ಮಹಾತ್ಮ ಮಂಡೇಲಾ ಯುಗಾಂತ್ಯ
ವಿಶ್ವಕಂಡ ಮತ್ತೊಬ್ಬ ಮಹಾಪುರುಷನ ಯುಗಾಂತ್ಯವಾಗಿದೆ. ಗಾಂಧಿಯುಗದ ಕೊನೆಯ ಕೊಂಡಿಯೊಂದು ಕಳಚಿ...
ಜೊಹಾನ್ನೆಸ್‌ಬರ್ಗ್: ವಿಶ್ವಕಂಡ ಮತ್ತೊಬ್ಬ ಮಹಾಪುರುಷನ ಯುಗಾಂತ್ಯವಾಗಿದೆ. ಗಾಂಧಿಯುಗದ ಕೊನೆಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ಹೌದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ, ವರ್ಣಭೇದ ನೀತಿಗೆ ಇತಿಶ್ರೀ ಹಾಡಿದ ಮಹಾನ್ ನಾಯಕ, ದಕ್ಷಿಣ ಆಫ್ರಿಕಾದ ಮೊದಲ ಕರಿಯ ಅಧ್ಯಕ್ಷ ನೆಲ್ಸನ್ ಮಂಡೇಲಾ(95) ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಕರಿಯರಿಗೂ ಬಿಳಿಯರಂತೆ ಬದುಕುವ ಹಕ್ಕು ತಂದುಕೊಟ್ಟ ಈ ಮಹಾನ್ ಹೋರಾಟಗಾರನ ಸಾವಿನಿಂದಾಗಿ ಇಡೀ ಆಫ್ರಿಕಾ ಪಿತೃಶೋಕದಲ್ಲಿ ಮುಳುಗಿದೆ. ಮಂಡೇಲಾ ಸಾವನ್ನು ಅಧಿಕೃತವಾಗಿ ಘೋಷಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್ ಜುಮಾ, ರಾಷ್ಟ್ರದಾದ್ಯಂತ 12 ದಿನಗಳ ಶೋಕಾಚರಣೆ ಘೋಷಿಸಿದ್ದಾರೆ.
5 ದಿನಗಳ ಶೋಕಾಚರಣೆ
ದಕ್ಷಿಣ ಆಫ್ರಿಕದ ಮಾಜಿ ರಾಷ್ಟ್ರಪತಿ ಡಾ.ನೆಲ್ಸನ್ ಮಂಡೇಲಾ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಐದು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಈ ಬಗ್ಗೆ ಶುಕ್ರವಾರ ನಡೆದ ವಿಶೇಷ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಮಂಡೇಲಾ ನಿಧನದ ಬಗ್ಗೆ ಸಂತಾಪ ಸೂಚಿಸುವ ನಿರ್ಣಯ ಅಂಗೀಕರಿಸಲಾಯಿತು. ಡಿ.10ರ ವರೆಗಿನ ಅಧಿಕೃತ ಶೋಕಾಚರಣೆ ವೇಳೆ ಕೇಂದ್ರ ಸರ್ಕಾರದ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ. ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ.
ಇತಿಹಾಸದಲ್ಲೇ ಅತಿ ದೊಡ್ಡ ಅಂತ್ಯಕ್ರಿಯೆ!
ಆಫ್ರಿಕಾದ ಮಹಾನ್ ನಾಯಕನ ಅಂತ್ಯಕ್ರಿಯೆ ಡಿ.15ರಂದು ನಡೆಯುವ ಸಾಧ್ಯತೆಯಿದೆ. ಅಲ್ಲಿಯ ವರೆಗೆ ಜೊಹಾನ್ಸ್‌ಬರ್ಗ್‌ನ ಫುಟ್ಬಾಲ್ ಮೈದಾನದಲ್ಲಿ ಮಂಡೇಲಾ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲು ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ವಿಶ್ವದ ಪ್ರಮುಖ ಮುಖಂಡರು, ರಾಜರು, ಗಣ್ಯರು ಮಂಡೇಲಾ ಅಂತಿಮ ದರ್ಶನ ಪಡೆಯಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಜಾರ್ಜ್‌ಬುಷ್ ಕುಟುಂಬ ಸಮೇತರಾಗಿ ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ. 2005ರಲ್ಲಿ ಪೋಪ್ ಜಾನ್ ಪಾಲ್-2 ಅವರ ಅಂತ್ಯಕ್ರಿಯೆ ವೇಳೆ 20 ಲಕ್ಷ ಮಂದಿ ಪಾಲ್ಗೊಂಡಿದ್ದರು, ಐವರು ರಾಜರು ಸೇರಿ 70 ಅಧ್ಯಕ್ಷರು ಹಾಜರಿದ್ದರು. ಇದು ದಾಖಲೆಯಾಗಿತ್ತು. ಮಂಡೇಲಾ ಅವರ ಅಂತ್ಯಕ್ರಿಯೆ ಈ ದಾಖಲೆಯನ್ನು ಮೀರುವ ನಿರೀಕ್ಷೆ ಇದೆ. ಮಂಡೇಲಾರ ಇಚ್ಛೆಯಂತೆ ಅವರ ಅಂತ್ಯಕ್ರಿಯೆ ಹುಟ್ಟೂರಾದ ಕ್ಯುನೋದಲ್ಲಿ ನಡೆಯಲಿದೆ.
ಮಂಡೇಲಾ ಅವರು ಈ ಕಾಲಕ್ಕಷ್ಟೇ ಅಲ್ಲ, ಸರ್ವಕಾಲಕ್ಕೂ ಸಲ್ಲುವವರು. ಅವರ ಸಾವಿನಿಂದ ನಾವು ವಿಶ್ವದಲ್ಲೇ ಅತಿ ಪ್ರಭಾವಿ, ಧೈರ್ಯಶಾಲಿ ಮತ್ತು ಉತ್ತಮ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ
ಮಂಡೇಲಾ ಅವರೊಬ್ಬ ಮುತ್ಸದ್ದಿ, ವಿಶ್ವ ನಾಯಕ, ಮಾನವತಾವಾದದ ಪ್ರೇರಕಶಕ್ತಿ. ಅವರೊಬ್ಬ ಭಾರತದ ಆತ್ಮೀಯ ಗೆಳೆಯ. ಎರಡೂ ದೇಶಗಳ ನಡುವೆ ಬಾಂಧವ್ಯ ಬೆಳೆಸಲು ಅವರು ನೀಡಿದ ಕೊಡುಗೆ ಸ್ಮರಣೀಯ.
- ಪ್ರಣಬ್ ಮುಖರ್ಜಿ
ದಕ್ಷಿಣ ಆಫ್ರಿಕಾ ಮಹಾನ್ ಪುತ್ರನೊಬ್ಬನನ್ನು ಕಳೆದುಕೊಂಡಿದೆ. ದೇಶದ ಜನರು ತಂದೆಯನ್ನು ಕಳೆದುಕೊಂಡಿದ್ದಾರೆ.
-ಜೆಕಬ್ ಜುಮಾ, ದಕ್ಷಿಣ ಆಫ್ರಿಕಾ ಅಧ್ಯಕ್ಷ