ವಿಷ ಕುಡಿದ ಚಾಲಕ, ಅಮಾನತು ಮಾಡಿದ ಚಾಲಾಕಿ ಅಧಿಕಾರಿಗಳು
ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರೊಬ್ಬರು ನೀಡಿದ ಕಿರುಕುಳಕ್ಕೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕರೊಬ್ಬರಿಗೆ ಸಿಕ್ಕಿದ್ದು ಅಮಾನತು ಶಿಕ್ಷೆ!
ಮೈಸೂರು ಜಿಲ್ಲೆಯ ಸಾರಿಗೆ ಸಂಸ್ಥೆಯೂ ಮೇಲಧಿಕಾರಿಗಳ ಕಿರುಕುಳದಿಂದ ಮುಕ್ತವಾಗಿಲ್ಲ. ಎಚ್.ಡಿ. ಕೋಟೆ ಘಟಕದಲ್ಲಿ ರುದ್ರಪ್ಪ ಎಂಬುವರು ಚಾಲಕರಾಗಿದ್ದಾರೆ. ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಯರಗಟ್ಟಿ ಬಳಿಯ ಇಟ್ನಾಳ್ನವರು.
ಇವರು ಹೇಳುವಂತೆ, 'ಅಲ್ಲಿನ ಘಟಕ ವ್ಯವಸ್ಥಾಪಕರು ರಜೆ, ಮಾರ್ಗ ಮಂಜೂರಾತಿಗೆ ಹಣಕ್ಕಾಗಿ ಪೀಡಿಸುತ್ತಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಹಾಜರಾತಿಯಲ್ಲಿ ಗೈರು ಎಂದು ನಮೂದಿಸುತ್ತಿದ್ದರು. ಕಳೆದ ಸೆ.23ರಂದು ರಜೆ ಕೇಳಿದ್ದಕ್ಕೆ ತಮ್ಮ ಮೇಲೆ ಹಲ್ಲೆ ಮಾಡಿದ ಎಂದು ಪೊಲೀಸರಿಗೆ ದೂರು ನೀಡಿದರು. ಇದರಿಂದ ಬೇಸತ್ತು ಸೆ.25ರಂದು ಮೈಸೂರಿನಲ್ಲಿ ವಿಷ ಕುಡಿದೆ. ಆದರೆ ಅಲ್ಲಿದ್ದ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದೆ'.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅ.5 ರಂದು ಬಿಡುಗಡೆಯಾದ ನನಗೆ ಅ.7ರಂದು ಅಮಾನತು ಆದೇಶ ಜಾರಿ ಮಾಡಲಾಯಿತು. ಘಟಕ ವ್ಯವಸ್ಥಾಪಕರ ಮೇಲೆ ಹಲ್ಲೆ ಮಾಡಿದ ಆರೋಪಕ್ಕಾಗಿ ಈ ಶಿಕ್ಷೆ ಎಂಬ ಶರಾ ಹಾಕಲಾಯಿತು. ನನಗಾದ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದೆ. ಆದರೆ ಈ ಬಗ್ಗೆ ಯಾವುದೇ ವಿಚಾರಣೆ ನಡೆಸದೇ ಏಕಾಏಕಿ ಅಮಾನತು ಆದೇಶ ನೀಡಲಾಯಿತು. ಇದು ನನ್ನನ್ನು ಮತ್ತಷ್ಟು ಘಾಸಿ ಮಾಡಿತು. ನಂತರ ಸ್ವಗ್ರಾಮಕ್ಕೆ ತೆರಳಿ, ಅಲ್ಲಿನ ಆಸ್ಪತ್ರೆಗೆ ದಾಖಲಾಗಿ, ಮತ್ತೆ ಚಿಕಿತ್ಸೆ ಪಡೆದೆ. ಅಂದಿನಿಂದ ಇಂದಿನವರೆಗೆ ಮೇಲಧಿಕಾರಿಗಳ ಬಳಿ ಅಲೆಯುತ್ತಲೇ ಇದ್ದೇನೆ. ಉಪಯೋಗ ಮಾತ್ರ ಇಲ್ಲ.
ಪತ್ನಿಗೆ ಹೆರಿಗೆಯಾದರೆ ರಜೆ ಏಕೆ?
ಎಚ್.ಡಿ. ಕೋಟೆ ಘಟಕದಲ್ಲಿಯೇ ಮತ್ತೊಂದು ಪ್ರಕರಣ ನಡೆದಿದೆ. ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ ಲಕ್ಷ್ಮಣ ಬಡಿಗೇರ ಎಂಬವರು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿಗೆ ಇತ್ತೀಚೆಗೆ ಹೆರಿಗೆಯಾಯಿತು. ಮಗುವನ್ನು ನೋಡಲು ರಜೆ ಕೇಳಿದರೆ ಕೊಡಲಿಲ್ಲ. ರಜೆ ಚೀಟಿ ಕೊಟ್ಟು ಹೋದರೆ ಗೈರು ಎಂದು ನಮೂದಿಸಿದ್ದಾರೆ. ಹಣ ಕೊಡದಿದ್ದರಿಂದ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೀಗೊಂದು ವಿಚಿತ್ರ
ಇದು ಎಚ್.ಡಿ. ಕೋಟೆ ಘಟಕದಲ್ಲಿ ನಡೆದ ವಿಚಿತ್ರ ಪ್ರಕರಣ. ಪೊಲೀಸ್ ಪೇದೆಯೊಬ್ಬ ಮಾಸಿಕ ಪಾಸ್ ನವೀಕರಣಕ್ಕೆ ಬಂದಿದ್ದ. ಪಾಸ್ ನವೀಕರಣದಲ್ಲಿ ಎರಡು ವಿಭಾಗವಿದೆ. ಒಂದು ವಿದ್ಯಾರ್ಥಿ ಪಾಸ್, ಮತ್ತೊಂದು ಸಾರ್ವಜನಿಕರ ಪಾಸ್. ಕರ್ತವ್ಯದಲ್ಲಿದ್ದ ವಿದ್ಯಾರ್ಥಿ ಪಾಸ್ ವಿಭಾಗದ ನೌಕರ ಸಾರ್ವಜನಿಕ ವಿಭಾಗದ ಮಾಸಿಕ ಪಾಸ್ ನವೀಕರಣ ಮಾಡಲು ನಿರಾಕರಿಸಿದಾಗ ಆ ಪೇದೆ ಕೌಂಟರ್ಗೆ ನುಗ್ಗಿ ಹಲ್ಲೆ ಮಾಡಿದ. ಇದರಿಂದ ನಿರ್ವಾಹಕರು ಮತ್ತು ಚಾಲಕರು ಪ್ರತಿಭಟಿಸಿದರು. ಬಸ್ಗಳನ್ನು ಡಿಪೋಗೆ ವಾಪಸ್ ಕಳುಹಿಸಲಾಯಿತು. ಬಸ್ ಸಂಚಾರ ಸ್ಥಗಿತಗೊಂಡಿತು. ಹುಣಸೂರು ಡಿವೈಎಸ್ಪಿ ಸ್ಥಳಕ್ಕೆ ಬಂದು, ಪರಿಸ್ಥಿತಿ ತಿಳಿಗೊಳಿಸಿದ ನಂತರ ಬಸ್ ಸಂಚಾರ ಪುನಾರಂಭವಾಯಿತು. ಆದರೆ ಇದೀಗ ನೌಕರರ ಪರ ಸಾರ್ವಜನಿಕರನ್ನು ಪೇದೆ ವಿರುದ್ಧ ಎತ್ತಿಕಟ್ಟಿ, ಗಲಾಟೆ ಮಾಡಿಸಿ, ಬಸ್ ಸಂಚಾರ ಸ್ಥಗಿತಗೊಳ್ಳಲು ನೀವೇ ಕಾರಣ ಎಂದು ಐವರು ನೌಕರರಿಗೆ ನೋಟಿಸ್ ಜಾರಿ ಮಾಡುವ ಯತ್ನ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದಿದೆ.
ಚಾಲಕ ಮತ್ತು ನಿರ್ವಾಹಕರಿಗೆ ರಜೆ, ಮಾರ್ಗ ಮಂಜೂರಿಗೆ ಅಧಿಕಾರಿಗಳು ಲಂಚ ಕೇಳುತ್ತಾರೆ. ಡಬಲ್ ಡ್ಯೂಟಿಗೂ ಒತ್ತಡ ಹೇರುತ್ತಾರೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
- ವಿಜಯಕುಮಾರ್, ಗಂಗಣ್ಣಗೌಡ, ಬಶೀರ್ ಅಹ್ಮದ್ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಕೆಲಸಗಾರರ ಒಕ್ಕೂಟ, ಮೈಸೂರು