಮ ನಂಬರ್ ಹಾಕುವಂತೆ ಸೂಚಿಸಿದ್ದರು. ನಾವು ಪೆನ್ಸಿಲ್‌ನಿಂದ ಹಾಕಿದರೂ ಅದು ಅಳುಕಿ ಹೋದರೆ, ನಾವ್ಯಾರನ್ನು ಕೇಳಬೇಕು? ಪೆನ್ನಿನಿಂದಲೇ ಬರೆಯಿರಿ ಎಂದು ಸೂಚಿಸುತ್ತಾರೆ. ಹಾಗಾಗಿ ಬರೆಯುತ್ತೇವೆ. ಖೋಟಾ ನೋಟ್ ಬಂದಲ್ಲಿ ಅದರ ಹೊರೆ ನಮ್ಮ ಮೇಲೆಯೇ ಹಾಕಲಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸಿದ ಕೆಎಸ್‌ಆರ್‌ಟಿ ನೌಕರರು.

2014ರಿಂದ ಗೀಚಿದ ನೋಟಿಗೆ ಬೆಲೆ ಇಲ್ಲ!
ಯಾವುದೇ ಅಂಕಿ, ಸಂಖ್ಯೆ, ಚಿತ್ರ, ಹೆಸರನ್ನು ಪೆನ್ನು ಹಾಗೂ ಇತರೆ ಶಾಹಿಯಿಂದ ಬರೆದ ನೋಟುಗಳನ್ನು 2014ರ ಜನವರಿ 1ರಿಂದ ರದ್ದು ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ಲೀನ್ ನೋಟ್ ಪಾಲಿಸಿಯನ್ನು ದೇಶಾದ್ಯಂತ ಜಾರಿಗೊಳಿಸಲು ನಿರ್ಧರಿಸಿದೆ. ಇಂಥ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನೋಟುಗಳ ಮೇಲೆಯೇ ಬರೆದು ಕೊಡುವಂತೆ ಸೂಚಿಸುತ್ತಿರುವುದು ಮಾತ್ರ ವಿಪರ್ಯಾಸ.

ಪ್ರತಿದಿನ 15 ಕೋಟಿಗೂ ಅಧಿಕ ವ್ಯವಹಾರ!
ಇದು ಕೇವಲ ಒಂದು ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ (ಬಿಎಂಟಿಸಿ ಹೊರತುಪಡಿಸಿ) ಈ ಮೌಖಿಕ ಆದೇಶ ಪಾಲನೆಯಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ವಿಭಾಗಗಳು ಸೇರಿ ಪ್ರತಿದಿನ 15 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದ್ದು, ಸಂಸ್ಥೆಗೆ ಬರುತ್ತಿರುವ ಪ್ರತಿಯೊಂದು 500 ಹಾಗೂ 1000 ಮುಖಬೆಲೆ ನೋಟಿನ ಮೇಲೆ ನಂಬರ್ ಬರೆಯಲಾಗುತ್ತಿದೆ. ಇದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸದೇ ಇದ್ದಲ್ಲಿ ಖೋಟಾ ನೋಟಿನ ಹೆಸರಿನಲ್ಲಿ ಅಸಲಿ ನೋಟೂ ಹಾಳಾಗುವುದು ಹೆಚ್ಚುತ್ತದೆ.

ಖೋಟಾ ನೋಟು ಹೆಚ್ಚಾಗಿ ಚಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ನಷ್ಟವಾಗುತ್ತಿತ್ತು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಗೆ ಹಣ ಭರಿಸುವ ಸಂದರ್ಭದಲ್ಲಿ ಆ ನಿರ್ವಾಹಕರ ನಂಬರ್ ಪಡೆಯಲು ಸೂಚಿಸಲಾಗಿತ್ತು. ಆದರೆ, ನೋಟುಗಳ ಮೇಲೆಯೇ ಅದನ್ನು ಪಡೆಯುತ್ತಿರುವ ಬಗ್ಗೆ ತಕ್ಷಣವೇ ಪರಿಶೀಲನೆ ಮಾಡಿ ಸ್ಥಗಿತಗೊಳಿಸಲು ಸೂಚಿಸುತ್ತೇನೆ.
-ಬಿ.ಎನ್. ಗದ್ದಿಕೇರಿ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement