ರಿವೋಕ್ಗೆ ಬೇಕು ಲಂಚದ ಪ್ರವೋಕ್!
ಕೊಪ್ಪಳ: ಇಲ್ಲದ ಕಾರಣ ನೀಡಿ ಅಮಾನತು ಮಾಡಲಾಗುತ್ತದೆ. ಅದನ್ನು ರಿಓಕ್ ಮಾಡಲು ಲಂಚ ತೆತ್ತಬೇಕು. ಇಲ್ಲದಿದ್ದರೆ ವಜಾ ಬೆದರಿಕೆ! ಇದನ್ನೆಲ್ಲಾ ಡೀಲ್ ಮಾಡಲು ದೊಡ್ಡ ಗ್ಯಾಂಗ್ ಇದೆ. ಇದರ ವಹಿವಾಟು ಲಕ್ಷ ಲಕ್ಷ!
ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಮೇಲಧಿಕಾರಿಗಳು ಇಲಾಖೆಯ ಸಿಬ್ಬಂದಿಯನ್ನು ತಗಣಿಯಂತೆ ಹೀರುತ್ತಿದ್ದಾರೆ. ಕೆಲಸದ ಒತ್ತಡ ಒಂದು ಕಡೆಯಾದರೆ ಇಂಥ ಅಮಾನವೀಯ ಕಿರುಕುಳ ಸಹಿಸಿಕೊಳ್ಳಬೇಕಾಗಿದೆ. ಕುಟುಂಬ ಸದಸ್ಯರನ್ನು ನೋಡಲು ಆಗದಂತೆ ಕರ್ತವ್ಯ ನಿಯೋಜನೆ ಮಾಡುತ್ತಾರೆ. ಸಂಬಂಧಿಕರು ಯಾರಾದರೂ ಸತ್ತರೂ ಹೋಗಲು ಆಗುವುದಿಲ್ಲ. ಇದೆಲ್ಲವನ್ನೂ ಅನುಭವಿಸುತ್ತಿರುವ ಸಾರಿಗೆ ಸಂಸ್ಥೆ ಸಿಬ್ಬಂದಿ ಕಚೇರಿಗೆ ಆಗಮಿಸಿ ಮೇಲಧಿಕಾರಿಗಳ ಕರ್ಮಕಾಂಡ ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ.
ಸರಿಯಾಗಿ ಕೆಲಸ ಮಾಡುತ್ತಿದ್ದರೂ ಇಲ್ಲದ ಕಾರಣ ನೀಡಿ ಅಮಾನತು ಮಾಡಲಾಗುತ್ತದೆ. ಇದನ್ನು ರಿಓಕ್ ಮಾಡಿ ಎಂದರೆ ಲಂಚ ಕೊಡಬೇಕು. ಹತ್ತರಿಂದ ಐವತ್ತು ಸಾವಿರ ರುಪಾಯಿವರೆಗೂ ಲಂಚ ನೀಡಬೇಕು. ಪ್ರತಿ ತಿಂಗಳು ಇಂಥ ಪ್ರಕರಣ ಮೇಲಧಿಕಾರಿಗಳಿಗೆ ಲಕ್ಷ ಲಕ್ಷ ಲಂಚದ ಆದಾಯ ತಂದುಕೊಡುತ್ತದೆ. ಇದು ಕೆಳಹಂತದ ಅಧಿಕಾರಿಯಿಂದ ಹಿಡಿದು, ಮೇಲಧಿಕಾರಿವರೆಗೂ ವ್ಯವಸ್ಥಿತವಾಗಿ ಮಂತ್ಲಿ ಮಾಮೂಲು ತಲುಪುತ್ತದೆ. ಇದೆಲ್ಲದ ಬಂಡವಾಳ ಬಯಲು ಮಾಡಬೇಕು ಎಂದರೆ ಸಂಜೆಯ 5 ಗಂಟೆಯ ನಂತರ ರಾತ್ರಿ 9 ಗಂಟೆವರೆಗೂ ಡಿಪೋದಲ್ಲಿದ್ದರೆ ಸಾಕು ಗೊತ್ತಾಗುತ್ತದೆ ಎಂದು ನೊಂದ ಸಿಬ್ಬಂದಿ ವಿವರಿಸುತ್ತಾರೆ.
ಹಾಜರಾದರೂ ಗೈರು: ತಿಂಗಳಿಗೆ 22 ದಿನ ನಿರಂತರವಾಗಿ ಕರ್ತವ್ಯ ಮಾಡಿದರೆ ನಾನಾ ಸೌಲತ್ತು ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಪಡೆದುಕೊಳ್ಳಲು ಸಿಬ್ಬಂದಿ ಮನೆಯಲ್ಲಿ ಮಕ್ಕಳು, ಮರಿಯ ಚಿಂತೆ ಬಿಟ್ಟು ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ, ಕರ್ತವ್ಯಕ್ಕೆ ನಿಯೋಜನೆ ಮಾಡದೆ ಅವರನ್ನು ರಜೆ ಎಂದು ಘೋಷಿಸುತ್ತಾರೆ. ಪರಿಣಾಮ ಬೆಳಗ್ಗೆ 6 ಗಂಟೆಗೆ ಬಂದು ಸಂಜೆ 6 ಗಂಟೆವರೆಗೂ ಕಾದರೂ ಕರ್ತವ್ಯಕ್ಕೆ ನಿಯೋಜನೆ ಮಾಡಲ್ಲ. ಅಂದು ಹಾಜರಿದ್ದರೂ ಗೈರು ಎಂದು ದಾಖಲು ಮಾಡಲಾಗುತ್ತದೆ. ರಾತ್ರೋರಾತ್ರಿ ಡ್ಯೂಟಿ ಬದಲಾಯಿಸಲಾಗುತ್ತದೆ. ಕಾರ್ಮಿಕ ಇಲಾಖೆ ನಿಯಮದ ಪ್ರಕಾರ ದಿನಕ್ಕೆ 8 ಗಂಟೆ ಕರ್ತವ್ಯ. ಆದರೆ, ಇಲ್ಲಿ ನಿಯಮಇಲ್ಲ. 18 ಗಂಟೆ ಡ್ಯೂಟಿ ಮಾಡಬೇಕು. ಅಷ್ಟು ಮಾಡಿದರೂ ಕಿಲೋ ಮೀಟರ್ ಆಗಿಲ್ಲ ಎಂದು ವೇತನದಲ್ಲಿ ಕಡಿತ ಮಾಡುತ್ತಾರೆ.
- ಸೋಮರಡ್ಡಿ ಅಳವಂಡಿ