ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೌರ್ಜನ್ಯಕ್ಕೆ ಬೇಸತ್ತು ದಯಾಮರಣಕ್ಕೆ ಮೊರೆ

Vishwanath S
Updated On : 22 Dec 2013, 12:30 pm

ಗದಗ: ಮಹಿಳೆಯೊಬ್ಬರು ಕುಟುಂಬಸ್ಥರಿಂದಲೇ ನಿತ್ಯ ದೌರ್ಜನ್ಯ ಹಾಗೂ 18 ವರ್ಷಗಳಿಂದ ಪತಿಯ ಸಂಬಂಧಿಕರಿಂದಲೇ ಶೋಷಣೆಗೆ ಒಳಗಾಗಿ, ನ್ಯಾಯ ದೊರಕದೇ ನೊಂದು ದಯಾಮರಣಕ್ಕೆ ಮೊರೆ ಹೋಗಿದ್ದಾಳೆ.
ಹೌದು. ನಿತ್ಯ ನೀಡುತ್ತಿರುವ ಕಿರುಕುಳ ತಪ್ಪಿಸಿ, ನ್ಯಾಯ ಕೊಡಿ ಎಂದು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ, ಅವರು ಕೂಡಾ ಉಳ್ಳವರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ನನಗೆ ನ್ಯಾಯ ಸಿಗುತ್ತಿಲ್ಲ. ಇನ್ನೊಂದೆಡೆ ಕುಟುಂಬದ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆಗೆ ತೊಂದರೆಯಾಗಿದೆ. ನನಗೆ ನ್ಯಾಯಕೊಡಿಸಿ ಇಲ್ಲವೇ ತಮ್ಮ ಕುಟುಂಬದ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿಯವರಲ್ಲಿ ಮನವಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?: ಜಿಲ್ಲೆಯ ಮುಂಡರಗಿ ಪಟ್ಟಣದ ನಿವಾಸಿ ಹುಲಿಗೆಮ್ಮ ಜೋಳದ ಎನ್ನುವವರೇ ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದವರು. ಇವರು ಮೂಲತಃ ಕೊಪ್ಪಳ ಜಿಲ್ಲೆಯ ಕ್ಯಾಸಲಾಪುರದವರು. 18 ವರ್ಷಗಳ ಹಿಂದೆ ಮುಂಡರಗಿಯ ಯಶೋಧರ ಜೋಳದ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿದೆ. ಅಂದಿನಿಂದಲೂ ಪತಿಯ ಸಹೋದರರು ಈ ಮಹಿಳೆಯನ್ನು ಮುಂಡರಗಿಯಲ್ಲಿ ಜೀವನ ಮಾಡದಂತೆ ಜೀವ ಭಯ ಹುಟ್ಟಿಸುತ್ತಿದ್ದು, ಅಲ್ಲಿ ನೆಲೆಯೂರಲು ಅವಕಾಶವನ್ನೇ ನೀಡಿಲ್ಲ. ಇದಕ್ಕಾಗಿ ಈ ಮಹಿಳೆ ಪಡಬಾರದ ಕಷ್ಟ ಪಟ್ಟಿದ್ದಾಳೆ.
ಆತ್ಮಹತ್ಯೆಗೂ ಯತ್ನ: ಇವರದು ತುಂಬು ಕುಟುಂಬ. ಓರ್ವ ಪುತ್ರ ಮತ್ತು ಪುತ್ರಿ ಇದ್ದು, ಕುಟುಂಬ ನಿರ್ವಹಣೆಗೆ ಕೂಲಿಯಿಂದ ಬರುವ ಹಣ ಸಾಕಾಗುತ್ತಿಲ್ಲ. ಹೀಗಾಗಿ ಆಕೆಯ ಪತಿಯಿಂದ ಪಾರಂಪರಿಕವಾಗಿ ಬರಬೇಕಾದ 4 ಎಕರೆ ಜಮೀನು ಹಾಗೂ ಮುಂಡರಗಿಯಲ್ಲಿ ಬರಬೇಕಾದ ಒಂದು ಮನೆ ನೀಡಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪತಿಯ ಸಹೋದರರು ಇದಕ್ಕೆ ಅವಕಾಶ ನೀಡುತ್ತಿಲ್ಲ. ಬದಲಾಗಿ ಈ ಮಹಿಳೆಯನ್ನೇ ಹೆದರಿಸುತ್ತಿದ್ದಾರೆ. ಕಳೆದ ನ.27ರಂದು ದೈಹಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಹುಲಿಗೆಮ್ಮ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೂರು ಪಡೆಯದ ಪೊಲೀಸರು: ನನ್ನ ಪತಿಯ ಪಾಲಿಗೆ ಬರಬೇಕಾದ ಜಮೀನು ಸರ್ವೆ ನಂ.177, 259, ಸರ್ವೆ ನಂ.97 ನನ್ನ ಪತಿಯ ಸಂಬಂಧಿಗಳ ಹಿಡಿತದಲ್ಲಿವೆ. ನ್ಯಾಯಯುತವಾಗಿ ನನಗೆ ಕೊಡಿಸಿ. ಇದನ್ನು ಕೇಳಲು ಹೋದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಗೆ ಹೋದರೆ, ಅವರು ನನ್ನ ದೂರು ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ನನ್ನನ್ನೇ ಹೆದರಿಸುತ್ತಾರೆ. ಇದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ನನ್ನ ಹಾಗೂ ನನ್ನ ಪತಿ, ಮಕ್ಕಳಿಗೆ ನ್ಯಾಯಕೊಡಿ. ಈ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಡುತ್ತಿರುವ ಅನ್ಯಾಯದ ಬಗ್ಗೆಯೂ ನನಗೆ ಸಾಕಷ್ಟು ಬೇಸರವಾಗಿದೆ ಎಂದು ಹಲವಾರು ಬಾರಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಬಳಿ ಅಲವತ್ತುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನೊಂದ ಮಹಿಳೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೂಚಿಸಲಾಗಿದ್ದು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ.
- ಡಾ.ಶರಣಪ್ಪ ಎಸ್.ಡಿ., ಎಸ್ಪಿ, ಗದಗ

ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದರು
ಇದರಿಂದ ಬೇಸತ್ತ ಹುಲಿಗೆಮ್ಮ ಡಿಸೆಂಬರ್ 16, 2013 ರಂದು ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾಳೆ. ನನ್ನ ಬೇಡಿಕೆ ನ್ಯಾಯಯುತವಾಗಿವೆ. ನಿಮಗೆ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಸಾಧ್ಯವಾದರೆ ನ್ಯಾಯಕೊಡಿಸಿ. ಇಲ್ಲವಾದಲ್ಲಿ ನಾನು ಹಾಗೂ ನನ್ನ ಕುಟುಂಬ ಜೀವನವನ್ನೇ ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ. ದಯವಿಟ್ಟು ನನಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದು, ರಾಷ್ಟ್ರಪತಿ ಭವನದಿಂದ ಉತ್ತರಕ್ಕಾಗಿ ಈ ಮಹಿಳೆ ಕಾಯುತ್ತಿದ್ದಾಳೆ.
ನನ್ನ ಪತಿಯ ಸಹೋದರರು ಹಾಗೂ ಸಂಬಂಧಿಗಳು ನೀಡುತ್ತಿರುವ ಕಿರುಕುಳದಿಂದ ನಾನು ಜೀವನದಲ್ಲಿ ರೋಸಿ ಹೋಗಿದ್ದು, ಜೀವನವೇ ಬೇಸರವಾಗಿದೆ. ನೊಂದವರ ಪರ ಧ್ವನಿ ಎತ್ತುವವರು ಯಾರೂ ಇಲ್ಲ. ಈಗಾಗಲೇ ಈ ಕುರಿತು ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದೇನೆ. ಈ ವಿಷಯವನ್ನು ಶನಿವಾರವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ.
- ಹುಲಿಗೆಮ್ಮ ಜೋಳದ, ನೊಂದ ಮಹಿಳೆ



-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement