ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜನರಿಗೆ ಗೆಲವು ಕೊಟ್ಟ ಆಮ್ ಆದ್ಮಿ ಪಕ್ಷ

Mainashree
Updated On : 8 Dec 2013, 10:21 am

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ದೆಹಲಿಯಲ್ಲಿ ಜನ ಸಾಮಾನ್ಯರಿಗೆ ಗೆಲುವು ಸಿಕ್ಕಿದೆ. ಯಾರೂ ಕಲ್ಪಿಸಿಕೊಳ್ಳಲಾಗದ ಸಾಧನೆಯನ್ನು 'ಆಮ್ ಆದ್ಮಿ ಪಾರ್ಟಿ'- ಅಂದರೆ 'ಜನ ಸಾಮಾನ್ಯರ ಪಕ್ಷ' ಮಾಡಿದೆ.  ರಾಜಕೀಯ ಭ್ರಷ್ಟಾಚಾರವನ್ನು ತೊಡೆದು ಹಾಕಲು 'ಪೊರಕೆ'ಯನ್ನು ಹಿಡಿದು ಮುನ್ನುಗ್ಗಿದ 'ಆಮ್ ಆದ್ಮಿ ಪಾರ್ಟಿ(ಎಎಪಿ)' ಈಗ ಭಾರತೀಯ ರಾಜಕೀಯ ಇತಿಹಾಸದಲ್ಲೇ ನಿರ್ಣಾಯಕ ದಾಖಲೆ ಬರೆದಿದೆ.
ಪಕ್ಷ ರೂಪುಗೊಂಡ ಒಂದೇ ವರ್ಷದಲ್ಲಿ ಅದೂ ರಾಷ್ಟ್ರ ರಾಜಧಾನಿಯನ್ನೊಳಗೊಂಡ ದೆಹಲಿಯಲ್ಲಿ 28 ಸ್ಥಾನಗಳನ್ನು ಗಳಿಸಿದೆ.
28 ಸ್ಥಾನಗಳಿಸುವುದರ ಜತೆಗೆ ನೂರಾರು ವರ್ಷಗಳಷ್ಟು ಅನುಭವ ಇರುವ ಕಾಂಗ್ರೆಸ್ ಅನ್ನು 15 ವರ್ಷದ ಸುದೀರ್ಘ ಆಡಳಿತದಿಂದ ಕಿತ್ತೊಗೆದಿದೆ. 15 ವರ್ಷ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಅರವಿಂದ್ ಕೇಜ್ರಿವಾಲ್ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಆಮ್ ಆದ್ಮಿ ಪಕ್ಷ ಜನಸಾಮಾನ್ಯರಿಗೆ ಹತ್ತಿರವಾಗಿದ್ದಷ್ಟೇ ಅಲ್ಲ, ಶ್ರೀಮಂತ ಸಮುದಾಯ ನೆಲೆಸಿರುವ ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲೂ ತನ್ನ ಜಯ ದಾಖಲಿಸಿದೆ!
ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಪ್ರತಿನಿಧಿಸುವ ಹೊಸದಿಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟನ್ನು ಗೆದ್ದುಕೊಂಡಿದೆ. ಆಮ್ ಆದ್ಮಿ ಪಕ್ಷದ ಒಂದೇ ವರ್ಷದಲ್ಲಿ ಜನಸಾಮಾನ್ಯರನ್ನು ತಲುಪಿರುವ ರೀತಿ ಅಂತಹದ್ದು.
ಕಾಂಗ್ರೆಸ್, ಬಿಜೆಪಿಗೆ ಸವಾಲು: ಕಾಂಗ್ರೆಸ್‌ಗೆ ಇದಕ್ಕಿಂತಲೂ ಹಿನಾಯ ಸೋಲನ್ನು ಹಿಂದೆಂದೂ ಅನುಭವಿಸಿರಲಿಕ್ಕಿಲ್ಲ. ಕಾಂಗ್ರೆಸ್ ವಿರೋಧಿ ಅಲೆಯ ನಡುವೆ ಅಧಿಕಾರದ ಗದ್ದುಗೆ ಮೂರೇ ಗೇಣು ಎಂದು ಬೀಗುತ್ತಿದ್ದ ಬಿಜೆಪಿ ಕೂಡಾ ಈಗ ಅಧಿಕಾರದ ಗದ್ದುಗೆ ಹಿಡಿಯಲು ಅಡ್ಡದಾರಿ ಹಿಡಿಯುವಂತಾಗಿದೆ. ಕೇವಲ 32 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಕನಿಷ್ಠ ಬಹುಮತ ಪಡೆಯಲು ಇನ್ನೂ ನಾಲ್ಕು ಸ್ಥಾನಗಳ ಕೊರತೆ ಇದೆ. ಅಂದರೆ ಬಿಜೆಪಿ ಮತ್ತು ಎಎಪಿ ನಡುವಿನ ಅಂತರ ಕೇವಲ ನಾಲ್ಕು ಸ್ಥಾನಗಳು ಮಾತ್ರ! ಹದಿನೈದು ವರ್ಷ ಆಳಿದ ಕಾಂಗ್ರೆಸ್ ಕೇವಲ 8 ಸ್ಥಾನ ಪಡೆದಿದೆ. ಘಟಾನುಘಟಿ ಕಾಂಗ್ರೆಸ್ ನಾಯಕರೆಲ್ಲರೂ ಎಎಪಿ ಗಾಳಿಯಲ್ಲಿ ತೂರಿಹೋಗಿದ್ದಾರೆ. ಈ ಎಲ್ಲಾ ಸಾಧನೆಗಳ ರೂವಾರಿ 'ಇಂಡಿಯಾ ಅಗೆನೆಷ್ಟ್ ಕರಪ್ಶನ್‌' ಮೂಲಕ ಹೋರಾಟ ಆರಂಭಿಸಿದ ಅರವಿಂದ್ ಕೇಜ್ರಿವಾಲ್.
ಹೋರಾಟದ ಹಾದಿ: ಈ ನಡುವೆ, ನೀರು- ವಿದ್ಯುತ್ ಚರಂಡಿ ಮತ್ತಿತರ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ ಕೆಜ್ರಿವಾಲ್, ಒಂದು ಹಂತದಲ್ಲಿ ರಾಬರ್ಟ್ ವಾದ್ರಾ ಮತ್ತಿತರ ವಿರುದ್ಧ ಬಂದ ಭೂ ಕಬಳಿಕೆ ಆರೋಪಗಳನ್ನು ಬೀದಿಗೆ ತಂದರು. ಭ್ರಷ್ಟಾಚಾರದ ವಿರುದ್ಧ ಘೋಷಣೆ ಮೊಳಗುತ್ತಿದ್ದಂತೆ ರಾಷ್ಟ್ರದ ಶಕ್ತಿಕೇಂದ್ರವಾಗಿರುವ ದೆಹಲಿಯಲ್ಲಿ ಜನಸಾಮಾನ್ಯರ ರೋಮಗಳು ನಿಮಿರುತ್ತವೆ. ಆಡಳಿತಾಸಕ್ತರ ಭ್ರಷ್ಟ ಮತ್ತು ಭಂಡತನದಿಂದ ರೋಸಿ ಹೋಗಿದ್ದ ಜನರು ಆಮ್ ಆದ್ಮಿಯತ್ತ ಆಕರ್ಷಿತರಾದರು.  
ಭರವಸೆಗಳು ಕಾರಣ: ಕಾಂಗ್ರೆಸ್‌ಗೆ  ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಬಿಜೆಪಿಗೆ ನರೇಂದ್ರಮೋದಿ, ರಾಜನಾಥ್ ಸಿಂಗ್ ಮತ್ತಿತರ ಘಟಾನುಘಟಿ ನಾಯಕರು ಪ್ರಚಾರ ಮಾಡಿದರು. ಎಎಪಿ ಪಕ್ಷದ ಪ್ರಚಾರಕ್ಕೆ  ಅರವಿಂದ್ ಕೇಜ್ರಿವಾಲ್ ಮತ್ತವರ ಸಂಗಡಿಗರೇ ದಿಕ್ಕು.  ನಿತ್ಯ 18ರಿಂದ 20 ಗಂಟೆಗಳ ಕಾಲ ಪ್ರಚಾರ ಮಾಡಿದ ಅರವಿಂದ್ ಮತ್ತವರ ಸಂಗಡಿಗರು ನೀಡಿದ್ದು-  ಭ್ರಷ್ಟಾಚಾರ ಮುಕ್ತ ಶುದ್ಧ ಮತ್ತು ಪಾರದರ್ಶಕ ಆಡಳಿತದ ಭರವಸೆ.
ಎಲ್ಲರಿಗೂ ಶುದ್ದ ಕುಡಿಯುವ ನೀರು ಮತ್ತು ಎಲ್ಲರಿಗೂ 24 ಗಂಟೆ ವಿದ್ಯುತ್. ವಿದ್ಯುತ್ ದರ ಇಳಿಸುವ ಭರವಸೆಯನ್ನೂ ನೀಡಿದ್ದರು.
ಹೊಸಬರು: ಸಮಾಜದ ವಿವಿಧ ಸ್ತರಗಳ ಜನರು ಕಣಕ್ಕಿಳಿದರು. ಚುನಾವಣೆಗೆ ನಿಂತವರಾರೂ ವೃತ್ತಿಪರ ರಾಜಕಾರಣಿಗಳಾಗಿರಲಿಲ್ಲ ಮತ್ತು ಎಲ್ಲರೂ ರಾಜಕಾರಣಕ್ಕೆ ಹೊಸಬರಾಗಿದ್ದರು. ಮತದಾರರಿಗೆ ಹೊಸಬರ ಬಗ್ಗೆ ವಿಶ್ವಾಸ ಮೂಡಿತು. ಮತ ನೀಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಆರಂಭದಲ್ಲಿ ಎಎಪಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮಾಧ್ಯಮ ಸಮೀಕ್ಷೆಗಳು ಕೂಡ 15ರಿಂದ 20 ಸ್ಥಾನಗಳನ್ನು ಎಎಪಿ ಗಳಿಸಬಹುದು ಎಂದು ಭವಿಷ್ಯ ನುಡಿದಾಗ ಬಿಜೆಪಿ, ಕಾಂಗ್ರೆಸ್ ಕುಹಕವಾಡಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement