ವಾಟಾಳ್ ಬೆಂಬಲಿಗ ಗೋಪಿ ಕುಟುಂಬದ ನಾಲ್ವರ ಆತ್ಮಹತ್ಯೆ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.12-
ಕನ್ನಡಪರ ಹೋರಾಟಗಾರ, ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರ ಕಟ್ಟಾ ಬೆಂಬಲಿಗ ನಾ. ಗೋಪಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೈಯ್ಯಪ್ಪನಹಳ್ಳಿ ನಾಗಾವಾರಪಾಳ್ಯದ ಚಿನ್ನಪ್ಪ ಬಡಾವಣೆಯಲ್ಲಿ ವಾಸವಿದ್ದ ಗೋಪಿ (45) ಪತ್ನಿ ಜಯಶ್ರೀ (45) ಪುತ್ರ ದಿಲೀಪ್ ಕುಮಾರ್ (16) ಹಾಗೂ ಪುತ್ರಿ ಸಂಗೀತಾ (14) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪತ್ನಿ ಹಾಗೂ ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬುಧವಾರ ಸ್ಥಳೀಯ ಮುಖಂಡರೊಬ್ಬರ ಹುಟ್ಟುಹಬ್ಬ ಆಚರಿಸಿದ್ದ ಗೋಪಿ, ಕುಟುಂಬ ಸದಸ್ಯರು ಸ್ಥಳೀಯರು ಹಾಗೂ ಸಂಬಂಧಿಕರಿಗೆ ಕಾಣಿಸಿಕೊಂಡಿದ್ದು ಅದೇ ಕೊನೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿಕ್ಕಪ್ಪನ ಮಗ ನಾರಾಯಣಸ್ವಾಮಿ ಎಂಬುವರು ಗೋಪಿ ಮೊಬೈಲ್ ಫೋನ್ಗೆ ಕರೆ ಮಾಡಿದ್ದಾರೆ. ಆದರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅವರು ಗೋಪಿ ಪತ್ನಿ ಜಯಶ್ರೀ ಅವರಿಗೆ ಕರೆ ಮಾಡಲು ಯತ್ನಿಸಿದ್ದಾರೆ. ಅವರ ಮೊಬೈಲ್ ಫೋನ್ ಕೂಡಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸ್ವತಃ ನಾರಾಯಣಸ್ವಾಮಿಯೇ ಮನೆಯ ಬಳಿ ಬಂದಿದ್ದಾರೆ. ಈ ವೇಳೆ ಮನೆಗೆ ಒಳಗಿನಿಂದ ಲಾಕ್ ಮಾಡಲಾಗಿತ್ತು. ಬಾಗಿಲು ಬಡಿದರೂ ತೆಗೆಯದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ಕಿಟಕಿಯಿಂದ ನೋಡಿದಾಗ ಗೋಪಿ ಮನೆಯ ಹಾಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ.
ನಂತರ ಸ್ಥಳೀಯರ ನೆರವಿನೊಂದಿಗೆ ಬಾಗಿಲು ಒಡೆದು ನೋಡಿದಾಗ ಪ್ರತ್ಯೇಕ ಕೊಠಡಿಗಳಲ್ಲಿ ಗೋಪಿ ಪತ್ನಿ ಜಯಶ್ರೀ, ಪುತ್ರ ದಿಲೀಪ್ ಹಾಗೂ ಪುತ್ರಿ ಸಂಗೀತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮೊದಲು ವಿಷ ಕೊಟ್ಟರೇ?: ಮೊದಲು ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿದ ಬಳಿಕ ಗೋಪಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ. ಏಕೆಂದರೆ ಮೂವರ ಶವಗಳ ಮೇಲೆ ಗುಲಾಬಿ ಹೂಗಳ ದಳಗಳನ್ನು ಹಾಕಲಾಗಿದೆ. ಗೋಪಿ ಪುತ್ರ ದಿಲೀಪ್ ಕುಮಾರ್ ತುಮಕೂರಿನ ಸಿದ್ದಗಂಗಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಪುತ್ರಿ ಸಂಗೀತಾ ಕೆ.ಆರ್.ಪುರದ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಗೋಪಿ ಹಳೇ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಪಕ್ಕದಲ್ಲಿ ಸ್ಟೇಷನರಿ ಮಳಿಗೆ ನಡೆಸುತ್ತಿದ್ದರು. ಜತೆಗೆ ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಗೋಪಿ ನಡೆಸುತ್ತಿದ್ದ ಪ್ರತಿಭಟನೆಗಳಲ್ಲಿ ಪತ್ನಿ ಜಯಶ್ರೀ ಸಹ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಸುಮಾರು 20 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಿದ್ದ ನಾ.ಗೋಪಿ, ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಲುಪಿಸುತ್ತಿದ್ದರು. ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ಚಿಕ್ಕಪ್ಪನ ಮಗ ನಾರಾಯಣಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮರಣ ಪತ್ರ: ಗೋಪಿ ಆತ್ಮಹತ್ಯೆಗೆ ಶರಣಾಗುವ ಮುನ್ನಾ ಮರಣಪತ್ರ ಬರೆದಿಟ್ಟಿದ್ದಾರೆ. ನಾಲ್ವರ ಅಂತ್ಯ ಸಂಸ್ಕಾರವನ್ನು ತನ್ನ ಹಣದಲ್ಲೇ ನಡೆಸಬೇಕು. ಇತ್ತೀಚೆಗೆ ನಾನು ಮೈಸೂರಿನಲ್ಲಿ 2 ಎಕರೆ ಜಮೀನು ಖರೀದಿಸಿದ್ದೇನೆ. ಅದನ್ನು ನನ್ನ ಸಹೋದರ ಸಹೋದರಿಯರಿಗೆ ನೀಡಬೇಕು. ಜತೆಗೆ ಸ್ವಂತ ಮನೆಯಲ್ಲೂ ಪಾಲು ನೀಡಬೇಕು ಎಂದು ಬರೆದಿದ್ದಾರೆ. ಇದೇ ವೇಳೆ ಮನೆಯಲ್ಲಿ ಕೆಲವು ಚೀಟಿಗಳು ಸಿಕ್ಕಿದ್ದು ಅದರಲ್ಲಿ ಗೋಪಿ ತಾನು ಯಾರಿಗೆ ಎಷ್ಟು ಹಣ ನೀಡಿದ್ದೇನೆ, ಹಾಗೂ ಯಾರಿಂದ ಎಷ್ಟು ಹಣ ಪಡೆದುಕೊಂಡಿದ್ದೇನೆ ಎನ್ನುವುದನ್ನು ಬರೆದಿದ್ದಾರೆ ಎಂದು ಬೈಯ್ಯಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ.