ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುಬ್ರಹ್ಮಣ್ಯ: 200ಕ್ಕೂ ಹೆಚ್ಚು ಭಕ್ತರಿಂದ ಮಡೆಸ್ನಾನ

Mainashree
Updated On : 7 Dec 2013, 12:01 pm

ಕ.ಪ್ರ. ವಾರ್ತೆ, ಸುಬ್ರಹ್ಮಣ, ಡಿ.6-
ಪ್ರಸಿದ್ಧ ನಾಗಾರಾಧನೆಯ ಮೂಲ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೆಯ ಆರಂಭದ ಚೌತಿ ದಿನವಾದ ಶುಕ್ರವಾರ ಮಧ್ಯಾಹ್ನ ಹಲವು ಭಕ್ತರು ಪೊಲೀಸರ ಬಿಗಿ ಬಂದೋಬಸ್ತ್ ನಡುವೆಯೂ ಮಡೆಸ್ನಾನ ಸೇವೆ ನಡೆಸಿದರು.
ದೇವಳದ ಹೊರಾಂಗಣದಲ್ಲಿ ಮಹಾಪೂಜೆ ಬಳಿಕ ಮಧ್ಯಾಹ್ನ ಬ್ರಾಹ್ಮಣರಿಗೆ ನೈವೇದ್ಯ ಪ್ರಸಾದ ನೀಡಲಾಯಿತು. ಬ್ರಾಹ್ಮಣರ ಭೋಜನದ ಬಳಿಕ ಸುಮಾರು 200ಕ್ಕೂ ಹೆಚ್ಚು ಭಕ್ತರು ಎಂಜಲೆಲೆ ಮೇಲೆ ಉರುಳುವ ಮೂಲಕ ಮಡೆಸ್ನಾನ ಹರಕೆ ಸಲ್ಲಿಸಿದರು.
ಮಡೆಸ್ನಾನ ಸೇವೆ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪ್ರಕರಣ ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಆದೇಶವಿದೆ. ಇದರಿಂದ ದೇವಳದಲ್ಲಿ ನಡೆಯುವ ಮಡೆಸ್ನಾನ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪದ್ಧತಿ ನಿಷೇಧಿಸಲು ಆಗ್ರಹ:  ಕುಕ್ಕೆ ಕ್ಷೇತ್ರದಲ್ಲಿ ನಡೆಯುವ ಮಡೆಸ್ನಾನ ಅನಿಷ್ಟ ಪದ್ಧತಿ ಎಂಬ ನೆಲೆಯಲ್ಲಿ ಇದನ್ನು ನಿಷೇಧಿಸುವಂತೆ ಕಳೆದೆರಡು ವರ್ಷಗಳಿಂದ ಒಂದು ವರ್ಗದ ಜನ ಆಗ್ರಹಿಸುತ್ತಲೇ ಇದ್ದಾರೆ. ಇಲ್ಲಿ ನಡೆಯುವ ಮಡೆಮಡ ಸ್ನಾನ ಸೇವೆಯನ್ನು ಭಕ್ತರು ಸ್ವ ಇಚ್ಛೆಯಿಂದ- ಇಷ್ಟಾನುಸಾರ ನಡೆಸುತ್ತಾ ಬಂದಿದ್ದು, ಪೂರ್ವಾನುಸಾರ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಇದಾಗಿದೆ.
ಅವರವರ ನಂಬಿಕೆ ಮೇಲೆ ನಡೆಯುವ ಮಡೆಸ್ನಾನ ನಡೆಸಲು ಯಾರ ಒತ್ತಾಯವೂ ಇಲ್ಲ. ಹಾಗಾಗಿ ನಂಬಿಕೆ ಮೇಲೆ ನಡೆಯುವ ಈ ಸೇವೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ವಾದ ಇನ್ನೊಂದು ವರ್ಗದಾಗಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಈ ಪದ್ಧತಿಯನ್ನು ನಿಷೇಧಿಸುವಂತೆ ಪ್ರತಿಭಟನೆ ನಡೆಸಲು ಬಂದ ಸಂಘಟನೆಯೊಂದರ ಮುಖಂಡರಿಗೆ ಹಲ್ಲೆ ನಡೆಸಿ, ಅಹಿತಕರ ಘಟನೆ ನಡೆದು ರಾಜ್ಯದ್ಯಾಂತ ಪರ ವಿರೋಧ ಪ್ರತಿಭಟನೆ ನಡೆದು ತೀವ್ರ ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿತ್ತು.
ಅಂತಿಮವಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಲೇರಿ ಯಥಾಸ್ಥಿತಿ ಕಾಪಾಡಲು ಆದೇಶ ಬಂದ ಹಿನ್ನೆಲೆಯಲ್ಲಿ ಪೂರ್ವ ಸಂಪ್ರದಾಯದಂತೆ ಈ ಭಾರಿಯೂ ಮಡೆಸ್ನಾನ ಸೇವೆ ಯಾವ ಅಡೆ, ತಡೆ ಇಲ್ಲದೆ ನಡೆಯಿತು. ಮಡೆಸ್ನಾನ ಸೇವೆಯು ಶನಿವಾರ ಪಂಚಮಿ ಹಾಗೂ ಷಷ್ಠಿ ದಿನಗಳಂದೂ ನಡೆಯಲಿದ್ದು, ಅಸಂಖ್ಯಾತ ಭಕ್ತರು ಈ ಸೇವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

'ಈ ಪದ್ಧತಿಗೆನನ್ನ ಬೆಂಬಲವಿಲ್ಲ'
ಧಾರವಾಡ: 
ಮಡೆಸ್ನಾನ ವಿಚಾರ ಕುರಿತು ನ್ಯಾಯಾಲಯ ತಡೆಯಾಜ್ಞೆ ನೀಡಿ ಒಂದು ವರ್ಷವಾದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರ ಮಡೆಸ್ನಾನ ಇದೆ ಎನ್ನುವಾಗ ಹೋರಾಟಕ್ಕೆ ಮುಂದಾಗಿರುವ ಹೋರಾಟಗಾರರು, ಬುದ್ಧಿ ಜೀವಿಗಳೂ ಒಂದು ವರ್ಷ ಸುಮ್ಮನೆ ಕುಳಿತುಕೊಂಡಿರುವುದು ಅದೆಷ್ಟು ಸರಿ ಎಂದು ಪ್ರಶ್ನಿಸಿದರು. ಮಡೆಸ್ನಾನಕ್ಕೆ ಪೇಜಾವರ ಶ್ರೀಗಳ ಬೆಂಬಲವಿದೆ ಎಂಬ ಆರೋಪಗಳಿವೆ. ಆದರೆ ತಾವು ಎಂದಿಗೂ ಮಡೆಸ್ನಾನ ಬೆಂಬಲಿಸಿಲ್ಲ. ಈ ಕುರಿತು ಸರ್ಕಾರವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement