ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಳ್ಳಗಿರುವುದೆಲ್ಲ ಹಾಲಲ್ಲ, ವಿಷವೇ ತುಂಬಿದೆ ಇದರಲ್ಲೆಲ್ಲ

ಹಾಲು ಕುಡಿಯುವ ಮುನ್ನ ಕೊಂಚ ಎಚ್ಚರ...ಏಕೆಂದರೆ ಬೆಳ್ಳಗಿರುವುದೆಲ್ಲ ಹಾಲಲ್ಲ, ಪ್ಯಾಕೆಟ್ ಹಾಲು ಅಮೃತವಲ್ಲ ಕೊಂಚ ಯಾಮಾರಿದರೆ ...

Vishwanath S
Updated On : 10 Dec 2013, 12:10 pm

ಕನ್ನಡಪ್ರಭವಾರ್ತೆ, ಬೆಂಗಳೂರು, ಡಿ. 9-
ಹಾಲು ಕುಡಿಯುವ ಮುನ್ನ ಕೊಂಚ ಎಚ್ಚರ...
ಏಕೆಂದರೆ ಬೆಳ್ಳಗಿರುವುದೆಲ್ಲ ಹಾಲಲ್ಲ, ಪ್ಯಾಕೆಟ್ ಹಾಲು ಅಮೃತವಲ್ಲ. ಕೊಂಚ ಯಾಮಾರಿದರೆ ಹಾಲು ಹಾಲಾಹಲವೂ ಆಗಬಹುದು.
ಹೌದು. ರಾಜ್ಯದ ಹಾಲು ಮಾರುಕಟ್ಟೆಯಲ್ಲಿ ಈಗ ಕಲಬೆರಕೆ ಹಾಲಿನ ಹಾವಳಿ ಅತಿಯಾಗಿದೆ. ಗುಣಮಟ್ಟದ ಹಾಲಿಗಿಂತ ಕಲಬೆರಕೆ ಹಾಲಿನ ಮಾರುಕಟ್ಟೆಯೇ ಮಿತಿ ಮೀರಿ ಬೆಳೆಯುತ್ತಿದೆ. ಮಾತ್ರವಲ್ಲ, ವಿಷಕಾರಕ ಅಂಶಗಳೇ ಇರುವ ಈ ಹಾಲಿನಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ. ಈ ಕಲಬೆರಕೆ ಹಾಲಿನ ಹಾವಳಿಗೆ ಸಾಕ್ಷಾತ್ ಸುಪ್ರೀಂ ಕೋರ್ಟ್ ಬೆಚ್ಚಿದೆ. ಆದರೆ ಸರ್ಕಾರ ಮಾತ್ರ ದಂಧೆ ನಿಯಂತ್ರಣಕ್ಕೆ ಆಮೆ ಹೆಜ್ಜೆ ಹಾಕುತ್ತಿದೆ.
ಹೀಗಾಗಿ ಕಲಬೆರಕೆ ಹಾಲಿನ ಮಾರಾಟ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಬೆಂಗಳೂರಿನ ದರ್ಶನಿಗಳು, ಹೊಟೇಲ್‌ಗಳು, ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಇಂಥ ಹಾಲುಗಳೇ ಪೂರೈಕೆಯಾಗುತ್ತಿದೆ. ಬೆಲೆ ಕಡಿಮೆ ಎಂಬ ಕಾರಣಕ್ಕೆ ಜನ ಸಹ ಇದೇ ಹಾಲು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ತಮಗೆ ಅರಿವಿಲ್ಲದೆಯೇ ಅವರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಎದ್ದು ಹಾಲಿನ ರೂಪದ ವಿಷ ಸೇವನೆ ಮಾಡುತ್ತಿದ್ದಾರೆ.
ಆತಂಕದ ವಿಚಾರ ಎಂದರೆ ಹಾಲುಗಲ್ಲದ ಹಸುಳೆಗಳಿಗೂ ತಾಯಂದಿರು ಈ ಕಲಬೆರಕೆ ಹಾಲು ಕುಡಿಸುತ್ತಿದ್ದಾರೆ. ತಮಗೆ ಅರಿವಿಲ್ಲದಂತೆಯೇ ಅವರು ಮಕ್ಕಳನ್ನು ಆನಾರೋಗ್ಯದ ಕಡೆಗೆ ತಳ್ಳುತ್ತಿದ್ದಾರೆ. ಗುಣಮಟ್ಟದ ಹಾಲು ಸೇವಿಸುವ ಮಕ್ಕಳ ಆರೋಗ್ಯವೇ ಆಗಾಗ ಕೈ ಕೊಡುತ್ತದೆ. ಇನ್ನು ಈ ಕಲಬೆರಕೆ ಹಾಲು ಕುಡಿಯುವ ಕಂದಮ್ಮಗಳ ಆರೋಗ್ಯ ಏನಾಗಬೇಡ?

ಬಾಳುವಿಕೆಯಲ್ಲಿ ಬಲವಿಲ್ಲ : ಇದೆಲ್ಲಕ್ಕಿಂತ ಮುಖ್ಯವಾಗಿ ಹೆಚ್ಚು ದಿನ ಕೆಡದೇ ಇರುವ ಹಾಲು ತುಂಬಾ ಮಾರಕ. ಹಾಲು ಒಡೆಯಲೇಬೇಕು. ಒಡೆದಾಗ ಮಾತ್ರ ಅದು ಗಣಮಟ್ಟದ್ದು ಎಂದು ಸಾಬೀತಾಗುತ್ತದೆ. ಆದರೆ, ಕಲಬೆರಕೆ ಹಾಲು ತಯಾರು ಮಾಡುವವರು ಹಾಲಿನ ಕೆಡುವ ಗುಣವನ್ನು ಹಾಳು ಮಾಡುವುದಕ್ಕೆ ರಾಸಾಯನಿಕ  ಬೆರೆಸುತ್ತಾರೆ. ವಾಷಿಂಗ್ ಸೋಡಾ, ಕಾಸ್ಟಿಕ್ ಸೋಡಾ, ಹೈಡ್ರೋಜನ್ ಫೆರಾಕ್ಸೈಡ್‌ಗಳನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಅದರ ಮೂಲ ಸೆಲೆಯನ್ನೇ ಬತ್ತಿಸಲಾಗುತ್ತಿದೆ.

ಅಸಲಿಯಲ್ಲೇ ಇದೆ ನಕಲಿ
ದಿನ ನಿತ್ಯ ಪಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಬರುವ ಹಾಲು ನಕಲಿಯೇ! ಕೇಂದ್ರ ಸರ್ಕಾರ 2011ರ ಆಗಸ್ಟ್ 15ರಂದು ಜಾರಿಗೆ ತಂದಿರುವ ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ ರೆಗ್ಯೂಲೇಷನ್ ಆಕ್ಟ್ ಪ್ರಕಾರ ಮಾರಾಟ ಮಾಡುವ ಹಾಲಿನಲ್ಲಿ ಕೆಲ ಗುಣಾಂಶಗಳು ಇರಬೇಕು. ಟೋನ್ಡ್ ಹಾಲಿನಲ್ಲಿ ಶೇ.4.5ರಷ್ಟು ಕೊಬ್ಬು, ಶೇ 8.5 ರಷ್ಟು ಎಸ್‌ಎನ್‌ಎಫ್ (ಸಾಲಿಡ್ ನಾನ್ ಫ್ಯಾಟ್ ) ಇರಬೇಕು.
ಅದೇ ರೀತಿ ಮಾಮೂಲಿ ಹಾಲಿನಲ್ಲಿ ಶೇ.3ರಷ್ಟು ಕೊಬ್ಬು, ಶೇ.8.5ರಷ್ಟು ಎಸ್‌ಎನ್‌ಎಫ್ ಇರಬೇಕು.  ಈ ಅಂಶಗಳು ಕಡಿಮೆ ಇರುವ ಹಾಲು ಗಟ್ಟಿ ಇರುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಜನರು ಗಟ್ಟಿ ಹಾಲೇ ಕೊಡಿ ಎಂದು ಒತ್ತಿ ಕೇಳುವುದನ್ನೇ ಕೆಲವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಹಾಲನ್ನು ಗಟ್ಟಿಯಾಗಿಸುವುದಕ್ಕೆ ಗೆಣಸಿನ ಪುಡಿ, ಯೂರಿಯಾ, ಕಾರ್ಬಾಕ್ಸಿ ಮಿಥೈಲ್ ಸೆಲಿಲೋ ಹಾಗೂ ನಾನಾ ಬಗೆಯ ಹಿಟ್ಟಿನ ಪುಡಿ ಬೆರಕೆ ಮಾಡುತ್ತಾರೆ. ಮಹಾರಾಷ್ಟ್ರ ಭಾಗದಿಂದ ಪೂರೈಕೆಯಾಗುವ ಇಂಥ ಹಾಲಿಗೆ ಗಮ್ ಪೌಡರ್ ಹಾಕುತ್ತಾರೆ. ಹೀಗಾಗಿ ಇಂಥ ಕಲಬೆರೆಕೆ ಹಾಲಿನಿಂದ ತಯಾರಿಸಿದ ಮೊಸರು ಚಾಕುವಿನಿಂದ ಕುಯ್ಯುವಷ್ಟು ಗಟ್ಟಿ !

ಮೂರು ವಿಧದ ಕಲಬೆರಕೆ ಹಾಲು
ರಾಜ್ಯದ ಮಾರುಕಟ್ಟೆಗೆ ಮೂರು ವಿಧದ ಕಲಬೆರಕೆ ಹಾಲು ಹರಿದು ಬರುತ್ತಿದೆ. ಆ ಪೈಕಿ ಸಿಂಥೆಟಿಕ್ ಮಿಲ್ಕ್ ಎನ್ನುವ ಹಾಲು ಅತ್ಯಂತ ಮಾರಕ. ಅಸಲಿಗೆ ಇದು ಹಾಲೇ ಅಲ್ಲ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಹಳ್ಳಿಗಳಲ್ಲಿ ರಹಸ್ಯವಾಗಿ ತಯಾರಿಸುವ ಬಿಳಿ ಬಣ್ಣದ ದ್ರಾವಣವಷ್ಟೇ ! ಕಾಸ್ಟಿಕ್ ಸೋಡಾ, ಯೂರಿಯಾ, ಸಾಬೂನು, ಬ್ಲೀಚಿಂಗ್ ಪೌಡರ್‌ನ್ನು ಒಂದು ಹದದಲ್ಲಿ ಕಾಯಿಸಿ ಹಾಲಿನ ಬಣ್ಣಕ್ಕೆ ಪರಿವರ್ತಿಸಲಾಗುತ್ತದೆ.
ಇದು ಬಿಡಿ ಹಾಗೂ ಪ್ಯಾಕೆಟ್ ರೂಪದಲ್ಲಿ ಮಾರುಕಟ್ಟೆಗೆ ಹರಿದು ಬರುತ್ತಿದ್ದು, ಕಿಡ್ನಿ ಹಾಗೂ ಜಠರದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮಾತ್ರವಲ್ಲ ಇದರಲ್ಲಿ ಸೋಡಿಯಂ ಪ್ರಮಾಣ ಜಾಸ್ತಿ ಇರುವುದರಿಂದ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ. ಈ ಹಾಲನ್ನು ಸೇವಿಸುವವರು ಮುಂದೆ ಮಾರಕ ಕಾಯಿಲೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದ್ದ ಈ ಕಲಬೆರಕೆ ಹಾಲು ಈಗ ದಕ್ಷಿಣ ಭಾರತಕ್ಕೂ ಲಂಗುಲಗಾಮು ಇಲ್ಲದೆ ಲಗ್ಗೆ ಇಟ್ಟಿದೆ.

ಆಂಧ್ರ, ತ.ನಾಡು ಮೂಲ
ಕಲಬೆರಕೆ ಹಾಲನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚುವುದೇ ಕಷ್ಟವಾಗುತ್ತಿದೆ. ತಮಿಳುನಾಡಿನ ಈರೋಡ್, ಹೊಸೂರು, ಕೃಷ್ಣಗಿರಿ, ಧರ್ಮಪುರಿ ಹಾಗೂ ಆಂಧ್ರಪ್ರದೇಶದ ಚಿತ್ತೂರು, ಪಲಮನೇರುವಿನಿಂದ ಕಲಬೆರಕೆ ಹಾಲು ರಾಜ್ಯದ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ಪ್ರತಿನಿತ್ಯ 55 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಈ ಪೈಕಿ 30 ಲಕ್ಷ ಲೀಟರ್‌ನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ಆದಾಗಿಯೂ ರಾಜ್ಯಕ್ಕೆ  ಅಗತ್ಯವಾದ ಕ್ಷೀರಪೂರೈಕೆ ಸಾಧ್ಯವಾಗದೇ ಇರುವುದರಿಂದ ಕಲಬೆರಕೆ ಕ್ಷೀರ ಕ್ರಾಂತಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ದುಷ್ಪರಿಣಾಮ
ಕಿಡ್ನಿ ಹಾಗೂ ಜಠರದ ಮೇಲೆ ದುಷ್ಪರಿಣಾಮ, ಸೋಡಿಯಂ ಪ್ರಮಾಣ ಜಾಸ್ತಿ ಇರುವುದರಿಂದ ರಕ್ತದೊತ್ತಡಕ್ಕೂ ದಾರಿ, ಕ್ಯಾನ್ಸರ್‌ಗೆ ಒಳಗಾಗುವ ಆಪಾಯ.

ಪತ್ತೆ ಹಚ್ಚುವುದಕ್ಕೆ ಉಪಕರಣವಿಲ್ಲ
ನಕಲಿ ಹಾಲಿನ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಅದನ್ನು ನಿಯಂತ್ರಿಸುವುದಕ್ಕೆ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಹಾರ ಪರಿವೀಕ್ಷಕರಿಗೆ ಇದೊಂದು ಸಮಸ್ಯೆಯೇ ಅಲ್ಲ. ಈ ಬಗ್ಗೆ ಕೆಎಂಎಫ್ ಮೇಲಿಂದ ಮೇಲೆ ಆತಂಕ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೊರ ರಾಜ್ಯಹಾಲು
ಸ್ವಸ್ತಿಕ್, ಡೊಡ್ಲ, ಆರೋಗ್ಯ ತಿರುಮಲ, ಹೆರಿಟೇಜ್, ಸಿಂಥೆಟಿಕ್ ಮಿಲ್ಕ್, ಜರ್ಸಿ
ವಿಷಕಾರಕ ಅಂಶಗಳು: ಕಾಸ್ಟಿಕ್ ಸೋಡಾ, ಯೂರಿಯಾ, ಸಾಬೂನು, ಬ್ಲೀಚಿಂಗ್ ಪೌಡರ್, ಗೆಣಸಿನ ಪುಡಿ, ಕಾರ್ಬಾಕ್ಸಿ ಮಿಥೈಲ್ ಸೆಲಿಲೋ, ವಾಷಿಂಗ್ ಸೋಡಾ, ಹೈಡ್ರೋಜನ್ ಪೆರಾಕ್ಸೈಡ್

ಎಲ್ಲಿಗೆ ಪೂರೈಕೆ ?
ಕಲಬೆರಕೆ ಹಾಲು ಹೆಚ್ಚಾಗಿ ಪೂರೈಕೆಯಾಗುವುದು ಹೊಟೇಲ್‌ಗಳಿಗೆ ಹಾಗೂ ದರ್ಶಿನಿಗಳಿಗೆ. ಅದೇ ರೀತಿ ಗೃಹಬಳಕೆ ಕ್ಷೇತ್ರಕ್ಕೂ ಈಗ ಲಗ್ಗೆಯಿಟ್ಟಿದೆ. ಹೀಗಾಗಿ ಈ ದಂಧೆ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಮುಂದಾಗಬೇಕಿದೆ.
ಕಲಬೆರಕೆ ಹಾಲು ರಾಜ್ಯದಲ್ಲಿ ಗಂಭೀರ ಸಮಸ್ಯೆಯಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಉತ್ತರ ಕರ್ನಾಟಕದಲ್ಲಿ ಯೂರಿಯಾ ಮಿಶ್ರಿತ ಹಾಲು ಯಥೇಚ್ಛವಾಗಿ ಮಾರಾಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
- ಟಿ.ಬಿ.ಜಯಚಂದ್ರ, ಕಾನೂನು ಸಚಿವ

ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಭಾರಿ ಪ್ರಮಾಣದ ಕಲಬೆರಕೆ ಆಗುತ್ತಿದೆ. ಸರ್ಕಾರ ಈ ವಿಚಾದರ ಬಗ್ಗೆ ಮೊದಲು ಗಮನ ಹರಿಸಬೇಕು. ಪ್ರತಿದಿನ 50 ಸಾವಿರದಿಂದ ಒಂದು ಲಕ್ಷ ಲೀಟರ್‌ವರೆಗೆ ಕಲಬೆರಕೆ ಹಾಲು ಬೆಂಗಳೂರಿಗೆ ಬರುತ್ತದೆ. ಪ್ಯಾಕೆಟ್ ಹಾಲು ಸಹ ಮಾರಕ. ಅದರ ಮೇಲೆ ಉತ್ಪಾದನಾ ದಿನಾಂಕವೂ ಇರದು. ಸಿಹಿ ತಿನಿಸುಗಳ ಉದ್ಯಮಕ್ಕೂ ಕಲಬೆರಕೆ ಹಾಲು ಪೂರೈಕೆ ಆಗುತ್ತಿದೆ. ಇದೆಲ್ಲವೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಕಲಬೆರಕೆ ಹಾಲು ತಯಾರಿಸುವವರು ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತರಬೇಕು.
- ಪ್ರಭಾಕರ ರಾವ್, ಆಹಾರ ತಜ್ಞ      

- ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement