ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದುಷ್ಕರ್ಮಿಗಳ ಗುಂಡಿಗೆ ಉದ್ಯಮಿ ನಾಯಕ ಬಲಿ

ಉದ್ಯಮಿ, ಸಹಕಾರಿ ಧುರೀಣ, ಬಿಜೆಪಿ ಪ್ರಭಾವಿ ಮುಖಂಡ ಆರ್.ಎನ್. ನಾಯಕ (56) ಅವರನ್ನು ಶನಿವಾರ ಮಧ್ಯಾಹ್ನ ನಾಲ್ವರು...

Vishwanath S
Updated On : 22 Dec 2013, 12:41 pm

ಅಂಕೋಲಾ: ಉದ್ಯಮಿ, ಸಹಕಾರಿ ಧುರೀಣ, ಬಿಜೆಪಿ ಪ್ರಭಾವಿ ಮುಖಂಡ ಆರ್.ಎನ್. ನಾಯಕ (56) ಅವರನ್ನು ಶನಿವಾರ ಮಧ್ಯಾಹ್ನ ನಾಲ್ವರು ಹಂತಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದೇ ವೇಳೆ ನಾಯಕ ಅವರ ಸರ್ಕಾರಿ ಅಂಗರಕ್ಷಕ ನಡೆಸಿದ ಪ್ರತಿ ದಾಳಿಯಲ್ಲಿ ಒಬ್ಬ ದುಷ್ಕರ್ಮಿ ಮೃತಪಟ್ಟಿದ್ದು, ಇನ್ನೊಬ್ಬ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ಉತ್ತರ ಕನ್ನಡ ಜಿಲ್ಲೆ ತಲ್ಲಣಗೊಂಡಿದೆ.
ಘಟನೆ ನಡೆದಿದ್ದು: ಆರ್.ಎನ್. ನಾಯಕ ಮ.1.15ರ ಸುಮಾರಿಗೆ ತಮ್ಮ ಒಡೆತನದ ದ್ವಾರಕಾ ಸೌಹಾರ್ದ ಸಹಕಾರಿ ನಿಯಮಿತದಿಂದ ಬಂದು ಬಸ್ ನಿಲ್ದಾಣ ಸಮೀಪ ಕೆವಿಸ್ಟಾ ಕಾರಿನಲ್ಲಿ ಕುಳಿತಿದ್ದರು.    
ಆ ಸಂದರ್ಭದಲ್ಲಿ ಏಕಾಏಕಿ ಸುತ್ತುವರಿದ ನಾಲ್ವರು ಗುಂಡಿನ ಮಳೆಗರೆದರು. ನಾಯಕ ಅವರ ಅಂಗರಕ್ಷಕ ತಕ್ಷಣ ಪ್ರತಿದಾಳಿ ನಡೆಸಿದಾಗ ಒಬ್ಬ ದುಷ್ಕರ್ಮಿ ಮೃತಪಟ್ಟ. ನಂತರ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಆರ್.ಎನ್. ನಾಯಕ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.
ಈ ನಡುವೆ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಮೃತಪಟ್ಟ ದುಷ್ಕರ್ಮಿ ಕೇರಳದವನಾಗಿದ್ದರೆ, ಸೆರೆ ಸಿಕ್ಕಿದ ವ್ಯಕ್ತಿ ವಾರಣಾಸಿ ನಿವಾಸಿ ಎಂದು ತಿಳಿದುಬಂದಿದೆ. ಪರಾರಿಯಾದ ಮತ್ತಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸಮೀಪ ಮಾರುತಿ ಓಮ್ನಿಯೊಂದು ಪತ್ತೆಯಾಗಿದೆ.
ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆರೆಸಿಕ್ಕ ವ್ಯಕ್ತಿಯ ಕಿಸೆಯಲ್ಲಿ ಚೆನ್ನೈನಿಂದ ಡಿ.14ರಂದು ಆಗಮಿಸಿದ ಬಗ್ಗೆ ರೇಲ್ವೆ ಟಿಕೆಟ್ ಪತ್ತೆಯಾಗಿದೆ. ಇವರು ಅದಾಗಲೇ ಅಂಕೋಲಾಕ್ಕೆ ಆಗಮಿಸಿ ಆರ್.ಎನ್. ನಾಯಕ ಹತ್ಯೆಗೆ ಹೊಂಚು ಹಾಕಿರುವ ಸಾಧ್ಯತೆ ಇದೆ.
ರಿವಾಲ್ವರ್, ವಾಹನ ವಶ
ಕೃತ್ಯಕ್ಕೆ ಬಳಸಿದ 3 ರಿವಾಲ್ವರ್, ಓಮಿನಿ ವಾಹನವನ್ನು (ಸಿಟಿಎಚ್ 7767 ) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರ್.ಎನ್. ನಾಯಕ ಅವರಿಗೆ 4 ವರ್ಷದ ಹಿಂದೆ ಭೂಗತ ಲೋಕದ ಪಾತಕಿಗಳಾದ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಅವರಿಂದ ಬೆದರಿಕೆ ಕರೆ ಬಂದಿದ್ದರಿಂದ, ಅವರು ನಾಲ್ವರು ಖಾಸಗಿ ಹಾಗೂ ಒಬ್ಬ ಪೊಲೀಸ್ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದರು.
ಘಟನೆ ಸಂಬಂಧ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್, ದುಷ್ಕರ್ಮಿಗಳು ಪೂರ್ವನಿಯೋಜಿತವಾಗಿ ಮಾಹಿತಿ ಕಲೆ ಹಾಕಿಕೊಂಡು ಈ ಕೃತ್ಯ ಎಸಗಿದ್ದಾರೆ. ಪೊಲೀಸ್ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಶೀಘ್ರವೇ ಇನ್ನುಳಿದ ಆರೋಪಿಗಳನ್ನು ಬಂಧಿಸುವುದರ ಜತೆಗೆ ದುಷ್ಕರ್ಮಿಗಳ ಗುಂಡಿನ ದಾಳಿನ ಹಿಂದಿನ ರಹಸ್ಯವನ್ನು ಬಯಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement