ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತ.ನಾಡಿನ ಬಾಳೆಗೆ ಹಾಪ್‌ಕಾಮ್ಸ್ ಮಣೆ!

'ಬಾಳೆ ಬೆಳೆದರೆ ಬಂಗಾರದ ಬೆಲೆ' ಎಂಬ ರೈತರ ನಂಬಿಕೆಯನ್ನು ನುಚ್ಚುನೂರು ಮಾಡಲು ಹಾಪ್‌ಕಾಮ್ಸ್ ಸಂಸ್ಥೆಯೇ ಮುಂದಾಗಿದೆ...! ಹೌದು. ತೋಟಗಾರಿಕಾ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ...

Vishwanath S
Updated On : 20 Dec 2013, 12:59 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.19-
'ಬಾಳೆ ಬೆಳೆದರೆ ಬಂಗಾರದ ಬೆಲೆ' ಎಂಬ ರೈತರ ನಂಬಿಕೆಯನ್ನು ನುಚ್ಚುನೂರು ಮಾಡಲು ಹಾಪ್‌ಕಾಮ್ಸ್ ಸಂಸ್ಥೆಯೇ ಮುಂದಾಗಿದೆ...!
ಹೌದು. ತೋಟಗಾರಿಕಾ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ಸಹಕಾರಿ ಕಾಯ್ದೆ ಅಡಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆ ಈಗ ಪರ ರಾಜ್ಯದ ಉತ್ಪನ್ನಗಳತ್ತ ಕೈ ಚಾಚುತ್ತಿದೆ.
ಹಣದ ಆಸೆಗೆ ಬಿದ್ದಿರುವ ಹಾಪ್‌ಕಾಮ್ಸ್ ನಿರ್ದೇಶಕ ಮಂಡಳಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಾಳೆ ಹಣ್ಣು ಲಭ್ಯವಿದ್ದರೂ ವಾಮಮಾರ್ಗದಲ್ಲಿ ತಮಿಳುನಾಡು ರೈತರು ಬೆಳೆದ ಬಾಳೆ ಹಣ್ಣು ಖರೀದಿಸುವ ದಂಧೆಗೆ ಪ್ರೇರಣೆ ನೀಡುತ್ತಿದೆ.
ಈ ಮೂಲಕ ರಾಜ್ಯದ ಬಾಳೆ ಬೆಳೆಗಾರರ ಬಾಳಿನಲ್ಲಿ ಹಾಪ್‌ಕಾಮ್ಸ್‌ನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಚೆಲ್ಲಾಟ ಆಡಲಾರಂಭಿಸಿದ್ದಾರೆ. ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಈಗ ತಮಿಳುನಾಡು ಮೂಲದ 'ಏಲಕ್ಕಿ' ಬಾಳೆಹಣ್ಣು ರಾರಾಜಿಸುತ್ತಿದ್ದು, ರಾಜ್ಯದ ರೈತ ಕಂಗಾಲಾಗಿದ್ದಾನೆ. ಮಾತ್ರವಲ್ಲ, ಕಡಿಮೆ ದರಕ್ಕೆ ಖಾಸಗಿಯವರಿಗೆ ತಾನು ಬೆಳೆದ ಬಾಳೆಹಣ್ಣು ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಆಶ್ಚರ್ಯ ಎನಿಸಿದರೂ ಇದು ಸತ್ಯ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾರಾಟಕ್ಕೆ ಇಡುವ ಬಾಳೆಹಣ್ಣು ಪೈಕಿ ಶೇ.50ಕ್ಕೂ ಹೆಚ್ಚು ತಮಿಳುನಾಡಿನ ರೈತರಿಂದ ಖರೀದಿಸಿ ತಂದಿರುವಂಥದ್ದು. ಅದರಲ್ಲೂ ವಿಶೇಷವಾಗಿ ಏಲಕ್ಕಿ ಬಾಳೆ ಖರೀದಿಯಲ್ಲಿ ಹಾಪ್‌ಕಾಮ್ಸ್ ತಮಿಳುನಾಡು ಪರವಾದ ಧೋರಣೆ ತಳೆದಿದೆ.     

ಹೇಗೆ ಖರೀದಿ?: ತೋಟಗಾರಿಕಾ ಬೆಳೆಗಾರರ ರಕ್ಷಣೆ ಉದ್ದೇಶದಿಂದಲೇ ರಾಜ್ಯದಲ್ಲಿ ಹಾಪ್‌ಕಾಮ್ಸ್ ಆರಂಭಿಸಲಾಗಿದೆ. ರಾಜ್ಯಾದ್ಯಂತ ಸುಮಾರು 18 ಸಾವಿರ ರೈತರು ಇದರ ಸದಸ್ಯರಾಗಿದ್ದು, ಇವರ ಮೂಲಕವೇ ಖರೀದಿ ಪ್ರಕ್ರಿಯೆ ನಡೆಯುತ್ತದೆ.
ಆದರೆ ಹಣದ ಆಸೆಗೆ ಬಿದ್ದಿರುವ ಹಾಪ್‌ಕಾಮ್ಸ್ ನಿರ್ದೇಶಕ ಮಂಡಳಿಯ ಕೆಲವರು ಇದೇ ರೈತ ಸದಸ್ಯರನ್ನು ತಮ್ಮ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ. ಅವರ ಹೆಸರಿನಲ್ಲಿ ತಮಿಳುನಾಡು ಏಲಕ್ಕಿ ಬಾಳೆ ಹಣ್ಣನ್ನು ಖರೀದಿಸಿ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ.

ಬೇಡಿಕೆ ಮತ್ತು ದರ ಹೇಗೆ?: ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆ ಬೆಳೆದ ರೈತರಿಗೆ ಹೆಚ್ಚಿನ ದರ ಸಿಗುತ್ತದೆ. ಆ ಸಂದರ್ಭದಲ್ಲಿ ಹಾಪ್‌ಕಾಮ್ಸ್‌ನ ಖರೀದಿ ದರ ಪ್ರತಿ ಕೆಜಿಗೆ 50ರಿಂದ 55 ರಷ್ಟಿರುತ್ತದೆ. ದೀಪಾವಳಿ ಹಬ್ಬದ ವೇಳೆಗೆ ಇದು 40ರಿಂದ 45ರವರೆಗೆ ಇರುತ್ತದೆ. ನಂತರದ ದಿನಗಳಲ್ಲಿ ಬೇಡಿಕೆ ಇಳಿಮುಖವಾದರೂ ಖರೀದಿ ದರ ಕನಿಷ್ಠ 29ರಿಂದ 30ರಷ್ಟಿರುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ಹಾಪ್‌ಕಾಮ್ಸ್ ಮಳಿಗೆಗಳಿಗೆ ಕನಿಷ್ಠ 8ರಿಂದ 10 ಟನ್ ಬಾಳೆ ಹಣ್ಣು ಪೂರೈಕೆಯಾಗುತ್ತದೆ. ಈ ಪೈಕಿ ಬೆಂಗಳೂರು ಗ್ರಾಮಾಂತರ, ಚನ್ನಪಟ್ಟಣ, ಕೋಲಾರ, ಚಿಕ್ಕಬಳ್ಳಾಪುರದ ಅರೆ ಖುಷ್ಕಿ ಪ್ರದೇಶ, ನೀರಾವರಿ ಆಶ್ರಿತ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಏಲಕ್ಕಿ ಬಾಳೆ ಹಣ್ಣು ಪೂರೈಕೆ ಹೆಚ್ಚು. ಆದರೆ ಪಕ್ಕದ ತಮಿಳುನಾಡು ರಾಜ್ಯದಲ್ಲೂ ಏಲಕ್ಕಿ ಬಾಳೆ ಹಣ್ಣು ಬೆಳೆಯಲಾಗುತ್ತಿದ್ದು, ಅವುಗಳ ದರ ಕರ್ನಾಟಕಕ್ಕಿಂತ ಕಡಿಮೆ.
ಹೀಗಾಗಿ ಮಳಿಗೆ ಖರೀದಿಸುವ ಬಾಳೆ ಹಣ್ಣುಗಳ ಪೈಕಿ ಶೇ.50ರಷ್ಚನ್ನು ರಾಜ್ಯದ ಬೆಳೆಗಾರರ ಹೆಸರಿನಲ್ಲಿ ತಮಿಳುನಾಡಿನಿಂದ ಖರೀದಿಸಲಾಗುತ್ತಿದೆ. ಬೇಡಿಕೆ ಆಧರಿಸಿ ಕನಿಷ್ಠ 4ರಿಂದ 5 ಟನ್ ತಮಿಳುನಾಡಿನ ಏಲಕ್ಕಿ ಬಾಳೆ ಹಣ್ಣು ಹಾಪ್‌ಕಾಮ್ಸ್‌ಗೆ ಹರಿದು ಬರುತ್ತಿದೆ. ರಾಜ್ಯದ ಬಾಳೆ ಹಣ್ಣಿಗಿಂತ ಪ್ರತಿ ಕೆಜಿಗೆ 5ರಿಂದ 8 ಕಡಿಮೆ ನೀಡಿ ಖರೀದಿಸಿ, ರಾಜ್ಯದ ದರದಲ್ಲೇ ಮಾರಲಾಗುತ್ತಿದೆ. ಇದರಿಂದ ಬರುವ ಲಾಭವನ್ನು ನಕಲಿ ರೈತರು, ಸ್ಟೋರ್ ಕೀಪರ್‌ಗಳು ಹಾಗೂ ನಿರ್ದೇಶಕರು ಗುಳುಂ ಮಾಡುತ್ತಿದ್ದಾರೆ.

ಹೇಗೆ ಗೊತ್ತಾಗುತ್ತದೆ?
ಕರ್ನಾಟಕ ಹಾಗೂ ತಮಿಳುನಾಡಿನ ಏಲಕ್ಕಿ ಬಾಳೆಹಣ್ಣನ್ನು ಅತ್ಯಂತ ಸರಳವಾಗಿ ಪತ್ತೆಹಚ್ಚಬಹುದು. ತಮಿಳುನಾಡಿನ ಬಾಳೆ ಹಣ್ಣು ಗಾತ್ರದಲ್ಲಿ ತುಸು ದೊಡ್ಡದಾಗಿದ್ದು, ಸಿಪ್ಪೆಯ ಹೊಳಪು ಹೆಚ್ಚು. ಆದರೆ ರಾಜ್ಯದ ಏಲಕ್ಕಿ ಬಾಳೆ ಹಣ್ಣು ಗಾತ್ರದಲ್ಲಿ ಚಿಕ್ಕದಿದ್ದರೂ ಸವಿ ಹೆಚ್ಚು. ಬಾಳೆ ಹಣ್ಣು ಖರೀದಿಯಲ್ಲಿ ಮಾತ್ರವಲ್ಲ, ಎಲ್ಲ ತೋಟಗಾರಿಕಾ ಬೆಳೆಗಳ ಖರೀದಿಯಲ್ಲೂ ಇದೇ ರೀತಿ ದಂಧೆ ನಡೆಯುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಈ ದಂಧೆಯನ್ನು ತಕ್ಷಣ ನಿಯಂತ್ರಿಸಬೇಕೆಂಬ ಕೂಗು ರೈತ ವರ್ಗದವರಿಂದ ವ್ಯಕ್ತವಾಗಿದೆ.

ಬೆಂಗಳೂರಿಗೆ ಅಗತ್ಯವಾದಷ್ಟು ಬಾಳೆ ಹಣ್ಣು ರಾಜ್ಯದಲ್ಲಿ ಬೆಳೆಯುತ್ತಿಲ್ಲ. ಹೀಗಾಗಿ ಬೆಂಗಳೂರಿನ ಬೇಡಿಕೆಗೆ ತಮಿಳುನಾಡನ್ನೇ ಆಶ್ರಯಿಸಲಾಗಿದೆ. ನಿತ್ಯ ಸುಮಾರು 1000 ಟನ್ ಬಾಳೆ ಹಣ್ಣು ಬೆಂಗಳೂರಿಗೆ ಬೇಕಾಗಿದ್ದು, ಈಪೈಕಿ 250ರಿಂದ 300 ಟನ್ ರಾಜ್ಯದ ಏಲಕ್ಕಿ ಬಾಳೆಯಾಗಿರಬಹುದು. ಇದಕ್ಕೆ ಹೋಲಿಸಿದರೆ ಹಾಪ್‌ಕಾಮ್ಸ್ ಖರೀದಿ ತುಂಬಾ ಸಣ್ಣ ಪ್ರಮಾಣದ್ದು.
- ಶಂಕರಲಿಂಗೇಗೌಡ,
ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ

ಹಾಪ್‌ಕಾಮ್ಸ್‌ನಲ್ಲಿ ಈ ದಂಧೆ ಬಹಳ ವರ್ಷಗಳಿಂದ ನಡೆಯುತ್ತಿದೆ. ಆದರೆ ಬೇಡಿಕೆ- ಪೂರೈಕೆ ಕಾರಣ ನೀಡಿ ರೈತರ ಹಾದಿ ತಪ್ಪಿಸುತ್ತಿದ್ದಾರೆ. ಹಾಪ್‌ಕಾಮ್ಸ್‌ನ ನಿರ್ದೇಶಕರು, ಸ್ಟೋರ್ ಕೀಪರ್‌ಗಳು ಇದಕ್ಕೆ ಕಾರಣ. ರಾಜ್ಯದಲ್ಲಿ ಏಲಕ್ಕಿ ಬಾಳೆ ಬೆಳೆಯುತ್ತಿಲ್ಲ ಎಂಬ ಹೇಳಿಕೆಯಲ್ಲಿ ಅರ್ಥವಿಲ್ಲ.
- ಪುಟ್ಟಸ್ವಾಮಿ, ರಾಮನಗರ ಜಿಲ್ಲೆ ರೈತ ಸಂಘದ ಮುಖಂಡ

- ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement