ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜಾಗ್ರತೆ, ತೊಂದ್ರೆ ಕೊಟ್ರೆ ಸುಮ್ನಿರಲ್ಲ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು...

Vishwanath S
Updated On : 16 Dec 2013, 11:56 am

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ನಾಗರಬಾವಿಯಲ್ಲಿ ಭಾನುವಾರ ಸಚಿವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಬಸ್ ಡಿಪೋ ಉದ್ಘಾಟಿಸಿ ಮಾತನಾಡಿದರು.
ಕೆಎಸ್‌ಆರ್‌ಟಿಸಿಯಲ್ಲಿ ಸಿಬ್ಬಂದಿ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದರ್ಪ, ದೌರ್ಜನ್ಯ ಮತ್ತು ದಬ್ಬಾಳಿಕೆ ಕುರಿತು ಕನ್ನಡಪ್ರಭ ವಿಶೇಷ ಲೇಖನಮಾಲೆ ಪ್ರಕಟಿಸಿದೆ. ಇದರ ಹಿನ್ನೆಲೆಯಲ್ಲಿ ಸಚಿವರು ಮಾತನಾಡಿದರು.
ಸಂಸ್ಥೆಯಲ್ಲಿ ಸಿಬ್ಬಂದಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ಆದರೆ, ವಿನಾಕಾರಣ ಕಿರುಕುಳ ನೀಡುವುದು ಸರಿಯಲ್ಲ. ಹೀಗೆ ಮಾಡಿದ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಗುಡುಗಿದರು.
ನಿಗಮದಲ್ಲಿ ನೌಕರರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೌಕರರು ರಜೆ ಬೇಕೆಂದರೆ ಆನ್‌ಲೈನ್ ಪದ್ಧತಿ ಅನುಸರಿಸಬಹುದು. ಇದಕ್ಕಾಗಿ ಅನೇಕ ಕಿಯೋಸ್ಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಸಿಗೆ ಸೇರಿದ1000 ಎಕರೆ ಜಾಗ ಬೆಂಗಳೂರ ಹೊರವಲಯದಲ್ಲಿದ್ದು, ಇಲ್ಲಿ ನೌಕರರಿಗೆಂದೇ 1200 ಮನೆ ನಿರ್ಮಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.     
ಇದರೊಂದಿಗೆ ಸಿಬ್ಬಂದಿ ಬಸ್‌ಗಳನ್ನು ಪಡೆಯಲು ಮತ್ತು ಪಾಳಿಗಳನ್ನು ಹಾಕಿಸಿಕೊಳ್ಳಲು ಲಂಚ ನೀಡುವುದಾಗಲಿ, ಅಧಿಕಾರಿಗಳು ಸ್ವೀಕರಿಸುವುದಾಗಲಿ ಕಂಡುಬಂದರೆ ತಕ್ಷಣ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಕಲಾಸಿಪಾಳ್ಯ ಬಸ್ ನಿಲ್ದಾಣ:
ಕಲಾಸಿಪಾಳ್ಯ ಬಸ್ ನಿಲ್ದಾಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಫೆಬ್ರವರಿ ವೇಳೆಗೆ ಕಾಮಗಾರಿ ಆರಂಭವಾಗಲಿದೆ. ಸುಮಾರು 175ಕೋಟಿ ವೆಚ್ಚದಲ್ಲಿ ನಿಲ್ದಾಣ ಅಭಿವೃದ್ಧಿಪಡಿಸುತ್ತಿದ್ದು, ಇದರಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ನಿಲ್ದಾಣಗಳೆರಡೂ ಇರಲಿವೆ. ಇದರೊಂದಿಗೆ ವಾಣಿಜ್ಯ ಉದ್ದೇಶದ ಕಟ್ಟಡವನ್ನೂ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು. ಡೀಸೆಲ್ ಬೆಲೆ ಏರಿಕೆಯಾಗಿದ್ದರಿಂದ ಸಂಸ್ಥೆಗೆ ಉಂಟಾಗುತ್ತಿದ್ದ ನಷ್ಟ ತಪ್ಪಿಸಲು ಹೊರಗಿನಿಂದ ಡೀಸೆಲ್ ಖರೀದಿಸಲಾಗುತ್ತಿತ್ತು. ಆದರೆ, ಇದರಲ್ಲಿಯೂ ಅಕ್ರಮಗಳು ನಡೆದಿರುವ ಬಗ್ಗೆ ದೂರು ಬಂದಿರುವುದರಿಂದ ನಿಗಾ ವಹಿಸಲಾಗುತ್ತಿದೆ. ಡೀಸೆಲ್ ಕೊರತೆ ನಿವಾರಿಸಿಕೊಳ್ಳಲು ಇನ್ನುಮುಂದೆ ಸಾರಿಗೆ ಸಂಸ್ಥೆ ಡಿಪೋಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ತೆರೆಯಲು ಜಾಗ ನೀಡಲಾಗುತ್ತಿದೆ ಎಂದರು.
ಇದೇ ವಿಚಾರ ಪ್ರಸ್ತಾಪಿಸಿದ ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡ, ಡೀಸೆಲ್ ಪೂರೈಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಂಸ್ಥೆ ನೇರವಾಗಿ ಡೀಸೆಲ್ ಕಂಪನಿಗಳಿಂದ ಖರೀದಿಸಿದರೆ ಶೇ.4ರಷ್ಟು ಕಮಿಷನ್ ಉಳಿಯಲಿದೆ ಎಂದು ಸಲಹೆ ನೀಡಿದರು. ಬಸ್ ಅಪಘಾತ ಪ್ರಕರಣಗಳಲ್ಲಿ ಸಿಲುಕಿದ ಚಾಲಕರಿಗೆ ಕೋರ್ಟ್‌ನಲ್ಲಿ ಜಾಮೀನು ಸಿಗುವುದಕ್ಕೆ ಸಂಸ್ಥೆ ನೆರವು ನೀಡಬೇಕು. ಹಾಗೆಯೇ ಗ್ರಾಮೀಣ ಭಾಗದಲ್ಲಿ ತಂಗುವ ಬಸ್ಸುಗಳ ಚಾಲಕ ಮತ್ತು ನಿರ್ವಾಹಕರಿಗೆ ಅಗತ್ಯ ಸೌಲಭ್ಯ ನೀಡಬೇಕೆಂದು ರಾಮಚಂದ್ರಗೌಡ ಒತ್ತಾಯಿಸಿದರು. ಮೇಯರ್ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಇಂದಿರಾ, ಶಾಸಕ ಮುನಿರತನ್ನ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೆಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement