ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವರ್ಷ ಕಳೆದರೂ ನಿರ್ಭಯರಲ್ಲ...

ಆ ಹೇಯ ಕೃತ್ಯ ನಡೆದು ಸೋಮವಾರಕ್ಕೆ ಬರೋಬ್ಬರಿ ಒಂದು ವರ್ಷ. ಆ ರಾತ್ರಿ ಆರು ಮಂದಿ ಕಾಮುಕರು 23 ವರ್ಷದ...

Vishwanath S
Updated On : 16 Dec 2013, 11:55 am

ಬೆಂಗಳೂರು: ಆ ಹೇಯ ಕೃತ್ಯ ನಡೆದು ಸೋಮವಾರಕ್ಕೆ ಬರೋಬ್ಬರಿ ಒಂದು ವರ್ಷ. ಆ ರಾತ್ರಿ ಆರು ಮಂದಿ ಕಾಮುಕರು 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಮೃಗಗಳಂತೆ ಎರಗಿದ್ದರು. ಬಳಿಕ ಆಕೆಯನ್ನು ನವದೆಹಲಿಯ ನಡುರಸ್ತೆಯಲ್ಲಿ ಎಸೆದು ಹೋಗಿದ್ದರು. ಆಗ ಆ ಅಮಾಯಕ ಯುವತಿ ಹಾಕಿದ ಅಸಹಾಯಕ ಚೀತ್ಕಾರ ಇಂದಿಗೂ ದೇಶದ ಮೂಲೆಮೂಲೆಯಲ್ಲೂ ಪ್ರತಿಧ್ವನಿಸುತ್ತಿದೆ. ದೇಶದ ಸಾಕ್ಷಿಪ್ರಜ್ಞೆಯನ್ನೇ ಬಡಿದೆಬ್ಬಿಸಿದ ಆ 'ಹತ್ಯಾಚಾರ' ಹೊಸತೊಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಮಹಿಳಾ ಪರ ಹೋರಾಟಕ್ಕೆ ಹೊಸ ಆಯಾಮ ನೀಡಿದೆ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಮಹಿಳೆಯರಿಗೆ ಲೈಂಗಿಕ ಕಿರುಕುಳದ ವಿರುದ್ಧ 'ನಿರ್ಭಯ'ವಾಗಿ ಹೋರಾಡುವ ಅಭಯ ನೀಡಿದೆ. ಇಷ್ಟಾದರೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಹೌದು. ಡಿ.16ರ ದೆಹಲಿ ಗ್ಯಾಂಗ್ ರೇಪ್ ಘಟನೆ ಬಳಿಕ ಇಡೀ ನಾಗರಿಕ ಸಮಾಜ ಅದರಲ್ಲೂ ಮುಖ್ಯವಾಗಿ ಯುವಸಮುದಾಯ, ವ್ಯವಸ್ಥೆ ಮೇಲೆ ಉಂಟು ಮಾಡಿದ ಪರಿಣಾಮ ಸಣ್ಣದೇನೂ ಅಲ್ಲ. ಬೀದಿ ಬೀದಿಗಳಲ್ಲಿ ಯುವಶಕ್ತಿ ಆರಂಭಿಸಿದ ಹೋರಾಟದ ತೀವ್ರತೆಗೆ ಸರ್ಕಾರವೂ ಬೆದರಿತು. ಕಾನೂನೂ ಬದಲಾಯಿತು. ಇದಕ್ಕೆಲ್ಲ ಮಿಗಿಲಾಗಿ ಅತ್ಯಾಚಾರದಂಥ ಸುದ್ದಿಗೆ ಸಂಬಂಧಿಸಿ ರಾಷ್ಟ್ರೀಯ ಮಾಧ್ಯಮದ ದೃಷ್ಟಿಕೋನದಲ್ಲೂ ಬದಲಾವಣೆಯಾಯಿತು. ವ್ಯವಸ್ಥೆಗೆ ಚುರುಕು ಮುಟ್ಟಿಸಿತು. ಆದರೆ...
ಡಿ.16ರ ಘಟನೆ ವರದಿಯಾಗಿ ವರ್ಷ ಸಂದರೂ ದೇಶದಲ್ಲಿ ಅತ್ಯಾಚಾರದ ಪ್ರಮಾಣವೇನೂ ಕಡಿಮೆಯಾಗಿಲ್ಲ. ಮುಂಬೈನಲ್ಲಿ ಪತ್ರಕರ್ತೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ, ಮಣಿಪಾಲದಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಬಲಾತ್ಕಾರ... ತರುಣ್ ತೇಜ್ಪಾಲ್‌ರಂತಹ ಹೈಪ್ರೊಫೈಲ್ ಕಿರುಕುಳ ಪ್ರಕರಣ... ಹೀಗೆ ದೇಶಾದ್ಯಂತ ಇಂಥ ಸಾವಿರಾರು ಪ್ರಕರಣಗಳು ವರದಿಯಾಗುತ್ತಲೇ ಇವೆ.
ಅತ್ಯಾಚಾರ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎನ್ನುವುದನ್ನು ಮಹಿಳಾ ಪರ ಹೋರಾಟಗಾರರೂ ಒಪ್ಪಿಕೊಳ್ಳುತ್ತಾರೆ. ಆದರೆ, ಈ ರೀತಿಯ ದಿಢೀರ್ ಏರಿಕೆಗೆ ಡಿ.16ರ ಬಳಿಕ ಮಹಿಳೆಯರಲ್ಲಿ ಮೂಡಿದ ಜಾಗೃತಿಯೂ ಒಂದು ಕಾರಣ ಎನ್ನುತ್ತಾರೆ ಅವರು.  ಈ ಹೋರಾಟ ಮಹಿಳೆಯರಲ್ಲಿ ದೊಡ್ಡ ಮಟ್ಟ್ಟದಲ್ಲಿ ಅಲ್ಲದಿದ್ದರೂ ಒಂದಷ್ಟು ಧೈರ್ಯವನ್ನಂತು ಹುಟ್ಟಿಹಾಕಿದ್ದಂತು ನಿಜ. ಹಾಗಾಗಿ ಈ ಹಿಂದೆ ಮರ್ಯಾದೆಗಂಜಿಕೊಂಡು ಸುಮ್ಮನಿರುತ್ತಿದ್ದ ಮಹಿಳೆಯರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದಾಖಲಿಸಲು ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ.

ಹೀಗೊಂದು ವೈರುಧ್ಯ
ದೆಹಲಿ ಗ್ಯಾಂಗ್‌ರೇಪ್ ನಡೆದು ಸರಿ ಸುಮಾರು 15 ದಿನ ಅಂದರೆ ಡಿ.31ರ ಮಧ್ಯರಾತ್ರಿ ರಾಷ್ಟ್ರ ರಾಜಧಾನಿ ಮತ್ತೊಂದು ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿಯಾಗಿತ್ತು. ದೆಹಲಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ಆರು ಮಂದಿ ಕಾಮುಕರು ಅತ್ಯಾಚಾರ ನಡೆಸಿದ್ದರು.  ದೆಹಲಿ ಗ್ಯಾಂಗ್ ರೇಪ್‌ನಿಂದ ಉಂಟಾದ ಜಾಗೃತಿಯಿಂದ ಎಚ್ಚೆತ್ತುಕೊಂಡ ಈ ಬಾಲಕಿ ಪ್ರಕರಣದ ಕುರಿತು ದೂರನ್ನೂ ದಾಖಲಿಸಿದ್ದಳು. ಈ ಘಟನೆ ನಡೆದು ಡಿ.31ಕ್ಕೆ ವರ್ಷ ತುಂಬುತ್ತದೆ. ಆದರೆ, ಪ್ರಕರಣದ ಕುರಿತು ಪೊಲೀಸರು ಇನ್ನೂ ಆರೋಪಪಟ್ಟಿಯನ್ನೇ ! ನಿರ್ಭಯಳಂತೆ ದೌರ್ಜನ್ಯದ ವಿರುದ್ಧ ದಿಟ್ಟ ಹೋರಾಟ ನಡೆಸಲು ಈ ಬಾಲಕಿ ಮುಂದಾಗಿದ್ದಳು. ಆದರೆ, ಪದೇ ಪದೆ ಪೊಲೀಸರ ಭೇಟಿ, ನೆರೆಮನೆಯವರ ಕುಹಕದ ಮಾತು ಎದುರಿಸಲಾಗದೆ ಕೊನೆಗೊಂದು ದಿನ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ನಿರ್ಭಯಾಳಿಗೆ ಸಿಕ್ಕಿದ ಬೆಂಬಲ ಈ ಬಾಲಕಿಗೆ ಸಿಗಲೇ ಇಲ್ಲ. ಇದು ದೆಹಲಿ ಗ್ಯಾಂಗ್ ರೇಪ್ ಬಳಿಕದ ಹೋರಾಟದ ವಿಪರ್ಯಾಸಗಳಲ್ಲೊಂದು.

ಆರು ಪಟ್ಟು ಹೆಚ್ಚು
ದೆಹಲಿಯೊಂದರಲ್ಲೇ ಕಳೆದೊಂದು ವರ್ಷದಿಂದ ಅತ್ಯಾಚಾರಗಳ ಸಂಖ್ಯೆ ಆರು ಪಟ್ಟು ಹೆಚ್ಚಳವಾಗಿದೆ. ರಾಷ್ಟ್ರರಾಜಧಾನಿಯಲ್ಲಿ ಜನವರಿಯಿಂದ ನವೆಂಬರ್‌ವರೆಗೆ 1493 ಪ್ರಕರಣಗಳು ದಾಖಲಾಗಿವೆ. ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗುತ್ತಿರುವುದು 13 ವರ್ಷಗಳಲ್ಲಿ ಇದೇ ಮೊದಲು. 2012ರಲ್ಲಿ 706 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2011ರಲ್ಲಿ 572, 2010ರಲ್ಲಿ 507ಪ್ರಕರಣಗಳು ದಾಖಲಾಗಿದ್ದವು.
ಆದರೆ, ಈ ರೀತಿ ದೂರು ನೀಡುವ ಮಹಿಳೆಯರಿಗೆ ಕಾನೂನು ಬೆಂಬಲ ಸಿಕ್ಕರಷ್ಟೇ ಸಾಲದು. ಅವರ ಪುನರ್ವಸತಿಗೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಕ್ಕೊಳಗಾದ ಮಹಿಳೆಯರು ಸಮಾಜದ ಕುಹಕಗಳಿಗೆ ಗುರಿಯಾಗುತ್ತಾರೆ. ಇದೇ ಕಾರಣಕ್ಕೆ ಬಹುತೇಕರು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಇಂತಹ ಮಹಿಳೆಯರನ್ನು ಸರ್ಕಾರವೇ ದತ್ತು ತೆಗೆದುಕೊಳ್ಳಬೇಕು. ಅವರ ಶೈಕ್ಷಣಿಕ ಹಾಗೂ ಆರ್ಥಿಕ ಜವಾಬ್ದಾರಿಯನ್ನು ಹೊರಬೇಕು. ಇದು ಸಾಧ್ಯವಾಗಬೇಕಾದರೆ ಮತ್ತೊಂದು ಮಹಿಳಾ ಹೋರಾಟದ ಅಗತ್ಯ ಇದೆ ಎನ್ನುವುದು ಮಂಜುಳಾ ಅವರ ಅಭಿಪ್ರಾಯ.

ದೆಹಲಿ ಗ್ಯಾಂಗ್ ರೇಪ್ ಹೋರಾಟ ದೇಶಾದ್ಯಂತ ಒರಟು ಮನಸ್ಥಿತಿಯ ರಾಜಕಾರಣಿಗಳ ನಿರ್ಲಿಪ್ತತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಣಿಪಾಲದ ವಿದ್ಯಾರ್ಥಿನಿಯನ್ನು ಗೃಹ ಸಚಿವ ಕೆ.ಜೆ. ಜಾರ್ಜ್ ಖುದ್ದು ಭೇಟಿಯಾಗಿದ್ದು ಇದಕ್ಕೊಂದು ಉದಾಹರಣೆ. ಬಹುಶಃ ರಾಜ್ಯದ ಇತಿಹಾಸದಲ್ಲಿ ಈ ರೀತಿಯ ಬೆಳವಣಿಗೆ ಇದೇ ಮೊದಲೇನೋ?
- ಮಂಜುಳಾ,
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ 

ದಿನಕಳೆದಂತೆ ಆಕೆಯ ನೆನಪು ಹೆಚ್ಚುತ್ತಲೇ ಇದೆ. ಆಕೆಯ ಸಾವಿನ ಆಘಾತದಿಂದ ನಾವು ಯಾವತ್ತೂ ಹೊರಬರುವುದು ಸಾಧ್ಯವೇ ಇಲ್ಲ. ಅವಳು ನಮ್ಮ ಜತೆ ಇನ್ನೂ ಜೀವಂತವಾಗಿ ಇದ್ದಾಳೆ. ಪ್ರತಿ ಬಾರಿ ಊಟಕ್ಕೆ ಕೂತಾಗ ನನ್ನ ಹೆಂಡತಿ ಪುತ್ರಿಯನ್ನು ನೆನಪಿಸಿಕೊಳ್ಳುತ್ತಾಳೆ.  ಆದರೆ, ಪ್ರಕರಣದ ಎಲ್ಲಾ ಆರೋಪಿಗಳಿಗೂ ಗಲ್ಲು ಶಿಕ್ಷೆಯಾಗುವವರೆಗೆ ನಮಗೆ ನೆಮ್ಮದಿ ಇಲ್ಲ.
- ನಿರ್ಭಯಾ ತಂದೆ

*24,923 ಕಳೆದ ವರ್ಷ ದೇಶದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು.
*ಶೇ.3 2012ರಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿ ನೀಡಲಾಗಿರುವ ದೂರಿನ ಪ್ರಮಾಣ.
*ಶೇ.95 ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ದಾಖಲಾಗುವ ಚಾರ್ಜ್‌ಶಿ ಟ್‌ಗಳ ಪ್ರಮಾಣ.
*ಶೇ.15ಕ್ಕೂ ಕಡಿಮೆ, 2012ರಲ್ಲಿ ವಿಚಾರಣೆಗೆ ಬಂದ ಪ್ರಕರಣಗಳ ಪ್ರಮಾಣ.

- ಅಜಿತ್ ಕುಮಾರ್ ಮಠದಬೆಟ್ಟು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement