ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸ್ಪರ್ಧೆಗಾಗಿ ಸಮ್ಮೇಳನ ಅಲ್ಲ: ಡಾ. ಮೋಹನ ಆಳ್ವ

Vishwanath S
Updated On : 20 Dec 2013, 2:01 am

ಮೂಡುಬಿದಿರೆ, ಸುಂದರಿ ಆನಂದ ಆಳ್ವ ಆವರಣ: ಯುವ ಜನತೆ ಕನ್ನಡದಿಂದ ವಿಮುಖರಾಗುತ್ತಿದೆ ಎಂಬ ಅಪಸ್ವರ ಏಳುತ್ತಿರುವ ಸಂದರ್ಭದಲ್ಲಿ ಯುವಜನರನ್ನೇ ಕೇಂದ್ರವಾಗಿಟ್ಟುಕೊಂಡು ನುಡಿಸಿರಿಯನ್ನು ವಿದ್ಯಾರ್ಥಿ ಸಿರಿ, ಜನಪದ ಸಿರಿಗೆ ವಿಸ್ತರಿಸಿದ್ದೇವೆ ಎಂದು ಸಮ್ಮೇಳನ ರೂವಾರಿ ಡಾ.ಎಂ. ಮೋಹನ ಆಳ್ವ ಹೇಳಿದ್ದಾರೆ. ಸಾಂಸ್ಕೃತಿಕ ತಂಡಕ್ಕೆ ವಿಶಾಲ ವೇದಿಕೆ ನೀಡಿದ್ದೇವೆ. ಜೀವನದಲ್ಲಿ ತಂದೆ ಆನಂದ ಆಳ್ವರು ನಮಗೆ ಒಳ್ಳೆ ನಿಲುವು, ಒಳ್ಳೆಯ ಅಶಯ ನೀಡಿದ್ದಾರೆ. ವಿಶ್ವದಲ್ಲಿ ನಾನು ಮಿಂಚುಳ್ಳಿ. ಸ್ಪರ್ಧೆಗಾಗಿ ಕಾರ್ಯಕ್ರಮ ಮಾಡುತ್ತಿಲ್ಲ. ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಯಾರೂ ನುಡಿಸಿರಿ, ವಿರಾಸತ್ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಾನು ಎಂದೂ ಸ್ಪರ್ಧಾಳು ಅಲ್ಲ ಎಂದು ಹೇಳಿದರು. ದುಡ್ಡಿದ್ದು ಮಾಡುವ ಅಹಂಕಾರ ಅಲ್ಲ, ನನ್ನಲ್ಲಿರುವ ಕೋಟಿಗಟ್ಟಲೆ ಸಾಲಗಳ ಬಗ್ಗೆ ಹೇಳುವುದಿಲ್ಲ. ಸರ್ಕಾರದ ಕಣ್ಣಿಗೆ ಬೀಳುವ ಹಾಗೆ, ಕಿವಿಗೆ ಕೇಳುವ ಹಾಗೆ, ಹೃದಯಕ್ಕೆ ತಟ್ಟುವ ಹಾಗೆ ಮಾಡುವಲ್ಲಿ ನಾವು ಸೋತಿರಬಹುದು. ಆದರೆ, ಶ್ರೀಸಾಮಾನ್ಯ ಕೊಟ್ಟ ನೂರು ರುಪಾಯಿ ಆಸ್ತಿ ಎಂದು ತಿಳಿಯುತ್ತೇನೆ. ಶಾಲೆ ವಿದ್ಯಾರ್ಥಿನಿ ತನ್ನ ಪಾಕೆಟ್ ಮನಿ ಉಳಿಸಿ ರು. 51 ನೀಡಿದ್ದಾಳೆ. ನುಡಿಸಿರಿ ಕಾರ್ಯಕ್ರಮಕ್ಕೆ ತೆವಳಿಕೊಂಡು ಬರುತ್ತಿದ್ದ ಅಂಗವಿಕಲರೊಬ್ಬರು ಅಕ್ಕರೆಯಿಂದ ರು. 1 ಸಾವಿರ ಹಣ ಕಳುಹಿಸಿದ್ದಾರೆ. ಈಗ 3 ಕೋಟಿ ಸಂಗ್ರಹವಾಗಿದೆ. ಕೊನೆಗೆ ಲೆಕ್ಕ ನೀಡುತ್ತೇನೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ದೊಡ್ಡ ಕಾರ್ಯಮಾಡುವಾಗ ಸಣ್ಣ ವಿಚಾರಗಳನ್ನು ಎಳೆಯಬೇಡಿ ಎಂದು ಮೋಹನ್ ಆಳ್ವ ವಿನಂತಿಸಿದರು.

ಗಣ್ಯರ ಉಪಸ್ಥಿತಿ
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಉದ್ಘಾಟನೆ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ. ಖಾದರ್, ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್, ಶಾಸಕರಾದ ವಿ.ಸುನೀಲ್ ಕುಮಾರ್, ಕ್ಯಾ. ಗಣೇಶ್ ಕಾರ್ಣಿಕ್, ಮೈದಿನ್ ಬಾವಾ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಮಾಜಿ ಸಚಿವ ಅಮರನಾಥ ಶೆಟ್ಟಿ ಇದ್ದರು.

ಪೂರ್ವಾಧ್ಯಕ್ಷರಿಗೆ ಸನ್ಮಾನ
ಪೂರ್ವ ನುಡಿಸಿರಿ ಅಧ್ಯಕ್ಷರಾದ ಡಾ. ಬರಗೂರು ರಾಮಚಂದ್ರಪ್ಪ, ಡಾ.ಎಸ್.ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ, ಪ್ರೊ.ಜಿ. ವೆಂಕಟಸುಬ್ಬಯ್ಯ, ಡಾ. ಚೆನ್ನವೀರ ಕಣವಿ, ಡಾ. ಹಂಪ ನಾಗರಾಜಯ್ಯ, ವೈದೇಹಿ, ಡಾ.ಕೆ.ಎಸ್. ನಿಸಾರ್ ಅಹಮದ್ ಹಾಗೂ ಹಾಲಿ ಅಧ್ಯಕ್ಷ ಪ್ರೊ. ಬಿ.ಎ. ವಿವೇಕ್ ರೈ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement