ಯಾರ್ಗೂ ಬೇಡ್ವಂತೆ ದಿಲ್ಲಿ ಗದ್ದುಗೆ
ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಗದ್ದುಗೆ ಯಾರಿಗೂ ಬೇಡವಾದ ವಿಚಿತ್ರ ಬೆಳವಣಿಗೆ ಸೃಷ್ಟಿಯಾಗಿದೆ ಮುಖ್ಯಮಂತ್ರಿ ಕುರ್ಚಿಗಿಂತ ಪ್ರತಿಪಕ್ಷ ಸ್ಥಾನದ ಕುರ್ಚಿಯೇ...
ನವದೆಹಲಿ: ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಗದ್ದುಗೆ ಯಾರಿಗೂ ಬೇಡವಾದ ವಿಚಿತ್ರ ಬೆಳವಣಿಗೆ ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಕುರ್ಚಿಗಿಂತ ಪ್ರತಿಪಕ್ಷ ಸ್ಥಾನದ ಕುರ್ಚಿಯೇ ಮೇಲು ಎಂಬ ನಿರ್ಧಾರಕ್ಕೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮತ್ತು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎಎಪಿ ಮರು ಚುನಾವಣೆಗೆ ಹೋಗಲು ಸಿದ್ಧ ಎಂದು ಹೇಳಿವೆ.
ಈ ಸಂಬಂಧ ಬಿಜೆಪಿ ಭಾನುವಾರವೇ ಸೂಚ್ಯವಾಗಿ ಹೇಳಿತ್ತು. ಸಿಎಂ ಅಭ್ಯರ್ಥಿ ಹರ್ಷವರ್ಧನ್ ನಾವು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದೇವೆ ಎಂದು ಹೇಳಿದ್ದರು. ಸೋಮವಾರ ಬೆಳಗಿನಿಂದ ಸರಣಿಯೋಪಾದಿಯಲ್ಲಿ ಸಭೆ ನಡೆಸಿರುವ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಸರ್ಕಾರ ರಚನೆಗೆ ಕೈಹಾಕುವುದು ಬೇಡ. ಇದಕ್ಕಾಗಿ ಯಾರೊಬ್ಬರ ಸಹಾಯ ಹಸ್ತಯಾಚಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ದೊಡ್ಡ ಪಕ್ಷವಾಗಿರುವ ಬಿಜೆಪಿ ಬೇಕಾದರೆ ಅಧಿಕಾರ ಹಿಡಿಯಲಿ, ನಾವು ವಿಪಕ್ಷ ಸ್ಥಾನದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಅವರೇ ಹೇಳಿದ್ದಾರೆ.
ಬಿಜೆಪಿಯಲ್ಲೂ ಸೋಮವಾರ ಕೆಲವೊಂದು ಚರ್ಚೆಗಳಾಗಿವೆ. ಲೆ. ಗವರ್ನರ್‌ರಿಂದ ಸರ್ಕಾರ ರಚನೆಗೆ ಆಹ್ವಾನ ಬಂದರೆ ತಿರಸ್ಕಾರ ಮಾಡುತ್ತೇವೆ, ಬೇಕಾದರೆ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿಕೊಳ್ಳಲಿ ಎಂದು ಹೇಳಿದೆ. ಇದು ಆಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಘೋಷಣೆ ಮಾಡಿ ಮತ್ತೊಮ್ಮೆ ಚುನಾವಣೆ ನಡೆಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದರೆ ಅಣ್ಣಾ ಹಜಾರೆ ಗುಂಪಿನಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಮತ್ತು ಎಎಪಿ ಸೇರಿ ಸರ್ಕಾರ ರಚಿಸುವುದು ಸೂಕ್ತ. ಜನರ ಮೇಲೆ ಮತ್ತೆ ಮತ್ತೆ ಚುನಾವಣೆಯ ಭಾರ ಹೇರಬಾರದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ನಮಗೆ ಸಮ್ಮಿಶ್ರ ಸರ್ಕಾರದಲ್ಲಿ ನಂಬಿಕೆ ಇಲ್ಲ. ನಾವೂ ಬಿಜೆಪಿ ಸೇರಿದಂತೆ ಯಾರೊಂದಿಗೂ ಕೈಜೋಡಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜುಂಗ್ ಪರಿಸ್ಥಿತಿ ಅಭ್ಯಸಿಸುತ್ತಿದ್ದಾರೆ. ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.
ಯಾರಿಗೂ ಬೆಂಬಲ ನೀಡಲ್ಲ
ಅರವಿಂದ್ ಕೇಜ್ರಿವಾಲ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂಬ ಸುದ್ದಿಯನ್ನು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ತಿರಸ್ಕರಿಸಿದ್ದಾರೆ. ನಾವು ಯಾರಿಗೂ ಬೆಂಬಲ ನೀಡುವುದಿಲ್ಲ. ಇವೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.
ಸೋನಿಯಾ ಪರಾಮರ್ಶೆ
ನಾಲ್ಕು ರಾಜ್ಯಗಳ ಸೋಲು ಕಾಂಗ್ರೆಸ್‌ಗೆ ತೀವ್ರ ಆಘಾತ ನೀಡಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು, ಆಯಾ ರಾಜ್ಯಗಳ ಉಸ್ತುವಾರಿ ಮತ್ತು ಪಕ್ಷದ ನಾಯಕರ ಜೊತೆ ಸೋಮವಾರ ಸಂಜೆ ಸೋಲಿನ ಪರಾಮರ್ಶೆ ನಡೆಸಿದರು. ಈ ರಾಜ್ಯಗಳಲ್ಲಿ ಸೋಲಲು ಕಾರಣವೇನು ಎಂಬ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಅಹ್ಮದ್ ಪಟೇಲ್ ಮತ್ತು ಎ.ಕೆ. ಆ್ಯಂಟನಿ ಪಾಲ್ಗೊಂಡಿದ್ದರು.
ದೆಹಲಿ ಪಾಲಿಗೆ ಉಳಿದಿರುವುದೇನು?
ಬಿಜೆಪಿ - ಎಎಪಿ ದೋಸ್ತಿ ಸರ್ಕಾರ; ಎಎಪಿ - ಕಾಂಗ್ರೆಸ್ ಮೈತ್ರಿ ಸರ್ಕಾರ
ಎಎಪಿ ಅಥವಾ ಬಿಜೆಪಿಗೆ ಅಲ್ಪಮತದ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಬಹುದು. ಬಳಿಕ ವಿಶ್ವಾಸ ಮತ ಸಾಬೀತುಪಡಿಸುವಂತೆ ಸೂಚಿಸಬಹುದು. ಪ್ರತಿಪಕ್ಷಗಳ ಕೆಲವರನ್ನು ಗೈರಾಗುವಂತೆ ಮಾಡಿ ಸರ್ಕಾರ ಉಳಿಸಿಕೊಳ್ಳಬಹುದು.
ಮೇಲಿನ ಯಾವುದೂ ಆಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಮಾಡಿ 6 ತಿಂಗಳು ಕಾಯುವುದು.
ಯಾರೊಬ್ಬರೂ ಮುಂದೆ ಬರದೇ ಹೋದರೆ ವಿಧಾನಸಭೆ ವಿಸರ್ಜನೆ, ಮರು ಚುನಾವಣೆ
ಎಎಪಿಗೆ ಜೆಡಿಯು ಬೆಂಬಲ
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆಗಲಿ ಎಂದು ಜೆಡಿಯು ಹೇಳಿದೆ. ದೆಹಲಿಯಲ್ಲಿ ಜೆಡಿಯುಗೆ ಒಂದು ಸ್ಥಾನ ಸಿಕ್ಕಿದ್ದು ಎಎಪಿಗೆ ಬೆಂಬಲ ಘೋಷಿಸಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೊರತಾದ ಫಲಿತಾಂಶ ಎಂದು ಪಕ್ಷದ ವಕ್ತಾರ ಕೆ.ಸಿ. ತ್ಯಾಗಿ ಅಭಿಪ್ರಾಯಪಟ್ಟಿದ್ದಾರೆ.