ಬಳ್ಳಾರಿಗರ ನಶೆ ಇಳಿಸಿದ ಗಣಿ!
ಕ.ಪ್ರ. ವಾರ್ತೆ, ಬಳ್ಳಾರಿ, ಡಿ. 15-
ಅಬಕಾರಿ ಇಲಾಖೆಗೆ ಬಳ್ಳಾರಿ ಎಂದಾಕ್ಷಣ 'ಟಾರ್ಗೆಟ್' ಮೀರಿ ಆದಾಯ ತಂದುಕೊಟ್ಟ ಜಿಲ್ಲೆ. ಇದೀಗ ಟಾರ್ಗೆಟ್ ಕೂಡ ತಲುಪಲು ಅಸಾಧ್ಯವಾಗಿದೆ! ಇದೇನಿದು ಬಳ್ಳಾರಿಯಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬೇಡಿ. ಇದು ಗಣಿಗಾರಿಕೆ ಎಫೆಕ್ಟ್. ಅಬಕಾರಿ ಇಲಾಖೆ ಅಧಿಕಾರಿಗಳು ನಿಗದಿತ ಗುರಿ ಸಾಧನೆಗೆ ಹರಸಾಹಸ ಪಡುತ್ತಿದ್ದಾರೆ. ಬಳ್ಳಾರಿಯಿಂದ ಶೇ.10ರಿಂದ 12ರಷ್ಟು ಮಾರಾಟ ಕಡಿಮೆಯಾಗಿರುವುದು ಇಲಾಖೆಗೆ ಆತಂಕದ ಸಂಗತಿಯಾಗಿದೆ. ದಿನದಿಂದ ದಿನಕ್ಕೆ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾದರೂ, ಬಳ್ಳಾರಿ ಜಿಲ್ಲೆಗೆ ಅಬಕಾರಿ ಇಲಾಖೆ ನಿಗದಿ ಪಡಿಸಿದ ಆದಾಯ ಮತ್ತು ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಗುರಿ ಸಾಧನೆಗೆ ಅಧಿಕಾರಿಗಳು ಪರಿತಪಿಸುವ ಪರಿಸ್ಥಿತಿ ಬಂದಿದೆ.
ಗಣಿಗಾರಿಕೆ ಭೂಮ್ ಇದ್ದ ಕಾಲಕ್ಕೆ ಬೇರೆ ಕಡೆಯಿಂದ ಬಂದವರು ಇಲ್ಲಿ ವಾಸವಾಗಿರುವುದು, ಇನ್ನು ಗಣಿಗಾರಿಕೆ ಹೆಚ್ಚಾಗಿದ್ದರಿಂದ ಮದ್ಯ ಸೇವನೆಯೂ ಹೆಚ್ಚಾಗಿತ್ತು. ಆದಾಯ ಮೂಲ ನಿಂತಿರುವ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿರುವ ಲಾರಿ ಚಾಲಕರು, ಕ್ಲೀನರ್ಗಳು ಹಾಗೂ ವಲಸೆ ಬಂದವರು ಮರಳಿ ಹೋಗಿರುವುದು ಸೇರಿದಂತೆ ಇತರ ಕಾರಣಗಳಿಂದ ಅಬಕಾರಿ ಇಲಾಖೆ ಗುರಿಯಲ್ಲಿ ಹಿಂದೆ ಬೀಳಲು ಕಾರಣವಾಗಿದೆ.
ಆದಾಯ ಇಳಿಕೆ
ಎರಡು ವರ್ಷಗಳಿಂದ ಮದ್ಯ ಮಾರಾಟದ ವ್ಯವಹಾರ ಬಳ್ಳಾರಿ ಜಿಲ್ಲೆಯಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಶೇ. 10ರಿಂದ 12ರಷ್ಟು ಮಾರಾಟದಿಂದ ಅಬಕಾರಿ ಇಲಾಖೆ ಆದಾಯ ಇಳಿಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇಲಾಖೆಗೆ ಹೆಚ್ಚಿನ ಗುರಿ ನಿಗದಿ ಮಾಡಿದರೂ, ಗಣಿಗಾರಿಕೆ ಭೂಮ್ ಇದ್ದರೆ ಆ ಟಾರ್ಗೆಟ್ನ್ನು ಬಳ್ಳಾರಿ ಇಲಾಖೆ ಸುಲಭವಾಗಿ ದಾಟುತ್ತಿತ್ತು. ಇಲಾಖೆ ಅಧಿಕಾರಿಗಳು ಮಾತ್ರ ಗುರಿ ಸಾಧನೆಗೆ ಪರಿತಪಿಸುವುದು ಒಂದು ಕಡೆಯಾದರೆ, ಅಕ್ರಮ ಮದ್ಯ ಮಾರಾಟ ತಡೆಯಲು ಅನಿವಾರ್ಯವಾಗಿ ಮುಂದಾಗಬೇಕಾಗಿರುವುದು ಅಧಿಕಾರಿಗಳು ಉಭಯ ಸಂಕಟ ಎದುರಿಸುವಂತಾಗಿದೆ.
ಸಾಧನೆಯಲ್ಲಿ ಹಿನ್ನಡೆ
ಗಣಿಗಾರಿಕೆ ನಿಂತಿರುವುದು ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮ ಬೀರಿದೆ. ಅಂತೆಯೇ ಮದ್ಯ ಮಾರಾಟ ಕೂಡ ಇಳಿಕೆಯಾಗಿದೆ. ಬಳ್ಳಾರಿಯ ಅಬಕಾರಿ ಇಲಾಖೆ 2009-10ರಲ್ಲಿ ಶೇ.94.44 ಗುರಿ ಸಾಧನೆ ಮಾಡಿದ್ದರೆ, 2010-11ರಲ್ಲಿ ಶೇ.102ರಷ್ಟು ಗುರಿ ಸಾಧನೆ ಮಾಡಿತ್ತು. 2011ರಿಂದ ಈಚೆಗೆ ಇಲಾಖೆ ಸಾಧನೆಯಲ್ಲಿ ಇಳಿಕೆಯಾಗಿದೆ. 2011-12ರಲ್ಲಿ ಶೇ.87.80ರಷ್ಟು, 2012-13ರಲ್ಲಿ ಶೇ.87.76ರಷ್ಟು ಗುರಿ ಸಾಧನೆಯಾಗಿದೆ. 2013-14ರಲ್ಲಿ ಸರ್ಕಾರಿ ಹಾಗೂ ಖಾಸಗಿ ಮದ್ಯದ ಅಂಗಡಿಗಳಲ್ಲಿ 23,57,907 ಮದ್ಯದ ಬಾಕ್ಸ್ಗಳ ಮಾರಾಟದ ಗುರಿಯನ್ನು ಹೊಂದಲಾಗಿದ್ದು, ಇದೀಗ ಗುರಿ ಸಾಧನೆಗೆ ಇಲಾಖೆ ಪರದಾಡುವಂತಾಗಿದೆ.
2 ವರ್ಷಗಳ ಅಂಕಿ ಸಂಖ್ಯೆ
2010-11ರ ಜನವರಿ ತಿಂಗಳಲ್ಲಿ ಶೇ.111.37ರಷ್ಟು ಗುರಿ ಸಾಧನೆ ಮಾಡಿದ್ದರೆ, ಫೆಬ್ರವರಿ 2011-12ರಲ್ಲಿ ಶೇ.71.12ರಷ್ಟು, 2012-13ರಲ್ಲಿ ಶೇ.88,89 ಗುರಿ ಸಾಧನೆಯಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿನ ಅಂಕಿ ಸಂಖ್ಯೆಗಳೇ ಗುರಿ ಹಾಗೂ ಸಾಧನೆಯಲ್ಲಿ ವ್ಯತ್ಯಾಸವನ್ನು ತೋರಿಸುತ್ತವೆ. 2009-10ರಲ್ಲಿ 18,61,104 ಬಾಕ್ಸ್ಗಳ ಮಾರಾಟದ ಗುರಿ ಜಿಲ್ಲೆಯಲ್ಲಿತ್ತು. ಆದರೆ 17,57,674 ಮದ್ಯದ ಬಾಕ್ಸ್ಗಳ ಮಾರಾಟವಾಗಿವೆ. ಇನ್ನು 2010-11ರಲ್ಲಿ 19,86,759 ಬಾಕ್ಸ್ಗಳ ಮಾರಾಟ ಗುರಿ ಹೊಂದಿದ್ದು, 20,38,403 ಮದ್ಯದ ಬಾಕ್ಸ್ಗಳನ್ನು ಮಾರಾಟ ಮಾಡಿ, ಗುರಿಗಿಂತ ಶೇ. 2ರಷ್ಟು ಹೆಚ್ಚಿನ ಸಾಧನೆಯಾಗಿದೆ. ಇನ್ನು 2011-12ರಿಂದ ಇಲಾಖೆ ಗುರಿ ಮುಟ್ಟಲು ಸಾಧ್ಯವಾಗಿಲ್ಲ, ಕಾರಣ ಗಣಿಗಾರಿಕೆ. 2011-12ರಲ್ಲಿ 22,25,560 ಗುರಿಯಲ್ಲಿ 19,54, 083 ಬಾಕ್ಸ್ ಮಾರಾಟ ಮಾಡಿದ್ದರೆ, ಶೇ.12ರಷ್ಟು ಸಾಧನೆಯಲ್ಲಿ ಹಿಂದಕ್ಕೆ ಬಿದ್ದಿದೆ. 2012-13ರಲ್ಲಿ 21,50,239 ಗುರಿಯಲ್ಲಿ 18,87,091 ಮಾತ್ರ ಮಾರಾಟ ಮಾಡಲಾಗಿದ್ದು, ಶೇ. 13ರಷ್ಟು ಗುರಿ ಸಾಧನೆಯಲ್ಲಿ ಕುಂಠಿತವಾಗಿತ್ತು.
- ಶಶಿಧರ ಮೇಟಿ