ಮಂಡೇಲಾ ಸ್ಮರಣೆಯೊಂದಿಗೆ ಕಲಾಪಕ್ಕೆ ಕೊನೆ
ಸುವರ್ಣ ವಿಧಾನಸೌಧ: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ವಿಧಾನ ಮಂಡಲದ ಉಭಯ ಸದನ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಶುಕ್ರವಾರ ಮುಂದೂಡಲಾಯಿತು.
ಮಂಡೇಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರೆ, ವಿಧಾನ ಪರಿಷತ್ ಕಲಾಪವನ್ನು ಭೋಜನ ವಿರಾಮದವರೆಗೆ ನಡೆಸಿ ಬಳಿಕ ಅನಿರ್ದಿಷ್ಟ ಅವಧಿಗೆ ಮುಂದಕ್ಕೆ ಹಾಕಲಾಯಿತು.
ವಿಧಾನಸಭೆಯ ಕಲಾಪ ಪಟ್ಟಿಯಲ್ಲಿ ಹಲವು ವಿಷಯಗಳಿದ್ದವಾದರೂ ನೆಲ್ಸನ್ ಮಂಡೇಲಾ ಅವರ ನಿಧನದ ಹಿನ್ನೆಲೆಯಲ್ಲಿ ಆರಂಭದಲ್ಲಿಯೇ ಸಂತಾಪ ಸೂಚಿಸಿ ನಾಯಕರು ಮಾತನಾಡಿದರು. ನಂತರ ಒಂದು ನಿಮಿಷ ಮೌನ ಆಚರಿಸಿ, ಸದನವನ್ನು ಅರ್ಧ ಗಂಟೆ ಮುಂದೂಡಲಾಯಿತು. ನೆಲ್ಸನ್ ಮಂಡೇಲಾ ಅವರ ನಿಧನದ ಹಿನ್ನೆಲೆಯಲ್ಲಿ ಲೋಕಸಭೆ ಅಧಿವೇಶನಕ್ಕೆ ರಜೆ ನೀಡಿರುವಾಗ ಇಲ್ಲಿ ಏನು ಮಾಡುವುದು ಮುಂತಾದ ಚರ್ಚೆ ಮಾಡುವಷ್ಟರಲ್ಲಿ ಮಧ್ಯಾಹ್ನ 1.30. ಆಗಿತ್ತು. ಬಳಿಕ ಸದನ ಸಮಾವೇಶಗೊಂಡು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯಗೊಳಿಸಿದರು.
ಪರಿಷತ್ತಿನಲ್ಲಿ ಏನಾಯ್ತು?: ವಿಧಾನ ಪರಿಷತ್ತಿನಲ್ಲಿ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ನೆಲ್ಸನ್ ಮಂಡೇಲಾ ನಿಧನರಾದ ಹಿನ್ನೆಲೆಯಲ್ಲಿ ಸಂತಾಪ ಸೂಚಕ ಪ್ರಸ್ತಾವ ಮಂಡಿಸಿದರು.
ಅವರ ಸಾಧನೆ, ಹಿರಿಮೆ, ಗರಿಮೆ ವಿವರಿಸಿದ ಅವರು ವರ್ಣಭೇದ ನೀತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಅವರು 27 ವರ್ಷಗಳ ಕಾಲ ಸೆರೆಮನೆವಾಸ ಅನುಭವಿ ಸಬೇಕಾಯಿತು.
ಗಾಂಧೀಜಿ ತತ್ವಾದರ್ಶಕ್ಕೆ ಮಾರುಹೋದ ಅವರು ಅವರನ್ನು ಮಹಾ ಆತ್ಮ ಎಂದು ಕರೆದಿದ್ದರು. ಅವರ ನಿಧನದಿಂದ ಒಬ್ಬ ಶ್ರೇಷ್ಠ, ಹೋರಾಟಗಾರ, ರಾಜಕೀಯ ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ ಎಂದರು. ಭಾರತ ರತ್ನ, ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿ ಅವರು ಎಂದು ಗುಣಗಾನ ಮಾಡಿದರು. ಸಭಾನಾಯಕ ಎಸ್.ಆರ್. ಪಾಟೀಲ, ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ, ಎಂ.ಸಿ. ನಾಣಯ್ಯ ಅವರೂ ಸಹ ಮಂಡೇಲಾ ಬಗ್ಗೆ ಮಾತನಾಡಿದರು.