ರಂಗೇರಿಸಿದ ಸಾಂಸ್ಕೃತಿಕ ದಿಬ್ಬಣ
ಮೂಡುಬಿದಿರೆ: ಅಸ್ಸಾಮ್‌ನ ಪುರುಲಿಯಾ ಚಾಹೋ, ಕೇರಳದ ತೈಯ್ಯಂ, ಹಸಿರ ಸಿರಿ ಮೊಳಕೆ ಹೊತ್ತ ಲಂಬಾಣಿ ಯುವತಿಯರು, ಯಕ್ಷವೇಷಗಳು, ಶಂಖ, ಚಂಡೆ, ವಾದ್ಯ ಘೋಷಗಳು, 5 ಸಾವಿರ ಕಲಾವಿದರು, 110ಕ್ಕೂ ಹೆಚ್ಚು ತಂಡಗಳು ದೇಶದ ಸಾಂಸ್ಕೃತಿಕ ವಿಶ್ವರೂಪ ವಿಶ್ವನುಡಿಸಿರಿ ವಿರಾಸತ್ ಮೆರವಣಿಗೆಯಲ್ಲಿ ಕಂಡುಬಂದವು.
ಮೂಡುಬಿದಿರೆ ಚೌಟರ ಅರಮನೆಯಿಂದ ಮಧ್ಯಾಹ್ನ ಮೂರು ಗಂಟೆಗೆ ನಾಡೋಜ ಸುಕ್ರಿ ಬೊಮ್ಮಗೌಡ ಮೆರವಣಿಗೆಗೆ ಚಾಲನೆ ನೀಡಿದರು.
ಸಾಂಸ್ಕೃತಿಕ ದಿಬ್ಬಣ: ಅರಮನೆಯಿಂದ ಹೊರಟ ಕನ್ನಡ ಸಾಹಿತ್ಯ- ಸಂಸ್ಕೃತಿ ದಿಬ್ಬಣ, ಕನ್ನಡ ತೇರು ಎಳೆಯುವ ವಿದ್ಯಾಗಿರಿಗೆ ಬಂದಾಗ ಪಡು ಕೆಂಪೇರತೊಡಗಿತ್ತು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಿರಿ ಕಟ್ಟಡ ಮೇಲೆ ಕುಳಿತು ಮೆರವಣಿಗೆಯ ಅಪೂರ್ವ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಪುಟ್ಟ ಮಕ್ಕಳು ಅಪರೂಪದ ವೇಷಗಳನ್ನು ತಮ್ಮ ಕಣ್ಣಲ್ಲಿಯೇ ಸೆರೆ ಹಿಡಿದು ತನ್ಮಯರಾಗುತ್ತಿದ್ದರು.
ಆರಂಭದಲ್ಲಿ ಗರ್ನಾಲ್ (ಸುಡುಮದ್ದು) ಸದ್ದು, ಬಳಿಕ ಕೊಂಬು ಕಹಳೆಗಳ ಸ್ವಾಗತ. ಮಧ್ಯದಲ್ಲಿ ಕಲಾವಿದರ ಸಾಗರ. ಅಕ್ಕಪಕ್ಕ ಪ್ರೇಕ್ಷಕರ ಜನಸಾಗರ. ನೂರಕ್ಕೂ ಹೆಚ್ಚು ಡೊಳ್ಳು ಕುಣಿತ ಕಲಾವಿದರಿದ್ದರು. 70 ಕೊರಗರ ಡೋಲು, ನಾಟಕಗಳ ಪಾತ್ರಧಾರಿಗಳಾಗಿ ರಂಗಾಯಣ ಕಲಾವಿದರಿದ್ದರು.
50 ಜನರ ದುಡಿ ನೃತ್ಯ, ಅಷ್ಟೇ ಜನರ ದಫ್, ತ್ರಿವರ್ಣ ಧ್ವಜ ಹಿಡಿದ ಮಕ್ಕಳು, ಕನ್ನಡ ಬಾವುಟ, ಕೊರಗರ ಗಜಮೇಳ, ಕೀಲು ಕುದುರೆ, ಕಲ್ಲಡ್ಕ ಗೊಂಬೆಗಳು, ಬೆಂಡರ ಕುಣಿತ, ಆಟಿ ಕಳೆಂಜ, ಕಂಸಾಳೆ, ಕೀಲು ಕುದುರೆ, ತಟ್ಟಿರಾಯ, ನಂದಿಧ್ವಜ, ಕೊಂಬು ಕಹಳೆ, ಶಂಖ ಧ್ವನಿ, ಹಾಲಕ್ಕಿ ಕುಣಿತ, ಕುಡುಬಿ ನೃತ್ಯ, ಗೊರವರ ಕುಣಿತ, ಕೇರಳದ ದೇವರು ಗಮನ ಸೆಳೆದವು.
ಶ್ರೀಲಂಕ ಡ್ರಮ್ಸ್, ಮಣಿಪುರಿ, ಬಂಜಾರ ನೃತ್ಯ, ಮಹಿಳೆಯರ ಚಂಡೆ, ಮೋಹಿನಿಯಾಟ್ಟಂ, ಸಮರ ಕಲೆ, ಮಹಿಳೆಯರ ಡೊಳ್ಳು, ಗುಜರಾತ್ ನೃತ್ಯ ರಾಜಸ್ತಾನ ನೃತ್ಯ, ಮಂಡ್ಯದ ಮಹಿಳೆಯರು ಪಟದ ಕುಣಿತಗಳ ಮೂಲಕ ಕಲಾ ಪ್ರೌಢಿಮೆ ಪ್ರದರ್ಶಿಸಿದರು. ಉಮ್ಮತಾಟ್, ಹುಲಿವೇಷ, ವೀರಭದ್ರ ಕುಣಿತ, ಮರಗಾಲು ಕರಗ, ಕಳರಿ ಪಟ್ಟು ಹೆಜ್ಜೆ ಕುಣಿತ, ಪಂಚ ವಾದ್ಯ, ತಮಟೆ, ತುಳುನಾಡ ವಾದ್ಯಗಳು, ಯಕ್ಷಗಾನ, ಮಣಿಪುರಿ ರಾಸಲೀಲೆ, ಪುರುಲಿಯಾ ಛಾವೋ, ಜಾದೂಗಾರರು ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದರು.
ನುಡಿಸಿರಿ ವಿರಾಸತ್ 80 ಘಟಕ ಅಧ್ಯಕ್ಷರು, ಡಾ.ಎಂ. ಮೋಹನ ಆಳ್ವ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನಗರ ಮೆರವಣಿಗೆಯಲ್ಲಿದ್ದರು.
ಅಡ್ಡ ಪಲ್ಲಕ್ಕಿ ಇಲ್ಲ
ಇಲ್ಲಿ ಅಡ್ಡಪಲ್ಲಕ್ಕಿಯೇ ಇರಲಿಲ್ಲ. ಸಾಹಿತಿಗಳು ನಡೆದೇ ವೇದಿಕೆಗೆ ಬಂದರು. ನಗರ ಮೆರವಣಿಗೆಯಲ್ಲಿ ಕಲಾವಿದರ ತಂಡ ಒಂದು ಪುಟ್ಟ ಪಲ್ಲಕ್ಕಿ ಒಯ್ಯುತ್ತಿತ್ತು, ಅದರಲ್ಲಿ ಇದ್ದದ್ದು ನೀರಿನ ಬಾಟಲಿ. ಸಮ್ಮೇಳನಾಧ್ಯಕ್ಷ ಬಿ.ಎ.ವಿವೇಕ್ ರೈ ಅವರು ನಗರ ಮೆರವಣಿಗೆಯಲ್ಲಿ ಬರಲಿಲ್ಲ. ವೇದಿಕೆಗೆ ಕರೆತರುವ ಮೆರವಣಿಗೆಯಲ್ಲಿ ಪಾಲ್ಗೊಂಡರು.
- ಜಿತೇಂದ್ರ ಕುಂದೇಶ್ವರ