ತೆರಿಗೆ ಹೊರೆಗೆ ಇನ್ನು ಪ್ರವಾಸ ಪ್ರಯಾಸ
-ಡಿ.1ರಿಂದ ಜಾರಿಗೆ ಬರುವಂತೆ ಹೊರಡಿಸಿರುವ ಆದೇಶದ ಪ್ರಕಾರ, ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ವಾಹನ ರಾಜ್ಯಕ್ಕೆ ಪ್ರವೇಶಿಸಬೇಕಾದರೆ ವಾರ್ಷಿಕ ತೆರಿಗೆ ಪಾವತಿಸಬೇಕು. ಅಂದರೆ, 35 ಸೀಟರ್ನ 1 ಬಸ್ ರಾಜ್ಯಕ್ಕೆ ಪ್ರವೇಶಿಸಬೇಕಾದರೆ 4.27 ಲಕ್ಷ, 45 ಸೀಟರ್ ಬಸ್ಗೆ 5.50 ಲಕ್ಷ ತೆರಿಗೆ ಪಾವತಿಸಬೇಕು.
ಕ.ಪ್ರ. ವಾರ್ತೆ ಬೆಂಗಳೂರು ಡಿ. 7
'ಎತ್ತು ಕರು ಹಾಕಿತು ಎಂದರೆ ಕೊಟ್ಟಿಗೆಗೆ ಕಟ್ಟು' ಎಂಬಂತಾಗಿದೆ ಸಾರಿಗೆ ಇಲಾಖೆ ಕಾರ್ಯವೈಖರಿ. ವಾಹನ ನೋಂದಣಿ ಕಡಿಮೆಯಾಗಿರುವುದರಿಂದ ಕುಸಿದ ತೆರಿಗೆ ಸಂಗ್ರಹವನ್ನು ಸರಿದೂಗಿಸಿಕೊಳ್ಳಲು ಇಲಾಖೆ ಕೈಗೊಂಡಿರುವ ಕ್ರಮ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಸಂಪೂರ್ಣ ಹಾಳು ಮಾಡುವ ಸಾಧ್ಯತೆ ಸೃಷ್ಟಿಸಿದೆ.
ರಾಜ್ಯದಲ್ಲಿ ತೆರಿಗೆ ಸಂಗ್ರಹದಲ್ಲಿ ಇತರೆ ಎಲ್ಲ ಇಲಾಖೆಗಳು ಕಳೆದ ವರ್ಷಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆಯಾದರೂ ಸಾರಿಗೆ ಇಲಾಖೆ ಮಾತ್ರ ಹಿಂದುಳಿದಿದೆ. ಇದರಿಂದ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಒತ್ತಡ ತೀವ್ರಗೊಂಡಿದೆ. ಇದಕ್ಕೆ ಸಾರಿಗೆ ಇಲಾಖೆ ಕಂಡುಕೊಂಡ ಮಾರ್ಗ ಪ್ರವಾಸಿ ವಾಹನಗಳ ತೆರಿಗೆಯನ್ನು ಮನಸೋ ಇಚ್ಛೆ ಹೆಚ್ಚಿಸಿರುವುದು.
ಡಿಸೆಂಬರ್ 1ರಿಂದ ಜಾರಿಗೆ ಬಂದಿರುವ ಈ ತೆರಿಗೆ ಅನ್ವಯ ಆಲ್ ಇಂಡಿಯಾ ಪರ್ಮಿಟ್ ಪಡೆದ ಬಸ್ಗಳು ರಾಜ್ಯಕ್ಕೆ ಪ್ರವೇಶಿಸಬೇಕಾದರೆ ಲಕ್ಷಾಂತರ ರು. ತೆರಿಗೆ ಪಾವತಿಸಬೇಕಿವೆ. ಅದೇ ರೀತಿ 7ಕ್ಕಿಂತ ಹೆಚ್ಚು ಸೀಟ್ ಹೊಂದಿರುವ ಇತರೆ ವಾಹನಗಳು ಪ್ರತಿ ಪ್ರಯಾಣಿಕನಿಗೆ ಮೂರು ತಿಂಗಳ ಅವಧಿಗೆ 3 ಸಾವಿರಕ್ಕೂ ಹೆಚ್ಚು ತೆರಿಗೆ ಪಾವತಿಸಬೇಕು. ಈ ಕುರಿತಂತೆ ಸಾರಿಗೆ ಇಲಾಖೆ ಆದೇಶವನ್ನೂ ಹೊರಡಿಸಿದೆ. ಸಾರಿಗೆ ಇಲಾಖೆ ಡಿ.1ರಿಂದ ಜಾರಿಗೆ ಬರುವಂತೆ ಹೊರಡಿಸಿರುವ ಆದೇಶದ ಪ್ರಕಾರ, ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ವಾಹನಗಳು ರಾಜ್ಯಕ್ಕೆ ಪ್ರವೇಶಿಸಬೇಕಾದರೆ ವಾರ್ಷಿಕ ತೆರಿಗೆ ಪಾವತಿಸಲೇಬೇಕು. ಅಂದರೆ, 35 ಸೀಟರ್ನ ಒಂದು ಬಸ್ ರಾಜ್ಯಕ್ಕೆ ಪ್ರವೇಶಿಸಬೇಕಾದರೆ 4.27 ಲಕ್ಷ ಹಾಗೂ 45 ಸೀಟರ್ ಬಸ್ಗೆ 5.50 ಲಕ್ಷ ತೆರಿಗೆ ಪಾವತಿಸಬೇಕು.
ಈ ತೆರಿಗೆ ಪಾವತಿಸಿದರೆ ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಪ್ರವಾಸಿ ವಾಹನಗಳು ರಾಜ್ಯಕ್ಕೆ ಬಂದು ಹೋಗಬಹುದು. ಆದರೆ, ಪ್ರವಾಸಿ ವಾಹನಗಳು ರಾಜ್ಯಕ್ಕೆ ಬರುವುದು ವರ್ಷಕ್ಕೆ ಹತ್ತಾರು ಬಾರಿ ಮಾತ್ರ. ಲಕ್ಷಾಂತರ ರು. ತೆರಿಗೆ ಪಾವತಿಸುವ ಬದಲು ಸಹವಾಸವೇ ಬೇಡ ಎಂದು ದೂರ ನಿಲ್ಲಬಹುದು ಎನ್ನುತ್ತಾರೆ ಪ್ರವಾಸೋದ್ಯಮ ಕ್ಷೇತ್ರದವರು.
ರಾಜ್ಯಕ್ಕೆ ಹಿನ್ನಡೆ: ಸಾರಿಗೆ ಇಲಾಖೆ ಈ ಕ್ರಮದಿಂದಾಗಿ ಸರ್ಕಾರಕ್ಕೆ ಸಾರಿಗೆ ಇಲಾಖೆ ಮೂಲಕ ಬರುವ ನೇರ ತೆರಿಗೆಯಲ್ಲಿ ಏರಿಕೆ ಕಂಡುಬರಬಹುದಾದರೂ ಪ್ರವಾಸೋದ್ಯಮ ಕ್ಷೇತ್ರ ಮತ್ತು ಉದ್ಯೋಗ ಸೃಷ್ಟಿಗೂ ಧಕ್ಕೆಯಾಗುತ್ತದೆ. ಸ್ವ ಉದ್ಯೋಗ ಮತ್ತು ಪ್ರವಾಸೋದ್ಯಮಕ್ಕೆ ಅವಿನಾಭಾವ ಸಂಬಂಧ. ಪ್ರವಾಸಿಗರ ಸಂಖ್ಯೆ ಹೆಚ್ಚಾದಷ್ಟು ಪ್ರವಾಸಿ ಕ್ಷೇತ್ರಗಳು ಅಭಿವೃದ್ಧಿಹೊಂದುತ್ತವೆ. ಅಲ್ಲಿ ಹೊಟೇಲ್, ಸಣ್ಣ ಪುಟ್ಟ ಅಂಗಡಿಗಳು ತಲೆ ಎತ್ತುತ್ತವೆ. ಸಾವಿರಾರು ಮಂದಿ ಅಲ್ಲಿ ಉದ್ಯೋಗ ಕಂಡುಕೊಳ್ಳುತ್ತಾರೆ.
ಆದರೆ, ತೆರಿಗೆ ಹೆಚ್ಚಳದಿಂದ ಆಗುವ ತೊಂದರೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾರಿಗೆ ಇಲಾಖೆ ಪ್ರವಾಸಿ ವಾಹನಗಳ ತೆರಿಗೆ ಹೆಚ್ಚಳ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮದ ಮೇಲೆ ಸಾಕಷ್ಟು ದುಷ್ಪರಿಣಾ ಬೀರಲಿದೆ. ಈಗಾಗಲೇ ಪ್ರವಾಸೋದ್ಯಮದಲ್ಲಿ ವರ್ಷ ಕಳೆದಂತೆ ಸರ್ಕಾರ ಹಿಂದೆ ಉಳಿಯುತ್ತಿದೆ. ಈ ಹಿಂದೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 5ನೇ ಸ್ಥಾನದಲ್ಲಿದ್ದ ರಾಜ್ಯ ಈಗ ಎಂಟನೇ ಸ್ಥಾನಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಪಾತಾಳಕ್ಕೆ ಇಳಿಯಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.
ಮೈಸೂರು ಪ್ರವಾಸ ಬಹಿಷ್ಕರಿಸಿದ್ದ ಕೇರಳ
ರಾಜ್ಯದಲ್ಲಿ ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ಹೆಚ್ಚಿಸಿದ್ದರಿಂದಾಗಿ ಕೇರಳದ ಟೂರಿಸ್ಟ್ ಮಾಲೀಕರು ಮೈಸೂರು ಪ್ರವಾಸವನ್ನೇ ಬಹಿಷ್ಕರಿಸಿದ್ದರು. ರಾಜ್ಯಕ್ಕೆ ಪ್ರವೇಶ ಪಡೆಯಬೇಕಾದರೆ ನ್ಯಾಷನಲ್ ಪರ್ಮಿಟ್ ಹೊಂದಿರುವ 35 ಸೀಟರ್ಗಳ ಬಸ್ಗಳಿಗೆ 26,500 ಮತ್ತು 45 ಸೀಟರ್ ಬಸ್ಗಳಿಗೆ 32 ಸಾವಿರ ತೆರಿಗೆ ನಿಗದಿಪಡಿಸಲಾಗಿದೆ. ದಸರಾ ಸಂದರ್ಭದಲ್ಲಿ ಮೈಸೂರು ಪ್ರವಾಸಕ್ಕೆ ಈ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತಾದರೂ ಪ್ರವಾಸ ಕೈಗೊಳ್ಳುವವರು ಮೈಸೂರು ಜತೆಗೆ ಇನ್ನೂ ಕೆಲವು ಕಡೆ ಹೋಗಬೇಕು ಎಂದು ಹೇಳುತ್ತಿದ್ದರು. ಆದರೆ, ಹಾಗೆ ಪ್ರವಾಸ ಮುಂದುವರಿಸಬೇಕಾದರೆ ಸಾರಿಗೆ ಇಲಾಖೆ ನಿಗದಿಪಡಿಸಿದ್ದ ತೆರಿಗೆ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಕೇರಳದ ಟೂರಿಸ್ಟ್ ಸಂಸ್ಥೆಗಳು ದಸರಾ ಪ್ರವಾಸವನ್ನೇ ಬಹಿಷ್ಕರಿಸಿದ್ದವು.
ಪರೋಕ್ಷ ತೆರಿಗೆಗೆ ಪೆಟ್ಟು
ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ಹೆಚ್ಚಿಸಿದ್ದರಿಂದ ಸಾರಿಗೆ ಇಲಾಖೆ ಹೆಚ್ಚು ಆದಾಯ ಸಂಗ್ರಹಿಸಬಹುದು. ಆದರೆ, ಇದರಿಂದ ಪರೋಕ್ಷ ತೆರಿಗೆಗಳಿಗೆ ಭಾರೀ ಪೆಟ್ಟು ಬೀಳಲಿದ್ದು, ದೀರ್ಘಾವಧಿಗೆ ಇದು ಅಪಾಯಕಾರಿ ಎನ್ನಲಾಗುತ್ತದೆ. ಪ್ರವಾಸಿ ವಾಹನಗಳು ರಾಜ್ಯಕ್ಕೆ ಪ್ರವೇಶಿಸಿದ ಬಳಿಕ ರಾಜ್ಯದಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತವೆ. ಅಲ್ಲದೆ, ಪ್ರವಾಸಿಗರು ಹೊಟೇಲ್ಗಳಲ್ಲಿ ತಂಗುತ್ತಾರೆ. ಪ್ರವಾಸಿ ಕ್ಷೇತ್ರಗಳು ಅಭಿವೃದ್ಧಿಯಾದರೆ ಅಲ್ಲಿ ನಿರ್ಮಾಣಗೊಳ್ಳುವ ಅಂಗಡಿಗಳಲ್ಲಿ ಸಾಕಷ್ಟು ವ್ಯಾಪಾರ ನಡೆಯುತ್ತದೆ. ಈ ಎಲ್ಲದರಿಂದ ಸರ್ಕಾರದ ಬೊಕ್ಕಸಕ್ಕೆ ಪರೋಕ್ಷವಾಗಿ ಸಾಕಷ್ಟು ತೆರಿಗೆ ಬರುತ್ತದೆ. ಒಂದು ಬಾರಿ ಪ್ರವಾಸೋದ್ಯಮದಿಂದ ಆದಾಯ ಸಂಗ್ರಹ ಆರಂಭವಾದರೆ ಅದು ದೀರ್ಘಕಾಲದವರೆಗೆ ಇರುತ್ತದೆ. ಆದರೆ, ಪ್ರವಾಸೋದ್ಯಮಕ್ಕೆ ಧಕ್ಕೆಯಾದರೆ ಈ ಎಲ್ಲಾ ತೆರಿಗೆಗಳ ಸಂಗ್ರಹ ಸ್ಥಗಿತಗೊಳ್ಳುತ್ತದೆ.
ಪ್ರವಾಸೋದ್ಯಮದ ಮೇಲೆ ಕರಿನೆರಳು
ಸಾಮಾನ್ಯವಾಗಿ ಪ್ರವಾಸಿ ಪ್ಯಾಕೇಜ್ಗಳು ಮೂರ್ನಾಲ್ಕು ರಾಜ್ಯಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅಂದರೆ, ದಕ್ಷಿಣ ಭಾರತ ಪ್ರವಾಸ ಎಂದರೆ ಅದು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳನ್ನು ಒಳಗೊಂಡಿರುತ್ತದೆ. ಇಂತಹ ಪ್ರವಾಸಿ ಪ್ಯಾಕೇಜ್ಗಳಿಗೆ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ವಾಹನ ಬಳಸಲಾಗುತ್ತದೆ. ರಾಜ್ಯದಲ್ಲಿ ಇಂತಹ ವಾಹನಗಳಿಗೆ ಭಾರೀ ಪ್ರಮಾಣದಲ್ಲಿ ಪ್ರವೇಶ ತೆರಿಗೆ ವಿಧಿಸುತ್ತಿರುವುದರಿಂದ ಪ್ರವಾಸೋದ್ಯಮ ಪ್ಯಾಕೇಜ್ನಲ್ಲಿ ಕರ್ನಾಟಕವನ್ನು ಕೈಬಿಡುವ ಸಾಧ್ಯತೆಗಳೇ ಹೆಚ್ಚು. ಇಲ್ಲದಿದ್ದರೆ ಪ್ಯಾಕೇಜ್ ಮೊತ್ತ ಹೆಚ್ಚಾಗುತ್ತದೆ. ಕರ್ನಾಟಕ ದರ್ಶನ ದುಬಾರಿ ಎಂಬ ಕಾರಣಕ್ಕೆ ಪ್ರವಾಸಿಗರು ಕೂಡ ಹಿಂದೇಟು ಹಾಕುತ್ತಾರೆ.
-ಪ್ರದೀಪ್ ಕುಮಾರ್ ಎಂ.