ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಲಿತ ಕುಟುಂಬದ ಜಮೀನಿಗೆ ಕನ್ನ!

Vishwanath S
Updated On : 16 Dec 2013, 12:05 pm

ಗದಗ: ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವ ಮುಂಡರಗಿ ತಾಲೂಕಿನ ಗಂಗಾಪುರನಲ್ಲಿರುವ ವಿಜಯನಗರ ಸಕ್ಕರೆ ಕಾರ್ಖಾನೆ, ತನ್ನ ಪಕ್ಕದಲ್ಲಿಯೇ ಇರುವ ದಲಿತ ಕುಟುಂಬಕ್ಕೆ ಸೇರಿದ 2 ಎಕರೆ 20 ಗುಂಟೆ ಜಮೀನನ್ನು ಅಕ್ರಮವಾಗಿ ನುಂಗಿ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಹೊಲದ ಮಾಲೀಕರು ಎಷ್ಟೇ ಗೋಗರೆದರೂ ಆ ಹೊಲದಲ್ಲಿಯೇ ರಸ್ತೆ, ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, 6 ವರ್ಷಗಳಿಂದ ಹೊಲದ ಮಾಲೀಕರಿಗೆ ಜಮೀನಿನಲ್ಲಿ ಹೆಜ್ಜೆ ಇಡಲೂ ಅವಕಾಶ ನೀಡದೆ ದಲಿತ ರೈತ ಮಹಿಳೆ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ವಿಜಯನಗರ ಸಕ್ಕರೆ ಕಾರ್ಖಾನೆಗೆ ಹೊಂದಿಕೊಂಡೇ ದುರಗವ್ವ ಭರಮಪ್ಪ ಮಾದರ ಹಾಗೂ ಲಕ್ಷ್ಮಣ ಭರಮ್ಮ ತಗಡಿನಮನಿ ಎನ್ನುವವರಿಗೆ ಸೇರಿದ 2.20 ಎಕರೆ ಜಮೀನಿದೆ. (ರಿಸ.ನಂ19/2) ಈ ಜಮೀನಿನ ಸಂಪೂರ್ಣ ಮಾಲೀಕತ್ವವನ್ನು ದುರಗವ್ವಳೇ ಹೊಂದಿದ್ದು, ಅವಳ ಹೆಸರಿನಲ್ಲಿಯೇ ಪಹಣಿಯೂ ಇದೆ.
ಆದರೆ ಹೊಲಕ್ಕೆ ತೆರಳಿದರೆ ಮಾತ್ರ ಅದು ಹೊಲ ಎಂದು ಗುರುತು ಸಿಗದಷ್ಟು ಪ್ರಮಾಣದಲ್ಲಿ ಅಕ್ರಮವಾಗಿ ರಸ್ತೆ ಹಾಗೂ ಸಣ್ಣಪುಟ್ಟ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲರೂ ಕಂಪನಿಯ ಪರವಾಗಿಯೇ ಮಾತನಾಡುತ್ತಿದ್ದು, ದಲಿತ ಕುಟುಂಬದ ರೋದನ ಕೇಳುವವರೇ ಇಲ್ಲದಂತಾಗಿದೆ.

ಇದು ಸರ್ಕಾರ ನೀಡಿದ ಭೂಮಿ: ಭೂ ಒಡೆತನ ಯೋಜನೆಯಡಿ 1995ರ ಜನವರಿ 20ರಂದು ಅವರ ಉಪ ಜೀವನಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಈ ಜಮೀನು ನೀಡಿದೆ. ಇದರಲ್ಲಿ ಅಕ್ರಮ ಪ್ರವೇಶ ಮಾಡುವುದಾಗಲಿ ಅಥವಾ ಇದನ್ನು ಖರೀದಿಸುವ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಈ ರೀತಿ ಅಕ್ರಮವಾಗಿ ಬಡ ರೈತರ ಜಮೀನಿನಲ್ಲಿ ಕಾಮಗಾರಿ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು 2013, ಅ.21ರಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮುಂಡರಗಿ ತಹಸೀಲ್ದಾರ್ ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಪತ್ರ ಬರೆದರೂ ಕ್ಯಾರೆ ಎನ್ನುತ್ತಿಲ್ಲ.
ಈಗಾಗಲೇ ಈ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಮತ್ತೆ ಮತ್ತೆ ಪೊಲೀಸ್ ಠಾಣೆಗೆ ದೂರು ನೀಡುವ ಅಗತ್ಯವಿಲ್ಲ. ಇದು ಸಿವಿಲ್ ಮ್ಯಾಟರ್ ಆಗಿರುವುದರಿಂದ ಕೋರ್ಟ್‌ನಲ್ಲಿಯೇ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದೇನೆ.
-ಶ್ರೀಪಾದ ಜಲ್ದೆ, ಸಿಪಿಐ, ಮುಂಡರಗಿ

