ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

20 ನಿಮಿಷ 20 ವಿಶೇಷ

ಒಂದು ಖುಷಿಯ ಒಳಗೆ ಸಾವಿರ ಭಾವಗಳ ಟಿಸಿಲು. ನಮ್ಮೀ 'ಖುಷಿ'ಯಲ್ಲೂ ಹಾಗೆಯೇ. ನಿಮ್ಮ ಓದಿನ...

Mainashree
Updated On : 8 Dec 2013, 1:03 am

ಒಂದು ಖುಷಿಯ ಒಳಗೆ ಸಾವಿರ ಭಾವಗಳ ಟಿಸಿಲು. ನಮ್ಮೀ 'ಖುಷಿ'ಯಲ್ಲೂ ಹಾಗೆಯೇ. ನಿಮ್ಮ ಓದಿನ ಶ್ರದ್ಧೆಗೆ, ಪ್ರೀತಿಗೆ ಅಪಾರ ಆನಂದದ ಜಿಗಿದಾಟ ಇಲ್ಲಿ. ನಿಮ್ಮ ನಿರೀಕ್ಷೆಗಿಲ್ಲಿ ವಂಚನೆ ಎಂಬುದಿಲ್ಲ. ಹೆಚ್ಚೇ ಕೊಡುತ್ತೀವಿ. ಕಾಸು ಕೊಟ್ಟರೂ ಸಿಗದ ಆನಂದವನ್ನು ಇಲ್ಲಿ ಕಾಲಂಗಳು ಕೊಡುತ್ತವೆ. ಇಲ್ಲಿನ ಒಂದು ಸಾಲು ನೀಡುವ ಸುಖವೇ ವಾರಕ್ಕಾಗುವಷ್ಟು. ಇನ್ನು ಇಡೀ ಖುಷಿ ನೀಡುವ ಸುಖವನ್ನು ಹೀರಿಕೊಳ್ಳಲು ನಿಮ್ಮ ವಿಶಾಲ ಹೃದಯ ಇನ್ನಷ್ಟು ಹಿಗ್ಗಲೇಬೇಕೇನೋ!

1 ಅರಳಿದ ಖುಷಿ
ಈಗತಾನೆ ಅರಳಿದ ಹೂವಿನಂತೆ, ಗೋಪಾಲಕನ ತಲೆಯ ಮೇಲಿನ ನವಿಲುಗರಿಯಂತೆ, ಆತನ ಕೈಯ ಕೊಳಲಿನಂತೆ, ಉಕ್ಕಿದ ಸಂತೋಷದ ಕಾರಂಜಿಯಂತೆ, ದೀಪಾವಳಿಯಲ್ಲಿ ಆಕಾಶಕ್ಕೆ ತೆರೆದಿಟ್ಟ ಬೆಳಕಿನ ಹೂಕುಂಡದಂತೆ... ಹೀಗೆ ಅವರವರ ಭಾವಕ್ಕೆ ತಕ್ಕಂತೆ 'ಖುಷಿ' ಮಾಸ್ಟ್ಹೆಡ್ ಕಾಣಿಸಬಹುದು. ಇದು ನಮ್ಮ ಪುರವಣಿ ಪ್ರತಿಬಿಂಬಿಸುವ ಉಲ್ಲಾಸಮಯ ಓದಿನ ಕ್ಷಣಗಳ ರೂಪಕವೂ ಹೌದು. ಇದರ ಫ್ರೀಸ್ಟೈಲ್, ಆಧುನಿಕ ಮುಕ್ತ ಮನಸ್ಸಿನ ಯುವ ಭಾವಗಳ ಪ್ರತೀಕ. ಇಲ್ಲಿ ಯಾವುದೂ ಅಮುಖ್ಯವಲ್ಲ, ಎಲ್ಲದಕ್ಕೂ ತೆರೆದ ಪುಟಗಳ ಸ್ವಾಗತವಿದೆ ಎಂಬ ಭಾವ ಇಲ್ಲಿ ವ್ಯಕ್ತವಾಗಿದೆ. ಒಳಿತು ಎಲ್ಲ ಕಡೆಗಳಿಂದ ಬರಲಿ ಎಂಬ ಉಪನಿಷತ್ ವಾಕ್ಯ ಹಾಗೂ ಸುದ್ದಿ ನಾಲ್ಕೂ ದಿಕ್ಕುಗಳಿಂದ ಬರುತ್ತದೆ ಎಂಬ ಆಧುನಿಕ ಪತ್ರಿಕೋದ್ಯಮ ವ್ಯಾಖ್ಯೆಯೂ ಇಲ್ಲಿ ರೂಪ ಪಡೆದಿವೆ.

