ಸದನದಲ್ಲಿ 'ಪ್ರದಕ್ಷಿಣ' ಆಫ್ರಿಕಾ
ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ 'ಕನ್ನಡಪ್ರಭ'ದಲ್ಲಿ ಪ್ರಧಾನ ಸಂಪಾದಕ ವಿಶೇಶ್ವರ್ ಭಟ್ ಅವರ 'ಪ್ರದಕ್ಷಿಣ ಆಫ್ರಿಕಾ' ಅಂಕಣದ ವಿಚಾರ ಪ್ರಸ್ತಾಪವಾಯಿತು. ಬಿಜೆಪಿಯ ನಾಯಕ ಜಗದೀಶ ಶೆಟ್ಟರ್ ಅವರು ಮಂಡೇಲಾ ಅವರ ನಿಧನಕ್ಕೆ ಸಂತಾಪ ಸೂಚಿಸುವಾಗ ವಿಶ್ವೇಶ್ವರ ಭಟ್ ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ಒದಗಿಸಿದ್ದರು. ಅದರಲ್ಲಿ ಅವರು ನೆಲ್ಸನ್ ಮಂಡೇಲಾ ಅವರನ್ನು ಇರಿಸಲಾಗಿದ್ದ ಜೈಲಿನ ಕೊಠಡಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಅದನ್ನು ಓದಿದಾಗ ನೆಲ್ಸನ್ ಮಂಡೇಲಾ ಅವರು ಯಾವ ಸ್ಥಿತಿಯಲ್ಲಿ ಅಷ್ಟು ವರ್ಷ ಜೈಲುವಾಸ ಅನುಭವಿಸಿದ್ದರು ಎಂಬುದು ಅರಿವಿಗೆ ಬಂತು ಎಂದರು.
ವಿಧಾನಸಭೆಯಲ್ಲಿ ಮಂಡೇಲಾ ಕುರಿತು ಹೇಳಿದ್ದು
ಅವರೊಬ್ಬ ವಿಶ್ವಮಾನವತಾವಾದಿ. ಮಾಹತ್ಮಾ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ನಡುವೆ ಸಾಕಷ್ಟು ಸಾಮ್ಯವಿದೆ. ಶೋಷಿತರ ಪರ ಧ್ವನಿ ಎತ್ತಿದ ಅಂಬೇಡ್ಕರ್, ನೆಲ್ಸನ್ ಮಂಡೇಲಾ ಒಂದೇ ದಿನ ಮೃತಪಟ್ಟಿದ್ದು ವಿಶೇಷ.
- ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಅವರೊಬ್ಬ ಮಾನವತಾವಾದಿ. ಮನುಕುಲದ ಶ್ರೇಯೋಭಿಲಾಷಿಗಳು. ಇದೇ ಕಾರಣಕ್ಕೆ ಅವರು ಇತಿಹಾಸದಲ್ಲಿ ಚಿರಸ್ಮರಣೀಯರಾಗುತ್ತಾರೆ. ಇತಿಹಾಸ ಪುರುಷರಾಗುವ ಅವಕಾಶ ಎಲ್ಲರಿಗೂ ಲಭ್ಯವಾಗುವುದಿಲ್ಲ.
- ರಮೇಶ್‌ಕುಮಾರ್, ಮಾಜಿ ಸ್ಪೀಕರ್
ಅವರ ದೇಹ ನಮ್ಮಿಂದ ದೂರವಾದರೂ, ಅವರು ಕೊಟ್ಟ ಧ್ಯೇಯ ನಮ್ಮೊಂದಿಗಿರುತ್ತೆ. ಅವರ ಶಾಂತಿಯ ಸಂದೇಶ ವಿಶ್ವದಲ್ಲಿ ಅಶಾಂತಿ ಹುಟ್ಟುಹಾಕುವವರ ಕಣ್ಣು ತೆರೆಸುವಂತಾಗಲಿ.
- ಸಿ.ಟಿ. ರವಿ, ಶಾಸಕ
ಕೆಲವರು ಬದುಕಿದ್ದರೂ ಸತ್ತಂತಿರುತ್ತಾರೆ. ಆದರೆ ನೆಲ್ಸನ್ ಮಂಡೇಲಾ, ಮಹಾತ್ಮಾ ಗಾಂಧಿ ಅವರಂಥ ವ್ಯಕ್ತಿಗಳು ಸತ್ತನಂತರವೂ ನಮ್ಮೊಂದಿಗಿರುತ್ತಾರೆ.
- ಪುಟ್ಟಣ್ಣಯ್ಯ, ರೈತ ಮುಖಂಡ
ಸಾರ್ಥಕ ಜೀವನ ನಡೆಸಿದ ಅವರು, ತುಳಿತಕ್ಕೆ ಒಳಗಾದವರ ಧ್ವನಿಯಾಗಿದ್ದರು. ಅವರ ಜೀವನ ಯುವಕರಿಗೆ ಸ್ಫೂರ್ತಿ.
- ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ
ಹೋರಾಟವನ್ನೇ ಜೀವನದ ಉಸಿರಾಗಿಸಿಕೊಂಡಿದ್ದ ಅವರು, ಯುವ ಪೀಳಿಗೆಗೆ ಮಾದರಿಯಾಗಿ ಜೀವನ ನಡೆಸಿದವರು.
- ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಅವರು ವ್ಯಕ್ತಿಯಲ್ಲ, ವಿಶ್ವದ ಶಕ್ತಿಯಾಗಿದ್ದರು. ಶಾಂತಿಯ ಮೂಲಕ ಶೋಷಣೆ, ದಬ್ಬಾಳಿಕೆ ವಿರುದ್ಧ ಅವಿರತ ಹೋರಾಟ ಮಾಡಿದವರು. ಭಾರತದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರ ಜೀವನ ಮೌಲ್ಯಗಳು ನಮಗೆ ಮಾದರಿ.
- ಕೃಷ್ಣ ಬೈರೇಗೌಡ, ಕೃಷಿ ಸಚಿವ