ಸಿಂಗಾಪುರ, ಚೀನಾಕ್ಕೆ ರಕ್ತಚಂದನ ಕಳ್ಳ ಸಾಗಣೆ
ಬೆಳಗಾವಿ: ಚೀನಾ, ಸಿಂಗಾಪುರ ಸೇರಿದಂತೆ ಅಂತಾರಾಷ್ಟ್ರೀಯವಾಗಿ ಭಾರಿ ಬೇಡಿಕೆ ಇರುವ ರಕ್ತಚಂದನ, ಸಪ್ತರಂಗಿ, ಶ್ರೀಗಂಧದ ಕಟ್ಟಿಗೆಗಳ ಕಳ್ಳ ಸಾಗಾಟ ಜಾಲ ಸಕ್ರಿಯವಾಗಿದೆ.
ಆಂಧ್ರದ ಕಡಪಾ ಮತ್ತಿತರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ರಕ್ತಚಂದನವನ್ನು ಚೆನ್ನೈನಲ್ಲಿ ಸಂಗ್ರಹಿಸಿ ಅಲ್ಲಿಂದ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಸಾಗಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ನಿಪ್ಪಾಣಿ ಬಳಿಯ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಕಳೆದ 10 ತಿಂಗಳಲ್ಲಿ ಸುಮಾರು 5 ಕೋಟಿ ಮೌಲ್ಯದ (ಸ್ಥಳೀಯ ಮಾರುಕಟ್ಟೆ ದರ) ರಕ್ತಚಂದನವನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಕೆಜಿಗೆ ಕೇವಲ 1200ರಿಂದ 1300 ಇರುವ ರಕ್ತಚಂದನ ಚೀನಾ, ಸಿಂಗಾಪುರ ಮಾರುಕಟ್ಟೆಯಲ್ಲಿ ಇದು 3500 ರಿಂದ 4000ವರೆಗೂ ಮಾರಾಟವಾಗುತ್ತದೆ.
ರಕ್ತಚಂದನವನ್ನು ಮಾರಾಟ ಮಾಡುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ ಖದೀಮರು ಇದನ್ನು ಅಕ್ಕಿ ಹೊಟ್ಟು, ಬೀಡಿ ಎಲೆ ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ತುಂಬಿರುವ ಲಾರಿಯಲ್ಲಿ ಕೆಳಗಡೆ ಹಾಕಿಕೊಂಡು ಸಾಗಿಸುತ್ತಾರೆ. ಹಲವು ಸಂದರ್ಭದಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ಇದು ಗೊತ್ತಾಗದೇ ಹೋಗುತ್ತದೆ. ಖಚಿತ ಮಾಹಿತಿ, ಸಂದೇಹ ಬಂದ ಸಂದರ್ಭದಲ್ಲಿ ಮಾತ್ರ ಚೆಕ್ ಪೋಸ್ಟ್‌ನಲ್ಲಿ ಪರಿಶೀಲಿಸಲಾಗುತ್ತದೆ. ವಿಶೇಷ ಎಂದರೆ, ರಾಷ್ಟ್ರೀಯ ಹೆದ್ದಾರಿ 4 ರಕ್ತಚಂದನ ಸಾಗಿಸಲು ರಾಜಮಾರ್ಗ ಎಂದು ಹೇಳಲಾಗುತ್ತಿದೆ.
ನಿಪ್ಪಾಣಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಸುಮಾರು 1.5 ಕೋಟಿ ಮೌಲ್ಯದ 10 ಟನ್ ರಕ್ತಚಂದನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ನಿಪ್ಪಾಣಿ ಚೆಕ್‌ಪೋಸ್ಟ್‌ನಲ್ಲೇ ಹೆಚ್ಚು: ನಿಪ್ಪಾಣಿ ಬಳಿ ಇರುವ ಅಂತಾರಾಜ್ಯ ಗಡಿಯ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ನಲ್ಲಿ ರಕ್ತಚಂದನ ಪತ್ತೆ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಸಂದೇಹ ಬಂದಲ್ಲಿ ಅಥವಾ ಖಚಿತ ಮಾಹಿತಿ ಇದ್ದಲ್ಲಿ, ಸಮರ್ಪಕ ದಾಖಲೆ ಇಲ್ಲದಿದ್ದಲ್ಲಿ ಲಾರಿಯನ್ನು ಸಂಪೂರ್ಣವಾಗಿ ಪರಿಶೀಲಿಸುತ್ತೇವೆ. ಭಾನುವಾರದ ಪ್ರಕರಣವೂ ಹಾಗೆಯೇ ಚಾಲಕ ಸರಿಯಾದ ಮಾಹಿತಿ ನೀಡಲಿಲ್ಲ.
ಪರಿಶೀಲಿಸಿದಾಗ ತೀರಾ ಕೆಳಭಾಗದಲ್ಲಿ 10 ಟನ್ ರಕ್ತಚಂದನ ಇತ್ತು ಎಂದು ಉಪ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ್ ಹೇಳುತ್ತಾರೆ. ತಿರುಪತಿ ಮೂಲಕ ಶಿವಾ ಎಂಬುವವರು ಚೆನ್ನೈ- ಬೆಂಗಳೂರು ಮೂಲಕ ಇದನ್ನು ಮುಂಬೈಗೆ ಸಾಗಿಸುತ್ತಿದ್ದರು. ಎಂದು ಅವರು ಹೇಳಿದ್ದಾರೆ.
ಬೇಡಿಕೆ ಏಕೆ?
ಭಾರತ ಸೇರಿದಂತೆ ಎಲ್ಲ ದೇಶಗಳಲ್ಲೂ ರಕ್ತಚಂದನವನ್ನು ಔಷಧಿಗೆ ಬಳಸುತ್ತಾರೆ. ಚೀನಾ, ಸಿಂಗಾಪುರದಲ್ಲಿ ರಕ್ತ ಚಂದನ ದೊರೆಯುವುದಿಲ್ಲ. ಇದರ ಜೊತೆಯಲ್ಲಿ ಚೀನಾದಲ್ಲಿ ಇದನ್ನು ಆಟಿಕೆ ತಯಾರಿಸಲು ಹಾಗೂ ಚೀನಾದಲ್ಲಿರುವ ಬೌದ್ಧ ಧರ್ಮೀಯರು ಮನೆಗಳಲ್ಲಿ ರಕ್ತ ಚಂದನ ಇಟ್ಟು ಪೂಜಿಸಲು ಸಹ ಬಳಸುತ್ತಾರೆ. ಆದ್ದರಿಂದ ಈ ದೇಶಗಳಲ್ಲಿ ಇದಕ್ಕೆ ಅತ್ಯಧಿಕ ಬೇಡಿಕೆ.
- ರಾಯಣ್ಣ .ಆರ್.ಸಿ.