2 ಸಮಗ್ರತೆಯ ಸಂಕೇತ

ಕಮಲ ಭಾರತೀಯರಿಗೆ ಬರಿಯ ಹೂವಲ್ಲ. ಅದರೊಂದಿಗೆ ಸೊಗಸು, ತಂಪು, ಅಧ್ಯಾತ್ಮ, ಅರ್ಪಣೆ ಎಂಬೆಲ್ಲ ಆಯಾಮಗಳೂ ತೆರೆದುಕೊಳ್ಳುತ್ತವೆ. ನವಿಲು ನಮಗೆ ಬರಿಯ ಹಕ್ಕಿಯಲ್ಲ. ಅದು ಸಮೃದ್ಧಿಯ ಮಳೆಗಾಲವನ್ನು ರೆಕ್ಕೆ ಬಿಚ್ಚಿ ಸ್ವಾಗತಿಸುವ, ನೂರಾರು ಕಣ್ಣುಗಳನ್ನು ತೆರೆದು ನರ್ತಿಸಿ ನೋಡುಗರಿಗೆ ನಲಿವುಂಟುಮಾಡುವ ಉನ್ನತ ಹೃದಯಿಯೂ ಹೌದು. ಕಮಲ ಮತ್ತು ನವಿಲುಗಳೆರಡೂ ನಮ್ಮ ದೇಶದ ಸಮಗ್ರತೆಯ ಪ್ರತೀಕ. ಅವು ಹತ್ತಾರು ಬಣ್ಣಗಳ, ನೂರಾರು ಭಾವಗಳ, ಸಾವಿರಾರು ಕಣ್ಣುಗಳ ಸಮ್ಮಿಲನ. ನಮ್ಮ ಲೋಗೋ ಈ ಎರಡನ್ನೂ ಒಟ್ಟಾಗಿಯೇ ಪ್ರತಿಬಿಂಬಿಸುವಂತಿದೆ. ನಿಮ್ಮ ಪ್ರೀತಿಯ ಖುಷಿಯೂ ಹೀಗೆಯೇ. ಭಾನುವಾರವೆಂಬ ಮಳೆಮೋಡ ಮುಸುಕಿದರೆ ಸಾಕು ಗರಿಗೆದರಿ ನರ್ತಿಸುವ ಖುಷಿಯ ನವಿಲು ನಿಮ್ಮ ಮನೆಯಂಗಳದಲ್ಲಿ ಎಂಬ ಇದರ ಹೊಳಹು. ಮುಕ್ತತೆ, ವೈವಿಧ್ಯ, ಸಮಗ್ರತೆ, ಹೊಸತನಗಳನ್ನು ಪ್ರತಿಪಾದಿಸುವ ಈ ಎರಡನ್ನೂ ರಚಿಸಿಕೊಟ್ಟವರು ನಮ್ಮ ಹೆಮ್ಮೆಯ ಕಲಾವಿದ ಸುಧಾಕರ ದರ್ಬೆ.

3 ಪನ್ ಪರಾಗ್
'ಖುಷಿ'ಯ ಪುಟ ತೆರೆದ ಕೂಡಲೇ ನಿಮ್ಮನ್ನು ಸ್ವಾಗತಿಸುವುದು 'ಮುಖಪಂಟಪ'. ಅಲ್ಲಿ ತೂಗು ಹಾಕಿರುವುದು ನಗುತೋರಣ, ಅದುವೇ 'ಪನ್ಪರಾಗ್.' ಸರ್ಕಾರ ಗುಟ್ಕಾ ನಿಷೇಧಿಸಿರಬಹುದು. ವ್ಯಂಗ್ಯದ ಗುಟುಕನ್ನು ನಿಷೇಧಿಸಿಲ್ಲ. ಅಡಕೆ ರೇಟು ಇಳಿಯತ್ತೋ, ಬಿಡುತ್ತೋ ನಮ್ಗೆ ಗೊತ್ತಿಲ್ಲ. ವೈವಿಧ್ಯದ ಟೇಸ್ಟ್ನಲ್ಲಿ ನಿಮಗಿದನ್ನು ಕೊಡ್ತಾ ಇರ್ತೀವಿ. ಪಾನ್ಪರಾಗ್ ಉಗಿದರೆ ಕಲೆ ಆಗ್ಬಹುದು. ಆದರೆ, ನಮ್ಮ 'ಪನ್ ಪರಾಗ್' ಅನ್ನು ಎಸ್.ವಿ. ಪದ್ಮನಾಭ್ ಬಿಡಿಸಿದರೆ ಅದೂ 'ಕಲೆ' ಎನ್ನಿಸಿಕೊಳ್ಳುತ್ತೆ. ಇಲ್ಲದು ಸಮಾಜದ ಅವ್ಯವಸ್ಥೆಗೆ ಉಗಿಯುವ ರೀತಿಯೂ ನಿಮ್ಗೆ ತೋರಬಹುದು ಇಲ್ಲಾ ಸಂಬಂಧಗಳ ಜಗುಲಿ ಮೇಲೆ 'ವ್ಯಂಗ್ಯ'ದ ರಂಗೋಲಿಯನ್ನು ಬಿಡಿಸಿದಂತೆಯೂ ಕಾಣಬಹುದು. ಪಂಚಿಂಗ್ ಡೈಲಾಗ್ಗಳು, ಗೆರೆಗಳಿಂದ ಬರೆ ಎಳೆಯುವ ಎಸ್ವಿ ಸ್ಟೈಲು ನಿಮಗೆ ಪ್ರತಿವಾರ ಕಾಯುವಂತೆ ಮಾಡದಿದ್ದರೆ ಹೇಳಿ.

4 ಚಿಲ್ಲಿ ಕ್ವೆಶ್ಚನ್
ನಿಮ್ಗೂ ಪ್ರಶ್ನೆ ಕಳ್ಸೀ ಕಳ್ಸಿ ಸಾಕಾಗಿದೆ. ನಮ್ಗೂ ಉತ್ತರ ಕೊಟ್ಟೂ ಕೊಟ್ಟು ಸುಸ್ತಾಗಿದೆ. ನಾವ್ ಸ್ವಲ್ಪ ಆರಾಮಾಗಿರ್ತೀವಿ. ನಾವೇ ನಿಮ್ಗೆ ಪ್ರಶ್ನೆ ಕೊಡ್ತೀವಿ. ನೀವು ಉತ್ತರ ಕಳ್ಸಿ. ಇದು ಅಂತಿಂಥ ಪ್ರಶ್ನೆಗಳೇನಲ್ಲ. ಓದಿದರೆ ನಾಲಗೆಯೇ ಚುರುಗುಟ್ಟಬಹುದು, ಅಷ್ಟು ಸ್ಪೈಸಿ. ಅಷ್ಟೇ ಖಾರ ಹಾಗೂ ತಮಾಷೆಯ ಉತ್ತರವನ್ನು ನೀವು ನಮ್ಗೆ ಬರೆದು ಕಳ್ಸಿದರೆ ಒಂದಿಷ್ಟು ಪುಣ್ಯ ಪ್ರಾಪ್ತಿಯಾಗಬಹುದು. ಆಯ್ದ ಅತ್ಯುತ್ತಮ 10 ಉತ್ತರಗಳನ್ನು ನಾವು ಪ್ರಕಟಿಸ್ತೀವಿ. ಇದು ನಿಮಗೆ ಕೊಟ್ಟಿರುವ 'ಅಧಿಕಾರ'. 'ಉತ್ತರಾಧಿಕಾರ' ಎಂಬ ಪ್ರಶ್ನೋತ್ತರದ ಪುಟದಲ್ಲಿ ಇದಿರುತ್ತದೆ.

5 'ಪದ್ಯ'ಪ್ರದೇಶ
ಯಾವುದೇ ರಿಯಾಯಿತಿ ಇಲ್ಲ! ಇದು ಗುಣಮಟ್ಟದ ಪದ್ಯಗಳ ರಾಜ್ಯ. 'ಕವನ ಓದುವವರು ಇಂದು ಬಹಳ ಕಮ್ಮಿ ಆಗಿದ್ದಾರೆ' ಎಂಬ ಸಾಮಾನ್ಯ ಕಂಪ್ಲೇಂಟನ್ನು ಮುರಿಯಲು ಹೊರಟಿದ್ದೇವೆ. ಅದಕ್ಕಾಗಿಯೇ ಈ ಪ್ರದೇಶ ಕಟ್ಟಿದ್ದೇವೆ. ತೀರಾ ಗಂಭೀರವೂ ಅಲ್ಲದ, ತೀರಾ ಲೈಟಾಗಿಯೂ ತೋರದ ಲವಲವಿಕೆಯ ಕವಿತೆಗಳಿಗೆ ಇಲ್ಲಿ ಆದ್ಯತೆ. ಮನವನ್ನು ಆವರಿಸಿಬಿಡುವಂಥ ಸಾಲುಗಳು, ಯಾವುದೋ ಜಗತ್ತನ್ನು ಥಟ್ಟನೆ ಸ್ಪರ್ಶಿಸಿ ವಾಪಸು ಬಂದಂತೆ ಅನುಭವವಾಗುವ ಭಾವಗಳನ್ನು ತುಂಬಿ ಕವಿತೆಗಳನ್ನು ಕಟ್ಟಿ. ಆದಷ್ಟು ಹೊಸಬರು ಬರೆದರೆ ಈ ವೇದಿಕೆ ಮೇಲೆ ಜಾಗ ಸಿಗುತ್ತದೆ. ಅಂಚೆ ವಿಳಾಸ, ಇಮೇಲ್ ಐಡಿ, ನಿಮ್ಮ ಸುಂದರ ಭಾವಚಿತ್ರಗಳನ್ನು ಕಳ್ಸೋದಿಕ್ಕೆ ಮರೀಬೇಡಿ.

6 'ಕವರ್'ಸ್ಟೋರಿ
ತೆಂಡೂಲ್ಕರ್ನ ಕವರ್ಡ್ರೈವ್ನಷ್ಟೇ ಸೊಗಸಾಗಿರುತ್ತೆ. ಲೈಟಾಗಿ, ಟೇಸ್ಟಿಯಾಗಿ ಕೊಡ್ತೀವಿ. ನೀವು ಭಾನುವಾರದ ಯಾವ ಪುರವಣಿ ತೆಗೆದರೂ ಅಲ್ಲಿ ಉಸಿರುಗಟ್ಟುವಂಥ ಅಗ್ರಲೇಖನಗಳು ಕಾಣಸಿಗಬಹುದು. ಆ ಪರಂಪರೆಗೆ ನಾವು 'ಖುಷಿ' ಮೂಲಕ ಪೂರ್ಣವಿರಾಮ ಇಡುತ್ತಿದ್ದೇವೆ. ಕವರ್ಸ್ಟೋರಿಗೆ ನಾವು ಆಯ್ಕೆ ಮಾಡುವುದು ಯಾವುದೋ ಇಂಟರ್ನ್ಯಾಶನಲ್ಲೋ ಅಥವಾ ನಿಮಗೆ ಸಂಬಂಧವೇ ಇಲ್ಲದ ವಿಚಾರಗಳನ್ನಲ್ಲ. ಇಂದಿನ ಬದುಕು ಬೇಡುವಂಥ, ಮನ ಅರಳಿಸುವಂಥ ಟಾಪಿಕ್ಕುಗಳೇ ನಮಗೆ ಲೀಡ್ಸ್ಟೋರಿಗಳು. ಅದನ್ನು ರಸವತ್ತಾಗಿ, ಎಲ್ಲೂ ಬೋರ್ ಎನ್ನಿಸಿದ ರೀತಿಯಲ್ಲಿ ನಾವು ಕೊಡ್ತೀವಿ. ಇದನ್ನೂ ನೀವು 'ಖುಷಿ'ಯಾಗಿ ಓದಬೇಕೆಂಬುದು ನಮ್ಮಾಸೆ.

7 ಲಾ ಪಾಯಿಂಟ್
ಕನ್ನಡದ ಹಳೇ ಸಿನಿಮಾದಲ್ಲಿ 'ನ್ಯಾಯಾ ಎಲ್ಲಿದೆ?' ಎಂದು ಹಾಡುತ್ತಾ, ನ್ಯಾಯಾಂಗದ ಅವ್ಯವಸ್ಥೆಯನ್ನು ದುಃಖದಿಂದ ಪ್ರಶ್ನಿಸಿದ ನಟ ದ್ವಾರಕೀಶ್ ಇವತ್ತಿನ ದಿನಗಳಲ್ಲಾಗಿದ್ರೆ ಆ ಥರ ಹಾಡುತ್ತಿರಲಿಲ್ವೇನೋ? ಯಾಕಂದ್ರೆ 'ಖುಷಿ'ಯಲ್ಲಿ ಕೋರ್ಟಿದೆ. ಇಲ್ಲಿ ನ್ಯಾಯ ಇದೆ. ರಾಜ್ಯದ ಹಿರಿಯ ಕಾನೂನುತಜ್ಞ ಡಾ. ಕಸ್ತೂರಿ ರಂಗನ್ ಓದುಗರ ಕಾನೂನು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ. ಕರಿಕೋಟಿಲ್ಲ, ಫೀಸಿಲ್ಲ, 'ಆರ್ಡರ್ ಆರ್ಡರ್' ಎನ್ನುವ ಸುತ್ತಿಗೆಯೂ ನಿಮಗೆ ಇಲ್ಲಿ ಕಾಣ್ಸಲ್ಲ. ಇಲ್ಲಿ ಸಿಗೋದು ಉಚಿತ ನ್ಯಾಯ. ನಿಮ್ಮದೇನೇ ಕಾನೂನಾತ್ಮಕ ಸಮಸ್ಯೆಗಳಿದ್ದರೆ ಅದನ್ನು 'ಲಾ ಪಾಯಿಂಟ್' ವಿಭಾಗಕ್ಕೆ ಕಳುಹಿಸಬಹುದು.

8 'ಕಥನ'ವಿರಾಮ
ಇಷ್ಟೊಂದು ಪುಟ? ಯಾವನಪ್ಪಾ ಈ ಕಥೆ ಓದ್ತಾನೆ ಅಂತ ನೀವು ಪ್ರತಿ ಭಾನುವಾರ ಸಾಪ್ತಾಹಿಕವನ್ನು ನೋಡಿ ಬಯ್ದುಕೊಂಡಿದ್ದು ನಮಗೂ ಕೇಳಿಸಿದೆ. ಈಗ ನಿಮ್ಮ ಸಿಟ್ಟಿನ ಕದನಕ್ಕೆ ವಿರಾಮ ಹಾಕಿ. ನಾವೀಗ 'ಕಥನ ವಿರಾಮ' ಜಾರಿ ಮಾಡಿದ್ದೀವಿ. ಜಾಸ್ತಿ ಪುಟ ಅಂತ ನಿಯಮ ಉಲ್ಲಂಘಿಸಲ್ಲ. ಇದೂ LOC
 (ಲೈನ್ ಆಫ್ ಕ್ಯೂರಿಯಾಸಿಟಿ). ಹಾಗಂತ ಮೌನದ ಮಳೆಗರಿಸುವ ಕಥೆಗಳನ್ನು ನಾವು ಕೊಡೋದಿಲ್ಲ. ಅಲ್ಲೂ ಒಂದು ಖುಷಿ ಉಕ್ಕಬೇಕು. ಭಾನುವಾರದ ವಿರಾಮದಲ್ಲಿ ಮನದೊಳಗದು ಸದ್ದು ಸೃಷ್ಟಿಸಬೇಕು. ಡೌಟೇ ಇಲ್ಲ... ಆ ಐದು ನಿಮಿಷದ ಓದು, ಐದು ಲೋಕವನ್ನು ಸುತ್ತಾಡಿ ಪರಿಚಯಿಸುವಷ್ಟು ಸುಖ ಕೊಟ್ಟೇ ಕೊಡುತ್ತದೆ. ಹಾಗೆಯೇ, ನಿಮ್ಮಲ್ಲೂ 500 ಪದಗಳ ಒಳಗೆ ಕಥೆಗಳಿದ್ದರೆ ಕಳ್ಸಿ.

9 ಸರಳವಾಸ್ತು
ಮನೆಗೆ 'ಖುಷಿ' ಬಂದರೆ ಸಾಕೇ? ಮನೆಯೂ ಖುಷಿಯಾಗಿರಬೇಕಲ್ವೇ? ಕೊಡ್ತೀವಿ, ವಾಸ್ತುಸ್ಥಿತಿ. ಮನೆಯ ಯಜಮಾನ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಸಾವು ನಿಶ್ಚಿತ. ಮನೆಯ ದಿಕ್ಕು ಉತ್ತರಕ್ಕೆ ಬರಲೇಬೇಕು. ಇಲ್ಲದಿದ್ದರೆ ಮನೆಯಲ್ಲಿ ಜಗಳವಾಗುತ್ತವೆ ಎಂಬಿತ್ಯಾದಿಗಳು ವಾಸ್ತವವಾಗಿ ವಾಸ್ತುವೇ ಅಲ್ಲ. ಅಲ್ಪವಾಸ್ತು ತಜ್ಞರಿಂದಾದ ಅವಘಡ. ಹೀಗಾಗಿ ಈಗ ವಾಸ್ತುವಿನ ಮೇಲೆ ನಂಬಿಕೆ ಅಷ್ಟಿಲ್ಲ. ಆದರೆ 'ಸರಳವಾಸ್ತು' ಎಂಬುದು ಸತ್ಯಕ್ಕೆ ನಿಲುಕುವ ವಾಸ್ತು. ಆ ಸತ್ಯ ನಿಮಗೆ ಪ್ರತಿವಾರ ಡಾ. ಚಂದ್ರಶೇಖರ ಗುರೂಜಿಯವರ ಮೂಲಕ ಗೋಚರವಾಗುತ್ತದೆ. ಸಂಸಾರದ ಜಂಜಾಟದಲ್ಲಿ ಸಿಲುಕಿರುವ ಎಷ್ಟೋ ಕುಟುಂಬಗಳಿಗೆ ಸಮಾಧಾನ ಸಿಗಲಿದೆ.

10 'ಮೂರ್ತಿ'ಗೆ ಸನ್ಮಾನ
'ಖುಷಿ' ಬಿಡುಗಡೆಯ ಸರಳ ಸಮಾರಂಭದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

11 'ಜೋಕ್ಸ್'ಪಿಯರ್
ಅನಂತ ನೀ ಅನಂತ 'ನಗು'...- ಎಂಬುದೀಗ ನಾವೇ ರಚಿಸಿದ ಹೊಸಕವಿತೆ. ಖುಷಿ ಅಂದ್ರೆ ನಗುವಲ್ವೇ? ನೀವು ನಕ್ಕು ಎಷ್ಟು ದಿನವಾಯ್ತೋ ಗೊತ್ತಿಲ್ಲ. ನಗೆಕ್ಲಬ್ಗಳೆಲ್ಲ ಬಾಗಿಲು ಹಾಕಲೇಬೇಕೆನ್ನುವ ಹಾಗೆ ಜೋಕುಗಳನ್ನು ತಯಾರಿಸಿ ಕೊಡ್ತೀವಿ. ಜೋಕ್ಸ್ಪಿಯರ್ ನಮ್ಮ 'ಜೋಕ್ಫ್ಯಾಕ್ಟರಿ'. ಹಿಂದೆಲ್ಲೂ ನೀವು ಓದಿರಲ್ಲ, ಮುಂದೆಲ್ಲೂ ನೀವು ಊಹಿಸಲಿಕ್ಕೂ ಸಾಧ್ಯವಾಗುವುದೂ ಇಲ್ಲ. ಸಕ್ಕರೆ ಅತಿಯಾಗಿ ತಿಂದ್ರೆ ಶುಗರ್ ಬರುತ್ತೆ, ಬದುಕಲ್ಲಿ ಜಾಸ್ತಿ ನಕ್ಕರೆ ಯಾವ ಕಾಯಿಲೆಯೂ ಬರುವುದಿಲ್ಲ. ಹೀಗಾಗಿ, ನಾವು ನಗೆ ಮದ್ದನ್ನು ನಿಮಗೆ ಕೊಡ್ತಿದ್ದೀವಿ. ವಾರಕ್ಕೊಂದೇ ಡೋಸು. ಅದೆಷ್ಟು ನಗುತ್ತೀರೋ ನಕ್ಕುಬಿಡಿ.

12 ಬುಕ್ಪೋಸ್ಟ್
ಸಖತ್ತಾದ ಪೋಸ್ಟನ್ನು ಫೇಸ್ಬುಕ್ಕಿಗೆ ಹಾಕಿದ್ರೆ ಅದು 'ಖುಷಿ'ಯಲ್ಲಿ ಕಾಣ್ಸುತ್ತೆ. ಇದು ಮ್ಯಾಜಿಕ್ಕಾ? ಹೌದು, ಇದೊಂದು ಜಾದೂವೆ. ಆಕರ್ಷಕವಾದ ಅಥವಾ ಖುಷಿಪೂರ್ಣ ಪೋಸ್ಟನ್ನು ನೀವು ಫೇಸ್ಬುಕ್ಕಿಗೆ ಹಾಕಿದರೆ ಅದು ನಿಮ್ಮ ಗೆಳೆಯರಿಗಷ್ಟೇ ತಲುಪುತ್ತದೆ. ನೀವು ಹಾಕಿ ಪರ್ವಾಗಿಲ್ಲ. ಆದರೆ, ನಾವದನ್ನು ಎಗರಿಸಿ ಮತ್ತೆ ಖುಷಿಯಲ್ಲಿ ಹಾಕ್ತೀವಿ. ಜೊತೆಗೆ ನಿಮ್ಮ ಹೆಸರನ್ನೂ ಹಾಕ್ತೀವಿ. ಆ ಭಾನುವಾರ ನೋಡಿ, ನಿಮಗೆಷ್ಟು ಲೈಕು- ಕಾಮೆಂಟು ಬರಬಹುದು! ಆ ಲೆಕ್ಕದಲ್ಲಿ 'ಖುಷಿ'ಯೂ ನಿಮ್ಮ ಪಾಲಿಗೆ ಮತ್ತೊಂದು ಫೇಸ್ಬುಕ್. 'ಖುಷಿ'ಯಲ್ಲಿ ಪ್ರಕಟವಾಗುತ್ತೆ ಎಂಬ ಆಸೆಯಿಂದಾದ್ರೂ ಫೇಸ್ಬುಕ್ಕಿಗೆ ಮನರಂಜನೆದಾಯಕ ಪೋಸ್ಟನ್ನು ಅಂಟಿಸುತ್ತಿರಿ.

13 ಮೊದಲ 'ಖುಷಿ'
ನಾವು ಕಸದ ಬುಟ್ಟಿ ಇಟ್ಟಿಲ್ಲ. ಹೀಗಾಗಿ, ಇದೇ ಮೊದಲು ಬರೆಯುತ್ತಿರುವ ಚಿಗುರು ಬರಹಗಾರರು ಹೆದರಬೇಕಿಲ್ಲ. ನಿಮಗೂ ಅವಕಾಶ ಕೊಡ್ತೀವಿ. ಅದೇನು ಬರೆಯುತ್ತೀರೋ, ಬರೆಯಿರಿ. ಆದರೆ, ತುಂಬಾ ರುಚಿಕಟ್ಟಾಗಿ ಬರೆಯಲು ಯತ್ನಿಸಿ. ಬರೀ ಮೊಬೈಲು, ಪ್ರೀತಿ, ಪ್ರೇಮ, ಕನಸು, ಸಾಧನೆ ಇವೆಲ್ಲ ಹಳಸಲು ವಿಚಾರ ನಮಗೆ ಬೇಡವೇ ಬೇಡ. ಸಮಕಾಲೀನ ವಿಚಾರಗಳು, ಆಸಕ್ತಿದಾಯಕ ಸಂಗತಿಗಳ ಬಗ್ಗೆ ಏನೇ ಬರೆದರೂ ಖುಷಿಯಿಂದ ಸ್ವೀಕರಿಸುತ್ತೇವೆ. ಆದಷ್ಟು ಕಚಗುಳಿ ಸೃಷ್ಟಿಸುವ ಲೇಖನಗಳನ್ನೇ ಕಳುಹಿಸಿ. ಮೊದಲ ಬರಹದಲ್ಲೇ ನಿದ್ದೆ ಬರಿಸಬೇಡಿ. ಇಲ್ಲಿನ ಮಿತಿ ಕೇವಲ 200 ಪದಗಳಷ್ಟೇ.  

14 ಕಿವಿಓಲೆ
ಪೆನ್ನನ್ನು ಗನ್ ಥರ ಯೂಸ್ ಮಾಡ್ತೀವಿ. ಸೆಲೆಬ್ರಿಟಿಗಳೇ, ನಿಮ್ಮ ಸರದಿ ಕಾಯ್ರಪ್ಪಾ... ಇದು ನಿಮ್ಮಿ ಕಿವಿ ಹಿಂಡಲು ನಾವು ಸೃಷ್ಟಿಸುವ 'ಕಿವಿಓಲೆ'. 'ಬುಡ್ಬುಡ್ಕೆ' ಅಂಕಣ ಖ್ಯಾತಿಯ ಕೆ.ವಿ. ಪ್ರಭಾಕರ್ ಈ ಮಜಬೂತ್ ಆದ, ಗಣ್ಯರಿಗೆ ಚುರುಕು ಮುಟ್ಟಿಸುವ ಪತ್ರ ಬರೆಯುತ್ತಾರೆ. ಈ ಮೂಲಕ 'ಖುಷಿ' ಪತ್ರಿಕೋದ್ಯಮದ ಪರಿಣಾಮಕಾರಿ ಜವಾಬ್ದಾರಿಯನ್ನೂ ಹೊತ್ತ ಪುರವಣಿ ಎನ್ನಿಸಿಕೊಳ್ಳಲಿದೆ. ನಾಯಕರ ತಪ್ಪುಗಳನ್ನು ತಿದ್ದಿಕೊಳ್ಳಲು ಎಲ್ಲ ರೀತಿಯ ಅಸ್ತ್ರಗಳನ್ನೂ ಈ ಅಂಕಣ ಪ್ರಯೋಗಿಸಲಿದೆ. ಸೆಲೆಬ್ರಿಟಿಗಳು ಮುಖ ಊದಿಸಿಕೊಂಡರೂ ಪರ್ವಾಗಿಲ್ಲ. ಮತ್ತೆ ಈ ತಪ್ಪೆಸಗಬಾರದು ಎಂಬುದೇ 'ಖುಷಿ'ಯ ಕಾಳಜಿ.

15 ಖುಲ್ಲಂಖುಲ್ಲ

ಖುಲ್ಲಂಖುಲ್ಲ... ಇದು ಬೇವು ಬೆಲ್ಲ. ಈ ಅಂಕಣದಲ್ಲಿ ಸಿಹಿ-ಕಹಿಗಳನ್ನು ಮಿಕ್ಸಾಗಿ ಕೊಡ್ತಿರೋರು ಖ್ಯಾತ ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ. ತಮ್ಮ- ತಿಮ್ಮ ಎಂಬ ಎರಡು ಪಾತ್ರಗಳನ್ನು ಸೃಷ್ಟಿಸಿ, ಅವರ ಸಂಭಾಷಣೆ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಸ್ಕ್ಯಾನ್ ಮಾಡುತ್ತಾರೆ. ಬರೀ ಮಾತಿನಲ್ಲೇ ನಿಂತಿರೋ ಕಾಲಂ ಇದು. ಅದು ಕೇವಲ ಮಾತಾ ಇಲ್ಲಾ ಮೆಣಸಿನಕಾಯಿ ಬಾತಾ? ಅದನ್ನು ನೀವೇ ಹೇಳ್ಬೇಕು. ಒಟ್ಟಿನಲ್ಲಿ ಇದು ಕಾಲೆಳೆಯೋ ಕಾಲಂ. ಸಾಫ್ಟ್ ಆಗಿ ಹೇಳಿದ್ರೆ ಸಮಾಜಕ್ಕೆ ತಟ್ಟೋದಿಲ್ಲ ಅಂತ ಉತ್ತರ ಕರ್ನಾಟಕ ಭಾಷೆಯಲ್ಲೇ 'ಮಿರ್ಚಿಹಾಸ್ಯ'ದಲ್ಲೇ ಹೇಳಲಿದ್ದಾರೆ ಯಶವಂತ ಸರ...

16 ಬುಕ್ರ್ಯಾಕ್
ಎಲ್ಲೆಲ್ಲೂ 'ಓದು'ವ ಮನಸ್ಸೇ, ನಿಮ್ಗೂ ಇಲ್ಲ ನಿರಾಸೆ. ವಿಮರ್ಶೆಯ ಕಣ್ಣಿಗೆ ಕಂಡ ಪುಸ್ತಕ ಇಲ್ಲಿ ತೆರೆದುಕೊಳ್ಳಲಿದೆ. ಕರ್ನಾಟಕದಲ್ಲಿ ಪ್ರತಿ ವಾರ ಹತ್ತಾರು ಪುಸ್ತಕಗಳು ಬಿಡುಗಡೆಗೊಳ್ಳುತ್ತವೆ. 'ಅಷ್ಟರಲ್ಲಿ ಯಾವುದನ್ನು ಓದುವುದು?' ಎಂಬುದೂ ಓದುಗನ ಮುಂದಿರುವ ದೊಡ್ಡ ಪ್ರಶ್ನೆ. ಇವುಗಳ್ಲಲಿ ಓದಲು ಯೋಗ್ಯವಾಗಿರುವ ಪುಸ್ತಕಗಳು ಎರಡು ಮೂರಷ್ಟೇ. ಅದನ್ನ ನಾವು ಆಯ್ಕೆ ಮಾಡಿ, ಅದಕ್ಕೆ ವಿಮರ್ಶೆ ಗೌರವ ಸಲ್ಲಿಸುತ್ತೇವೆ. ಅಂಥ ಯೋಗ್ಯ ಪುಸ್ತಕಗಳನ್ನು ನೀವು 'ಬುಕ್ರ್ಯಾಕ್' ವಿಭಾಗಕ್ಕೆ ಕಳುಹಿಸಬಹುದು. ಈ ಪುಟದಲ್ಲಿ 'ಟಾಪ್ಟೆನ್', 'ಕೆಲವು ಪುಟಗಳು', 'ಈ ಹೊತ್ತಿಗೆ' ಶ್ರೇಣಿಗಳೂ ಇವೆ.  

