ಕೃಷಿಯ ಸಮೃದ್ಧ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆ ಮಾರಕ ಹೆಜ್ಜೆ, ದಯವಿಟ್ಟು ಉಣ್ಣುವ ಬಟ್ಟಲಿನಲ್ಲಿ ಬೂದಿಯನ್ ಹಾಕಬೇಡಿ...
ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಕರಲ್ಲದವರು ಖರೀದಿಸಲು ಸರ್ಕಾರ...
ವಿದ್ಯಾಗಿರಿ, ಮೂಡುಬಿದಿರೆ: ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಕರಲ್ಲದವರು ಖರೀದಿಸಲು ಸರ್ಕಾರ ಕಾನೂನು ತರಲು ಮುಂದಾಗಿದೆ. ಕೃಷಿಯ ಸಮೃದ್ಧ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸುವುದು ಮಾರಕ ಹೆಜ್ಜೆ. ಇವೆಲ್ಲದರ ಹಿನ್ನೆಲೆಯಲ್ಲಿ ನಾನು ಸರ್ಕಾರವನ್ನು ವಿನಂತಿಸುವುದಿಷ್ಟೇ. ಉಣ್ಣುವ ಬಟ್ಟಲಲ್ಲಿ ಬೂದಿ ಹಾಕಬೇಡಿ.
ಇದು ವಿಶ್ವನುಡಿಸಿರಿ ಸರ್ವಾಧ್ಯಕ್ಷ ಪ್ರೊ.ಬಿ.ಎ. ವಿವೇಕ ರೈ ಅವರು ವಿಶ್ವನುಡಿಸಿರಿ ವೇದಿಕೆಯಿಂದ ಜನರ ಪರ ಸರ್ಕಾರಕ್ಕೆ ಮಾಡಿರುವ ಮನವಿ. ಅಂತರ್ಜಾಲದಲ್ಲಿ ಕನ್ನಡ ಅಭಿವೃದ್ಧಿ, ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮುಂತಾದವುಗಳ ಕುರಿತೂ ಅವರು ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ರವಾನಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಭೂಮಿ ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೃಷಿಭೂಮಿ ಪರಿವರ್ತಿಸಿ ಕೈಗಾರಿಕೆಗಳಿಗೆ ಮತ್ತು ಕಟ್ಟಡಗಳಿಗೆ ಬಳಸುವ ಅವಕಾಶ ನಿಲ್ಲಿಸಬೇಕು. ಕೃಷಿಕರಲ್ಲದವರು ಕೃಷಿಭೂಮಿ ಕೊಂಡುಕೊಳ್ಳುವ ಕಾನೂನನ್ನು ಸರ್ಕಾರ ತರಲು ಉದ್ದೇಶಿಸಿದೆ ಎಂಬುದನ್ನು ಕೇಳಿಬಲ್ಲೆ. ಅದನ್ನು ತಕ್ಷಣ ಕೈಬಿಡಬೇಕು. ಕೃಷಿಕರಿಗೆ ಸಮಸ್ತ ಸೌಲಭ್ಯ ಒದಗಿಸಿ, ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು. ಅವರಿಗೆ ಸಂಪೂರ್ಣ ಮೂಲ ಸೌಕರ್ಯಗಳನ್ನು ಗ್ರಾಮದಲ್ಲೇ ಒದಗಿಸಿ, ಬೆಳೆಗೆ ಒಳ್ಳೆಯ ಬೆಲೆ ಒದಗಿಸಿದರೆ ನಗರಕ್ಕೆ ವಲಸೆ ಹೋಗುವುದನ್ನು ಖಂಡಿತ ತಪ್ಪಿಸಬಹುದು. ಕೃಷಿ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸುವುದು ರಾಜ್ಯದ ಪಾಲಿಕೆ ಮಾರಕ ಹೆಜ್ಜೆ ಎಂದು ಹೇಳಿದರು.
ನದಿ ತಿರುವಿಗೆ ವಿರೋಧ: ನೇತ್ರಾವತಿ ತಿರುವು ಯೋಜನೆಯನ್ನೂ ಸರ್ವಾಧ್ಯಕ್ಷ ಪ್ರೊ.ವಿವೇಕ ರೈ ಕಟುವಾಗಿ ವಿರೋಧಿಸಿದ್ದಾರೆ. ಕರಾವಳಿಯ ನದಿಗಳನ್ನು ತಿರುಗಿಸುವ ಯೋಜನೆ ಭಯದ ಹುತ್ತಗಳನ್ನು ಸೃಷ್ಟಿಸಿದೆ. ಒಂದೆಡೆ ಕರಾವಳಿ ಹಳ್ಳಿಗಳಲ್ಲಿ ಕೆರೆ- ಬಾವಿಗಳು ಬತ್ತುತ್ತಿದ್ದು, ಬಡಕಲಾಗಿವೆ. ಪಶ್ಚಿಮದ ಕಡಲು ಮಲಿನವಾಗದಂತೆ ನೋಡಿಕೊಂಡು, ನಮ್ಮ ಮೀನಿನ ಸಂಪತ್ತು ಕಾಪಾಡಬೇಕು. ಪಶ್ಚಿಮಘಟ್ಟದ ಅರಣ್ಯ ತನ್ನ ಅಪೂರ್ವ ಜೀವವೈವಿಧ್ಯ ಸಂಕುಲದಿಂದ ವಿಶ್ವ ನೈಸರ್ಗಿಕ ಪರಂಪರೆಯಲ್ಲಿ ಸ್ಥಾನ ಪಡೆದಿದೆ. ಅದನ್ನು ಕಾಪಾಡಲು ನಾವೆಲ್ಲ ಪಣತೊಡಬೇಕಿದೆ ಎಂಬ ಕರೆಯನ್ನೂ ನೀಡಿದರು.
ಕೇರಳಕ್ಕಿಂತ ಕರ್ನಾಟಕ ಹಿಂದೆ: ಕೇರಳಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ಜನಪದ ಕಲೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ನಮ್ಮ ಸರ್ಕಾರ ವಿಫಲವಾಗಿದೆ. ಕೇರಳದ ಜನಪದ ಕಲೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿ ಪ್ರದರ್ಶಿಸುವ ಮೂಲಕ ಅಲ್ಲೆಲ್ಲ ಕೇರಳ ಸಂಸ್ಕೃತಿಯ ಮುದ್ರೆ ಒತ್ತಿದೆ. ಆದರೆ ನಮ್ಮ ರಾಜ್ಯದ ಕಲೆಗಳಾದ ಯಕ್ಷಗಾನ ಮತ್ತು ಇತರೆ ಜನಪದ ಕಲೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸುವ ವ್ಯವಸ್ಥಿತ ಪ್ರಯತ್ನ ಸರ್ಕಾರದಿಂದ ಆಗಿಲ್ಲ. ಸಾಂಸ್ಕೃತಿಕ ಕರ್ನಾಟಕವನ್ನು ವಿಶ್ವದಲ್ಲಿ ಪ್ರತಿಷ್ಠಾಪಿಸಲು ಕ್ರಮಬದ್ಧವಾದ ಯೋಜನೆಗಳು ರೂಪುಗೊಳ್ಳಬೇಕಾದ ಅಗತ್ಯವಿದೆ ಎಂದರು.
ನಮ್ಮ ಸರ್ಕಾರಗಳಿಗೆ ಕನ್ನಡ ಮಾಧ್ಯಮ, ಏಕರೂಪ ಶಿಕ್ಷಣ ಜಾರಿಗೊಳಿಸಲು ಕತೃತ್ವಶಕ್ತಿ ಇಲ್ಲ. ಕೇವಲ ಕನ್ನಡ ಮಾಧ್ಯಮದಲ್ಲಿ ಕಲಿಸಿದರೆ ಸಾಲದು. ಅದು ಅನ್ನದ ಭಾಷೆಯಾಗಬೇಕು. ಕನ್ನಡಿಗರಿಗೆ ಉದ್ಯೋಗ ಸರ್ಕಾರಿ ವಲಯದಷ್ಟೇ ಅಲ್ಲ, ಖಾಸಗಿ ವಲಯದಲ್ಲೂ ಜಾರಿಯಾಗಬೇಕು. ಎಚ್. ನರಸಿಂಹಯ್ಯ, ಚಂಪಾ, ಬರಗೂರು, ಗೋಕಾಕರ ನೇತೃತ್ವದಲ್ಲಿ ರಚಿಸಲಾದ ವರದಿಗಳು ಸರ್ಕಾರದ ಕಪಾಟು ಸೇರಿವೆ ಎಂದು ವಿಷಾದಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಗ್ಗೆ ಸಂಭ್ರಮಿಸಿದ್ದೇ ಬಂತು. ಅದಕ್ಕಿಂತ ಹೆಚ್ಚಿನದೇನೂ ಆಗಲಿಲ್ಲ. ಆದರೆ ತಮಿಳಿನಲ್ಲಿ ಎಷ್ಟೆಲ್ಲ ಕೆಲಸಗಳಾಗಿವೆ. ರಾಜಧಾನಿ ದೆಹಲಿಯಲ್ಲಿ ಕನ್ನಡದ ಛಾಪು ಮೂಡಿಸಲು ನಾವು ವಿಫಲರಾಗಿದ್ದೇವೆ. ಅದಕ್ಕಾಗಿ ದಿಲ್ಲಿಯಲ್ಲಿ ಕನ್ನಡ ಅಧ್ಯಯನ ಕೇಂದ್ರವೊಂದನ್ನು ತೆರೆಯಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಹೇಳದೇ ಮಾಡಿ ತೋರಿಸಿದರು
ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರು ಹಾಗೆ ಆಗಬೇಕು ಮತ್ತು ಹೀಗೆ ಆಗಬೇಕು ಎಂದು ಹೇಳುತ್ತಿದ್ದುದನ್ನು ಡಾ. ಮೋಹನ ಆಳ್ವರು ಸದ್ದಿಲ್ಲದೇ ಮಾಡಿ ತೋರಿಸಿದ್ದಾರೆ. ಕಳೆದ 9 ವರ್ಷಗಳಿಂದ ಅತ್ಯಂತ ಅಚ್ಚುಕಟ್ಟಾಗಿ ನುಡಿಸಿರಿ ಆಯೋಜಿಸುವ ಮೂಲಕ ಸಾಹಿತ್ಯದ ಕಾರ್ಯಕ್ರಮಗಳಿಗೆ ಮಾದರಿ ಕಾರ್ಯಕ್ರಮವಾಗಿ ರೂಪಿಸಿದ್ದಾರೆ ಎಂದು ವಿಶ್ವನುಡಿಸಿರಿ ಸರ್ವಾಧ್ಯಕ್ಷ ಪ್ರೊಬಿ.ಎ. ವಿವೇಕ ರೈ ಹೇಳಿದ್ದಾರೆ.
ಗ್ರಾಮೀಣ ವಿವಿ ಬೇಕು
ವಿಶ್ವನುಡಿಸಿರಿ ಸರ್ವಾಧ್ಯಕ್ಷ ವಿವೇಕ ರೈ, ಸರ್ಕಾರದ ಮುಂದೆ ಹೊಸ ಕಲ್ಪನೆಯೊಂದನ್ನು ಇಟ್ಟಿದ್ದಾರೆ. ಅವರು ಹೊರದೇಶಗಳಲ್ಲಿ ನೋಡಿದ ಪ್ರಯೋಗವನ್ನು ಗ್ರಾಮೀಣ ವಿಶ್ವವಿದ್ಯಾಲಯ ಕಲ್ಪನೆಯ ರೂಪದಲ್ಲಿ ಮಂಡಿಸಿದ್ದಾರೆ. ರಾಜ್ಯದ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯ ಶಿಕ್ಷಣ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮೀಣ ವಿವಿ ಅಗತ್ಯವಿದೆ. ಅದನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ 2- 3 ಕಡೆ ಸ್ಥಾಪಿಸಬೇಕು ಎಂದು ಹೇಳಿದ್ದಾರೆ. ಕೊಲಂಬಿಯಾದಲ್ಲಿ ಅಚಿಟು ಎಂಬ ನಗರದ ಸಮೀಪ ಗ್ರಾಮೀಣ ಪ್ರದೇಶದ ಜನರ ಕಲಿಕೆಗಾಗಿ ಗ್ರಾಮೀಣ ವಿವಿ ಸ್ಥಾಪಿಸಲಾಗಿದೆ. ಗ್ರಾಮೀಣ ವಿವಿಯು ವಿವಿಗಳ ಪರಂಪರಾಗತ ಅರ್ಥವನ್ನು ಮೀರಿ ಕೆಲಸ ಮಾಡುತ್ತದೆ. ಎಲ್ಲ ಹಂತಗಳ ಶಿಕ್ಷಣ ನೀಡುವುದರ ಜತೆಗೆ ಆ ಪ್ರದೇಶದ ಅಭಿವೃದ್ಧಿಗೆ ಬೇಕಾದ ಕಾರ್ಯತಂತ್ರ ಯೋಜಿಸಿ, ಅದಕ್ಕೆ ಪೂರಕವಾದ ತರಬೇತಿ ಕಾರ್ಯಗಳನ್ನೂ ನಡೆಸುತ್ತದೆ. ಈ ಮೂಲಕ ಗ್ರಾಮವೊಂದನ್ನು ತನ್ನದೇ ಮಾನವ ಸಂಪನ್ಮೂಲದ ಮೂಲಕ ತಂತ್ರಜ್ಞಾನದ ಸಹಾಯದಿಂದ ಸ್ವಾವಲಂಬಿಯನ್ನಾಗಿ ಮಾಡುವುದು ಗ್ರಾಮೀಣ ವಿಶ್ವವಿದ್ಯಾಲಯದ ಉದ್ದೇಶ ಎಂದರು.
* ಆಳ್ವಾಸ್ ವಿಶ್ವನುಡಿಸಿರಿಯಲ್ಲಿ ಜನರ ಪರವಾಗಿ ಸರ್ಕಾರಕ್ಕೆ ಸರ್ವಾಧ್ಯಕ್ಷರ ವಿವೇಕ ರೈ ಮನವಿ
* ಕೃಷಿಭೂಮಿ ಪರಿವರ್ತಿಸಿ ಕೈಗಾರಿಕೆಗಳಿಗೆ ಮತ್ತು ಕಟ್ಟಡಗಳಿಗೆ ಬಳಸುವ ಅವಕಾಶ ನಿಲ್ಲಿಸಬೇಕು
* ಕೃಷಿಕರಿಗೆ ಸಮಸ್ತ ಸೌಲಭ್ಯ ಒದಗಿಸಿ, ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು
* ನೇತ್ರಾವತಿ ತಿರುವು ಯೋಜನೆ ಸರಿಯಲ್ಲ, ಪಶ್ಚಿಮ ಘಟ್ಟದ ಅರಣ್ಯ ಪ್ರದೇಶವನ್ನು ಉಳಿಸಿ
* ಕೇರಳಕ್ಕೆ ಹೋಲಿಸಿದಲ್ಲಿ ನಮ್ಮ ಜನಪದ ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿಲ್ಲ
- ವಿನಾಯಕ ಭಟ್ಟ ಮೂರೂರು