ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹತ್ತು ವರ್ಷದ ಹಿಂದೆಯೇ ಅದನ್ನು ಟ್ರ್ಯಾಪ್ ಮಾಡಿದ್ದೆ

Mainashree
Updated On : 7 Dec 2013, 12:01 pm

ಒಂದು ವಾರದಲ್ಲಿ ನಾಲ್ವರನ್ನು ಬೇಟೆಯಾಡಿ ಭಯ ಸೃಷ್ಟಿಸಿದ್ದ ನರಭಕ್ಷಕ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಸೆರೆ ಹಿಡಿದಿದ್ದಾರೆ. ನ.27ರಿಂದ ಡಿ.4ವರೆಗೆ ಮೈಸೂರು ಜಿಲ್ಲೆ ಚಿಕ್ಕಬರಗಿ ಗ್ರಾಮದ ಸುತ್ತಮುತ್ತ ಆತಂಕ ಸೃಷ್ಟಿಸಿದ್ದ ಈ ಭಯಾನಕ ಹುಲಿಯ ಹಿಂದೆ ಒಂದು ರೋಚಕವಾದ ಜೀವ ವಿಜ್ಞಾನದ ಇತಿಹಾಸವೇ ಇದೆ.
2004, ಮಾರ್ಚ್ 30. ಮೊಳೆಯೂರು ವಲಯದ ದೊಡ್ಡ ದಾಸನಕಟ್ಟೆ ರಸ್ತೆ ಬಳಿ ಒಂದು ಹುಲಿ ಕಾಣಿಸಿಕೊಂಡಿತ್ತು. ಕ್ಯಾಮೆರಾದಲ್ಲಿ ಟ್ರ್ಯಾಪ್ ಆಗಿದ್ದ ಚಿತ್ರಗಳನ್ನು ಗಮನಿಸಿದಾಗ ಅದರ ಮೈ ಕಟ್ಟು, ಹಾವಭಾವದಿಂದ ಆ ಹುಲಿಗೆ ಸುಮಾರು 3 ವರ್ಷ ಇದ್ದಿರಬಹುದು ಎಂದು ಅಂದಾಜಿಸಲಾಗಿತ್ತು. ಅಂದು ಪತ್ತೆಯಾದ ಹುಲಿ ಗುರುತಿಗಾಗಿ ಬಿಪಿಟಿ-117 ಎಂದು ಹೆಸರಿಡಲಾಗಿತ್ತು. ಅದೇ ಹುಲಿಯ ಚಲವಲನದ ಮೇಲೆ ಗಮನ ಕೇಂದ್ರೀಕರಿಸಿ 2005, 2008, 2010, ಹಾಗೂ 2013ರಲ್ಲಿ ಒಟ್ಟು ಹತ್ತು ಬಾರಿ ಕ್ಯಾಮೆರಾದಲ್ಲಿ ಟ್ರ್ಯಾಪ್ ಮಾಡಲಾಗಿತ್ತು. 2013, ಮೇ 11ರಂದು ಕೊನೆಯ ಬಾರಿಗೆ ಆ ಹುಲಿಯನ್ನು ಗುಂಡ್ರೆ ರಸ್ತೆಯ ಸೊಳ್ಳೆಗುಂಡಿ ರಸ್ತೆಯಲ್ಲಿ ಟ್ರ್ಯಾಪ್ ಮಾಡಲಾಯಿತು. ಇದರಲ್ಲಿ ಸೆರೆ ಸಿಕ್ಕ ಎಲ್ಲ ಚಿತ್ರಗಳನ್ನೂ ಗಮನಿಸಿದರೆ ದೊರೆತ ಉತ್ತರ ನಾಲ್ವರನ್ನು ಬಲಿ ಪಡೆದು ಈಗ ಸಿಕ್ಕಿ ಬಿದ್ದಿರುವ ನರಭಕ್ಷಕ ಹುಲಿಯೇ. ಅರ್ಥಾತ್ ಬಿಪಿಟಿ-117!
ಕಳೆದೆರಡು ದಶಕಗಳಿಂದ ಹುಲಿಗಳ ಜಾಡು ಹಿಡಿದು ಗಣತಿ ನಡೆಸುತ್ತಿರುವ ನನ್ನ ನೇತೃತ್ವದ ವನ್ಯಜೀವಿ ಸಂರಕ್ಷಣಾ ಸಂಸ್ಥೆ (ವೈಲ್ಡ್‌ಲೈಫ್ ಕನ್ಸರ್ವೆಷನ್ ಸೊಸೈಟಿ) ನರಭಕ್ಷಕ ಹುಲಿಯನ್ನು ಮರಿ ಇರುವಾಗಲೇ ಅಂದರೆ 2004, ಮಾ.30ರಂದೇ ಪತ್ತೆ ಹಚ್ಚಿತ್ತು. ಇದೀಗ ನರಭಕ್ಷಕವಾಗಿ ಬೇಟೆಯಾಡುತ್ತಿದೆ. ಸುಮಾರು 33 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಹುಲಿಯನ್ನು ಟ್ರ್ಯಾಪ್ ಮಾಡಲಾಗಿತ್ತು. ಈಗ ದಾಳಿ ಆಗಿರುವ ಚಿಕ್ಕಬರಗಿ ಪ್ರದೇಶ ಈ ನರಭಕ್ಷಕ ಹುಲಿ ಸಂಚರಿಸುತ್ತಿದ್ದ ಕಟ್ಟ ಕಡೆಯ ಗಡಿ. ತನ್ನ ಮೂಲ ಸ್ಥಾನದಿಂದ ಈ ಹುಲಿಯನ್ನು 2013, ಮೇನಲ್ಲೇ ಬಲಶಾಲಿಯಾದ ಇತರೆ ವನ್ಯಪ್ರಾಣಿಗಳು ಒಕ್ಕಲೆಬ್ಬಿಸಿವೆ. ಈಗ ಇದಕ್ಕೆ ಸುಮಾರು 12 ವರ್ಷ ಇರಬಹುದು. ಪೌಷ್ಟಿಕಾಂಶ ಕೊರತೆಯಿಂದ ಸೊರಗಿದ್ದು, ಕೋರೆ ಹಲ್ಲೂ ಮುರಿದಿದೆ. ಅಲ್ಲದೇ ದೇಹದ ಇತರೆ ಭಾಗಗಳಲ್ಲೂ ಸಣ್ಣಪುಟ್ಟ ಗಾಯಗಳಾಗಿವೆ. ಪ್ರತಿಸ್ಪರ್ಧಿಗಳ ವಿರುದ್ಧ ಸೆಣಸಲಾಗದೆ ಪ್ರಾಣ ಉಳಿಸಿಕೊಳ್ಳಲು ಚಿಕ್ಕಬರಗಿ ಸುತ್ತಮುತ್ತಲಿನ ಕಾಡಿನತ್ತ ಬಂದಿದೆ. ಆಹಾರ ಅರಸಿ ಬಂದ ಹುಲಿ ನರಭಕ್ಷಕವಾಗಿ ನಾಲ್ವರನ್ನು ಬೇಟೆಯಾಡಿದೆ. ಸುಮಾರು 150 ಹುಲಿಗಳಿರುವ ವ್ಯಾಪ್ತಿ ಪ್ರದೇಶದಲ್ಲಿ ಮಾನವನ ಬೇಟೆಯಾಡಿದ್ದು ತೀರಾ ವಿರಳ. ಈ ಹಿಂದೆ 2006ರಲ್ಲಿ ನಾಗರಹೊಳೆ ಸುತ್ತಮುತ್ತ ಟ್ರ್ಯಾಪ್ ಮಾಡಿ ಗುರುತಿಸಿದ್ದ 13 ವರ್ಷದ ಹೆಣ್ಣು ಹುಲಿ (ಎನ್‌ಎಚ್‌ಟಿ- 111) ಜಾನುವಾರು, ನಾಯಿ ಹಾಗೂ ಇಬ್ಬರು ಮನುಷ್ಯರನ್ನು ಬೇಟೆಯಾಡಿತ್ತು. ಅದನ್ನು ಹೊರತುಪಡಿಸಿದರೆ ಈಗ ಸೆರೆ ಸಿಕ್ಕಿರುವ ಬಿಪಿಟಿ-117 ನರಭಕ್ಷಕವಾಗಿ ನಾಲ್ವರನ್ನು ಬಲಿ ಪಡೆದಿದೆ. ಹುಲಿಗಳು ಮಾನವನ ಬೇಟೆಯಾಡುವುದು ತೀರಾ ವಿರಳ. ಎಲ್ಲ ಹುಲಿಗಳೂ ಆಕ್ರಮಣಕಾರಿಯಾಗಿರುತ್ತವೆ. ಹಾಗಂತ ಮಾನವನನ್ನೇ ಗುರಿಯಾಗಿಟ್ಟುಕೊಂಡು ಬೇಟೆಯಾಡುವುದಿಲ್ಲ. ನಿಯಂತ್ರಿಸಲಾಗದ ಜನಜಂಗುಳಿ ವೇಳೆ ದಾಳಿ ಮಾಡಿದಾಗ ಅದನ್ನು ನರಭಕ್ಷಕ ಎಂದು ಪರಿಗಣಿಸಲಾಗುವುದಿಲ್ಲ.
ವನ್ಯಜೀವಿ ಸಂರಕ್ಷಣಾ ಸಂಸ್ಥೆ ನಡೆಸಿರುವ ಸಂಶೋಧನೆ ಪ್ರಕಾರ ಬಂಡೀಪುರ- ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಜಾಸ್ತಿ ಇದೆ. 100 ಚದರ ಕಿ.ಮೀ.ನಲ್ಲಿ 10ರಿಂದ 15 ಹುಲಿಗಳು ಗೋಚರಿಸುತ್ತವೆ. ಕಾರಣ ಈ ಪ್ರದೇಶ ಹುಲಿಗಳ ವಾಸಕ್ಕೆ ಯೋಗ್ಯವಾಗಿದೆ. ಆದರೆ, ಬಲಶಾಲಿಗಳ ಮುಂದೆ ವಯಸ್ಸಾದ ಹಾಗೂ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಹುಲಿಗಳು ಎದುರಾಳಿಗಳ ಕಾಟದಿಂದ ಆ ಪ್ರದೇಶದಿಂದ ಜಾಗ ಖಾಲಿ ಮಾಡುತ್ತವೆ. ಪ್ರತಿ ವರ್ಷ ಶೇ.20ರಷ್ಟು ಬಲಹೀನ ಪ್ರಾಣಿಗಳು ಒಕ್ಕಲೇಳುತ್ತವೆ. ಈ ರೀತಿ ಒಕ್ಕಲೆದ್ದವುಗಳಲ್ಲಿ ಈಗ ಸೆರೆ ಸಿಕ್ಕಿರುವ ನರಭಕ್ಷಕ ಹುಲಿಯೂ ಕೂಡ ಒಂದು. ಸೀಮಿತ ಪ್ರದೇಶದಲ್ಲಿ ಸುಮಾರು 12 ವರ್ಷಗಳ ಕಾಲ ಬಲಿಷ್ಠ ಹಾಗೂ ದಷ್ಟಪುಷ್ಟವಾಗಿ ಬದುಕುವ ಹುಲಿ ಎದುರಾಳಿಗಳ ದಾಳಿಯಿಂದ ಒಕ್ಕಲೇಳೆತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿ ನರಭಕ್ಷಕವಾಗಿರುವ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿಯಬೇಕೆ ಅಥವಾ ಗುಂಡಿಕ್ಕಿ ಕೊಲ್ಲಬೇಕೆ ಎಂಬುದು ಚರ್ಚಾ ವಿಷಯ. ಪ್ರತಿವರ್ಷ ಕರ್ನಾಟಕದಲ್ಲಿ ಡಜನ್‌ಗಟ್ಟಲೆ ಹುಲಿ ಹಾಗೂ ಚಿರತೆಗಳು ಆಗಾಗ ನಾಡಿಗೆ ಬಂದು ಅಥವಾ ಗಡಿ ಪ್ರದೇಶದಲ್ಲಿ ಜಾನುವಾರು, ಮನುಷ್ಯರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸುತ್ತವೆ. ಎಲ್ಲ ಸಂದರ್ಭಗಳಲ್ಲಿಯೂ ಇವುಗಳನ್ನು ಜೀವಂತವಾಗಿ ಸೆರೆ ಹಿಡಿದು ಪ್ರಾಣಿ ಸಂಗ್ರಹಾಲಯಗಳಲ್ಲಿ ಕೂಡಿಡುವುದು ಸುಲಭವಲ್ಲ. ನರಭಕ್ಷಕವಾದ ಹುಲಿ ಅಥವಾ ಇತರೆ ಪ್ರಾಣಿಗಳಿಂದ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗುತ್ತದೆ.
ಈ ಎಲ್ಲ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಭಾವೋದ್ವೇಗಕ್ಕೆ ಒಳಗಾಗಿ ಕಾರ್ಯನಿರ್ವಹಿಸುವ ಬದಲು ತರ್ಕಬದ್ಧ ಹಾಗೂ ಪ್ರಾಯೋಗಿಕವಾಗಿ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಜ್ಜಾಗಬೇಕು. ಸರ್ಕಾರ ಸೂಕ್ತ ನೀತಿಯೊಂದನ್ನು ರೂಪಿಸಿ ಸಮಸ್ಯೆ ಜಟಿಲವಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಎಲ್ಲ ರೀತಿಯಲ್ಲಿಯೂ ಸಹಕರಿಸಲು ವನ್ಯಜೀವಿ ಸಂರಕ್ಷಣಾ ಸಂಸ್ಥೆ ಸಿದ್ಧವಿದೆ.

- ಕೆ.ಉಲ್ಲಾಸ್ ಕಾರಂತ
ವನ್ಯಜೀವಿ ಸಂರಕ್ಷಣಾ ಸಂಸ್ಥೆ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement