ದಿಲ್ಲಿ: ಆಮ್ ಆದ್ಮಿಗೆ ಆಹ್ವಾನ
ದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಾಧ್ಯತೆ ಬಹುತೇಕ ಮುಗಿದ ಅಧ್ಯಾಯ. ಸರ್ಕಾರ ರಚನೆಗೆ ಸಂಬಂಧಿಸಿ...
ನವದೆಹಲಿ: ದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಾಧ್ಯತೆ ಬಹುತೇಕ ಮುಗಿದ ಅಧ್ಯಾಯ. ಸರ್ಕಾರ ರಚನೆಗೆ ಸಂಬಂಧಿಸಿ ದೆಹಲಿ ಲೆ. ಗವರ್ನರ್ ನಜೀಬ್ ಜಂಗ್ ನೀಡಿದ್ದ ಆಹ್ವಾನವನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹರ್ಷವರ್ಧನ್ ಸಂಖ್ಯಾಬಲದ ಕೊರತೆ ಮುಂದಿಟ್ಟುಕೊಂಡು ಗುರುವಾರ ನಿರಾಕರಿಸಿದ್ದಾರೆ. ಇದೇ ವೇಳೆ ಆಮ್‌ಆ ಆದ್ಮಿ ಪಕ್ಷದ ನಾಯಕರನ್ನು ದಿಲ್ಲಿ ರಾಜ್ಯಪಾಲ ನಜೀಬ್ ಜಂಗ್ ಸರ್ಕಾರ ರಚನೆ ನಿಟ್ಟಿನಲ್ಲಿ ಚರ್ಚಿಸಲು ಆಹ್ವಾನಿಸಿದ್ದಾರೆ.
ಒಂದು ವೇಳೆ ಆಮ್ ಆದ್ಮಿಯೂ ಸರ್ಕಾರ ರಚನೆಗೆ ಹಿಂದೇಟು ಹಾಕಿದರೆ ದೆಹಲಿ ಜನತೆಗೆ ಮತ್ತೊಂದು ಚುನಾವಣೆ ಅನಿವಾರ್ಯವಾಗಲಿದೆ.
ಗವರ್ನರ್- ಹರ್ಷವರ್ಧನ್ ಭೇಟಿ
ಇದಕ್ಕೂ ಮೊದಲು ಬಿಜೆಪಿ ಮುಖಂಡ ಹರ್ಷವರ್ಧನ್ ಲೆ.ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರ ರಚನೆಗೆ ಗವರ್ನರ್ ನೀಡಿದ ಆಹ್ವಾನವನ್ನು ಸಂಖ್ಯಾಬಲದ ಕೊರತೆ ಮುಂದಿಟ್ಟುಕೊಂಡು ತಿರಸ್ಕರಿಸಿದರು.
ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಅಗತ್ಯ ಸಂಖ್ಯಾಬಲವಿಲ್ಲದೆ ಸರ್ಕಾರ ರಚನೆಗೆ ಕೈ ಹಾಕುವ ಬದಲು ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ನಾವು ಇಷ್ಟಪಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಪಕ್ಷ ಬೇಕಾದರೂ ಸರ್ಕಾರ ರಚನೆಗೆ ಮುಂದಾಗಬಹುದು, ತನ್ನ ಬಹುಮತ ಸಾಧಿಸಬಹುದು. ನಾವು ಮಾತ್ರ ದೆಹಲಿಯ ಜನತೆ ಪರ ಕೆಲಸ ಮುಂದುವರಿಸಲಿದ್ದೇವೆ ಎಂದರು.
ಮುಂದೇನು?
- ಸರ್ಕಾರ ರಚನೆಗೆ ಬಿಜೆಪಿ ಸ್ಪಷ್ಟವಾಗಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಲೆ. ಗವರ್ನರ್ ನಜೀಬ್ ಜಂಗ್ ಅವರು ಆಮ್ ಆದ್ಮಿ ಪಕ್ಷಕ್ಕೆ ಆಹ್ವಾನ ನೀಡಲಿದ್ದಾರೆ.
- ಆಮ್ ಆದ್ಮಿ ಪಕ್ಷ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಬಹುದು.
- ಆಮ್ ಆದ್ಮಿಯೂ ಸರ್ಕಾರ ರಚನೆಗೆ ನಿರಾಕರಿಸಿದರೆ ಲೆ. ಗವರ್ನರ್ ಗೃಹ ಸಚಿವಾಲಯಕ್ಕೆ ಈ ಕುರಿತು ವರದಿ ನೀಡಲಿದ್ದಾರೆ.
- ಬಳಿಕ ದೆಹಲಿ ವಿಧಾನಸಭೆಯನ್ನು ಆರು ತಿಂಗಳವರೆಗೆ ಅಮಾನತಿನಲ್ಲಿಡಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬಹುದು.
- ವಿಧಾನಸಭೆ ಅಮಾನತು ಆರು ತಿಂಗಳವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆಗೆ ಪ್ರಯತ್ನಿಸಬಹುದು.
- ಆರು ತಿಂಗಳಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆಗೆ ಮುಂದಾಗದಿದ್ದರೆ ವಿಧಾನಸಭೆಗೆ ಮತ್ತೆ ಚುನಾವಣೆ ಅನಿವಾರ್ಯವಾಗಲಿದೆ.
ಬೆಂಬಲ ನೀಡ್ತೀವಿ: ರಾಹುಲ್
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಆಮ್ ಆದ್ಮಿಯೇನಾದರೂ ಸರ್ಕಾರ ರಚಿಸಲು ಮುಂದಾದರೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.