ಕಸಾಪ ನೆರವಿಗೆ ಸಿದ್ಧ
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭಾಷೆಯನ್ನು ಸರ್ಕಾರ ನಿರ್ಲಕ್ಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.17-
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭಾಷೆಯನ್ನು ಸರ್ಕಾರ ನಿರ್ಲಕ್ಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ನಾಡಿನ ನೆಲ, ಜಲ, ಭಾಷೆ ಹಾಗೂ ಸಾಹಿತ್ಯ ಪರಿಷತ್ ಪರವಾಗಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಈ ನಿಟ್ಟಿನಲ್ಲಿ ಹಲವು ಕೆಲಸ ಮಾಡಿದೆ. ಹೀಗಾಗಿ ನಿರ್ಲಕ್ಷ್ಯದ ಮಾತೇ ಇಲ್ಲ ಎಂದು ಹೇಳಿದರು.
'ನೂರು ವರ್ಷಗಳ ನೆಪಕ್ಕಾದರೂ ಸರ್ಕಾರಕ್ಕೆ ನೆನಪಾಗುತ್ತಿಲ್ಲ ಕಸಾಪ, ಛೇ ಕನ್ನಡಿಗರಿಗೆ ಇದೆಂಥ ಶಾಪ' ಎಂಬ ಶೀರ್ಷಿಕೆಯಡಿ 'ಕನ್ನಡಪ್ರಭ'ದಲ್ಲಿ ಮಂಗಳವಾರ ಪ್ರಕಟವಾಗಿರುವ ವಿಶೇಷ ವರದಿಗೆ ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದರು.
ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕಾಗಿ ಬಜೆಟ್‌ನಲ್ಲೇ ಸರ್ಕಾರ 1ಕೋಟಿ ನಿಗದಿ ಮಾಡಿತ್ತು. ಆದರೆ ಈ ಹಣ ಸಾಲುವುದಿಲ್ಲ ಎಂದು ಪರಿಷತ್ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಮತ್ತೆ 1 ಕೋಟಿ ಬಿಡುಗಡೆ ಮಾಡಲು ಸೂಚಿಸಿದ್ದೇನೆ ಎಂದರು.
ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಸಾಹಿತ್ಯ ಪರಿಷತ್ ಹಲವು ಕಾರ್ಯಕ್ರಮಗಳ ಜಾರಿಗೆ ಮುಂದಾಗಿದೆ. ಈ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ. ಅವರ ಜತೆ ಚರ್ಚೆ ನಡೆಸಬೇಕು ಎಂದರು. ಈ ವಿಚಾರ ಸಂಬಂಧ ಪರಿಷತ್ ನಿಮ್ಮ ಜತೆ ಚರ್ಚಿಸಿಲ್ಲವೇ? ಎಂದು ಪ್ರಶ್ನಿಸಿದಾಗ, ಅವರು ನನ್ನನ್ನು ಒಂದು ಬಾರಿ ಭೇಟಿಯಾಗಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ. ನಾನು ಆ ಎಲ್ಲ ಪ್ರಸ್ತಾಪಕ್ಕೆ ಒಪ್ಪಿರಲಿಲ್ಲ ಎಂದರು.
ಆಕ್ರೋಶಕ್ಕೆ ಆಶ್ಚರ್ಯ
ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪರಿಷತ್ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಮಾತನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಸರ್ಕಾರ ಎಲ್ಲ ರೀತಿಯಿಂದಲೂ ನಾಡು- ನುಡಿಗೆ ಸ್ಪಂದಿಸುತ್ತಿರುವಾಗ ಇಷ್ಟು ಆಕ್ರೋಶ ವ್ಯಕ್ತಪಡಿಸಿದ್ದನ್ನು ನೋಡಿ ಅಚ್ಚರಿಯಾಗಿದೆ. ಎಚ್.ಕೆ. ಪಾಟೀಲರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಸಿಟ್ಟಾಗುವ ಅಗತ್ಯವಿತ್ತೇ? ಎಂಬ ಪ್ರಶ್ನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು. ಅದೇ ರೀತಿ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅಧಿಕಾರಕ್ಕೆ ಬಂದ ನಂತರ ರೈತರ ಸಮಸ್ಯೆಗೆ ಅತಿ ಹೆಚ್ಚು ಗಮನ ನೀಡಿದ್ದೇನೆ ಎಂದರು.
ಎಸ್‌ಎಂಎಸ್ ಟ್ರ್ಯಾಕಿಂಗ್
ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ ಸಾರ್ವಜನಿಕರು ನೀಡಿದ ದೂರಿನ ಸ್ಥಿತಿಗತಿ ಹೇಗಿದೆ ಎಂಬ ಬಗ್ಗೆ ಇನ್ನು ಮುಂದೆ ಮೊಬೈಲ್ ಫೋನ್‌ನಲ್ಲೇ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ದೂರುಗಳ ಬಗ್ಗೆ ಎಸ್‌ಎಂಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಇ- ಆಡಳಿತ ವತಿಯಿಂದ ಜಾರಿಗೆ ತರಲಾಗಿದೆ. ಇದಕ್ಕಾಗಿ ಪ್ರತ್ಯೇಕವಾದ ಟೋಲ್‌ಫ್ರೀ ನಂಬರ್ ಆರಂಭಿಸಲಾಗಿದೆ. ಇನ್ನು ಮುಂದೆ ಅರ್ಜಿ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಅರ್ಜಿದಾರರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ. 44554455 ನಂಬರ್‌ನಿಂದ ಎಸ್‌ಎಂಎಸ್ ರೂಪದಲ್ಲಿ ಮಾಹಿತಿ ಬರುತ್ತದೆ. ಮಾತ್ರವಲ್ಲ ಸಾರ್ವಜನಿಕರು ಈ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಬಹುದು. ತಲಾ 70 ದೂರುಗಳನ್ನು ಆಲಿಸಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ.
ಸಿದ್ದರಾಮಯ್ಯ ಹೇಳಿದ್ದೇನು?
- ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಕಾಯಿದೆ- 2006 ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ
- ಕಾಯಿದೆ ವಿಚಾರದಲ್ಲಿ ವಿದ್ಯಾರ್ಥಿಗಳು, ಪೋಷಕರ ಹಿತಕ್ಕೆ ಧಕ್ಕೆ ಇಲ್ಲ, ಆತಂಕ ಬೇಡ
- ಅಕ್ಕಿ ಗಿರಣಿ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧ, ಇನ್ನೆರಡು ದಿನದಲ್ಲಿ ಸಮಸ್ಯೆ ನಿವಾರಣೆ
- ಸಚಿವ ಸಂಪುಟ ವಿಸ್ತರಣೆ ಮಾಡುವ ಮುನ್ನ ಮಾಧ್ಯಮಗಳಿಗೆ ತಿಳಿಸುತ್ತೇನೆ
- ವಿವಿಧ ಅಕಾಡೆಮಿಗಳಿಗೆ ಶೀಘ್ರವೇ ಅಧ್ಯಕ್ಷರ ನೇಮಕ