ನ್ಯಾಯಕ್ಕಾಗಿ ಇಂದಿನಿಂದ ಠಾಣೆ ಎದುರು ಪ್ರತಿಭಟನೆ
ಸಕ್ಕರೆ ಕಾರ್ಖಾನೆಯವರು ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡುವುದಲ್ಲದೆ, ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಅದನ್ನು ತಡೆಯಲು ನಾವು ಸ್ಥಳಕ್ಕೆ ಹೋದರೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಾರೆ. ಈ ಕುರಿತು ನಮಗೆ ಸೂಕ್ತ ಭದ್ರತೆ ಬೇಕು ಎಂದು ಮುಂಡರಗಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿನ ಸಿಪಿಐ, ಇದು ಸಿವಿಲ್ ಮ್ಯಾಟರ್. ಅದಕ್ಕಾಗಿ ಕೋರ್ಟ್‌ಗೆ ಹೋಗಿ ಎಂದು ಪರೋಕ್ಷವಾಗಿ ಕಂಪನಿಗೆ ಸಹಾಯ ಮಾಡುತ್ತಿದ್ದು, ಇದನ್ನು ಖಂಡಿಸಿ ಡಿ.16ರಿಂದ ಮುಂಡರಗಿ ಠಾಣೆಯ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ದಲಿತ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ತಹಸೀಲ್ದಾರ್ ವರದಿಗೂ ಬೆಲೆ ಇಲ್ಲ
ಮುಂಡರಗಿ ತಹಸೀಲ್ದಾರ್ ಕಳೆದ ಡಿಸೆಂಬರ್ 2ರಂದು ಗದಗ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ನಮ್ಮ ಸರ್ವೆ ಇಲಾಖೆ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸಿದ ನಂತರ 2013, ನ.26ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸರ್ವೇ ನಂಬರಿನ ಹೊಲದಲ್ಲಿ ಸಕ್ಕರೆ ಕಾರ್ಖಾನೆಯವರು ರಸ್ತೆ, ತೇಗಿನ ಮರಗಳು, ಹೊಸ ಕಟ್ಟಡ ಕಟ್ಟಲು ತೆಗ್ಗು, ಕಾರ್ಖಾನೆಯ ಕಬ್ಬಿಣದ ದೊಡ್ಡ ದೊಡ್ಡ ಸಾಮಾನುಗಳನ್ನು ಹಾಕಿದ್ದು, ಮೇಲ್ನೋಟಕ್ಕೆ ಕಾರ್ಖಾನೆಯವರು ಈ ಹೊಲ ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಈ ಸರ್ವೆ ನಂಬರಿನ ಉತ್ತರ ಮತ್ತು ದಕ್ಷಿಣಕ್ಕೆ ಕಾರ್ಖಾನೆಯ ಮಾಲೀಕತ್ವದ ಜಮೀನುಗಳಿವೆ ಎಂದು ತಿಳಿಸಿದ್ದರೂ ಕಾರ್ಖಾನೆ ಮಾತ್ರ ತನ್ನ ಅಕ್ರಮ ಕಾರ್ಯ ಸಮರ್ಥಿಸಿಕೊಳ್ಳುತ್ತಿದೆ.
ಸಕ್ಕರೆ ಕಾರ್ಖಾನೆ ಮಾಲೀಕ ಕೇಂದ್ರ ಸಚಿವ ಜಯಪಾಲ ರೆಡ್ಡಿ ಸಂಬಂಧಿ?
ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡಗೇರಿ ಸಹಕಾರಿ ಸಕ್ಕರೆ ಕಾರ್ಖಾನೆಯು ಸಹಕಾರಿ ತತ್ವದ ಅಡಿಯಲ್ಲಿ ಸ್ಥಾಪನೆಯಾಗಿ ಕಾರ್ಖಾನೆ ನಡೆಸಲಾಗದೆ 2007ರಲ್ಲಿ 150 ಕೋಟಿಗೂ ಅಧಿಕ ಮೊತ್ತದಲ್ಲಿ 30 ವರ್ಷಗಳ ವರೆಗೆ ಹೈದರಾಬಾದ್ ಮೂಲದ ವಿಜಯ ನಗರ ಶುಗರ್ ಪ್ರೈವೇಟ್ ಲಿಮಿಟೆಡ್‌ಗೆ ಲೀಜ್ ನೀಡಲಾಗಿದ್ದು, ಇದು ಆನಂದರೆಡ್ಡಿ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಆನಂದರೆಡ್ಡಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಜಯಪಾಲ್ ರೆಡ್ಡಿ ಅವರ ದೂರದ ಸಂಬಂಧಿ ಎನ್ನಲಾಗಿದೆ.

ನಾನು ದಲಿತ ಮಹಿಳೆ. ಸರ್ಕಾರ ನನಗೆ ನೀಡಿದ ಜಮೀನನ್ನು ಸಕ್ಕರೆ ಕಾರ್ಖಾನೆ ಈಗಾಗಲೇ ನುಂಗಿ ಹಾಕಿ, ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ. ಅದನ್ನು ಪ್ರಶ್ನಿಸಲು ಹೋದರೆ ನಾವು ತೆಗೆಯುವುದಿಲ್ಲ. ಏನು ಮಾಡ್ಕೊತೀರೋ ಮಾಡ್ಕೋ ಹೋಗಿ ಎನ್ನುವ ಧಮಕಿ ಹಾಕುತ್ತಾರೆ. ಜಿಲ್ಲಾಧಿಕಾರಿಗಳೇ, ನಮಗೆ ನ್ಯಾಯ ಕೊಡ್ರಿ, ಈ ವರ್ತನೆಯನ್ನು ನೋಡಿದಲ್ಲಿ ದಲಿತರು, ಹಿಂದುಳಿದ ವರ್ಗದವರು ಬದುಕು ಸಾಗಿಸುವುದಾರರೂ ಹೇಗೆ? ಇಲ್ಲವೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.
- ದುರಗವ್ವ ಮಾದರ, ನೊಂದ ಮಹಿಳೆ

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement