ಬಿಜೆಪಿಗೆ ಮುನ್ನಡೆ, ಎಎಪಿ ಎದುರು ಮಕಾಡೆ ಮಲಗಿದ ಕಾಂಗ್ರೆಸ್
ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ಆಮ್ ಆದ್ಮಿ ಪಕ್ಷ ತೀವ್ರ ಪ್ರತಿಸ್ಪರ್ಧೆ ನೀಡುತ್ತಿದೆ...
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ಆಮ್ ಆದ್ಮಿ ಪಕ್ಷ ತೀವ್ರ ಪ್ರತಿಸ್ಪರ್ಧೆ ನೀಡುತ್ತಿದೆ.
ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇರುತ್ತಿತ್ತು. ಆದರೆ ಸ್ವತಂತ್ರ ಪಕ್ಷವಾದ ಎಎಪಿಯ ಅಬ್ಬರಕ್ಕೆ ಕಾಂಗ್ರೆಸ್ ಧೂಳಿಪಟವಾಗಿದೆ.
ಬೆಳಗ್ಗೆ 12.30 ರ ವೇಳೆಗೆ ಭಾರತೀಯ ಜನತಾ ಪಕ್ಷ 34 ಸ್ಥಾನಗಳ ಗಳಿಸಿ ಮುಂದಿದ್ದರೆ, ಆಮ್ ಆದ್ಮಿ ಪಕ್ಷ 27 ಸ್ಥಾನ ಗಳಿಸಿ, 2 ಸ್ಥಾನ ಪಡೆದಿದೆ. ದೆಹಲಿಯಲ್ಲಿ ಆಡಳಿತರೂಢ ಪಕ್ಷ ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಮಾತ್ರ ಗಳಿಸಿದ್ದು, 3ನೇ ಸ್ಥಾನಕ್ಕೆ ಕುಸಿದಿದೆ.
ಈ ಕುರಿತು ಮಾತನಾಡಿರುವ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಯಾರು ಚುಕ್ಕಾಣಿ ಹಿಡಿಯುತ್ತಾರೆ ಎಂಬುದು ಮುಖ್ಯವಲ್ಲ. ನಮ್ಮ ಗಮನವಿರುವುದು ದೇಶವನ್ನು ಹೇಗೆ ಮುನ್ನಡೆಸಬೇಕು ಎಂದು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದ ಪರಿಸ್ಥಿತಿ ಉದ್ಭವಿಸಿದರೆ, ನಾವು ಯಾವ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಹಿನ್ನಡೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಭಾನುವಾರ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.