17 'ಖುಷಿ' ಟಾಕೀಸ್
ಈ ಸಿನಿಮಾ ಮಂದಿರದೊಳಗೆ ದೇವರು ಕಾಣ್ತಾನೆ. ಬೇಜಾರಾಗ್ಬೇಡಿ, ದೇವತೆಯರೂ ಇರ್ತಾರೆ! ಒಂದು ವಾರ ಗಾಂಧಿನಗರ, ಮತ್ತೊಂದು ವಾರ ಬಾಲಿವುಡ್. 'ಆ ಗಾಸಿಪ್ಪು ಮಿಸ್ಸಾಯ್ತು' ಎಂದು ನಿಮ್ಮಿಂದ ದೂರು ಬರೋದಿಕ್ಕೆ ಚಾನ್ಸೇ ಇಲ್ಲ. ಈ 'ಖುಷಿ' ಟಾಕೀಸ್ನಲ್ಲಿ ಆರ್ಟ್ ಮೂವಿ, ಮಸಾಲೆ, ಮನರಂಜನೆ- ಹೀಗೆ ಎಲ್ಲ ಥರದ ಚಿತ್ರಗಳೂ ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತವೆ. ಅದೂ ಶುಕ್ರವಾರ ಅಲ್ಲ, ಭಾನುವಾರ! ಟಿಕೆಟ್ಟು, ಕ್ಯೂ ಅನ್ನೋ ಸಮಸ್ಯೆಗಳೂ ನಿಮ್ಗಿಲ್ಲ. ಸಿನಿಜಗತ್ತಿನ ಮಿನಿ ಸುದ್ದಿಗಳು ಸಾಲುಗಟ್ಟಿ ಈ ಟ್ಯಾಕೀಸಿಗೆ ಸ್ವಾಗತಿಸುತ್ತವೆ.

18 'ಬೆಡ್'ಜಾಮ್
ಹಾಸಿಗೆ ಮೇಲೆ ಸಿಹಿ ಉಣ್ಣೋದು ಹೇಗೆ? ತುಂಬಾ ಮಂದಿಗೆ ಇದೇ ಮಿಲಿಯನ್ ಡಾಲರ್ ಪ್ರಶ್ನೆ. ಹಾಗೆ ಹಸಿದವರಿಗೆ ಇಲ್ಲಿದೆ 'ಬೆಡ್'ಜಾಮ್. ಇದು ಸಲ್ಲಾಪದ ಸೂತ್ರಗಳ ಅಂಕಣ. ಲೈಂಗಿಕ ವಿಚಾರಗಳನ್ನು ಇಲ್ಲಿ ಹಸಿಹಸಿಯಾಗಿ ಪ್ರಸ್ತಾಪಿಸಲಾಗುತ್ತದೆ. 'ಸರಸ' ಯಾರಿಗೂ ಕಹಿ ಉಣಿಸಬಾರದು. ಅದರಿಂದ ಸಿಹಿ ಸಿಗಬೇಕೆನ್ನುವುದು ನಮ್ಮ ಆಶಯ. ಹೀಗಾಗಿ, ಇದೊಂದು 'ಮುಕ್ತ' ಪ್ರಯೋಗ ಎಂದೆನ್ನಿಸಿಕೊಳ್ಳಲೂಬಹುದು. ಈ 'ಬೆಡ್ಜಾಮ್' ಅನ್ನು ಖುಷಿಯಿಂದ ಸ್ವೀಕರಿಸಲು ಸಿದ್ಧರಾಗಿ.

19 'ದೂರ'ವಾಣಿ
ದೂರದಿಂದಲೇ ಬರೆಯುತ್ತಿದೆ ಕಾಣದೊಂದು ಹಸ್ತಾ... ಕನ್ನಡಕ್ಕಿದೆ 'ಬಾಹ್ಯ' ಬೆಂಬಲ. ಹೊರನಾಡ ಕನ್ನಡಿಗರ ಕಾಲಂ ಅನ್ನು ಬಹುಶಃ ಇಲ್ಲಿಯ ತನಕ ಯಾರೂ ಹುಟ್ಟುಹಾಕಿಲ್ಲ. ಈ ಮೊದಲ 'ಖುಷಿ' ನಮ್ಮದೇ ಆಗಿದೆ; ಅದೂ 'ದೂರವಾಣಿ' ಎಂಬ ಅಂಕಣದ ಮೂಲಕ. ಕನ್ನಡದಿಂದ ಆ ದೇಹಗಳು ದೂರವಿದ್ದರೂ, ಬರವಣಿಗೆಯ ನಂಟನ್ನು 'ಖುಷಿ' ಇಟ್ಟುಕೊಂಡಿದೆ. ಆ ನೆಲದ ಭಾಷಾ ವೈವಿಧ್ಯ, ಸಂಸ್ಕೃತಿ, ವಿದ್ಯಮಾನಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಹೀಗಾಗಿ, ಹೊರನಾಡ ಕನ್ನಡಿಗರೂ ಖುಷಿಗೆ ಲೇಖನಗಳನ್ನು ತಲುಪಿಸಬಹುದು.

20 ನೀವೂ ಗೀಚಿ...

ಲವಲವಿಕೆಯ ಬರಹಗಳನ್ನು ನೀವೂ ಖುಷಿಗೆ ಕಳುಹಿಸಬಹುದು. ಬಿಡಿಬಿಡಿ ಬರಹಗಳಿಗೆ ಮುಕ್ತ ಸ್ವಾಗತ. ಬರವಣಿಗೆಯ ಜೊತೆಗೆ ನಿಮ್ಮ ಅಂದದ ಭಾವಚಿತ್ರ, ಪೂರ್ಣವಿಳಾಸಗಳನ್ನು ಕಳುಹಿಸುವುದು ಕಡ್ಡಾಯ.
ನಮ್ಮ ವಿಳಾಸ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು- 01
ಇಮೇಲ್
k‌h‌us‌h‌im​a‌g@‌g​m​a‌il.‌c‌om

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement