ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕ್ಯಾರೆ ಎನ್ನದ ಸರ್ಕಾರ; ಕನ್ನಡ ಕಾರ್ಯಕ್ಕೆ ಗರ

Mainashree
Updated On : 19 Dec 2013, 12:17 pm

ಕ.ಪ್ರ. ವಾರ್ತೆ, ಗುಲ್ಬರ್ಗ, ಡಿ.18-
ನಮ್ಮನಾಳುವವರ ಅಲಕ್ಷ್ಯತನ ಕೇವಲ ಕನ್ನಡ ಸಾಹಿತ್ಯ ಪರಿಷತ್‌ಕ್ಕಷ್ಟೆ ಸೀಮಿತವಾಗಿಲ್ಲ, ಕನ್ನಡ ಕಾರ್ಯಕ್ಕೆ ಪೂರಕವಾಗಿರುವ ವಿವಿಧ ಅಕಾಡೆಮಿಗಳನ್ನೂ ಆವರಿಸಿಕೊಂಡಿದೆ.
ಈ ನಾಡಿನ ಕನ್ನಡಿಗರ ಸಾಕ್ಷಿಪ್ರಜ್ಞೆಯನ್ನು ಸದಾಕಾಲ ಬಡಿದೆಚ್ಚರಿಸುವ, ಕನ್ನಡದ ಸಾರಸ್ವತ ಲೋಕದಲ್ಲಿನ ಹತ್ತು ಹಲವು ಘಟನೆಗಳನ್ನು ದಾಖಲಿಸುವ, ಸಾಧಕರಿಗೆ ಪುರಸ್ಕಾರ ನೀಡಿ ಬೆನ್ನು ತಟ್ಟುವಂತಹ ಕಾಯಕ ಮಾಡುತ್ತಿದ್ದ ಕನ್ನಡದ ಕಾಯಕಕ್ಕೆ ಪೂರಕವಾಗಿರುವಂತಹ ಹಲವು ಅಕಾಡೆಮಿಗಳು ಕಳೆದೆರಡು ವರ್ಷಗಳಿಂದ ನಿಷ್ಕ್ರಿಯವಾಗಿವೆ.
ಸರ್ಕಾರ ಅಧ್ಯಕ್ಷರು- ಸದಸ್ಯರ ನೇಮಕಾತಿ ಮಾಡಿ ಅಕಾಡೆಮಿಗಳ ಕಾರ್ಯಕ್ಕೆ ಚಾಲನೆ ನೀಡಿಲ್ಲ, ಹೀಗಾಗಿ ಹಲವು ರೂಪಗಳಲ್ಲಿ ಅಕಾಡೆಮಿಗಳು ಎಳೆಯಬೇಕಿದ್ದ ಕನ್ನಡ ತೇರು ಹಾಗೇ ನಿಂತುಬಿಟ್ಟಿದೆಂದರೂ ತಪ್ಪಿಲ್ಲ.

ಕ್ರಿಯಾಶೂನ್ಯ: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ನೇಮಕವಾಗಿ ಶೆಟ್ಟರ್ ಬರುವಷ್ಟರಲ್ಲಿ ಅವಧಿ ಪೂರ್ಣಗೊಂಡಿದ್ದ ಅಕಾಡೆಮಿಗಳನ್ನು ಇಂದಿಗೂ ಪುನಃ ಕಟ್ಟುವ, ಅವುಗಳಿಗೆ ಅನುದಾನ ನೀಡಿ ಕನ್ನಡಪರ ಚಿಂತನೆಗಳಿಗೆ ಸ್ಫೂರ್ತಿ ತುಂಬುವ ಕೆಲಸ ನಡೆಯುತ್ತಿಲ್ಲ.
ಕನ್ನಡ ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ಹಲವು ಸ್ವರೂಪಗಳಲ್ಲಿ ಕಾರ್ಯನಿರತವಾಗಬೇಕಿದ್ದ ಅಕಾಡೆಮಿಗಳು ಇಂದು ಸರ್ಕಾರದ ಅವಗಣನೆಗೆ ಗುರಿಯಾಗಿ ಕ್ರಿಯಾಶೂನ್ಯವಾಗಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತುಪಡಿಸಿ ಕನ್ನಡಪರವಾಗಿರುವಂತಹ ಯಾವ ಅಕಾಡೆಮಿಗಳೂ ಕಾರ್ಯನಿರತವಾಗಲಿಲ್ಲ.
ಕನ್ನಡ ಸಾಹಿತ್ಯ ಅಕಾಡೆಮಿ, ಅನುವಾದ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ನಾಟಕ, ಸಂಗೀತ- ನತ್ಯ, ಲಲಿತ ಕಲಾ, ಯಕ್ಷಗಾನ- ಬಯಲಾಟ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರ, ಮಕ್ಕಳ ಬಾಲವಿಕಾಸ ಅಕಾಡೆಮಿಗಳೆಲ್ಲ ಅಧ್ಯಕ್ಷರು- ಸದಸ್ಯರಿಲ್ಲದೆ ಬೆಚ್ಚಗೆ ಕುಳಿತುಬಿಟ್ಟಿವೆ.
ಹಿಂದಿನ ಸಿಎಂ ಶೆಟ್ಟರ್ ಅವಧಿಯಿಂದಲೂ ಅಕಾಡೆಮಿಗಳ ನೇಮಕಾತಿ ವಿಚಾರ ರಾಜಕೀಯ ದಾಳವಾಗಿ ಆಗಾಗ ಚರ್ಚೆಯಲ್ಲಿರುತ್ತದೆಯೇ ವಿನಹ ಯಾರೊಬ್ಬರೂ ಸೂಕ್ಷ್ಮವಾಗಿ, ಗಂಭೀರವಾಗಿ, ಕನ್ನಡ ಕೆಲಸಗಳನ್ನು ಮುಂದಿಟ್ಟುಕೊಂಡು ಅಕಾಡೆಮಿಗಳಿಗೆ ಜೀವ ತುಂಬುವತ್ತ ಪ್ರಯತ್ನಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿ.

ಸಾಹಿತಿಗಳು- ಕನ್ನಡಪ್ರೇಮಿಗಳ ಬೇಸರ: ಈ ನಾಡಿನ ಸಾರಸ್ವತ ಲೋಕಕ್ಕಂತೂ ಕಳೆದ 2 ವರ್ಷಗಳಿಂದ ಕನ್ನಡ, ಸಂಸ್ಕೃತಿ ಕಟ್ಟುವ, ಅಲ್ಲಿ ಹೊಸತನ ತರುವ ವಿಚಾರದಲ್ಲಿ ಕವಿದ ಕಾರ್ಮೋಡ ಕಂಡು ನಿರಾಶೆ ಕಾಡಲಾರಂಭಿಸಿದೆ. ಅದರಲ್ಲೂ ಕನ್ನಡಪರ ಅಭಿಮಾನಿಗಳಂತೂ ಯಾಕೆ ಸರ್ಕಾರಕ್ಕೆ ಕನ್ನಡ ಕೆಲಸಗಳೆಂದರೆ ಬೇಸರವೋ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ಸಾಹಿತ್ಯ ಅಕಾಡೆಮಿ ನಿಂತ ನೀರಾಗಿದ್ದರಿಂದ ಅಲ್ಲಿ ಆಗಬೇಕಿರುವ ಹಲವು ಕನ್ನಡ ಕೆಲಸಗಳು ಮಲಗಿವೆ, ಪುಸ್ತಕ ಪ್ರಾಧಿಕಾರದಲ್ಲೂ ಅಷ್ಟೇ. ಪುರಸ್ಕಾರ ಪ್ರದಾನ, ಪುಸ್ತಕ ಪ್ರಕಟಣೆ, ನಾಡಿನಾದ್ಯಂತ ಸಂಚರಿಸಿ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುವಂತಹ ಮಹತ್ವದ ಕೆಲಸಗಳು ಇಂದು ಇತಿಹಾಸ ಪುಟಗಳನ್ನು ಸೇರಿದ್ದು ದುರಂತವಲ್ಲದೆ ಮತ್ತೇನು ಎಂಬುದು ಕನ್ನಡಪ್ರೇಮಿಗಳು ಖಾರವಾಗಿ ಪ್ರಶ್ನಿಸುತ್ತಿದ್ದಾರೆ.

ಭಾಷೆ, ಸಾಹಿತ್ಯ, ಸಂಗೀತ, ಲಲಿತ ಕಲೆಗಳಾದಿಯಾಗಿ ಎಲ್ಲಾ ರಂಗಗಳಲ್ಲಿನ ಕಾರ್ಯಚಟುವಟಿಕೆಗಳೆಲ್ಲವೂ ಕನ್ನಡ ಬೆಳವಣಿಗೆಗೆ ಪರೋಕ್ಷವಾಗಿ ಕೋಡುಗೆ ನೀಡುತ್ತವೆ. ಆದರೆ ಸರ್ಕಾರ ಯಾಕೋ ಅಕಾಡಿಮೆಗಳನ್ನೆಲ್ಲ ಮುಖ್ಯಸ್ಥರಿಲ್ಲದೆ ಮುಕ್ಕಾಗಿರುವಂತೆ 2 ವರ್ಷದಿಂದ ಹಾಗೇ ಮುಂದುವರಿಸಿಕೊಂಡು ಹೊರಟಿರುವುದು ವಿಷಾದದ ಸಂಗತಿ. ಕನ್ನಡ ಕೆಲಸಗಳಿಗೆ ಇದರಿಂದ ದೊಡ್ಡ ಪೆಟ್ಟು ಬಿದ್ದಿರುವುದಂತೂ ನಿಜ. ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಬೇಕು. ಸರ್ಕಾರ ಆ ಕೆಲಸಕ್ಕೆ ಆಶ್ರಯ ನೀಡಬೇಕು. ಆದರೆ ಕರ್ನಾಟಕದಲ್ಲಿ 2 ವರ್ಷದಿಂದ ಎಲ್ಲವೂ ಅಯೋವುಯವಾಗುತ್ತಿದೆ ಯಾಕೋ ಗೊತ್ತಿಲ್ಲ.
- ಮಹಿಪಾಲರೆಡ್ಡಿ ಮುನ್ನೂರ್, ಅಧ್ಯಕ್ಷರು, ಕಸಾಪ, ಗುಲ್ಬರ್ಗ

ಅಕಾಡೆಮಿಗಳು ಕೆಲಸವಿಲ್ಲದೆ ಭಣಗುಡುತ್ತಿವೆ. ಕನ್ನಡ ಕೆಲಸಕ್ಕೆ ಕಳೆದ 2 ವರ್ಷದಿಂದ ಹಣವೇ ಖರ್ಚಾಗುತ್ತಿಲ್ಲ. ಒಂದು ರೀತಿಯ ಜಡತ್ವ ಕನ್ನಡ ಕೆಲಸಗಳಿಗೆ ಆವರಿಸಿದೆ. ಇಂತಹ ನಿರ್ವಾತ ಹಿಂದೊಂದೂ ಕಂಡಿರಲಿಲ್ಲ. 3 ವರ್ಷಗಳ ಅವಧಿಯ ಅಕಾಡೆಮಿಗಳ ಮರು ರಚನೆಗೆ 2 ವರ್ಷವಾದರೂ ಸರ್ಕಾಎರ ಮುಂದಾಗುತ್ತಿಲ್ಲ ಎಂದ ಮೇಲೆ ನಮ್ಮನ್ನಾಳುವವರಿಗೆ ಕನ್ನಡ ಕಾರ್ಯಗಳೆಂದರೆ ಅದೆಷ್ಟು ಪ್ರೀತಿ- ಆಸಕ್ತಿ ಎಂಬುದನ್ನು ಯಾರಾದರೂ ಅರಿಯಬಹುದಾಗಿದೆ. ಕನ್ನಡ ನಾಡಿನಲ್ಲೇ ಕನ್ನಡಕ್ಕೆ, ಕನ್ನಡ ಕೆಲಸ ಕಾರ್ಯಗಳಿಗೆ, ಸಾಂಸ್ಕೃತಿಕ ಲೋಕಕ್ಕೆ ಈ ತೆರನಾದ ಮಂಕು ಕವಿದರೆ ಹೇಗೆ...?
- ಡಾ. ಸ್ವಾಮೀರಾವ ಕುಲ್ಕರ್ಣಿ, ಹಿರಿಯ ಸಾಹಿತಿ, ಗುಲ್ಬರ್ಗ

- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement