ದಿಲ್ಲಿಯಲ್ಲಿ ಆಪ್ ಸರ್ಕಾರ ರಚನೆ ಬಹುತೇಕ ಖಚಿತ
ದೆಹಲಿಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ...
ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಆದರೆ ಸೋಮವಾರವಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ದೆಹಲಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿ ಆಮ್ ಆದ್ಮಿ ಪಕ್ಷವು ಈಗಾಗಲೇ ಹಲವು ಕಡೆ ರ್ಯಾಲಿಗಳನ್ನು ನಡೆಸಿದೆ. ಜತೆಗೆ ಸಾಮಾಜಿಕ ತಾಣಗಳು, ಎಸ್ಸೆಮ್ಮೆಸ್‌ಗಳ ಮೂಲಕ ಜನಾಭಿಪ್ರಾಯವನ್ನು ಕೇಳಿದೆ. ಬಹುತೇಕ ಮಂದಿ ಕಾಂಗ್ರೆಸ್ ಜತೆ ಕೈಜೋಡಿಸಿ ಸರ್ಕಾರ ರಚಿಸುವಂತೆ ಅಭಿಪ್ರಾಯ ಸೂಚಿಸಿದ್ದಾರೆ. ಇನ್ನು ಕೆಲವು ಪ್ರದೇಶಗಳಲ್ಲಿ ರ್ಯಾಲಿ ನಡೆಯಲು ಬಾಕಿಯಿದ್ದು, ಅಲ್ಲೂ ಜನಾಭಿಪ್ರಾಯ ಇದೇ ಆಗಿದ್ದರೆ ನಮ್ಮ ಪಕ್ಷವೂ ಜನರ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಶನಿವಾರ ತಿಳಿಸಿದ್ದಾರೆ.