ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಂಧ್ರ ವಿಭಜನೆಗೆ ದೇವೇಗೌಡರ ವಿರೋಧ

ಆಂಧ್ರಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣ ರಾಜ್ಯ ರೂಪಿಸುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು...

Vishwanath S
Updated On : 10 Dec 2013, 12:14 pm

ನವದೆಹಲಿ: ಆಂಧ್ರಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣ ರಾಜ್ಯ ರೂಪಿಸುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಭಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ ಮೋಹನ್ ರೆಡ್ಡಿಗೆ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ. ಸೋಮವಾರ ತಮ್ಮನ್ನು ಭೇಟಿ ಮಾಡಿದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರ ಹೋರಾಟಕ್ಕೆ ದೇವೇಗೌಡರು ತಮ್ಮ ಬೆಂಬಲ ವ್ಯಕ್ತ ಪಡಿಸಿ, ಶುಭ ಕೋರಿದರು. ಜಗನ್‌ಮೋಹನ್ ಅವರು ದೇವೇಗೌಡರ ನಿವಾಸದಲ್ಲಿ ಒಂದು ತಾಸು ಮಾತುಕತೆ ನಡೆಸಿದರು. ಈ ವೇಳೆ ಆಂಧ್ರ ವಿಭಜನೆಯಿಂದಾಗುವ ಅನಾಹುತಗಳ ಬಗ್ಗೆ ವಿವರಿಸಿದರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, 'ಆಂಧ್ರ ರಾಜ್ಯ ಇಬ್ಭಾಗ ಮಾಡುವುದನ್ನು ನಾನು ವಿರೋಧಿಸುತ್ತೇನೆ. ರಾಜ್ಯಗಳ ರಚನೆ ಜನರ ಸರ್ವಾಂಗೀಣ ಅಭ್ಯುದಯದ ಆಶಯ ಹೊಂದಿರಬೇಕು.  ರಾಜಕೀಯ ಲಾಭಕ್ಕಾಗಿ ರಾಜ್ಯ ರಚನೆ ಸರಿಯಲ್ಲ' ಎಂದರು. ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಹೋರಾಟಕ್ಕೆ ಬೆಂಬಲ ನೀಡಿರುವುದರಿಂದ ನಮ್ಮ ಹೋರಾಟ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು. ಕೊನೆಯ ಉಸಿರು ಇರುವವರೆಗೂ ಅಖಂಡ ಆಂಧ್ರಕ್ಕಾಗಿ ನಾವು ಹೋರಾಡುತ್ತೇವೆ. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಎಲ್ಲರ ಬೆಂಬಲ ಕೇಳುತ್ತಿದ್ದೇವೆ. ವಿಭಜನೆ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಒಂದೇ ಒಂದು  ಕ್ಷೇತ್ರ ಗೆಲ್ಲಲು ಸಾಧ್ಯವಿಲ್ಲ ಎಂದೂ ಜಗನ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement