ಅಧಿಕಾರ ಯಾರಿಗೆ?
ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ಗಡದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆಯೇ?. ದೇಶಾದ್ಯಂತ ಕುತೂಹಲ...
ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ಗಡದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆಯೇ?
- ದೇಶಾದ್ಯಂತ ಕುತೂಹಲ ಕೆರಳಿಸಿರುವ ಈ ಪ್ರಶ್ನೆಗೆ ಭಾನುವಾರ ಉತ್ತರ ಸಿಗಲಿದೆ. ಈಶಾನ್ಯ ರಾಜ್ಯದ ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಡಿ.9ರಂದು ನಡೆಯಲಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಜೆಪಿ ಪ್ರಧಾನಿ ಅಧ್ಯರ್ಥಿ ಎಂದು ಈಗಾಗಲೇ ಬಿಂಬಿಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ಗಡಗಳಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಜತೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಭಾರಿ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಲಿದೆ ಎಂದು ಮುನ್ಸೂಚನೆ ನೀಡಿವೆ.
ಈಗಾಗಲೇ ಮುಂದಿನ ಚುನಾವಣೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡುವಿನ ಹಣಾಹಣಿ ಎಂದು ದೇಶ ವಿದೇಶದ ಮಾಧ್ಯಮಗಳಲ್ಲಿ ಬಿಂಬಿತವಾಗಿರುವ ಹಿನ್ನೆಲೆಯಲ್ಲಿಯೂ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮಹತ್ವ ಪಡೆದಿದೆ.
ಸಿದ್ಧತೆ: ನಾಲ್ಕೂ ರಾಜ್ಯಗಳಲ್ಲಿ ಮತ ಎಣಿಕೆಗಾಗಿ ಸಿದ್ಧತೆ ಪೂರ್ಣಗೊಂಡಿದೆ. ಬೆಳಗ್ಗೆ 8ರಿಂದ ಎಣಿಕೆ ಕಾರ್ಯ ಆರಂಭವಾಗಲಿದೆ. 10 ಗಂಟೆ ವೇಳೆ ಮೊದಲ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಲೋಕಸಭೆಯತ್ತ ಕಾಂಗ್ರೆಸ್ ಚಿತ್ತ: ಚುನಾವಣೆಯಲ್ಲಿ ಫಲಿತಾಂಶ ಬಿಜೆಪಿ ಪರವಾಗಿ ಇರಲಿದೆ ಎಂದು ಸಮೀಕ್ಷೆಗಳು ತಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಮೌನ ಆವರಿಸಿದೆ. ಅದಕ್ಕೆ ಪೂರಕವಾಗಿ ಮುಂದಿನ ಲೋಕಸಭೆ ಚುನಾವಣೆಯತ್ತ ಸಿದ್ಧತೆ ನಡೆಸಲು ಅದು ಚಿಂತನೆ ನಡೆಸಿದೆ. ಸಮೀಕ್ಷೆಗಳಿಂದ ಬಿಜೆಪಿ ಹಿಗ್ಗಬೇಕಾದ ಅಗತ್ಯವೇನಿಲ್ಲ. 1998, 1999ರಲ್ಲಿ ನಮ್ಮ ಪಕ್ಷ ಗೆದ್ದಿತ್ತು. ನಮ್ಮ ಲಕ್ಷ್ಯ ಏನಿದ್ದರೂ ಲೋಕಸಭೆ ಚುನಾವಣೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಹಿಗ್ಗಿರುವ ಬಿಜೆಪಿ
ರಾಷ್ಟ್ರೀಯ ಸುದ್ದಿ ವಾಹಿನಿಗಳು ನಡೆಸಿರುವ ಸಮೀಕ್ಷೆಗಳಲ್ಲಿ ಬಿಜೆಪಿಗೇ ಮುನ್ನಡೆಯಾಗಲಿದೆ ಎಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈಗಾಗಲೇ ಸಂತಸಪಡಲಾರಂಭಿಸಿದ್ದಾರೆ. ಅದಕ್ಕೆ ಪೂರಕವಾಗಿ ಬೆಂಗಳೂರು ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವಜಲ್ಲಿ ರ್ಯಾಲಿಗಳನ್ನೂ ಆಯೋಜಿಸುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶೇ.70ರಷ್ಟು ದಾಖಲೆಯ ಮತದಾನವಾಗಿತ್ತು. ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ರಾಷ್ಟ್ರ ರಾಜಧಾನಿ ದೆಹಲಿ ಮಾತ್ರ ಈ ಬಾರಿಯ ಚುನಾವಣೆ ಕೊಂಚ ಭಿನ್ನವಾಗಿದೆ.
ಸಾಮಾಜಿಕ ಹೋರಾಟಗಾರ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಆಡಳಿತಾರೂಡ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಚುನಾವಣಾ ಫಲಿತಾಂಶ ಮಾತ್ರ ಎಲ್ಲದಕ್ಕಿಂತ ಹೆಚ್ಚು ಕುತೂಲಹಲಕ್ಕೆ ಕಾರಣವಾಗಿದೆ.